ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ ಆಸ್ಪತ್ರೆ ಮೇಲ್ದರ್ಜೆಗೆ: 437 ನಮ್ಮ ಕ್ಲಿನಿಕ್ ಸ್ಥಾಪನೆ –ಸಿಎಂ 

Last Updated 4 ಡಿಸೆಂಬರ್ 2022, 13:33 IST
ಅಕ್ಷರ ಗಾತ್ರ

ಹಾವೇರಿ: ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ 437 ‘ನಮ್ಮ ಕ್ಲಿನಿಕ್‌’ಗಳನ್ನು ಡಿಸೆಂಬರ್‌ ಅಂತ್ಯದೊಳಗೆ ರಾಜ್ಯದ ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ₹96.50 ಕೋಟಿ ವೆಚ್ಚದಲ್ಲಿ ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಹಾವೇರಿ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ‘ಸಂಚಾರಿ ಕ್ಲಿನಿಕ್‌’ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಸೌಕರ್ಯ ನೀಡುವ ಕ್ಲಿನಿಕ್‌ನಿಂದ ಹಿಡಿದು ಅತ್ಯಾಧುನಿಕ ಚಿಕಿತ್ಸೆಯ ಆಸ್ಪತ್ರೆಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.

ಸೂಪರ್‌ ಸ್ಪೆಷಾಲಿಟಿ ಸೌಲಭ್ಯ

ಆಯುರ್ವೇದ ಚಿಕಿತ್ಸೆಗೆ ಹೆಚ್ಚು ಮಹತ್ವ ಸಿಗುತ್ತಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಸವಣೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಗೆ ಮುಂದಿನ ಎರಡು ವಾರದೊಳಗೆ ಅಡಿಗಲ್ಲು ಹಾಕಲಿದ್ದೇವೆ. ಹಾವೇರಿ ಮೆಡಿಕಲ್‌ ಕಾಲೇಜಿನ ಕಾಮಗಾರಿಯು ವೇಗದಿಂದ ಸಾಗುತ್ತಿದ್ದು, ಆಡಳಿತ ಮತ್ತು ಅಕಾಡೆಮಿಕ್‌ ಸಂಕೀರ್ಣಗಳು ಫೆಬ್ರುವರಿಯಲ್ಲಿ ಉದ್ಘಾಟನೆಗೊಳ್ಳಲಿವೆ. ಇದೇ ವರ್ಷ ಪ್ರವೇಶಾತಿ ಆರಂಭವಾಗಿದೆ. ಮೆಡಿಕಲ್‌ ಕಾಲೇಜು ಆರಂಭಗೊಂಡರೆ 400 ಹಾಸಿಗೆಗಳುಳ್ಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯವೂ ಜನರಿಗೆ ಸಿಗಲಿದೆ ಎಂದರು.

60 ಹೊಸ ಪಿಎಚ್‌ಸಿ ಸ್ಥಾಪನೆ:

1 ಕೋಟಿಗಿಂತಲೂ ಹೆಚ್ಚು ಆಯುಷ್ಮಾನ್‌ ಕಾರ್ಡ್‌ಗಳನ್ನು ಜನರಿಗೆ ನೀಡುತ್ತಿದ್ದೇವೆ. ಉಚಿತ ಡಯಾಲಿಸಿಸ್‌ ಸೇವೆಯಡಿ ಪ್ರತಿ ತಿಂಗಳಿಗೆ 30,000 ಡಯಾಲಿಸಿಸ್‌ ಸೈಕಲ್‌ಗಳನ್ನು 60,000 ಸೈಕಲ್‌ಗಳಿಗೆ ಹೆಚ್ಚಳ ಮಾಡಿದ್ದೇವೆ. ಈ ವರ್ಷದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. 60 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ಮುಂದಿನ ಒಂದೂವರೆ ವರ್ಷದಲ್ಲಿ ಶಿಗ್ಗಾವಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಳ್ಳಲಿದೆ. ಅತ್ಯುತ್ತಮ ಡಯಾಲಿಸಿಸ್ ವ್ಯವಸ್ಥೆ, ಕ್ಲಿನಿಕಲ್ ಸೌಲಭ್ಯ, ವಿಶೇಷ ತಜ್ಞ ವೈದ್ಯರ ಸೇವೆ, ಐಸಿಯು ಹಾಗೂ ಎನ್ ಐಯುಸಿಯು ಘಟಕ, ಮೈನರ್ ಹಾಗೂ ಮೇಜರ್ ಆಪರೇಷನ್ ಘಟಕ ಸೇರಿದಂತೆ ಜಿಲ್ಲಾ ಆಸ್ಪತ್ರೆಗೆ ಸರಿಸಮಾನವಾಗಿ ಶಿಗ್ಗಾವಿ ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳು ದೊರಯಲಿವೆ ಎಂದರು.

‘ವಾಣಿಜ್ಯ ಕೇಂದ್ರವಾಗಲಿರುವ ಶಿಗ್ಗಾವಿ’

ಶಿಗ್ಗಾವಿ ತಾಲ್ಲೂಕು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಮುಂದಿನ ದಿನಗಳಲ್ಲಿ ಇದು ಪ್ರಮುಖ ಕೇಂದ್ರ ಆಗಲಿದೆ. ಈಗಾಗಲೇ ಟೆಕ್ಸ್‌ಟೈಲ್‌ ಪಾರ್ಕ್ ಬರುತ್ತಿದೆ, ಬೃಹತ್ ಕಾರ್ಖಾನೆ ಬರಲು ಹಲವರಿಗೆ ಆಹ್ವಾನ ಕೊಡಲಾಗಿದೆ. ವಿದ್ಯಾಸಂಸ್ಥೆಗಳು ಇಲ್ಲಿಗೆ ಬರಲಿವೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಶಿಗ್ಗಾವಿ ತಾಲ್ಲೂಕಿಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘12 ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ’

ಹುಬ್ಬಳ್ಳಿಯಲ್ಲಿ ₹360 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆಗೆ ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಿಸಲಿದ್ದೇವೆ. ಬೆಳಗಾವಿಯಲ್ಲಿ ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದಂತೆ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಇದೇ ವರ್ಷ ಆರಂಭಗೊಳ್ಳಲಿದೆ. 12 ಹೊಸ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಜಿಲ್ಲಾಧಿಕಾರಿ ರಘುನಂದನ್‌ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಡಿಎಚ್‌ಒ ಡಾ.ಕುಮಾರಸ್ವಾಮಿ ಪಿ.ಸಿ., ಶಿಗ್ಗಾವಿ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT