ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸುತ್ತ ₹2 ಸಾವಿರ ಕೋಟಿ ಮೊತ್ತದ ಕಾಮಗಾರಿ ಸ್ಥಗಿತ: ಕಾರಜೋಳ ಬೇಸರ

ಪರಿಸರವಾದಿಗಳ ನೆಪದಲ್ಲಿ ಅನಗತ್ಯ ತೊಂದರೆ: ಕಾರಜೋಳ ಬೇಸರ
Last Updated 5 ಜುಲೈ 2021, 12:01 IST
ಅಕ್ಷರ ಗಾತ್ರ

ಬಾಗಲಕೋಟೆ: ’ಪರಿಸರವಾದಿಗಳ ಹೆಸರಿನಲ್ಲಿ ಕೆಲವರು ಅನಗತ್ಯ ತೊಂದರೆ ನೀಡುತ್ತಿರುವ ಕಾರಣ ಬೆಂಗಳೂರು ನಗರದ ಸುತ್ತಲೂ ₹2 ಕೋಟಿ ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ'ಎಂದು ಲೋಕೋಪಯೋಗಿ ಇಲಾಖೆ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಸೋಮವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

’ಕಾಮಗಾರಿ ಅನುಷ್ಠಾನಕ್ಕೆ ಮುನ್ನವೇ ಮರ ಕಡಿಯುತ್ತಾರೆ ಎಂದು ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣ ಯೋಜನೆಗಳು ನನೆಗುದಿಗೆ ಬಿದ್ದಿವೆ. ಹೊಸ ರಸ್ತೆಗಳು ನಿರ್ಮಾಣವಾಗದೇ ಬೆಂಗಳೂರಿನ ಜನರು ವಿಪರೀತ ವಾಹನ ದಟ್ಟಣೆಯಿಂದ ನರಕಸದೃಶ ಜೀವನ ನಡೆಸಬೇಕಾಗಿದೆ‘ ಎಂದರು.

ಬೆಂಗಳೂರು ಸುತ್ತಲೂ ಸ್ಥಗಿತಗೊಂಡಿರುವ ರಸ್ತೆ ಯೋಜನೆಗಳಿಗೆ ನಿಗದಿಯಾಗಿರುವ ಅನುದಾನ ಅಲ್ಲಿ ಬಳಕೆಯಾಗದಿದ್ದರೆ ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾಯಿಸಿ ಎಂದು ಪಕ್ಕದಲ್ಲಿದ್ದ ಶಾಸಕ ವೀರಣ್ಣ ಚರಂತಿಮಠ ಚಟಾಕಿ ಹಾರಿಸಿದರು. ಆಗ ಸಭೆ ನಗೆಗಡಲಲ್ಲಿ ತೇಲಿತು.

ರೇಷ್ಮೆ, ಮೀನುಗಾರಿಕೆ ಇಲಾಖೆ ವಿಲೀನಗೊಳಿಸಿ: ಜಿಲ್ಲೆಯಲ್ಲಿ ವಾರ್ಷಿಕ ₹50 ಲಕ್ಷ ಮೊತ್ತದ ರೇಷ್ಮೆ ಉತ್ಪಾದನೆ ಮಾಡುವುದಿಲ್ಲ. ಆದರೆ ಆ ಇಲಾಖೆಯ ಅಧಿಕಾರಿ– ಸಿಬ್ಬಂದಿಗಳಿಗೆ ವೇತನಕ್ಕೆಂದೇ ₹3 ಕೋಟಿ ಖರ್ಚು ಮಾಡಲಾಗುತ್ತಿದೆ. ಕೆಲಸ ಇಲ್ಲದೇ ಖಾಲಿ ಕುಳಿತು ರಾಜಕಾರಣ ಮಾಡುತ್ತಿದ್ದಾರೆ. ಅವರನ್ನು ಬೇರೆ ಇಲಾಖೆಗಳಿಗೆ ನಿಯೋಜನೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಆ ಎರಡೂ ಇಲಾಖೆಗಳನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಲು ಸಿಎಂಗೆ ಮನವಿ ಮಾಡುವೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆಯಲ್ಲಿ ರೇಷ್ಮೆ ವಿಲೀನಗೊಳಿಸಲು ಕಳೆದ ವಾರ ಆಡಳಿತ ಸುಧಾರಣಾ ಸಮಿತಿ ಶಿಫಾರಸು ಮಾಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT