ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರನ್ನು ಕರೆದೊಯ್ಯುವಾಗ ನೈತಿಕತೆ ಎಲ್ಲಿತ್ತು?: ಡಿಕೆಶಿ

Last Updated 30 ಮಾರ್ಚ್ 2023, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಶಾಸಕರಿಗೆ ಕರೆಮಾಡಿ ಆಹ್ವಾನ ನೀಡುತ್ತಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, 18 ಶಾಸಕರ ಮನೆ ಬಾಗಿಲು ತಟ್ಟಿ ಕರೆದೊಯ್ಯುವಾಗ ನೈತಿಕತೆ ಎಲ್ಲಿ ಹೋಗಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಗುಬ್ಬಿ ಮಾಜಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಬಹುಮತ ಇಲ್ಲದಿದ್ದರೂ ‘ಆಪರೇಷನ್‌ ಕಮಲ’ ನಡೆಸಿ ಬೇರೆ ಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿ ನಾಲ್ಕು ವರ್ಷ ಅಧಿಕಾರ ಅನುಭವಿಸಿದ್ದೀರಿ. ಈಗ ಜನರು ನಿಮ್ಮ ದುರಾಡಳಿತಕ್ಕೆ ಕೊನೆಹಾಡಲು ನಿರ್ಧರಿಸಿದ್ದಾರೆ. ಈಗ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ’ ಎಂದು ಕೇಳಿದರು.

ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕಾಂತರಾಜು, ಮನೋಹರ್‌, ಶಾಸಕ ಶ್ರೀನಿವಾಸ ಗೌಡ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ. ಈಗ ಎಸ್‌.ಆರ್‌. ಶ್ರೀನಿವಾಸ್‌ ಪಕ್ಷ ಸೇರಿದ್ದಾರೆ. ಮಧು ಬಂಗಾರಪ್ಪ, ದೇವೇಂದ್ರಪ್ಪ ಕೂಡ ಕಾಂಗ್ರೆಸ್‌ಗೆ ಬಂದಿದ್ದಾರೆ. 2018ರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗಿದ್ದ ಹಲವರು ಸೇರಿದಂತೆ ಜೆಡಿಎಸ್‌ನ 37 ಮುಖಂಡರು ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ. ಎಲ್ಲರನ್ನೂ ಹಂತ ಹಂತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು ಎಂದರು.

ಬಿಜೆಪಿಯ ವಿಧಾನ ಪರಿಷತ್‌ ಸದಸ್ಯರಾಗಿದ್ದ ಪುಟ್ಟಣ್ಣ ಮತ್ತು ಬಾಬುರಾವ್‌ ಚಿಂಚನಸೂರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಪ್ರಮುಖ ಮುಖಂಡರಾದ ಯು.ಬಿ. ಬಣಕಾರ್‌, ಮೋಹನ ಲಿಂಬಿಕಾಯಿ, ಮಂಜುನಾಥ ಕುನ್ನೂರ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ. ಬಿಜೆಪಿಯ ಇನ್ನೂ ಅನೇಕ ನಾಯಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಹೇಳಿದರು.

‘ನಾಲ್ಕು ಬಾರಿ ಗುಬ್ಬಿ ಕ್ಷೇತ್ರದ ಶಾಸಕರಾಗಿರುವ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ. ಈಗ ಅವರೇ ನಮ್ಮ ಪಕ್ಷಕ್ಕೆ ಬಂದಿದೆ. ಜನಬೆಂಬಲ ಕಾಂಗ್ರೆಸ್‌ ಪರವಾಗಿ ಇದೆ ಎಂಬುದನ್ನು ಅರಿತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಸೇರ್ಪಡೆಯಿಂದ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಲಿದೆ’ ಎಂದರು.

‘ಜೆಡಿಎಸ್‌ನಲ್ಲಿ ಗೌಡರ ಕುಟುಂಬವೇ ಅಂತಿಮ’

ಬೆಂಗಳೂರು: ‘ಜೆಡಿಎಸ್‌ ಪಕ್ಷದಲ್ಲಿ ಎಚ್‌.ಡಿ. ದೇವೇಗೌಡರ ಕುಟುಂಬವೇ ಅಂತಿಮ. ಅಲ್ಲಿ ಸ್ವತಂತ್ರ ಅಭಿಪ್ರಾಯಕ್ಕೆ ಅವಕಾಶವಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಆ ಪಕ್ಷದಲ್ಲಿ ದೇವೇಗೌಡರು, ಕುಮಾರಸ್ವಾಮಿ ಹೇಳಿದಂತೆ ಎಲ್ಲರೂ ಕೇಳಬೇಕು. ಸ್ವತಂತ್ರವಾಗಿ ಮಾತನಾಡಲು ಪ್ರಯತ್ನಿಸಿದರೆ ಪಕ್ಷದಿಂದ ಹೊರಹಾಕುತ್ತಾರೆ. ಅವರ ಕುಟುಂಬದ ವಿರುದ್ಧ ಮಾತನಾಡಿದರೆ ಪಕ್ಷದಲ್ಲಿ ಉಳಿಯಲು ಬಿಡುವುದಿಲ್ಲ. ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ನನ್ನನ್ನು ಹೊರಹಾಕಿದಂತೆ ಈಗ ಗುಬ್ಬಿ ಮಾಜಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನೂ ಹೊರ ಕಳುಹಿಸಿದ್ದಾರೆ’ ಎಂದರು.

‘ಶ್ರೀನಿವಾಸ್‌ ಸ್ವಾಭಿಮಾನಿ ರಾಜಕಾರಣಿ. ನಾನು ಜೆಡಿಎಸ್‌ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಆ ಪಕ್ಷ ಸೇರಿದ್ದರು. ಒಂದು ಬಾರಿ ಸ್ವತಂತ್ರವಾಗಿ, ಮೂರು ಬಾರಿ ಜೆಡಿಎಸ್‌ನಿಂದ ಶಾಸಕರಾಗಿದ್ದರು. ಪಕ್ಷದ್ರೋಹದ ಯಾವುದೇ ಕೆಲಸವನ್ನೂ ಅವರು ಮಾಡಿರಲಿಲ್ಲ. ಆದರೂ, ಅವರನ್ನು ಬಲವಂತವಾಗಿ ಆಚೆ ತಳ್ಳಿದ್ದಾರೆ’ ಎಂದು ಹೇಳಿದರು.

‘ನವೆಂಬರ್‌ 1ರಂದು ಗುಬ್ಬಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ಶ್ರೀನಿವಾಸ್‌, ತುಂಬಾ ನೋವು ತೋಡಿಕೊಂಡಿದ್ದರು. ಕಾಂಗ್ರೆಸ್‌ ಪಕ್ಷ ಸೇರುವುಕ್ಕೆ ಸಂಬಂಧಿಸಿದ ನಿರ್ಧಾರ ನಿಮಗೆ ಬಿಟ್ಟದ್ದು ಎಂದಿದ್ದೆ. ಅವರದ್ದು ಕಾಂಗ್ರೆಸ್‌ ಕುಟುಂಬ. ಯಾವುದೇ ಷರತ್ತುಗಳಿಲ್ಲದೆ ಮತ್ತೆ ಮನೆಗೆ ಮರಳಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT