ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಚುನಾವಣೆ: ಮೂರೂ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು

Last Updated 22 ಮೇ 2022, 19:33 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮೂರೂ ಪಕ್ಷಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ.

ವಿಧಾನಸಭೆಯ ಬಲಾಬಲದ ಪ್ರಕಾರ ಏಳು ಸ್ಥಾನಗಳ ಪೈಕಿ ಬಿಜೆಪಿ 4, ಕಾಂಗ್ರೆಸ್‌ 2 ಮತ್ತು ಜೆಡಿಎಸ್‌ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿವೆ. ಅಭ್ಯರ್ಥಿಗಳಾಗಲುಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳು ಭಾರೀ ಪೈಪೋಟಿ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಯಾವುದೇ ಕ್ಷಣದಲ್ಲಾದರೂ ಅಭ್ಯರ್ಥಿ ಗಳ ಪಟ್ಟಿ ಹೊರ ಬೀಳಬಹುದು ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ನ ಒಂದು ಸ್ಥಾನಕ್ಕೂ ಭಾರೀ ಪೈಪೋಟಿ ಏರ್ಪಟ್ಟಿದ್ದು, ಕೊನೇ ಕ್ಷಣದಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳ್ಳಬಹುದು ಎಂದು ಆ ಪಕ್ಷದ ಮೂಲಗಳು ಹೇಳಿವೆ. ‘ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಿದ ನಂತರ ಈವರೆಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ’ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರ, ನಿರ್ಮಲ್‌ ಕುಮಾರ್‌ ಸುರಾನ, ಛಲವಾದಿ ನಾರಾಯಣಸ್ವಾಮಿ, ಮಹಾಂತೇಶ ಕವಟಗಿಮಠ, ಕೇಶವಪ್ರಸಾದ್‌, ಅಶ್ವತ್ಥನಾರಾಯಣಗೌಡ, ಭಾನುಪ್ರಕಾಶ್‌ ಮುಂತಾದವರ ಹೆಸರುಗಳು ಪಟ್ಟಿಯಲ್ಲಿ ಸೇರಿವೆ ಎಂದು ಹೇಳಲಾಗಿದೆ. ವಿಜಯೇಂದ್ರ ಸೇರಿ ಕೆಲವು ಆಕಾಂಕ್ಷಿಗಳು ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದರು.ಆದರೆ, ಬಿಜೆಪಿಯಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ, ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಿದರ್ಶನಗಳೂ ಈ ಹಿಂದೆ ಇವೆ. ಹೀಗಾಗಿ ಪಟ್ಟಿ ಹೊರ ಬೀಳುವವರೆಗೂ ಇಂತಹವರೇ ಅಭ್ಯರ್ಥಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸೋಮವಾರ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ನಲ್ಲೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮಧ್ಯೆ ತಿಕ್ಕಾಟ ಇರುವುದರಿಂದ ಅಂತಿಮ ನಿರ್ಣಯವನ್ನು ಪಕ್ಷದ ಹೈಕಮಾಂಡ್‌ಗೆ ಬಿಡಲಾಗಿದೆ. ಕಾಂಗ್ರೆಸ್‌ನಿಂದ ಆರ್‌.ಬಿ.ತಿಮ್ಮಾಪುರ, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಎಸ್‌.ಆರ್‌.ಪಾಟೀಲ, ಐವನ್‌ ಡಿಸೋಜ ಅವರ ಹೆಸರುಗಳು ಚಾಲ್ತಿಗೆ ಬಂದಿವೆ.ಜೆಡಿಎಸ್‌ನಲ್ಲಿ ಟಿ.ಎ.ಶರವಣ, ಕುಪೇಂದ್ರ ರೆಡ್ಡಿ ಸೇರಿ ಇನ್ನೂ ಕೆಲವರು ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT