ಭಾನುವಾರ, ಮೇ 22, 2022
25 °C
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನ

ಜಲ ವಿವಾದ ಕಾಯ್ದೆ- ಪುನರ್‌ಪರಿಶೀಲನೆ ಅಗತ್ಯ: ಸಿಎಂ ಬೊಮ್ಮಾಯಿ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿವೃದ್ಧಿಗೆ ತೊಡಕಾಗಿರುವ ಅಂತರರಾಜ್ಯ ಜಲ ವಿವಾದ ಕಾಯ್ದೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಸೋಮವಾರ ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಿದ ಅವರು, ಈ ಕಾಯ್ದೆಯ ಪರಿಣಾಮ ಅಂತರ ರಾಜ್ಯ ಜಲವಿವಾದಗಳು ಬಗೆಹರಿಯದೇ ನೀರಾವರಿ ಯೋಜನೆಗಳು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿವೆ ಎಂದರು.

ಅಂತರ ರಾಜ್ಯ ಜಲ ವಿವಾದ ಕಾಯ್ದೆಯು ಸಮಸ್ಯೆಯನ್ನು ಬಗೆಹರಿಸುವ ಬದಲು, ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಆದ್ದರಿಂದ ಈ ಕಾಯ್ದೆಯನ್ನು ಮರುಪರಿಶೀಲಿಸಲು ಇದು ಸಕಾಲ ಎಂದು ಬೊಮ್ಮಾಯಿ ಸಲಹೆ ನೀಡಿದರು.

ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ವೇಗ ಕಂಡುಕೊಳ್ಳದೇ ಇರಲು ಅಡೆ ತಡೆಗಳೇ ಪ್ರಮುಖ ಕಾರಣವಾಗಿವೆ. ಹಲವು ಯೋಜನೆಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆಗಳ ಅನುಮತಿ ಸಿಗುವುದೇ ತುಂಬ ತಡವಾಗುತ್ತಿದೆ. ಇದನ್ನು ಸರಿಪಡಿಸಬೇಕು. ಅಲ್ಲದೆ, ಗರಿಷ್ಠ ಹೂಡಿಕೆಗೆ ಅನುಕೂಲವಾಗುವಂತೆ ಕೆಲವು ನಿಯಮಗಳನ್ನೂ ಸಡಿಲಗೊಳಿಸಬೇಕು. ಯೋಜನೆಗಳು ತಡವಾಗುವುದರಿಂದ ದುಬಾರಿ ಆಗಿಯೂ ಪರಿಣಮಿಸಿವೆ ಎಂದರು.

ಗತಿ ಶಕ್ತಿ ಯೋಜನೆ ರಾಷ್ಟ್ರ ನಿರ್ಮಾಣದ ದೂರದೃಷ್ಟಿಯಿಂದ ರೂಪಿತವಾದ ಕಾರ್ಯಕ್ರಮ. ಸಮಸ್ಯೆಗಳನ್ನು ಬಗೆಹರಿಸಲು ಒಟ್ಟಾಗಿ ಕೆಲಸ ಮಾಡುವ, ಒಂದೇ ಗುರಿಯತ್ತ ಸಾಗಲು, ದೇಶ ಕಟ್ಟುವ ಕಾಯಕಕ್ಕೆ ಅನುಕೂಲವಾಗುವ ಸಂಪನ್ಮೂಲ ಕ್ರೋಡೀಕರಿಸಲು ಇರುವ ಪರಿಣಾಮಕಾರಿ ವೇದಿಕೆ ಎಂದು ಹೇಳಿದರು.

ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಒಕ್ಕೂಟದ ಸಹಕಾರವನ್ನು ಉದಾಹರಣೆಯಾಗಿ ಪರಿಗಣಿಸಬೇಕು. ಏಕೆಂದರೆ ಬಹುತೇಕ ಮೂಲಸೌಕರ್ಯ ರಾಜ್ಯಗಳ ಮೂಲಕವೇ ಹಾದು ಹೋಗುತ್ತದೆ. ಅವರ ಸಹಕಾರದಿಂದಲೇ ಅನುಷ್ಠಾನಕ್ಕೆ ಮಾಡಬೇಕಾಗಿದೆ. ಭಾರತ ಸರ್ಕಾರದ ದೂರದೃಷ್ಟಿ ಮತ್ತು ಸಹಕಾರದಿಂದ ಎನ್‌ಎಂಪಿ ಮತ್ತು ಡಿಜಿಟಲ್‌ ಶಿಷ್ಟಾಚಾರದ ವ್ಯಾಪ್ತಿಯೊಳಗೆ ತರುವ ಯೋಜನೆಗಳು ರಾಷ್ಟ್ರ ದಶಕಗಳಿಂದ ಬೇಡಿಕೆಯಲ್ಲಿದ್ದ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.

ರಸ್ತೆ ಸಾರಿಗೆಯಲ್ಲಿ ಗತಿ ಮತ್ತು ಶಕ್ತಿ ಎರಡನ್ನೂ ಸಾಧಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವರು, ರಾಷ್ಟ್ರೀಯ ಹೆದ್ದಾರಿಗಳನ್ನು ಕಳೆದ 7 ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿಸಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ ಕೇವಲ ರಸ್ತೆ ಸಾರಿಗೆ ಮತ್ತು ಲಾಜಿಸ್ಟಿಕ್‌ಗಳಿಗೆ ಮಾತ್ರ ಸೀಮಿತವಾಗಿರದೇ, ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧ್ಯವಾಗಿಸಬಲ್ಲದು ಎಂದು ತೋರಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು