ಮಂಗಳವಾರ, ಜನವರಿ 31, 2023
26 °C

ಒಕ್ಕಲಿಗರ ಸಂಘದ ಚುನಾವಣೆ: 221 ಅಭ್ಯರ್ಥಿಗಳು ಕಣದಲ್ಲಿ; ಡಿಸೆಂಬರ್ 12ರಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಚುನಾವಣೆಯ ಸ್ಪರ್ಧಾ ಕಣ ಅಂತಿಮಗೊಂಡಿದ್ದು, 35 ಸ್ಥಾನಗಳಿಗೆ 221 ಉಮೇದುವಾರರು ಕಣದಲ್ಲಿ ಉಳಿದಿದ್ದಾರೆ.

ಆರು ಪ್ರಬಲ ‘ಸಿಂಡಿಕೇಟ್‌’ಗಳೂ ಸೇರಿದಂತೆ ಹಲವು ಬಣಗಳು ಸಂಘದ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಈ ಬಾರಿ ಪೈಪೋಟಿ ನಡೆಸುತ್ತಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಒಟ್ಟು 15 ಸ್ಥಾನಗಳಿಗೆ 141 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮಂಡ್ಯ ಜಿಲ್ಲೆಯ ನಾಲ್ಕು ಸ್ಥಾನಗಳಿಗೆ 16,  ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂರು ಸ್ಥಾನಗಳಿಗೆ 12, ಹಾಸನ ಜಿಲ್ಲೆಯ ಮೂರು ಸ್ಥಾನಗಳಿಗೆ 11, ಮೈಸೂರು ಜಿಲ್ಲೆಯ ಮೂರು ಸ್ಥಾನಗಳಿಗೆ ಒಂಭತ್ತು, ತುಮಕೂರು ಜಿಲ್ಲೆಯ ಎರಡು ಸ್ಥಾನಗಳಿಗೆ ಏಳು ಮಂದಿ ಕಣದಲ್ಲಿದ್ದಾರೆ.

ಶಿವಮೊಗ್ಗ– ಉತ್ತರ ಕನ್ನಡ ಜಿಲ್ಲೆಗಳ ಒಂದು ಸ್ಥಾನಕ್ಕೆ ಒಂಭತ್ತು ಮಂದಿ ಸ್ಪರ್ಧೆಯಲ್ಲಿದ್ದಾರೆ. ಚಿತ್ರದುರ್ಗದ ಒಂದು ಸ್ಥಾನಕ್ಕೆ ಐದು, ಕೊಡಗು ಜಿಲ್ಲೆಯ ಒಂದು ಸ್ಥಾನಕ್ಕೆ ನಾಲ್ಕು, ಚಿಕ್ಕಮಗಳೂರು ಜಿಲ್ಲೆಯ ಒಂದು ಸ್ಥಾನಕ್ಕೆ ನಾಲ್ಕು ಹಾಗೂ ದಕ್ಷಿಣ ಕನ್ನಡ– ಉಡುಪಿ ಜಿಲ್ಲೆಗಳ ಒಂದು ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ತೀವ್ರ ಪೈಪೋಟಿ: ಕಿಮ್ಸ್‌ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಟಿ.ಎಚ್‌.ಆಂಜನಪ್ಪ, ಸಂಘದ ಹಿಂದಿನ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ನಾಗರಾಜ್‌, ಹಿಂದಿನ ಅಧ್ಯಕ್ಷ ಬಿ. ಕೆಂಚಪ್ಪಗೌಡ, ನೇತ್ರ ತಜ್ಞ ಡಾ.ಅಪ್ಪಾಜಿಗೌಡ ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಲ್ಲಯ್ಯ ನೇತೃತ್ವದಲ್ಲಿ ತಲಾ 15ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ‘ಸಿಂಡಿಕೇಟ್‌’ ರಚಿಸಿಕೊಂಡಿದ್ದಾರೆ. ಮೂರರಿಂದ ಐದು ಮಂದಿ ಅಭ್ಯರ್ಥಿಗಳ ಚಿಕ್ಕ ‘ಸಿಂಡಿಕೇಟ್‌’ಗಳೂ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿವೆ.

ಆಂಜನಪ್ಪ ಬಣ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಸೇರಿದಂತೆ ಹಲವರ ಬೆಂಬಲದಲ್ಲಿ ಚುನಾವಣೆ ಎದುರಿಸುತ್ತಿದೆ. ವೈದ್ಯರು, ವಕೀಲರು, ಸರ್ಕಾರದ ನಿವೃತ್ತ ಅಧಿಕಾರಿಗಳು, ಪ್ರಾಧ್ಯಾಪಕರು ಈ ಬಾರಿ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಘದ ಆಡಳಿತದ ಚುಕ್ಕಾಣಿ ಹಿಡಿಯಲು ಬೆಂಗಳೂರಿನ 15 ಸ್ಥಾನಗಳ ಗೆಲುವು ನಿರ್ಣಾಯಕವಾಗಿದ್ದು, ನಗರ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಚುನಾವಣೆಯ ಕಾವು ಏರಿದೆ.

5.20 ಲಕ್ಷ ಮತದಾರರು
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 5,20,721 ಮತದಾರರಿಗೆ ಹಕ್ಕು ಚಲಾಯಿಸುವ ಅವಕಾಶವಿದೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅತ್ಯಧಿಕ 1,97,125 ಮತದಾರರಿದ್ದಾರೆ.

ಡಿಸೆಂಬರ್‌ 12ರಂದು ಮತದಾನ ನಡೆಯಲಿದೆ. ಡಿ. 15ರಂದು ಮತಗಳ ಎಣಿಕೆ ನಡೆಸಲಾಗುತ್ತದೆ. ಚುನಾವಣೆಗಾಗಿ 1,049 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಒಕ್ಕಲಿಗರ ಸಂಘದ ಚುನಾವಣಾಧಿಕಾರಿಯಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಪಿ.ಎನ್‌. ರವೀಂದ್ರ ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳೇ ಆಕರ್ಷಣೆ
ರಾಜ್ಯ ಒಕ್ಕಲಿಗರ ಸಂಘದ ಅಧೀನದಲ್ಲಿ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ತಾಂತ್ರಿಕ ಶಿಕ್ಷಣ ಕಾಲೇಜು (ಬಿಐಟಿ), ಫಾರ್ಮಸಿ, ನರ್ಸಿಂಗ್‌, ಫಿಸಿಯೋಥೆರಪಿ, ಕಾನೂನು ಕಾಲೇಜುಗಳು ಮತ್ತು ಎರಡು ಪದವಿ ಕಾಲೇಜುಗಳಿವೆ. ಒಂದು ಅನುದಾನಿತ ಪ್ರಾಥಮಿಕ ಶಾಲೆ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳೂ ಬೆಂಗಳೂರು ನಗರದಲ್ಲೇ ಇವೆ. ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿ ನಿಲಯಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.