ಗುರುವಾರ , ಆಗಸ್ಟ್ 18, 2022
25 °C

ಸ್ಮಶಾನಕ್ಕೆ ರಸ್ತೆ ನಿರ್ಮಿಸಲು ಆಗ್ರಹ: ಡಿ.ಸಿ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹಿಂದೂ ಹಾಗೂ ಮುಸ್ಲಿಂ ಧರ್ಮೀಯರ ಸ್ಮಶಾನಗಳಿಗೆ ತೆರಳಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮಸ್ಥರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಧರಣಿ ನಡೆಸಿದರು.

ಏಣಗಿಯ ಅಬ್ದುಲ್ ಖಾದರ್ ಮಿಶ್ರಿಕೋಟಿ (65) ಎನ್ನುವವರು ಸೋಮವಾರ ನಸುಕಿನಲ್ಲಿ ನಿಧನರಾದರು. ಆದರೆ ಅವರ ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ಹೋಗಲು ಮಾರ್ಗಮಧ್ಯೆ ಇರುವ ಹೊಲಗಳ ರೈತರು ತಕರಾರು ಮಾಡಿದರು.

ಇದರಿಂದ ರೋಸಿಹೋದ ಜನ, ಶವವನ್ನು ವಾಹನದಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದು ಕುಳಿತರು. ಮೃತರ ಸಂಬಂಧಿ ಇಬ್ರಾಹಿಂ ನೇತೃತ್ವದಲ್ಲಿ ಧರಣಿ ನಡೆಸಿದ ಗ್ರಾಮಸ್ಥರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸ್ಮಶಾನಕ್ಕೆ ಹಾದಿ ಕೊಡದ ಜಿಲ್ಲಾಡಳಿತಕ್ಕೂ ಧಿಕ್ಕಾರ ಹಾಕಿದರು.

'ಊರಿನಲ್ಲಿ ಹಿಂದೂ, ಮುಸ್ಲಿಂ ಎರಡೂ ಸಮುದಾಯದ ಸ್ಮಶಾನಗಳಿಗೆ ತೆರಳಲು ಹಾದಿ ಇಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಮೃತದೇಹ ತಂದು ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು' ಎಂದು ಮೃತರ ಸಂಬಂಧಿ ಇಬ್ರಾಹಿಂ ಕಿಡಿ ಕಾರಿದರು.

ಜಿಲ್ಲಾಧಿಕಾರಿ ತಕ್ಷಣಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇಲ್ಲೇ ಸಮಾಧಿ ಮಾಡುತ್ತೇವೆ ಎಂದೂ ಪಟ್ಟು ಹಿಡಿದರು.

ಜಿಲ್ಲಾಧಿಕಾರಿ ಭರವಸೆ: ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೂರು ದಿನಗಳಲ್ಲಿ ಸ್ಮಶಾನಗಳಿಗೆ ರಸ್ತೆ ಮಾಡಿ ಕೊಡುವುದಾಗಿ ಭರವಸೆ ನೀಡಿದರು.

ಈ ದಾರಿಗೆ ಮೂರು ಹೆಕ್ಟೇರ್ ಜಮೀನು ಅಗತ್ಯವಿದೆ. ರೈತರ ಮನವೊಲಿಸಿ ಭೂಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗುವುದು. ಅಲ್ಲಿಯವರೆಗೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶವ ಸಾಗಿಸಲು ಅನುಕೂಲ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ರೈತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
ಜಿಲ್ಲಾಧಿಕಾರಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಧರಣಿ ಹಿಂಪಡೆದು, ಗ್ರಾಮಕ್ಕೆ ಮರಳಲು ಸಿದ್ಧರಾದರು. ಆಗ ಸ್ಥಳಕ್ಕೆ ಬಂದ ಕೆಲವು ರೈತ ಮುಖಂಡರು ಹೋರಾಟ ಆರಂಭಿಸಿದರು.

ಸ್ಮಶಾನ ದಾರಿ ಮಾಡಿಕೊಡುವವರೆಗೂ ಶವವನ್ನು ಎತ್ತುವುದಿಲ್ಲ, ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ದಪನ್ ಮಾಡುತ್ತೇವೆ ಎಂದು ಕೂಗಾಡಿದರು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಜಯಶ್ರೀ ಗುರೆನ್ನವರ, ಅಶೋಕ ಯಮಕನಮರಡಿ ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ವಾಹನ ಹತ್ತಲು ನಿರಾಕರಿಸಿದವರನ್ನು ಕೊರಳಪಟ್ಟಿ ಹಿಡಿದು ಒಳಗೆ ತೆಳ್ಳಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯಸಚಿವ ಸೋಮಪ್ರಕಾಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸೋಮವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ವಿಷಯ ಸಚಿವರ ಗಮನಕ್ಕೆ ಬರುವ ಮುನ್ನವೇ ಅಧಿಕಾರಿಗಳು  ಪ್ರತಿಭಟನಾಕಾರರನ್ನು ಎಬ್ಬಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು