ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಾಯಿನ್‌ ಪ್ರಕರಣದಲ್ಲಿ ಕೇಂದ್ರದ ಮೌನವೇಕೆ: ಎಐಸಿಸಿ ವಕ್ತಾರೆ ಸುಪ್ರಿಯಾ ಪ್ರಶ್ನೆ

Last Updated 1 ಅಕ್ಟೋಬರ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ನ ಮುಂದ್ರಾದಲ್ಲಿ ಅದಾನಿ ಸಮೂಹದ ಒಡೆತನದಲ್ಲಿರುವ ಬಂದರಿನಲ್ಲಿ ₹ 21,000 ಕೋಟಿ ಮೌಲ್ಯದ ಹೆರಾಯಿನ್ ಪತ್ತೆಯಾಗಿರುವ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಮೌನ ವಹಿಸಿರುವುದೇಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇತ್‌, ‘ಮುಂದ್ರಾ ಬಂದರಿನಲ್ಲಿ ಸೆಪ್ಟೆಂಬರ್‌ 13ರಂದು 3,000 ಕೆ.ಜಿ. ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್‌ 9ರಂದು ಇದೇ ಬಂದರಿನ ಮೂಲಕ ಆಮದು ಮಾಡಿಕೊಂಡಿರುವ ₹ 1.75 ಲಕ್ಷ ಕೋಟಿ ಮೌಲ್ಯದ 25,000 ಕೆ.ಜಿ. ಹೆರಾಯಿನ್ ಮಾರುಕಟ್ಟೆಗೆ ತಲುಪಿದೆ. ಈ ಕೃತ್ಯಕ್ಕೆ ಯಾರು ಹೊಣೆ’ ಎಂದು ಕೇಳಿದರು.

ಅಪ್ಘಾನಿಸ್ತಾನದ ಹಸನ್‌ ಹುಸೈನ್‌ ಲಿಮಿಟೆಡ್‌ ಎಂಬ ಕಂಪನಿಯಿಂದ ‘ಸೆಮಿ ಕಟ್‌ ಟಾಲ್ಕಮ್‌ ಪೌಡರ್‌’ ಹೆಸರಿನಲ್ಲಿ ಅದಾನಿ ಮುಂದ್ರಾ ಬಂದರಿನ ಮೂಲಕ ನಿರಂತರವಾಗಿ ಹೆರಾಯಿನ್‌ ಆಮದು ಮಾಡಿಕೊಳ್ಳಲಾಗಿದೆ. ಆಶಿ ಟ್ರೇಡಿಂಗ್‌ ಕಂಪನಿ ಹೆಸರಿನಲ್ಲಿ ಈ ವಹಿವಾಟು ನಡೆದಿದೆ. ಸಣ್ಣ ಉದ್ದಿಮೆಗಳು ಇಷ್ಟೊಂದು ಬೃಹತ್‌ ಮೊತ್ತದ ಮಾದಕವಸ್ತು ಆಮದು ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದರ ಹಿಂದೆ ಇರುವವರನ್ನು ಏಕೆ ಈವರೆಗೂ ಪತ್ತೆ ಮಾಡಿಲ್ಲ? ಪ್ರಕರಣದಲ್ಲಿ ಅದಾನಿ ಸಮೂಹದ ವಿರುದ್ಧ ಏಕೆ ವಿಚಾರಣೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.

₹ 21,000 ಕೋಟಿ ಮೌಲ್ಯದ ಹೆರಾಯಿನ್‌ ಆಮದು ಮಾಡಿಕೊಳ್ಳಲು ಕೇವಲ ₹ 4 ಲಕ್ಷ ಪಾವತಿಸಲಾಗಿದೆ. ಆಶಿ ಟ್ರೇಡಿಂಗ್‌ ಕಂಪನಿಯ ಸುಧಾಕರ್‌ ಮಚ್ಚಾವರಂ ಮತ್ತು ಆತನ ಪತ್ನಿ ಗೋವಿಂದ ರಾಜು ವೈಶಾಲಿ ಅವರನ್ನು ಬಂಧಿಸಲಾಗಿದೆ. ಆದರೆ, ಈ ಜಾಲದ ಹಿಂದಿರುವ ರೂವಾರಿಗಳನ್ನು ಇನ್ನೂ ಪತ್ತೆಮಾಡಿಲ್ಲ. ಈ ವಿಚಾರದಲ್ಲಿ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಮೌನವು ಸಂಶಯಾಸ್ಪದವಾಗಿದೆ ಎಂದು ಸುಪ್ರಿಯಾ ಹೇಳಿದರು.

ಅದಾನಿ ಮುಂದ್ರಾ ಬಂದರಿನ ಮೂಲಕ ನಡೆದಿರುವ ಮಾದಕವಸ್ತು ಆಮದು ವಹಿವಾಟಿನಿಂದ ಅದಾನಿ ಸಮೂಹಕ್ಕೆ ಲಾಭವಾಗಿದೆಯೆ? ಎಂದು ನ್ಯಾಯಾಲಯ ಕೇಳಿದೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ತುಟಿ ಬಿಚ್ಚುತ್ತಿಲ್ಲ. ಚಿತ್ರನಟರ ಬಳಿ ಕೇವಲ ಎರಡು ಗ್ರಾಂ.ನಷ್ಟು ಮಾದಕವಸ್ತು ಸಿಕ್ಕಿದರೂ ಆಕಾಶ ಕಳಚಿ ಬಿದ್ದಂತೆ ವರ್ತಿಸುವ ಮಾಧ್ಯಮಗಳೂ ಮುಂದ್ರಾ ಪ್ರಕರಣದಲ್ಲಿ ಮೌನಕ್ಕೆ ಶರಣಾಗಿವೆ ಎಂದು ವಾಗ್ದಾಳಿ ನಡೆಸಿದರು.

ಮುಂದ್ರಾ ಬಂದರಿನ ಮೂಲಕ ಮಾದಕವಸ್ತು ಆಮದು ಕುರಿತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಇದರಿಂದ ದೇಶದ ಆಂತರಿಕ ಭದ್ರತೆಗೆ ಎದುರಾಗಿರುವ ಸವಾಲುಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್‌. ಶಂಕರ್‌, ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ, ಕಾಂಗ್ರೆಸ್‌ ಮುಖಂಡರಾದ ರಾಮಚಂದ್ರಪ್ಪ ಮತ್ತು ಸಲೀಂ ಪತ್ರಿಕಾ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT