ಗುರುವಾರ , ಫೆಬ್ರವರಿ 25, 2021
28 °C

ಕೃಷಿ ಕಾಯ್ದೆ ಹಿಂಪಡೆಯಲು ಡಬ್ಲ್ಯುಪಿಐ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ತಾಹೇರ್‌ ಹುಸೇನ್‌ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೆಹಲಿ ಹೊರವಲಯದಲ್ಲಿ ಎರಡು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ರೈತರ ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬುವುದಕ್ಕಾಗಿ ಹಾಗೂ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪಕ್ಷವು ಜ.8ರಿಂದ ಆರಂಭಿಸಿರುವ ‘ರೈತ ಭದ್ರತೆ ದೇಶ ಸುಭದ್ರತೆ’ ಎಂಬ ಅಭಿಯಾನ ಜ.30ರ ವರೆಗೆ ರಾಜ್ಯದಾದ್ಯಂತ ನಡೆಯಲಿದೆ ಎಂದು ತಿಳಿಸಿದರು.

ಅಭಿಯಾನದ ಅಂಗವಾಗಿ ಜನರೊಂದಿಗೆ ಚರ್ಚೆ, ಸಂವಾದ, ಹೋರಾಟ, ಪ್ರತಿಭಟನಾ ಮೆರವಣಿಗೆ ಹಾಗೂ ಜನಪ್ರತಿನಿಧಿಗಳ ಕಾರ್ಯಾಲಯ, ಮನೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಅನ್ನದಾತರ ಪರವಾದ ಹೋರಾಟಕ್ಕೆ ರಾಜ್ಯದ ಪ್ರಜ್ಞಾವಂತ ಜನರು, ವಿದ್ಯಾರ್ಥಿಗಳು, ಯುವಜನರು, ಪ್ರಗತಿಪರ ಸಂಘಟನೆಗಳು ಬೆಂಬಲನೀಡಬೇಕು ಎಂದು ಮನವಿ ಮಾಡಿದರು.

ಜನವರಿ 26ರಂದು ದೆಹಲಿ ಸೇರಿದಂತೆ ರಾಷ್ಟ್ರದಾದ್ಯಂತ ನಡೆಯಲಿರುವ ರೈತರ ಟ್ರ್ಯಾಕ್ಟರ್‌ ರ‍್ಯಾಲಿ, ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪ‍ನಿಗಳು ಹಾಗೂ ರಿಯಲ್‌ ಎಸ್ಟೇಟ್‌ ದಂದೆಕೋರರ ಕೈಗೊಂಬೆಯಾಗಿರುವ ಪ್ರಧಾನಿ ಮೋದಿ ಅವರು, ಸುಗ್ರೀವಾಜ್ಞೆಗಳ ಮೂಲಕ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅವರ ಕೃಷಿ ವಿರೋಧಿ ನಡೆಯಿಂದ ರೈತರು ತಬ್ಬಲಿಯಾಗುವ ದುಸ್ಥಿತಿ ತಲೆದೋರಿದೆ ಎಂದರು.  

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಗೂ ಪಕ್ಷದ ವಿರೋಧವಿದೆ. ಈ ಕಾಯ್ದೆ ಜಾರಿಯಿಂದ ಕೇವಲ ಗೋಮಾಂಸ ಸೇವಿಸುವವರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಇದರಿಂದ ರೈತರಿಗೆ ಸಮಸ್ಯೆ ಹೆಚ್ಚಾಗುತ್ತದೆ. ಮುದಿ ಎತ್ತು, ಆಕಳುಗಳನ್ನು ಸಾಕುವುದು ಕಷ್ಟವಾಗುತ್ತದೆ. ಸರ್ಕಾರವೇ ವಯಸ್ಸಾದ ಆಕಳು, ಎತ್ತುಗಳನ್ನು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಸೇನ್‌ ಬಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್‌,  ಮಾಧ್ಯಮ ಕಾರ್ಯದರ್ಶಿ ಅಜೀಜ್‌ ಜಾಹಗೀರದಾರ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು