ಗುರುವಾರ , ಆಗಸ್ಟ್ 18, 2022
27 °C

‘ಕುರ್ತಾ ಹೊಲಿದು ಕೊಡುವಿರಾ?’: ಸಂವಾದದಲ್ಲಿ ಪ್ರಧಾನಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಾನು ನಿಮಗೆ ಗೊತ್ತಾ? ನನಗೆ ಕುರ್ತಾ ಹೊಲಿದು ಕೊಡುವಿರಾ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೇಳಿದಾಗ ಚಾಮರಾಜನಗರದ ಹನೂರಿನ ಟೇಲರ್‌ ಅಂಬಿಕಾ ಅವರ ಕಣ್ಣಲ್ಲಿ ಅಚ್ಚರಿ, ಸಂತಸ ಏಕಕಾಲಕ್ಕೆ ಮೂಡಿತ್ತು.

ನಗರದ ಮಹಾರಾಜ ಕಾಲೇಜು ಮೈದಾನದ ಬೃಹತ್‌ ವೇದಿಕೆಯ ಹಿಂಭಾಗದಲ್ಲಿ ಸೋಮವಾರ ಸಂಜೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೈಸೂರು ವಿಭಾಗದ ಫಲಾನುಭವಿಗಳೊಂದಿಗೆ ಪ್ರಧಾನಿ ನಡೆಸಿದ ಸಂವಾದ ಇಂಥ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.

ಅಂಬಿಕಾ ಅವರು ‘ಮುದ್ರಾ ಯೋಜನೆ
ಯಿಂದ ಹೊಲಿಗೆ ವೃತ್ತಿ ಆರಂಭಿ ಸಿದ್ದೇನೆ. ಪತಿಯೂ ಸಹಕರಿಸುತ್ತಿದ್ದಾರೆ’ ಎಂದಾಗ ಪ್ರಧಾನಿ, ‘ಕುರ್ತಾ ಹೊಲಿದು ಕೊಡುವಿರಾ’ ಎಂದು ಕೇಳಿದರು.

‘ಖಂಡಿತಾ.. ಸರ್‌.. ನಿಮ್ಮೊಂದಿಗೆ ಮಾತನಾಡುತ್ತಿರುವ ಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು’ ಎಂದು ಅಂಬಿಕಾ ಸಂತಸ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ ಹೂ ನಿಷೇಧಿಸಿ: ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆಯ ಫಲಾನುಭವಿ ಮಂಡ್ಯ ಜಿಲ್ಲೆ ಮಳವಳ್ಳಿಯ ಕೃಷಿಕ ಸಂದೀಪ್‌, ‘₹ 14 ಲಕ್ಷ ವೆಚ್ಚದಲ್ಲಿ
ಜರ್ಬೆರಾ ಆಲಂಕಾರಿಕ ಹೂ ಬೆಳೆದಿದ್ದೆ. ಚೀನಾ, ಥಾಯ್ಲೆಂಡ್‌ನ ಪ್ಲಾಸ್ಟಿಕ್‌ ಹೂಗಳು ಹೊಡೆತ ನೀಡಿವೆ. ಅವುಗಳನ್ನು ಬ್ಯಾನ್ ಮಾಡಿ’ ಎಂದು ಕೋರಿದರು.

‌ಸೋಮಶೇಖರ್‌ ಎಂಬುವವರು, ‘ನರೇಗಾ ಯೋಜನೆಯಡಿ ಕುಟುಂಬದ 15 ಮಂದಿಗೆ ಉದ್ಯೋಗ ಸಿಕ್ಕಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ’ ಎಂದು ತಿಳಿಸಿದರು.

‘ನಾಗರಹೊಳೆ ಕಾಡಿನಲ್ಲಿದ್ದ ನಮಗೆ ಪುನರ್ವಸತಿ ಯೋಜನೆಯಲ್ಲಿ 5 ಎಕರೆ ಸಿಕ್ಕಿದೆ. ಆಯುಷ್ಮಾನ್‌ ಆರೋಗ್ಯ ಯೋಜನೆಯಡಿ ಪತಿಯ ಕಿಡ್ನಿ ಶಸ್ತ್ರಚಿಕಿತ್ಸೆ ನಡೆದರೂ ಪತಿ ತೀರಿಕೊಂಡರು’ ಎಂದು ಮೈಸೂರಿನ ಎರವ ಸಮುದಾಯದ ಮಹಿಳೆ ವೀಣಾ ಹೇಳಿದರು.

ಮೋದಿ, ‘ನಿಮಗೆ ಆಯುಷ್ಮಾನ್‌ ಯೋಜನೆ ಬಗ್ಗೆ ಹೇಗೆ ಗೊತ್ತಾಯಿತು’ ಎಂದರು. ‘ಆಯುಷ್ಮಾನ್ ಯೋಜನೆ ಆರಂಭವಾದಾಗ ಕಾರ್ಡ್‌ ಮಾಡಿಸಿಕೊಳ್ಳುವಂತೆ ಯಾರೊ ಒಬ್ಬರು ಹೇಳಿದ್ದರು. ಅದು ಪತಿಯ ಶಸ್ತ್ರಚಿಕಿತ್ಸೆಗೆ ನೆರವಾಯಿತು’ ಎಂದರು. 

ಹುಣಸೂರು ತಾಲ್ಲೂಕು ಸಿರಿಯೂರಿನ ಮಹೇಶ್‌, ‘ಬಾಳೆ, ಪಪ್ಪಾಯ ಬೆಳೆಯುತ್ತಿದ್ದೇನೆ. ಪಿಎಂ ಕಿಸಾನ್‌ ಯೋಜನೆ ಅನುಕೂಲವಾಗಿದೆ. ಕೊರೊನಾ ವೇಳೆ ನಾನೇ ಊರುಗಳಿಗೆ ಹೋಗಿ ವ್ಯಾಪಾರ ಮಾಡಿದೆ. ಕೃಷಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ’ ಎಂದರು.

‘ಮೊದಲು ಕೂಲಿ ಮಾಡುತ್ತಿದ್ದೆ. ಸರ್ಕಾರದ ಯೋಜನೆಯ ಸಾಲದಲ್ಲಿ ಟಿಲ್ಲರ್‌ ಖರೀದಿಸಿ, ಜೀವನ ನಡೆಸುತ್ತಿದ್ದೇನೆ’ ಎಂದು ಹಾಸನ ಜಿಲ್ಲೆಯ ಆಲೂರಿನ ಪುಟ್ಟ ರಂಗನಾಥ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಇರುವ ತಿಳಿವಳಿಕೆಯನ್ನು ಶ್ಲಾಘಿಸಿದ ಪ್ರಧಾನಿ, ‘ಯೋಜನೆಗಳ ಮಾಹಿತಿಯನ್ನು ಬಡವರು, ರೈತರಿಗೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.

‘ನಾನು ನಿಮ್ಮ ಮನೆಗೆ ಬರಲೇ?’

ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿ ಮಂಡ್ಯದ ಕಿಕ್ಕೇರಿ ಹೋಬಳಿ ಉದ್ದಿನಮಲ್ಲನ ಹೊಸೂರಿನ ಯಶೋದಾ ಸುರೇಶ್‌, ‘ಮೊದಲು ಮನೆಯಿರಲಿಲ್ಲ, ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡಿದ್ದೇನೆ. ಮಹಿಳಾ ಸಂಘದ ಪ್ರತಿನಿಧಿಯಾಗಿದ್ದೇನೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಮನೆ ಕಟ್ಟಿದ ನಂತರ ಅತಿಥಿಗಳು ಬರುತ್ತಾರಾ?  ಚೆನ್ನಾಗಿ ಅಡುಗೆ ಮಾಡುವಿರಾ? ಹಾಗಿದ್ದರೆ ನಿಮ್ಮ ಮನೆಗೆ ಬರಲೇ’ ಎಂದು ಕೇಳಿದರು.

ಸಂತೋಷದಿಂದ ಉತ್ತರಿಸಿದ ಯಶೋದಾ, ‘ಬನ್ನಿ ಸರ್‌, ಮಾಡೋಣಾ..’ ಎಂದು ನಗುತ್ತ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು