ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗಾಗಿ ಹೆಚ್ಚಿದ ಪೈಪೋಟಿ

Last Updated 8 ಫೆಬ್ರುವರಿ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿಕೊಳ್ಳಲು ಹಲವು ಜಾತಿ, ಸಮುದಾಯಗಳು ಮುಗಿಬಿದ್ದಿದ್ದು, ಅದರಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು 2ಎ ಪ್ರವರ್ಗಕ್ಕೆ ಸೇರಲು ಹವಣಿಸುತ್ತಿವೆ. ಕುರುಬರು, ಲಿಂಗಾಯತ ಪಂಚಮಸಾಲಿ ಸಮುದಾಯದವರಂತೆ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶಿಸಲು ಗಾಣಿಗ ಸಮುದಾಯವೂ ಮುಂದಾಗಿದೆ. ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ವಾಲ್ಮೀಕಿ ಸಮುದಾಯ ಆಗ್ರಹಿಸಿದೆ.

‘ಗಾಣಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ’

ಬಾಗಲಕೋಟೆ: 'ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮುದಾಯದ ಶಕ್ತಿ ಪ್ರದರ್ಶನ ಅನಿವಾರ್ಯ' ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 1 ಸಾವಿರ ಕೋಟಿ ಮೀಸಲಿಡಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ನಡೆಸಲಿದ್ದೇವೆ. ಕೇಂದ್ರದ ಮೇಲೂ ಒತ್ತಡ ಹೇರುತ್ತೇವೆ’ ಎಂದರು.

ಮಾದಿಗರಿಗೆ ಒಳಮೀಸಲಾತಿ: ಮಾ. 25ರಿಂದ ಪಾದಯಾತ್ರೆ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ಮಾದಿಗರಿಗೆ ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಮಾರ್ಚ್ 25ರಂದು ಹರಿಹರದ‌ ದಲಿತ ಹೋರಾಟಗಾರ ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕೋಡಿಹಳ್ಳಿ ಆದಿಜಾಂಬವ ಮಾದಿಗ ಪೀಠಾಧ್ಯಕ್ಷ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚಿತ್ರದುರ್ಗ ಬಸವಹರಳಯ್ಯ ಸ್ವಾಮೀಜಿ ತಿಳಿಸಿದರು.

‘ಪಾದಯಾತ್ರೆಯು ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ದಿನ ಬೆಂಗಳೂರು ತಲುಪಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾದಯಾತ್ರೆಯ ಸಮಾರೋಪ ಹಾಗೂ ಜನಾಂದೋಲನ ಸಮಾವೇಶ ನಡೆಸಲಾಗುವುದು’ ಎಂದು ಸೋಮವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪಂಚಮಸಾಲಿಗಳು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ’

ಶಿರಾ: ‘ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರ ಮೀಸಲಾತಿ ಕೇಳುತ್ತಿದ್ದೇವೆ’ ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮದಿಂದ ಹೊರಟಿರುವ ಪಾದಯಾತ್ರೆ 26ನೇ ದಿನಕ್ಕೆ ಕಾಲಿಟ್ಟಿದ್ದು, ಸುಮಾರು 575 ಕಿ.ಮೀ ಕ್ರಮಿಸಿದೆ.

ಈ ವೇಳೆ ಮಾತನಾಡಿದ ಸ್ವಾಮೀಜಿ, ಕೇಂದ್ರ ಸರ್ಕಾರ ವರ್ಷದ ಹಿಂದೆ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಿದಾಗ ಯಾರೂ ವಿರೋಧಿಸಲಿಲ್ಲ. ಆದರೆ ಈಗ ನಾವು ಮೀಸಲಾತಿ ಕೇಳಿದರೆ ವಿರೋಧಿಸು
ತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಟಿ ಮೀಸಲಾತಿ ಶೇ 7.5ಕ್ಕೆ ಏರಿಸಲು ವಾಲ್ಮೀಕಿ ಸಮುದಾಯ ಆಗ್ರಹ

ದಾವಣಗೆರೆ: ‘ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕು’ ಎಂಬ ಆಗ್ರಹ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವ್ಯಕ್ತವಾಯಿತು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಮಹೋತ್ಸವದ ನೇತೃತ್ವ ವಹಿಸಿದ್ದರು.

ಶಬರಿ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ, ‘ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ಕುರಿತು ಅಧ್ಯಯನಕ್ಕೆ ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿ ವರದಿ ನೀಡಿ ಹಲವು ತಿಂಗಳಾದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ’ ಎಂದು ವಿಷಾದಿಸಿದರು.

ಬಲಿಷ್ಠ ಜಾತಿ ಸೇರ್ಪಡೆಗೆ ಈಡಿಗರ ವಿರೋಧ

ಬೆಂಗಳೂರು: ಪಂಚಮಸಾಲಿ ಸೇರಿದಂತೆ ಯಾವುದೇ ಬಲಿಷ್ಠ ಜಾತಿಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಈಡಿಗ ಮತ್ತು ಅದರ 26 ಉಪ ಜಾತಿಗಳೂ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ 102 ಜಾತಿಗಳು ‘2ಎ’ ಪಟ್ಟಿಯಲ್ಲಿವೆ. ಪ್ರಬಲವಾಗಿರುವ ಯಾವುದೇ ಜಾತಿಯನ್ನು ಈ ಪಟ್ಟಿಗೆ ಸೇರಿಸಿದರೆ ಹಿಂದುಳಿದಿರುವ ಜಾತಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ‘2ಎ’ ಮೀಸಲಾತಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಆಗ್ರಹಿಸಿದ್ದಾರೆ.

ಗಂಗಾಮತಸ್ಥರ ಎಸ್‌ಟಿ ಶಿಫಾರಸು: ಹೆಚ್ಚುವರಿ ದಾಖಲೆ ಸಲ್ಲಿಕೆ

ಬೆಂಗಳೂರು: ಗಂಗಾಮತಸ್ಥ ಮತ್ತು ಅದರ 38 ಉಪ ಜಾತಿಗಳನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸಬೇಕೆಂಬ ಶಿಫಾರಸಿಗೆ ಪೂರಕವಾಗಿ ಕೇಂದ್ರ ಸರ್ಕಾರಕ್ಕೆ ಫೆಬ್ರುವರಿ 2ರಂದು ಹೆಚ್ಚುವರಿ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಗಂಗಾಮತಸ್ಥ ಮತ್ತು ಅದರ ಉಪ ಜಾತಿಗಳನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ 2014ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಜನಗಣತಿ ಮಹಾನಿರ್ದೇಶಕರು ಎರಡು ಬಾರಿ ಪ್ರಸ್ತಾವವನ್ನು ತಿರಸ್ಕರಿಸಿದ್ದರು. 2018ರ ಅಕ್ಟೋಬರ್‌ ಮತ್ತು 2019ರ ಜುಲೈನಲ್ಲಿ ಹೆಚ್ಚುವರಿ ದಾಖಲೆ ಸಲ್ಲಿಸಲಾಗಿತ್ತು. ಫೆಬ್ರುವರಿ 2ರಂದು ಮತ್ತೆ ಹೆಚ್ಚುವರಿ ಮಾಹಿತಿ, ದಾಖಲೆಗಳನ್ನು ಕಳುಹಿಸಲಾಗಿದೆ ಎಂಬ ಮಾಹಿತಿ ಉತ್ತರದಲ್ಲಿದೆ.

ಕುರುಬರ ಅಧ್ಯಯನಕ್ಕೆ 6 ತಿಂಗಳು ಬೇಕು

ಬೆಂಗಳೂರು: ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದವರಿಗೆ ಇರುವ ಮೀಸಲಾತಿಯ ಪ್ರಮಾಣವನ್ನು ಶೇಕಡ 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕೆಂಬ ನಿವೃತ್ತ ನ್ಯಾಯಮೂರ್ತಿ ಡಾ.ಎಚ್‌.ಎನ್‌. ನಾಗಮೋಹನ ದಾಸ್ ಆಯೋಗದ ವರದಿಯನ್ನು ಸಂಪುಟ ಉಪ ಸಮಿತಿ ಪರಿಶೀಲಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ನೇಕಾರರಿಗೆ ಪ್ರತ್ಯೇಕ ನಿಗಮ ಇಲ್ಲ

ರಾಜ್ಯದಲ್ಲಿ ನೇಕಾರರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಪ್ರಸ್ತಾವ ಇಲ್ಲ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ್‌ ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT