ಶನಿವಾರ, ಅಕ್ಟೋಬರ್ 31, 2020
19 °C

ದೇಗುಲಕ್ಕೆ ಹೋಗುವುದನ್ನು ನಿಲ್ಲಿಸುವಿರಾ: ಹೈಕೋರ್ಟ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರದ ಅನುಮತಿ ಪಡೆಯದೇ ಅರಣ್ಯ ಭೂಮಿಯಲ್ಲಿ ನಿರ್ಮಿಸಿರುವ ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವಿರಾ’ ಎಂದು ಅರ್ಜಿದಾರರನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.

‘ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಗಿರಿಯಲ್ಲಿ ಶಿವಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಇದೆ. ಅದರೊಂದಿಗೆ ಈಗ ಹಲವು ಕಟ್ಟಡಗಳು ಈಗ ತಲೆ ಎತ್ತಿವೆ. ಎಲ್ಲವೂ ಸರ್ಕಾರಿ ಜಾಗದಲ್ಲೇ ಇವೆ’ ಎಂದು ತರಿಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ನಿವಾಸಿ ವೇಲುಮುರುಗನ್  ಅರ್ಜಿ ಸಲ್ಲಿಸಿದ್ದಾರೆ.

‘ಈ ದೇವಾಲಯವನ್ನು ಮಠಾಧೀಶರೊಬ್ಬರು ನಿರ್ವಹಿಸುತ್ತಿದ್ದರು. ವಾರ್ಷಿಕ ₹65 ಲಕ್ಷ ಆದಾಯ ಬರುತ್ತಿದೆ. ಮಠಾಧೀಶರು ಮೃತಪಟ್ಟ ನಂತರ ಅವರ ಮಕ್ಕಳು ಆಡಳಿತ ನಿರ್ವಹಿಸುತ್ತಿದ್ದಾರೆ. ಸುತ್ತಮುತ್ತಲ 20 ಎಕರೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಲ್ಯಾಣ ಮಂಟಪ ಮತ್ತು ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ. ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಸರ್ಕಾರಿ ಜಾಗದಲ್ಲಿ ದೇವಸ್ಥಾನ ಇದೆ ಎಂಬುದನ್ನು ಅರ್ಜಿದಾರರೇ ಹೇಳುತ್ತಿದ್ದಾರೆ. ದೇಗುಲದ ಭಕ್ತ ಎಂದು ಹೇಳಿಕೊಳ್ಳುವ ಅವರು ಅಲ್ಲಿಗೆ ಭೇಟಿ ನೀಡುವುದನ್ನು ನಿಲ್ಲಿಸುತ್ತಾರೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಮೌಖಿಕವಾಗಿ ಕೇಳಿತು.

‘ಒತ್ತುವರಿಯಾಗಿದ್ದರೆ ತಹಶೀಲ್ದಾರ್ ವರದಿ ಆಧರಿಸಿ ನವೆಂಬರ್ 3ರೊಳಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ‘ದೇವಾಲಯವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸುವ ಮನವಿಯನ್ನು ಸರ್ಕಾರ ಪರಿಗಣಿಸಬಹುದು’ ಎಂದು ತಿಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು