ಸೋಮವಾರ, ಮೇ 17, 2021
28 °C

ಲಸಿಕೆ ಪರಿಣಾಮ: ಕಾಂಗ್ರೆಸ್–ಬಿಜೆಪಿ ಟ್ವೀಟ್ ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ಲಸಿಕೆಗಳ ಪರಿಣಾಮದ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ್ದಕ್ಕೆ ಇಂದು ಪುರಾವೆ ಸಿಕ್ಕಿದೆಯಲ್ಲ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌ ದೃಢಪಟ್ಟ ಬೆನ್ನಲ್ಲೇ ಕಾಂಗ್ರೆಸ್‌ ಟ್ವೀಟ್‌ ಮೂಲಕ ಲೇವಡಿ ಮಾಡಿದ್ದು, ‘ಲಸಿಕೆಗಳು ನಿಜಕ್ಕೂ ಪರಿಣಾಮಕಾರಿಯಾಗಿದ್ದರೆ, ಲಸಿಕೆ ಪಡೆದಿದ್ದ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು ಹೇಗೆ ಮತ್ತು ಏಕೆ’ ಎಂದು ಪ್ರಶ್ನಿಸಿದೆ.

‘ಕೋವಿಡ್‌ಗೆ ಲಸಿಕೆ ಮದ್ದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದು ರೋಗ ನಿರೋಧಕ ಶಕ್ತಿ ವೃದ್ಧಿಸಿ ಸೋಂಕು ಕಡಿಮೆ ಮಾಡಬಹುದು’ ಎಂದು ಹೇಳಿದೆ.

ಬಿಜೆಪಿ ತಿರುಗೇಟು: ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಕಾಂಗ್ರೆಸ್‌ ಪಕ್ಷ ಜವಾಬ್ದಾರಿಯಿಂದ ನಡೆದು
ಕೊಳ್ಳುವುದು ಯಾವಾಗಾ? ಆರಂಭದಿಂದಲೇ ಲಸಿಕೆಯ ಪರಿಣಾಮದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಬಂದಿದ್ದು, ಈಗ ಲಸಿಕೆ ಕೊರತೆ ಇದೆ. ಜನರಿಗೆ ಕೊಡುವುದಿಲ್ಲವೆ ಎಂದು ಪ್ರಶ್ನಿಸುತ್ತಿರುವುದು ಎಷ್ಟು ಸರಿ’ ಎಂದು ಕೇಳಿದೆ.

‘ಸುಳ್ಳನ್ನೇ ವೈಭವೀಕರಿಸುತ್ತಿರುವ ಕಾಂಗ್ರೆಸ್‌ ಪಕ್ಷವು ಸರ್ಕಾರದ ಜೊತೆ ನಿಂತು ದೇಶದ ಜನರಲ್ಲಿ  ಭರವಸೆ ಮೂಡಿಸುವುದನ್ನು ಬಿಟ್ಟು, ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದೆ’ ಎಂದು ಕಿಡಿ ಕಾರಿದೆ.

‘ಭಾರತ ಲಸಿಕೆ ಕಂಡು ಹಿಡಿದಾಗ ಮತ್ತು ಲಸಿಕಾ ಅಭಿಯಾನ ನಡೆದಾಗ ಕಾಂಗ್ರೆಸ್‌ ಪಕ್ಷದ ಮುಖಂಡರು ಬಿಜೆಪಿ ಲಸಿಕೆ ಎಂದು ಟೀಕಿಸಿದ್ದರು. ಈಗ ದೇಶದ ಎಲ್ಲ ಜನರಿಗೂ ಲಸಿಕೆ ಕೊಡಿ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನಿಲುವುಗಳಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ? ದೇಶದ ಪರವಾಗಿ ಕಾಂಗ್ರೆಸ್‌ ನಿಲ್ಲುವುದು ಯಾವಾಗ’ ಎಂದು ಪ್ರಶ್ನಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು