ಬುಧವಾರ, ಆಗಸ್ಟ್ 17, 2022
28 °C

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಲು ಬಿಡುತ್ತಿರಲಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕುಮಾರಸ್ವಾಮಿ ಅವರು ಮಾತೆತ್ತಿದರೆ ಸಿದ್ದರಾಮಯ್ಯ ನಮ್ಮ ಸರ್ಕಾರ ಬೀಳಿಸಿಬಿಟ್ಟರು ಎನ್ನುತ್ತಿದ್ದಾರೆ. ಸರ್ಕಾರವನ್ನು ಬೀಳಿಸಲೇಬೇಕು ಎಂದಿದ್ದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಲು ನಾನು ಬಿಡುತ್ತಿರಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಶುಕ್ರವಾರ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಗ್ರಾಮ್‌ ಜನಾಧಿಕಾರ’ ಸಮಾವೇಶದಲ್ಲಿ ಮಾತನಾಡಿ, ‘ನಾವು 80 ಮಂದಿ ಇದ್ದೆವು. ಅವರು 37 ಜನ ಇದ್ದರು. ಮೈತ್ರಿ ಆಗಲ್ಲ ಎಂದು ನಾನು ಕೂತಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿದ್ದರಾ’ ಎಂದು ಪ್ರಶ್ನಿಸಿದರು.

ಹೋಟೆಲ್‌ನಲ್ಲಿ ಕುಳಿತು ರಾಜ್ಯಭಾರ ಮಾಡುತ್ತಿದ್ದ ಗಿರಾಕಿ ಅವ. ಕಚೇರಿಗೂ ಬರುತ್ತಿರಲಿಲ್ಲ. ಶಾಸಕರ ಕೈಗೆ ಸಿಗುತ್ತಿರಲಿಲ್ಲ. ಒಂದು ವೇಳೆ ಮೈತ್ರಿ ಆಗದೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗದೇ ಇದ್ದಿದ್ದರೆ ನಮ್ಮ 14 ಶಾಸಕರು ಪಕ್ಷದಲ್ಲೇ ಇರುತ್ತಿದ್ದರು ಎಂದರು.

‘ಯಡಿಯೂರಪ್ಪ ಅಪ್ಪನ ಮನೆ ದುಡ್ಡಾ‘

ಬಿ.ಎಸ್‌.ಯಡಿಯೂರಪ್ಪ ಅವರು ಬಡವರಿಗೆ ಸಿಗುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದ್ದಾರೆ. ಇದು ಅನ್ಯಾಯ ಅಲ್ಲವೇ. ಎರಡು ಕೆ.ಜಿ ಕಡಿಮೆ ಮಾಡಿದ್ದು ಏಕೆ? ಅವರ ಅಪ್ಪನ ಮನೆಯ ದುಡ್ಡಿನಿಂದ ಅಕ್ಕಿ ತಂದು ಕೊಡುತ್ತಿದ್ದರಾ? ನಾನು ನನ್ನಪ್ಪನ ಮನೆಯ ದುಡ್ಡಿನಿಂದ ಕೊಟ್ಟಿದ್ದಾ? ಇದು ಜನರ ದುಡ್ಡು. ಆ ದುಡ್ಡು ಇರುವುದು ಜನರಿಗೆ ಖರ್ಚುಮಾಡಲು ಎಂದು ಕಿಡಿಕಾರಿದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡದೇ ಹೋಗಿದ್ದರೆ ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಬಡವರಿಗೆ ಬದುಕಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಲಂಚ ಪಡೆಯುವವನಿಗೆ ಜಿಂದಾಬಾದ್

ಯಡಿಯೂರಪ್ಪ ಚೆಕ್‌ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರೆ, ಅವನ ಮಗ ವಿಜಯೇಂದ್ರ ಒಂದು ಹೆಜ್ಜೆ ಮುಂದೆ ಹೋಗಿದ್ದು. ಆರ್‌ಟಿಜಿಎಸ್‌ ಮೂಲಕ ಲಂಚ ಪಡೆಯುತ್ತಿದ್ದಾನೆ. ₹ 7.40 ಕೋಟಿ ಹಣ ಆರ್‌ಟಿಜಿಎಸ್‌ ಮೂಲಕ ವಿಜಯೇಂದ್ರ ಖಾತೆಗೆ ಬಂದಿದೆ. ಅಂತಹ ವ್ಯಕ್ತಿ ಹೋದಲ್ಲೆಲ್ಲಾ ಜನರು ಜಿಂದಾಬಾದ್‌ ಎನ್ನುತ್ತಿದ್ದಾರೆ. ಏನ್ರೀ ಇದು, ಸಮಾಜ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಸ್ಲಿಮರು ಮಾತ್ರ ಬೀಫ್ ತಿನ್ನುವುದಲ್ಲ’

ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿದರೆ ಸಿದ್ದರಾಮಯ್ಯ ಅವರು ಗೋಹತ್ಯೆ ಪರವಾಗಿದ್ದಾರೆ. ಮುಸ್ಲಿಮರ, ಕ್ರೈಸ್ತರ ಪರವಾಗಿದ್ದಾರೆ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಅವರು ಏನು ಮನುಷ್ಯರಲ್ಲವೇ? ಬೀಫ್‌ ತಿನ್ನುವವರು ಬರೀ ಮುಸ್ಲಿಮರು ಮಾತ್ರನಾ? ದಲಿತರು, ಕ್ರೈಸ್ತರು, ಕೊಡವರೂ ತಿನ್ನುತ್ತಾರೆ. ಬೇರೆ ಬೇರೆ ಕಡೆಯಲ್ಲೂ ತಿನ್ನುತ್ತಾರೆ. ಹಿಂದುಳಿದವರೂ ತಿನ್ನುತ್ತಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು