ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರನ್ನು ಕಳೆದುಕೊಂಡ ಮಕ್ಕಳ ಜೊತೆ ನಾವಿದ್ದೇವೆ: ಸಚಿವೆ ಶಶಿಕಲಾ ಜೊಲ್ಲೆ

ಕೋವಿಡ್‌ನಿಂದ ತಂದೆ–ತಾಯಿ ಕಳೆದುಕೊಂಡ ರಾಜ್ಯದ 19 ಮಕ್ಕಳ ಜೊತೆ ಜೊಲ್ಲೆ ಸಂವಾದ
Last Updated 3 ಜೂನ್ 2021, 8:40 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾದ 19 ಮಕ್ಕಳ ಜೊತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಗುರುವಾರ ಸಂವಾದ ನಡೆಸಿದರು.

ತಮ್ಮ ಸ್ವ ಕ್ಷೇತ್ರ ನಿಪ್ಪಾಣಿಯಲ್ಲಿರುವ ಕಚೇರಿಯಿಂದ ಪ್ರತಿಯೊಬ್ಬ ಮಗುವಿನ ಜೊತೆ ವೈಯಕ್ತಿಕವಾಗಿ ಮಾತನಾಡಿ ಅವರು, ಧೈರ್ಯ ತುಂಬಿದರು. ಕಷ್ಟದ ಸಂದರ್ಭದಲ್ಲಿ ಧೃತಿಗೆಡದೆ ಜೀವನದ ಸವಾಲುಗಳನ್ನು ಎದುರಿಸಿ ಮುಂದೆ ಗಣ್ಯ ವ್ಯಕ್ತಿಗಳಾಗುವಂತೆ ಕಿವಿಮಾತು ಹೇಳಿದರು.

ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರ ಪಾಲನೆ ಮಾಡುತ್ತಿರುವವರ ಜೊತೆಗೂ ಸಂವಾದ ನಡೆಸಿದ ಜೊಲ್ಲೆ, ‘ತಂದೆ–ತಾಯಿಯನ್ನು ಕಳೆದುಕೊಂಡ ಮಕ್ಕಳ ಜೊಗೆ ನಾವಿದ್ದೇವೆ’ ಎಂದು ಸಾಂತ್ವನ ಹೇಳಿದರು. ಅವರ ಮನಸ್ಸಿನ ನೋವು, ಸಮಸ್ಯೆಗಳನ್ನು ಮನಗಂಡು, ಸರ್ಕಾರದಿಂದ ನೀಡಲಾಗುವ ನೆರವಿನ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಜೊಲ್ಲೆ, ‘ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ನೋವು ಕಂಡು ಮನಸ್ಸು ಭಾರವಾಯಿತು. ಈ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಪೋಷಕರು ಇಲ್ಲ ಎಂಬ ಕೊರಗು ಉಂಟಾಗಬಾರದು ಎಂಬ ಕಾರಣಕ್ಕೆ ಯೋಜನೆಗಳನ್ನು ರೂಪಿಸಲಿದ್ದೇವೆ’ ಎಂದರು.

‘ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ‘ಬಾಲ ಸೇವಾ’ ಯೋಜನೆ ಘೋಷಿಸಿದ್ದಾರೆ. ಸರ್ಕಾರದಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಶೀಘ್ರದಲ್ಲಿ ತಲುಪಿಸಲಾಗುವುದು. ಮುಂದೇನಾದರೂ ಅಗತ್ಯವಿದ್ದಲ್ಲಿ ನೆರವು ನೀಡಲು ಸರ್ಕಾದ ಸಿದ್ಧವಿದೆ’ ಎಂದೂ ಭರವಸೆ ನೀಡಿದರು.

‘ಬಾಲ ಸೇವಾ ಯೋಜನೆಯ ಬಗ್ಗೆ ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು. ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುವುದು. ತಂದೆ– ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಘೋಷಿಸಿರುವ ಮಾಸಿಕ ₹ 3,500 ನೀಡುವುದು, 10 ವರ್ಷದ ಒಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಮತ್ತು ತಂದೆ ತಾಯಿಗಳನ್ನು ಕಳೆದುಕೊಂಡ 21 ವರ್ಷ ಪೂರೈಸಿರುವ ಹೆಣ್ಣು ಮಕ್ಕಳಿಗೆ ₹ 1 ಲಕ್ಷ ಸಹಾಯಧನ ನೇರವಾಗಿ ಅವರ ಖಾತೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆ ಅನುಷ್ಠಾನದಲ್ಲಿ ಮಧ್ಯವರ್ತಿಗಳ ಹಾವಳಿ ಆಗದಂತೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಸಂವಾದದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಆಕೃತಿ, ನೋಡಲ್ ಅಧಿಕಾರಿಗಳಾದ ಮೋಹನರಾಜ್ ಕೂಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT