ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯಕ್ಕೆ ಕೋವಿಶೀಲ್ಡ್ ಬಂದಿಲ್ಲ,18-44 ವರ್ಷ ವಯೋಮಾನದವರಿಗೆ ನಾಳೆ ಲಸಿಕೆ ಇಲ್ಲ‘

Last Updated 30 ಏಪ್ರಿಲ್ 2021, 5:55 IST
ಅಕ್ಷರ ಗಾತ್ರ

ಬೆಂಗಳೂರು: ಹದಿನೆಂಟು ವರ್ಷ ಮೇಲ್ಪಟ್ಟ ಜನರಿಗೆ ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಲಸಿಕೆಯ ಕೊರತೆ ಎದುರಾಗಿದೆ. '18 ವರ್ಷದಿಂದ 44 ವರ್ಷ ವಯಸ್ಸಿನವರು ಲಸಿಕೆ ಹಾಕಿಸಿಕೊಳ್ಳಲು ನಾಳೆ ಆಸ್ಪತ್ರೆಗಳಿಗೆ ತೆರಳುವುದು ಬೇಡ' ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

'18 ರಿಂದ 44 ವರ್ಷದವರಿಗೆ ಲಸಿಕೆ ಒದಗಿಸುವ ಸಂಬಂಧ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಇನ್ನೂ 1 ಕೋಟಿ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ ಪೂರೈಕೆ ಮಾಡಿಲ್ಲ. ಹಾಗಾಗಿ, ಮೇ 1 ರಿಂದ ವಿತರಣೆ ನಡೆಯುವುದಿಲ್ಲ ' ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಸುದ್ದಿಗಾರರ ಜತೆಗೆ ಶುಕ್ರವಾರ ಮಾತನಾಡಿದ ಅವರು, 'ರಾಜ್ಯದಲ್ಲಿ 18 ರಿಂದ 44 ವರ್ಷದವರು ಸುಮಾರು 3.5 ಕೋಟಿ ಜನರಿದ್ದಾರೆ. ಏ.28 ರಿಂದಲೇ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಪ್ರಾರಂಭವಾಗಿದೆ. ಈಗಾಗಲೇ ಹೆಸರು ನೊಂದಾಯಿಸಿದವರು ಮೇ 1ಕ್ಕೆ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳಿಗೆ ತೆರಳಬಾರದು. ಕಂಪನಿಯು ಲಸಿಕೆ ಯಾವಾಗ ಪೂರೈಕೆ ಮಾಡುತ್ತದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಲಸಿಕೆ ತಲುಪಿದ ಬಳಿಕ ವಿತರಣೆಯ ದಿನಾಂಕವನ್ನು ಸರ್ಕಾರ ತಿಳಿಸುತ್ತದೆ' ಎಂದರು.

'44 ವರ್ಷ ಮೇಲ್ಪಟ್ಟ ವರಿಗೆ ಲಸಿಕೆ ವಿತರಣೆ ಮುಂದುವರೆಯಲಿದೆ. ರಾಜ್ಯಕ್ಕೆ ಈವರೆಗೆ 99.5 ಲಕ್ಷ ಡೋಸ್ ಲಸಿಕೆ ಬಂದಿದೆ. ಅದರಲ್ಲಿ 95 ಲಕ್ಷ ಡೋಸ್ ವಿತರಿಸಲಾಗಿದೆ ' ಎಂದು ಹೇಳಿದರು

ದೇಶದಾದ್ಯಂತ ಏಪ್ರಿಲ್‌ 28ರಿಂದ ಕೋವಿನ್‌ ಪ್ಲಾಟ್‌ಫಾರ್ಮ್‌ ಮೂಲಕ ಲಸಿಕೆ ಹಾಕಿಸಿಕೊಳ್ಳಲು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಆರೋಗ್ಯ ಸೇತು ಅಪ್ಲಿಕೇಷನ್‌ ಮತ್ತು ಕೋವಿನ್‌ ಪ್ಲಾಟ್‌ಫಾರ್ಮ್‌ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ 18 ವರ್ಷದಿಂದ 44 ವರ್ಷ ವಯಸ್ಸಿನವರು ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರ ಮತ್ತು ದಿನವನ್ನು ಗೊತ್ತು ಪಡಿಸಲು ಸಾಧ್ಯವಾಗುತ್ತಿಲ್ಲ.

ಕೋವಿಡ್‌ ಲಸಿಕೆ ಪೂರೈಕೆ ತಡವಾಗುವುದರಿಂದ 18 ರಿಂದ 44 ವರ್ಷ ವಯಸ್ಸಿನವರಿಗೆ ಮೇ 1 ರಿಂದ ಲಸಿಕೆ ನೀಡುವುದಿಲ್ಲ. ಮೇ ಮೂರನೇ ವಾರದಿಂದ ಲಸಿಕೆ ಅಭಿಯಾನ ಆರಂಭಿಸುವ ಸಾಧ್ಯತೆ ಇದೆ. ಲಸಿಕೆ ಕಂಪನಿಗಳು ಹೆಚ್ಚುವರಿ ಲಸಿಕೆ ಉತ್ಪಾದನೆ ಆರಂಭಿಸಿದ್ದು, ಮೇ ಎರಡನೇ ವಾರ ಮೊದಲ ಬ್ಯಾಚ್‌ನ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಈ ವರ್ಗದವರಿಗೆ ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಮಾಡುತ್ತಿದೆ. ಈಗ 5 ಲಕ್ಷ ಡೋಸ್‌ಗಳು ಲಭ್ಯತೆ ಇವೆ. ಏ. 30ರಂದು 10 ಲಕ್ಷ ಡೋಸ್‌ ಬರಲಿದೆ ಎಂದು ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT