ಗುರುವಾರ , ಜನವರಿ 21, 2021
29 °C
ಒಬಿಸಿಯ ಪ್ರವರ್ಗ 2ಎಗೆ ಪಂಚಮಸಾಲಿ ಸಮುದಾಯದ ಸೇರ್ಪಡೆ: ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ಎರಡು ದಿನಗಳಲ್ಲಿ ಹೋರಾಟದ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸುವುದು ಮತ್ತು ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂಬ ಹೋರಾಟದ ಮುಂದಿನ ಹೆಜ್ಜೆಯನ್ನು ಎರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಪ್ರಸ್ತಾವದ ಕುರಿತು ಶುಕ್ರವಾರದ ಸಂಪುಟ ಸಭೆಯಲ್ಲಿ ಚರ್ಚಿಸದೇ ಇರುವ ತೀರ್ಮಾನ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಒಕ್ಕಲಿಗ ಸಮುದಾಯದ ಕೆಲವು ಒಳಪಂಗಡಗಳನ್ನೂ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಶಿಫಾರಸನ್ನು ಒಟ್ಟಿಗೆ ಕಳುಹಿಸಬೇಕೆಂಬ ಉದ್ದೇಶದಿಂದ ಲಿಂಗಾಯತರಿಗೆ ಸಂಬಂಧಿಸಿದ ಪ್ರಸ್ತಾವದ ಬಗ್ಗೆ ಚರ್ಚೆ ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮ ಬೇಡಿಕೆ ಈಡೇರಿಕೆಗೆ ಕೆಲವು ದಿನ ಕಾದು ನೋಡುತ್ತೇವೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ನೀಡಿದ್ದ ಭರವಸೆಯಿಂದ ಸಮುದಾಯದ ಜನರಲ್ಲಿ ನಿರೀಕ್ಷೆ ಗರಿಗೆದರಿತ್ತು. ಸಂಪುಟ ಸಭೆಯ ಕಾರ್ಯಸೂಚಿಯಲ್ಲೂ ವಿಷಯ ಇತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ತಡೆ ಹಿಡಿಯಲಾಗಿದೆ ಎಂದು ಮುಖ್ಯಮಂತ್ರಿಯವರೇ ತಿಳಿಸಿದ್ದಾರೆ. ಸಮುದಾಯದ ಬೇಡಿಕೆಗೆ ಅವರು ತ್ವರಿತವಾಗಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

‘ಪಂಚಮಸಾಲಿ ಸಮುದಾಯದ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಮುಖ್ಯಮಂತ್ರಿಯವರನ್ನು ಭೇಟಿಮಾಡಿ ಚರ್ಚೆ ನಡೆಸಲಿದ್ದಾರೆ. ಎರಡು ದಿನಗಳಲ್ಲಿ ಸಮಾಜದ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ಸಭೆ ನಡೆಸಲಾಗುವುದು. ಈ ಹಿಂದೆ ಘೋಷಿಸಿದ್ದಂತೆ ಡಿಸೆಂಬರ್‌ 23ರಂದು ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭಿಸಿ 2021ರ ಫೆಬ್ರುವರಿ 23ರಂದು ಬೆಂಗಳೂರು ತಲುಪುವ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಸಮುದಾಯದ 32 ಉಪ ಪಂಗಡಗಳು ಈಗಾಗಲೇ ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಇನ್ನೂ 72 ಉಪ ಪಂಗಡಗಳನ್ನು ಪಟ್ಟಿಗೆ ಸೇರಿಸಬೇಕು. ಈ ಕುರಿತು ಪ್ರತ್ಯೇಕ ಆಯೋಗದಿಂದ ವರದಿ ಪಡೆದು ಶಿಫಾರಸು ಕಳುಹಿಸಿದರೆ ಒಳ್ಳೆಯದು. ಕೇಂದ್ರಕ್ಕೆ ರವಾನೆಯಾದ ಶಿಫಾರಸು ವಾಪಸು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

‘ಬಸವಣ್ಣನ ಹೆಸರಿಡಬೇಕು’
‘ವೀರಶೈವರು ಮತ್ತು ಲಿಂಗಾಯತ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ನಿಗಮಕ್ಕೆ ಜಾತಿಯ ಹೆಸರಿಡುವ ಬದಲಿಗೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

‘ಮೂವರಿಗೆ ಸಚಿವ ಸ್ಥಾನ ನೀಡಿ’
ಕುರುಬ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಕುರುಬ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಶುಕ್ರವಾರ ಆಗ್ರಹಿಸಿದೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಮಾಡಿದ ನಿಯೋಗ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು. ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚಿಸಿದ್ದು, ನಾಲ್ವರು ಕುರುಬ ಶಾಸಕರಲ್ಲಿ ಮೂವರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಡಲಾಗಿದೆ.

ಮುಖ್ಯಮಂತ್ರಿ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ‘ಮೂವರಿಗೆ ಸಚಿವ ಸ್ಥಾನ ನೀಡುವುದೂ ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಮುಂದಿಡಲಾಗಿದೆ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಮತ್ತು ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ, ₹ 500 ಕೋಟಿ ಅನುದಾನ ಒದಗಿಸುವಂತೆ ಒತ್ತಾಯಿಸಲಾಗಿದೆ’ ಎಂದರು.

ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ 1976ರಲ್ಲಿ ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಶಿಫಾರಸು ಮಾಡಿದ್ದರು. ಈವರೆಗೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಈ ಸಂಬಂಧ ದೆಹಲಿಗೆ ತೆರಳಿ ಕೇಂದ್ರದ ಸಚಿವರಿಗೆ ಮನವಿ ಸಲ್ಲಿಸಿ ಬಂದಿದ್ದೇವೆ. ರಾಜ್ಯ ಸರ್ಕಾರದಿಂದ ಮತ್ತೆ ಶಿಫಾರಸು ಕಳುಹಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ’ ಎಂದರು.

ನೇಕಾರರಿಗೂ ನಿಗಮಕ್ಕೆ ಆಗ್ರಹ
ಕರ್ನಾಟಕ ರಾಜ್ಯ ನೇಕಾರ ಗುರುಪೀಠಗಳ ವೇದಿಕೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ನೇಕಾರ ಸಮುದಾಯದ ಮಠಾಧೀಶರು ಮತ್ತು ಮುಖಂಡರ ನಿಯೋಗ, ನೇಕಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.

ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಅನುದಾನ ಒದಗಿಸಬೇಕು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರ ಹುದ್ದೆಯನ್ನು ನೇಕಾರ ಸಮುದಾಯದವರಿಗೇ ನೀಡಬೇಕು ಎಂದು ಆಗ್ರಹಿಸಿತು.

ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವು ನೀಡಬೇಕು. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಬೇಕು. ಈ ಹಿಂದೆ ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ, ನೇಕಾರರು ಲಾಕ್‌ಡೌನ್‌ ಅವಧಿಯಲ್ಲಿ ಸಿದ್ಧಪಡಿಸಿರುವ ವಸ್ತ್ರಗಳನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿಯೋಗದ ಸದಸ್ಯರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.

ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸಿಹಳ್ಳಿಯ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆಯ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಕೆ. ನಾರಾಯಣ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್‌ ಎಸ್‌. ಹರೀಶ್‌, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಜಿ. ರಮೇಶ್‌, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಎ.ವಿಜಯಕುಮಾರ್‌, ತೊಗಟವೀರ ಕ್ಷತ್ರಿಯ ಸಂಘದ ಅಧ್ಯಕ್ಷ ಬಿ.ಎಸ್‌. ಸೋಮಶೇಖರ್‌, ಪದ್ಮಶಾಲಿ ಸಂಘದ ಅಧ್ಯಕ್ಷ ಗುರ್ರಂ ನಾಗರಾಜು, ಕುರುಹಿನ ಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಅಂಬಾದಾಸ್‌, ಸ್ವಕುಳ ಸಾಳಿ ಸಮಾಜದ ಮುಖಂಡ ನವೀನ್‌ ಚಿಲ್ಲಾಳ್‌ ಮತ್ತು ನೇಕಾರರ ಜಾಗೃತಿ ವೇದಿಕೆ ಅಧ್ಯಕ್ಷ ಲಿಂಗರಾಜು ಡಿ. ನೊಣವಿನಕೆರೆ ನಿಯೋಗದಲ್ಲಿದ್ದರು.

‘ಲಿಂಗಾಯತರನ್ನು ಒಬಿಸಿಗೆ ಸೇರಿಸಿ’
ಚಿತ್ರದುರ್ಗ:
‘ಲಿಂಗಾಯತರೆಲ್ಲರೂ ಶ್ರೀಮಂತರಲ್ಲ; ಎಲ್ಲರೂ ಬಡವರೂ ಅಲ್ಲ. ಆರ್ಥಿಕವಾಗಿ ಹಿಂದುಳಿದವರ ಏಳಿಗೆಗಾಗಿ ಕೇಂದ್ರದ ಹಿಂದುಳಿದ ಜಾತಿಗಳ ಪಟ್ಟಿಗೆ ಲಿಂಗಾಯತರನ್ನು ಸೇರಿಸುವ ಅಗತ್ಯವಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು
ಅಭಿಪ್ರಾಯಪಟ್ಟರು.

‘ಎಲ್ಲ ಜಾತಿ ಮತ್ತು ಧರ್ಮಗಳಲ್ಲಿ ಮುಂದುವರಿದವರೂ ಹಾಗೂ ಶೋಷಣೆಗೆ ಒಳಗಾದವರಿದ್ದಾರೆ. ಲಿಂಗಾಯತರಲ್ಲಿ 80ಕ್ಕೂ ಹೆಚ್ಚು ಉಪ ಜಾತಿಗಳಿವೆ. ತುಳಿತಕ್ಕೆ ಒಳಗಾದವರು ಲಿಂಗಾಯತ ಸಮುದಾಯದಲ್ಲಿಯೂ ಇದ್ದಾರೆ. ಬಡ ಲಿಂಗಾಯತರ ಹಿತದೃಷ್ಟಿಯಿಂದ ಒಬಿಸಿ ಪಟ್ಟಿಗೆ ಸೇರಿಸುವುದು ಒಳಿತು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೀಸಲಾತಿಗೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಹೋರಾಟ ನಡೆಯುತ್ತಿದೆ. ಸಂವಿಧಾನ ಕಲ್ಪಿಸಿದ ಸೌಲಭ್ಯಗಳನ್ನು ಪಡೆಯಲು ಎಲ್ಲ ಜಾತಿಗಳು ಪ್ರಯತ್ನಿಸುತ್ತಿವೆ. ಅಗತ್ಯ ಸೌಲಭ್ಯ ಪಡೆಯುವ ಅವಕಾಶ ಎಲ್ಲರಿಗೂ ಇದೆ. ಹೀಗಾಗಿ, ಲಿಂಗಾಯತರನ್ನು ಒಬಿಸಿಗೆ ಸೇರಿಸುವ ಹಕ್ಕೊತ್ತಾಯ ಮುಂದಿಡುತ್ತಿದ್ದೇವೆ’ ಎಂದು ಹೇಳಿದರು.

‘ಸಮಾನ ವೇತನ ಪಡೆದವರೆಲ್ಲ ಸಚಿವರಲ್ಲ’
ಬೆಂಗಳೂರು:
ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತೇಜನ ನೀಡಲು ನಿರಾಕರಿಸಿರುವ ಹೈಕೋರ್ಟ್, ‘ಸಚಿವರಿಗೆ ಸಮನಾದ ವೇತನ ಮತ್ತು ಭತ್ಯೆ ಪಡೆದ ಕಾರಣಕ್ಕೆ ಅವರು ಸಚಿವರಾಗುವು
ದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಸಂವಿಧಾನದ ಪ್ರಕಾರ, ಸಚಿವರ ಸಂಖ್ಯೆ ಶಾಸಕರ ಸಂಖ್ಯೆಯಲ್ಲಿ ಶೇ 15ನ್ನು ಮೀರುವಂತಿಲ್ಲ. ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದ 28 ಸಂಪುಟ ದರ್ಜೆ ಸಚಿವರಿದ್ದು, ನಿಗಮ ಮತ್ತು ಮಂಡಳಿಗಳಿಗೆ ಈಗ ನೇಮಕ ಮಾಡುತ್ತಿರುವ ಅಧ್ಯಕ್ಷರಿಗೂ ಸಚಿವ ಸಮಾನ ವೇತನ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಅವರನ್ನೂ ಮಂತ್ರಿಗಳಾಗಿಯೇ ಪರಿಗಣಿಸಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ ಮಂತ್ರಿಗಳ ಸಂಖ್ಯೆ ಸಂವಿಧಾನದ ನಿಗದಿಪಡಿಸಿರುವ ಶೇಕಡವಾರು ಸಂಖ್ಯೆಯನ್ನು ಮೀರುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

‘ಸಚಿವರಿಗೆ ಸಮನಾದ ವೇತನ ಮತ್ತು ಭತ್ಯೆ ನೀಡಿದ ಕಾರಣಕ್ಕೆ ಅವರು ಮಂತ್ರಿಗಳಾಗುವುದಿಲ್ಲ. ಅಧ್ಯಕ್ಷರುಗಳಿಗೆ ವೇತನ ಮತ್ತು ಭತ್ಯೆ ನಿಗದಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ’ ಎಂದು ಪೀಠ ತಿಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು