ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆಯುವ ಬಂಡೆ ಆಂಜನೇಯಸ್ವಾಮಿ ದೇಗುಲ

Last Updated 6 ಏಪ್ರಿಲ್ 2021, 14:08 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯಿಂದ ಅರ್ಧ ಕಿ.ಮೀ.ದೂರ ಸಾಗಿದರೆ, ನೂರಾರು ವರ್ಷಗಳಿಂದ ಅಜ್ಞಾತವಾಗಿದ್ದ ಕಳೆದ 10 ವರ್ಷಗಳ ಹಿಂದೆ ಬೆಳಕಿಗೆ ಬಂದ ಉದ್ಭವ ಆಂಜನೇಯಸ್ವಾಮಿಗೆ ಇದೀಗ ಅಲ್ಲಿನ ಭಕ್ತರು ₹20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸುಂದರವಾದ ನೂತನ ದೇಗುಲ ನಿರ್ಮಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡ ದೇಗುಲ ಏ.8 ರಂದು 48ನೇ ದಿನದ ಮಂಡಲ ಪೂಜೆಗೆ ಸಜ್ಜಾಗಿದೆ.

ದೇವಾಲಯದ ವಿಶೇಷತೆ: 10 ವರ್ಷಗಳ ಹಿಂದೆ ನಂದಿಪುರ ಗ್ರಾಮದ ಕಾಲುದಾರಿಯ ಬಳಿ ಕೆಸರಿನ ನಡುವೆ ಇದ್ದ ಕಲ್ಲುಬಂಡೆ ಯೊಂದಿತ್ತು. ದನಕರುಗಳು ಮೇಯುತ್ತಿದ್ದುದನ್ನು ಬಿಟ್ಟರೆ ಯಾವ ಜನರು ಸುಳಿಯುತ್ತಿರಲಿಲ್ಲ. ಒಮ್ಮೆ ಬಂಡೆಯ ಸಮೀಪ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ದೀಪ ಹಚ್ಚಲು ಪರದಾಡುತ್ತಿದ್ದ ದೃಶ್ಯ ಸುತ್ತಮುತ್ತ ಜಮೀನು ಹೊಂದಿದ್ದ ಬೆಳೆಗಾರ ಪ್ರವೀಣ್ ಎಂಬವರ ಗಮನ ಸೆಳೆಯಿತು.ಸ್ಥಳಕ್ಕೆ ಬಂದು ಗಮನಿಸಿದಾಗ ಬಂಡೆಯ ಮೇಲೆ ಅಸ್ಪಷ್ಟವಾಗಿದ್ದ ಆಂಜನೇಯನ ಕೆತ್ತನೆ ಕಾಣಿಸಿತು. ಕೆಲ ದಿನಗಳ ಬಳಿಕ ಪ್ರವೀಣ್ ಸ್ನೇಹಿತರ ಜತೆ ಸೇರಿ ಬಂಡೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛಗೊಳಿಸಿದರು. ಬಂಡೆಯ ಮೇಲೆ ಚಿಕ್ಕ ಗುಡಿಯೊಂದನ್ನು ನಿರ್ಮಿಸಿದರು. ಭಕ್ತರಿಂದ ಪೂಜೆ-ಪುರಸ್ಕಾರಗಳು ಆರಂಭವಾದವು. ವರ್ಷಗಳು ಉರುಳಿದವು. ಬಂಡೆಯ ಮೇಲೆ ಅಸ್ಪಷ್ಟವಾಗಿದ್ದ ಒಂದೂವರೆ ಅಡಿ ಎತ್ತರದ ಆಂಜನೇಯನ ಮೂರ್ತಿ ಸ್ಪಷ್ಟವಾಗತೊಡಗಿತು. ಅಂದಿನಿಂದ ಗ್ರಾಮಸ್ಥರು ಪ್ರತಿ ವರ್ಷ ಹನುಮ ಜಯಂತಿಯಂದು ವಿಶೇಷ ಪೂಜೆ ಮಾಡಲಾರಂಭಿಸಿದರು.

ಕೊಡ್ಲಿಪೇಟೆಯ ಪ್ರಸಿದ್ಧ ಶಿಲ್ಪಿ ವರಪ್ರಸಾದ್ ದೇವಾಲಯಕ್ಕೆ ಭೇಟಿ ನೀಡಿ ದೇಗುಲದ ಬಳಿ ಶಿಲೆಯಲ್ಲಿ ಎತ್ತರದ ಹನುಮ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಂಕಲ್ಪ ಮಾಡಿದರು. ಶಿಲೆಗಳ ಕೆತ್ತನೆಗೆ ಕಲ್ಲುಗಳನ್ನು ತರುತ್ತಿದ್ದ ಕೋರೆ ಮಾಲೀಕರಿಗೆ ಏಕಶಿಲೆಯೊಂದನ್ನು ತಂದುಕೊಡುವಂತೆ ತಿಳಿಸಿದರು. ಕೆಲ ದಿನಗಳಲ್ಲಿಯೇ ಹೆಗ್ಗಡದೇವನ ಕೋಟೆಯಲ್ಲಿ ಏಕಶಿಲೆ ದೊರೆಯಿತು. ತಕ್ಷಣ ಖರೀದಿಸಿ ಕೊಡ್ಲಿಪೇಟೆಗೆ ತಂದು ಕೆತ್ತನೆ ಕೆಲಸ ಶುರು ಮಾಡಿದರು.

ವರಪ್ರಸಾದರ ಅಧ್ಯಕ್ಷತೆಯಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಯಿತು. ಭಕ್ತರು, ಸಾರ್ವಜನಿಕರ ನೆರವಿನೊಂದಿಗೆ ₹20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಭವ್ಯವಾದ ಸುಂದರ ಬಂಡೆ ಆಂಜನೇಯ ಸ್ವಾಮಿ ದೇಗುಲ ನಿರ್ಮಾಣವಾಯಿತು.

ನಂದಿಪುರದ ನೂತನ ಉದ್ಭವ ಆಂಜನೇಯ ಸ್ವಾಮಿ ದೇಗುಲ ವಿಶೇಷತೆಯಿಂದ ಕೂಡಿದೆ. 12.5 ಅಡಿ ಎತ್ತರದ ಏಕಶಿಲೆಯ ಹನುಮನ ಮೂರ್ತಿಯೂ ಜಿಲ್ಲೆಯಲ್ಲಿಯೇ ಏಕೈಕ ಮೂರ್ತಿಯಾಗಿದೆ. ಅದರಲ್ಲೂ ಬಂಡೆಯ ಮೇಲೆ ಮೂಡಿರುವ ಹನುಮನ ಮೂರ್ತಿ ಎಲ್ಲಿಯೂ ಇಲ್ಲ ಎಂದು ಗ್ರಾಮ ಪ್ರಮುಖ ಕೆ.ಪಿ.ಪ್ರವೀಣ್ ಹೇಳುತ್ತಾರೆ.

ಆಂಜನೇಯಸ್ವಾಮಿ ಉದ್ಭವವಾಗಿರುವ ಬಂಡೆಯ ಮೇಲೇ ನೂತನ ದೇಗುಲ ನಿರ್ಮಾಣವಾಗಿದ್ದು ಏಕಶಿಲೆಯ ಹನುಮ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನೀರು, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ತಮ ರಸ್ತೆಯ ಸಂಪರ್ಕ ಹಾಗೂ ವಾಹನ ನಿಲುಗಡೆಗೂ ಅವಕಾಶವಿದೆ. ವಾರದಲ್ಲಿ ಬುಧವಾರ ಮತ್ತು ಶನಿವಾರ ಬೆಳಿಗ್ಗೆ 6.30 ರಿಂದ 9.30 ಹಾಗೂ ಸಂಜೆ 6ರಿಂದ 8.30ರವರೆಗೆ ಪೂಜೆ ನಡೆಯುತ್ತದೆ. ಕೊಡ್ಲಿಪೇಟೆ, ಶನಿವಾರಸಂತೆ ಮಾತ್ರವಲ್ಲದೇ ನೆರೆಯ ಹಾಸನ ಜಿಲ್ಲೆಯ ಯಸಳೂರು, ಕೆರೋಡಿ, ಐಗೂರು, ಶುಕ್ರವಾರಸಂತೆ ಇತರ ಊರುಗಳಿಂದಲೂ ಭಕ್ತ ಸಮೂಹ ಹರಿದು ಬರುತ್ತಿದೆ.

ದೇಗುಲದ ಮತ್ತೊಂದು ವಿಶೇಷತೆಯೆಂದರೆ ದೇಗುಲದ ಹಿಂಬದಿ ಅಟ್ಟಣಿಗೆ ನಿರ್ಮಿಸಿದ್ದು 12.5 ಅಡಿ ಎತ್ತರದ ಹನುಮನಿಗೆ ಭಕ್ತರು ಸ್ವತಃ ಅಭಿಷೇಕ ಮಾಡುವ ಅವಕಾಶ ಕಲ್ಪಿಸಲಾಗಿದೆ. ಫೆ.18 ರಂದು ದೇಗುಲ ಸಮಿತಿಯ ಪದಾಧಿಕಾರಿಗಳ ಹಾಗೂ ಶಿಲ್ಪಿ ವರಪ್ರಸಾದರ ಪರಿಶ್ರಮದ ಫಲವಾಗಿ ದೇಗುಲ ಲೋಕಾರ್ಪಣೆಗೊಂಡಿತು.

ಕೊಡ್ಲಿಪೇಟೆ ವ್ಯಾಪ್ತಿಯ ವಿವಿಧ ಮಠಾಧೀಶರು ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದ್ದವು. ರಸ್ತೆ ಬದಿಯಲ್ಲೆ ದೇಗುಲವಿರುವ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಯಾಣಿಕರು ದರ್ಶನ ಮಾಡಿ, ಪ್ರಾರ್ಥಿಸಿ ತೆರಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT