ಮಕ್ಕಳು ಸಾಕುತ್ತಿದ್ದ 2 ಚಿರತೆ ಮರಿಗಳ ರಕ್ಷಣೆ

ಭಾರತೀನಗರ (ಮಂಡ್ಯ ಜಿಲ್ಲೆ): ತಾಯಿ ಚಿರತೆಯಿಂದ ಬೇರ್ಪಟ್ಟಿದ್ದ 2 ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ, ಜಮೀನಿನಿಂದ ಮನೆಗೆ ಕೊಂಡೊಯ್ದಿದ್ದ ಮಕ್ಕಳಿಂದ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಭಾರತೀನಗರ ಸಮೀಪದ ಕೂಳಗೆರೆ ಗ್ರಾಮದ ಕೀರ್ತಿ ಕುಮಾರ್ ಹಾಗೂ ಸ್ನೇಹಿತರು ಜಮೀನಿನ ಬಳಿ ಸಿಕ್ಕಿದ್ದ ಚಿರತೆ ಮರಿಗಳನ್ನು ಮನೆಗೆ ಕೊಂಡೊಯ್ದು ಸಾಕುತ್ತಿದ್ದರು. ಗ್ರಾಮದ ಸಮೀಪದ ಬಂಡೆಯ ಬಳಿ ಚಿರತೆ ಮರಿಗಳು ಸಿಕ್ಕಿದ್ದವು. ಅವುಗಳನ್ನು ಮನೆಗೆ ತಂದಿದ್ದ ಮಕ್ಕಳು ಕೋಳಿ ಸಾಕುವ ಬುಟ್ಟಿಯಲ್ಲಿ ಸಾಕುತ್ತಿದ್ದರು, ಅವುಗಳಿಗೆ ಹಾಲು ಕುಡಿಸುತ್ತಿದ್ದರು.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಬಂದು ಚಿರತೆ ಮರಿಗಳನ್ನು ವಶಕ್ಕೆ ಪಡೆದರು. ತಾಯಿ ಚಿರತೆಗೆ 4 ಮರಿಗಳಿದ್ದು ಈ ಎರಡು ಮರಿಗಳು ತಪ್ಪಿಸಿಕೊಂಡಿವೆ. ಜಮೀನಿನಲ್ಲಿ ಚಿರತೆ ಮರಿಗಳು ಸಿಕ್ಕಾಗ ಅವುಗಳನ್ನು ಮನೆಗೆ ತರಬಾರದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಮಕ್ಕಳಿಗೆ, ಗ್ರಾಮಸ್ಥರಿಗೆ ಸೂಚನೆ ನಿಡಿದರು.
‘ಚಿರತೆ ಮರಿಗಳು ಸದ್ಯ ಮದ್ದೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿವೆ. 2.5 ತಿಂಗಳ ಮರಿಗಳು ಹಾಲನ್ನು ಬಿಟ್ಟು ಬೇರೆ ಆಹಾರವನ್ನು ಸೇವಿಸಲಾರವು. ಹೀಗಾಗಿ ಮರಿಗಳನ್ನು ತಾಯಿ ಬಳಿಗೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ತಾಯಿ ಚಿರತೆ ಸಿಗದಿದಿದ್ದರೆ ಮೈಸೂರು ಮೃಗಾಲಯದ ಸುಪರ್ದಿಗೆ ನೀಡುತ್ತೇವೆ’ ಎಂದು ಉಪ ವಲಯ ಅರಣ್ಯಾಧಿಕಾರಿ ರವಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.