ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಸ್‌ಆರ್‌ಟಿಸಿ’ ತೀರ್ಪಿನ ಅಂಶ ಲಭ್ಯವಾದ ಬಳಿಕ ಮುಂದಿನ ನಿಲುವು: ಲಕ್ಷ್ಮಣ ಸವದಿ

Last Updated 3 ಜೂನ್ 2021, 8:23 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇರಳವು ಕೆಎಸ್‌ಆರ್‌ಟಿಸಿ ಎಂಬ ಪದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕ ಈ ಪದವನ್ನು ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್‌ ಮಾರ್ಕ್‌ ರಿಜಿಸ್ಟ್ರಿಯು ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶ ಅಧಿಕೃತವಾಗಿ ಇನ್ನೂ ಬಂದಿಲ್ಲ. ಅದು ಲಭ್ಯವಾದ ಬಳಿಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

‘ನಮ್ಮದು ಒಕ್ಕೂಟ ವ್ಯವಸ್ಥೆ. ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧ ಇಟ್ಟುಕೊಂಡು ಹೋಗಬೇಕೆಂದು ಈ ಒಕ್ಕೂಟ ವ್ಯವಸ್ಥೆ ಹೇಳುತ್ತದೆ. ಆದರೆ, ದುರದೃಷ್ಟವಶಾತ್ ಈ ವಿವಾದ ಅನಗತ್ಯವಾಗಿ ಎದ್ದಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

‘ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್‌ ಮಾರ್ಕ್‌ಗಳಿಂದ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆ ಮುಖ್ಯ. ಕರ್ನಾಟಕವಾಗಲಿ, ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭ ಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ’ ಎಂದಿದ್ದಾರೆ.

‘ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವಾಗಿ ಮಾಡಿಕೊಳ್ಳಬಾರದು. ಇದರಿಂದ ಕೇರಳ ರಾಜ್ಯಕ್ಕೆ ಸಂಭ್ರಮಪಡುವಂಥ ವಿಚಾರವೇನೂ ಅಲ್ಲ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳದ ಕೆಎಸ್ಆರ್‌ಟಿಸಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಎಂದೂ ಪೈಪೋಟಿಗೆ ಇಳಿದಿದ್ದಿಲ್ಲ ಎಂಬುದನ್ನು ಕೇರಳ ಮೊದಲು ಅರ್ಥ ಮಾಡಿಕೊಳ್ಳಬೇಕು’ ಎಂದೂ ಹೇಳಿದ್ದಾರೆ.

‘ಇಂಥ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ – ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ’ ಎಂದೂ ಸವದಿ ಅಭಿಪ್ರಾಯಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT