ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಾತ್ಮಕ ಹೇಳಿಕೆಯಿಂದ ಸಾಮರಸ್ಯಕ್ಕೆ ಪೆಟ್ಟು: ವಿಶ್ವೇಶ್ವರ ಹೆಗಡೆ ಕಾಗೇರಿ

Last Updated 23 ಫೆಬ್ರುವರಿ 2022, 10:35 IST
ಅಕ್ಷರ ಗಾತ್ರ

ಬೆಂಗಳೂರು: ‘ವಿವಾದ ಸೃಷ್ಟಿಸುವ ಹೇಳಿಕೆಗಳನ್ನು ನೀಡಿ ನಾಯಕತ್ವ ಬೆಳೆಸಿಕೊಳ್ಳುವ ಮಾನಸಿಕತೆ ಸರಿಯಲ್ಲ. ಇದು ಸಮಾಜಕ್ಕೆ ಉಪಯುಕ್ತ ಕೊಡುಗೆ ಅಲ್ಲ. ಸಾಮಾಜಿಕ ಸಾಮರಸ್ಯವನ್ನೇ ಕದಡುತ್ತದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ಮಾಧ್ಯಮಗಳು ವೈಭವೀಕರಿಸುವುದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ವಿವಾದದ ಹೇಳಿಕೆಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡುವ ಬಗ್ಗೆ ವಿವೇಚನೆ ಬಳಸಬೇಕು ಎಂದು ಸಲಹೆ ನೀಡಿದರು.

‘ಈ ಮಾತುಗಳನ್ನು ನಿರ್ದಿಷ್ಟವಾಗಿ ಯಾರನ್ನೇ ಉದ್ದೇಶಿಸಿ ಹೇಳುತ್ತಿಲ್ಲ. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಸಮಾಜದಲ್ಲಿ ಸಾಮರಸ್ಯ ಕದಡುತ್ತದೆ ಎನ್ನುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ವೈಭವೀಕರಿಸುವ ಅಗತ್ಯವಿದೆಯೇ ಎಂಬುದನ್ನು ಯೋಚಿಸಬೇಕು. ನಮಗೆ ಮಾತನಾಡಲು ಸ್ವಾತಂತ್ರ್ಯವಿದೆ. ಆದರೆ ಮಾತಿನಿಂದ ಸಮಾಜಕ್ಕೆ ಕೆಡುಕಾಗಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಮಾಜದಲ್ಲಿ ಉತ್ತಮ ವಾತಾವರಣವನ್ನು ನಾವು ಪ್ರಬುದ್ಧತೆ ಮತ್ತು ಸಂಸ್ಕಾರದಿಂದ ಬೆಳೆಸಬೇಕಾಗಿದೆ. ವೈಯಕ್ತಿಕವಾಗಿ ಸಂಸ್ಕಾರ ಇರುವಂತೆ ಜನಸಮೂಹಕ್ಕೂ ಇರಬೇಕು. ಸುಸಂಸ್ಕೃತ ಜನಜೀವನ ರೂಪಿತ ಆಗಲು ಎಲ್ಲರೂ ಸಹಕರಿಸಬೇಕು. ಯಾರೂ ಕೂಡ ಬೌದ್ಧಿಕ ಸಂಕುಚಿತತೆ ಬೆಳೆಸಿಕೊಳ್ಳಬಾರದು. ಸೈದ್ಧಾಂತಿಕ ಅಭಿಪ್ರಾಯ ಭೇದಗಳನ್ನು ಉತ್ತಮ ವಾತಾವರಣದಲ್ಲೇ ಚರ್ಚಿಸಲು ಸಾಧ್ಯವಿದೆ ಎಂದು ಕಾಗೇರಿ ಹೇಳಿದರು.

ಮೌಲ್ಯಗಳ ಕುಸಿತಕ್ಕೆ ರಾಜಕಾರಣಿಗಳು ಮಾತ್ರ ಕಾರಣರಲ್ಲ. ಸಮಾಜದ ಎಲ್ಲ ಸ್ತರಗಳು ಮತ್ತು ಸಂಸ್ಥೆಗಳಲ್ಲೂ ಮೌಲ್ಯಗಳ ಕುಸಿತ ಆಗಿದೆ. ಇದೊಂದು ವಿಷ ವರ್ತುಲ ಇದರಲ್ಲಿ ಎಲ್ಲರೂ ಸಿಲುಕಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ವಿಧಾನಸಭೆ ಕಲಾಪ 10 ದಿನ ನಡೆಯಬೇಕಿತ್ತು. ಆದರೆ, ಎರಡು ದಿನ ಮಾತ್ರ ನಡೆಯಿತು. ಐದು ದಿನ ಗೊಂದಲದ ಮಧ್ಯೆ ಕಲಾಪ ನಡೆಯಿತು. ಕಾಂಗ್ರೆಸ್‌ ಒಂದು ದಿನ ಪ್ರತಿಭಟನೆ ನಡೆಸಿ, ಉಳಿದ ದಿನ ಕಲಾಪದಲ್ಲಿ ಹಾಜರಾಗಬಹುದಿತ್ತು. ಸಾಕಷ್ಟು ಬಾರಿ ಅವರ ಮನವೊಲಿಸಿದರೂ ಒಪ್ಪಲಿಲ್ಲ. ಇವೆಲ್ಲವನ್ನು ರಾಜ್ಯದ ಜನ ಗಮನಿಸಿದ್ದಾರೆ ಎಂದರು.

ಚುನಾವಣೆ ಸುಧಾರಣೆ ವಿಷಯದಲ್ಲಿ ಚರ್ಚೆ ನಡೆಸಲು ಉದ್ದೇಶಿಸಲಾಗಿತ್ತು. ಅದು ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚೆ ನಡೆಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ಜತೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಕಾಗೇರಿ ತಿಳಿಸಿದರು.

ಶಾಸಕರು, ಸಚಿವರ ವೇತನ ಹೆಚ್ಚಳವನ್ನು ಸಮರ್ಥಿಸಿಕೊಂಡ ಅವರು, 2015 ರ ಬಳಿಕ ಪರಿಷ್ಕರಣೆ ಮಾಡಿರಲಿಲ್ಲ. ಸಾಕಷ್ಟು ಮಾಜಿ ಶಾಸಕರು ಸಂಕಷ್ಟದಲ್ಲಿದ್ದಾರೆ. ವೇತನ ಹೆಚ್ಚಳ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದರು. ಆದ ಕಾರಣ ಸರ್ಕಾರ ಮಸೂದೆ ಮಂಡಿಸಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT