ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಲ್ಲಿ ರೋಗ‍ ಪ್ರತಿರೋಧಕ ಶಕ್ತಿ ದುರ್ಬಲ: ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಕಳವಳ

ಉಸಿರಾಡುವ ಗಾಳಿ, ಕುಡಿಯುವ ನೀರು ವಿಷಪೂರಿತ
Last Updated 5 ಜೂನ್ 2021, 22:26 IST
ಅಕ್ಷರ ಗಾತ್ರ

ಬೆಂಗಳೂರು:‌‘ಹಿಂದಿನ ನೂರಾರು ವರ್ಷಗಳಿಂದ ಗಾಳಿಯನ್ನು ಕೊಲೆ ಮಾಡಿದ್ದೇವೆ. ಜಲ, ನೆಲ, ಆಹಾರ ಮಾಲಿನ್ಯವೂ ನಿಂತಿಲ್ಲ. ಉಸಿರಾಡುವ ಗಾಳಿ, ಕುಡಿಯುವ ನೀರು ವಿಷಪೂರಿತವಾಗಿದೆ. ಇದರಿಂದ ಜನರಲ್ಲಿ ರೋಗ ಪ್ರತಿರೋಧಕ ಶಕ್ತಿ ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ಹಿರಿಯ ಪತ್ರಕರ್ತ ಹಾಗೂ ಪರಿಸರವಾದಿ ನಾಗೇಶ ಹೆಗಡೆ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಘಟಕವು ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ‘ವಿಚಾರ ಕಲರವ’ ಉಪನ್ಯಾಸ ಮಾಲಿಕೆಯಲ್ಲಿ ‘ಜನಪದ ಪರಿಸರ’ ಕುರಿತು ಅವರು ಮಾತನಾಡಿದರು.

‘ನಿಫಾ, ಹಕ್ಕಿಜ್ವರ, ಮಂಗನ ಕಾಯಿಲೆ ಸೇರಿದಂತೆ ಹಲವಾರು ರೋಗಗಳು ಪ್ರಾಣಿ ಪಕ್ಷಿಗಳಿಂದ ಹರಡುತ್ತಿವೆ. ನಮ್ಮ ಅವ್ಯವಸ್ಥೆಗಳೇ ಇದಕ್ಕೆ ಕಾರಣ. ಇದರಿಂದಲೇ ಎಲ್ಲ ರೀತಿಯ ವೈರಸ್, ಶಿಲೀಂಧ್ರಗಳು ಹುಟ್ಟಿಕೊಳ್ಳುತ್ತಿವೆ. ದೊಡ್ಡ ಆಸ್ಪತ್ರೆಗಳು ಪ್ರಬಲವಾಗುತ್ತಿದ್ದು, ನಾವೆಲ್ಲ ಆಂತರಿಕ ರೋಗಪ್ರತಿರೋಧಕ ಶಕ್ತಿ ಕಳೆದುಕೊಂಡು ದುರ್ಬಲರಾಗುತ್ತಿದ್ದೇವೆ’ ಎಂದರು.

ಪರಿಸರ ದಿನವನ್ನು ‘ಪರಿಸರದ ಪುನಃಶ್ಚೇತನ’ದ ಘೋಷಣೆಯಡಿ ಆಚರಿಸುವಂತೆವಿಶ್ವಸಂಸ್ಥೆ ಕರೆ ನೀಡಿದೆ. ಮುಂದಿನ 10 ವರ್ಷ ಪರಿಸರದ ಮರು ಸಂವರ್ಧನೆ ಆಗಬೇಕು ಎಂದೂ ಹೇಳಿದೆ.ಲಾಕ್‌ಡೌನ್‌ ನಂತರ ಪರಿಸರ ತಾನಾಗೇ ಪುನಃಶ್ಚೇತಗೊಂಡಿರುವ ಉದಾಹರಣೆಗಳಿವೆ. ಅಪಾಯದಲ್ಲಿರುವ ಎಲ್ಲ ಜೀವಸಂಕುಲಗಳನ್ನು ಉಳಿಸಬೇಕಿದೆ. ನಮ್ಮ ಅಭಿವ್ಯಕ್ತಿಗಳ ಮೂಲಕಪರಿಸರದ ಪುನಶ್ಚೇತನಕ್ಕೆ ಉಳಿದವರನ್ನು ಪ್ರೇರೇಪಿಸಬೇಕು’ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್,‘ಪರಿಸರ ಸಮತೋಲನವನ್ನು ನಾವೆಲ್ಲ ಹದಗೆಡಿಸುತ್ತಿದ್ದೇವೆ.ಪರಿಸರದ ಪುನಃಶ್ಚೇತನವಾಗದಿದ್ದರೆ, ಅಪಾಯದ ದಿನಗಳು ಸನ್ನಿಹಿತ.ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಸಂರಕ್ಷಣೆ ಕುರಿತು ಪ್ರತಿ ಶಾಲಾ ಕಾಲೇಜುಗಳಲ್ಲಿ ಪ್ರಚಾರದ ಕೆಲಸವಾಗಬೇಕು’ ಎಂದರು.

ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಎನ್‌.ಸತೀಶ್ ಗೌಡ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT