ಗುರುವಾರ , ಡಿಸೆಂಬರ್ 8, 2022
18 °C

‘ವಿನಯ ಸಾಮರಸ್ಯ’ ಯೋಜನೆಗೆ ಡಿಸೆಂಬರ್‌ನಲ್ಲಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಸ್ಪೃಶ್ಯತೆ ನಿವಾರಣೆಗಾಗಿ ರೂಪಿಸಿರುವ ‘ವಿನಯ ಸಾಮರಸ್ಯ’ ಯೋಜನೆಯ ಸಮಾವೇಶವನ್ನು ಡಿಸೆಂಬರ್ ಎರಡನೇ ವಾರದಲ್ಲಿ ಬೆಂಗಳೂರು ಅಥವಾ ಕೊಪ್ಪಳದಲ್ಲಿ ಏರ್ಪಡಿಸಲಾಗುವುದು. ಶೀಘ್ರದಲ್ಲಿಯೇ ದಿನ ಮತ್ತು ಸ್ಥಳ ಅಂತಿಮಗೊಳಿಸಲಾಗುವುದು’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವರು, ಯೋಜನೆ ಕುರಿತು ಇಲಾಖೆ ಅಧಿಕಾರಿಗಳ ಜೊತೆ ಗುರುವಾರ ವಿಡಿಯೊ ಸಂವಾದ ಮೂಲಕ ಸಭೆ ನಡೆಸಿದರು. ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದರು.

‘ಅಸ್ಪೃಶ್ಯತೆಯಂಥ ಅನಿಷ್ಟ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ಪರಿಶಿಷ್ಟಯೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನೂ ಸಮಾವೇಶಕ್ಕೆ ಆಹ್ವಾನಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲೂ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕಿದ್ದು ಸಿದ್ಧತೆ ಮಾಡಿ
ಕೊಳ್ಳಬೇಕು‘ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್, ಇಲಾಖೆ ಸಲಹೆಗಾರ ಇ. ವೆಂಕಟಯ್ಯ, ಆಯುಕ್ತ ‌ಕೆ. ರಾಕೇಶ್‌ಕುಮಾರ್ ಇದ್ದರು.

2021 ಸೆಪ್ಟೆಂಬರ್‌ನಲ್ಲಿ ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ವಿನಯ್‌ ಹೆಸರಿನ ದಲಿತ ಬಾಲಕ, ಮಾರುತಿ ದೇವಸ್ಥಾನ ಪ್ರವೇಶಿಸಿದ್ದರಿಂದ ಗ್ರಾಮದ ಸವರ್ಣೀಯರು ಬಾಲಕನ ಪೋಷಕರಿಗೆ ₹ 25 ಸಾವಿರ ದಂಡ ವಿಧಿಸಿ ಬಹಿಷ್ಕರಿಸಿದ್ದರು. ಸುದ್ದಿ ತಿಳಿದ ಜಿಲ್ಲಾಡಳಿತ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಿನಯ್
ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಯ ‘ವಿನಯ ಸಾಮರಸ್ಯ’ ಯೋಜನೆಯನ್ನು ಸರ್ಕಾರ ಘೋಷಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು