ಶುಕ್ರವಾರ, ಅಕ್ಟೋಬರ್ 23, 2020
24 °C

ಕಥೆಗಾರ ಮೇಲಿನಮನಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕಥೆಗಾರ ಪ್ರೊ.ಅಬ್ಬಾಸ್ ಮೇಲಿನಮನಿ (66) ಹೃದಯಾಘಾತದಿಂದ ಚಿತ್ರದುರ್ಗದ ಪುತ್ರಿಯ ನಿವಾಸದಲ್ಲಿ ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಇಳಕಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತರಾಗಿದ್ದ ಅಬ್ಬಾಸ್, ಕಥೆಗಾರರಾಗಿ ನಾಡಿನ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದರು.

ಕೃಷ್ಣಾ ತೀರದ ಜನರ ಬದುಕು, ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯ, ವೈರುಧ್ಯ ಹಾಗೂ ತಲ್ಲಣಗಳನ್ನು ತಮ್ಮ ಕಥೆಗಳಲ್ಲಿ ಬಹು ಸೂಕ್ಷ್ಮವಾಗಿ ಕಟ್ಟಿಕೊಡುತ್ತಿದ್ದ ಅಬ್ಬಾಸ ಮೇಲಿನಮನಿ, ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ.

ಇಲ್ಲಿಯವರೆಗೆ ಒಂಬತ್ತು ಕಥಾ ಸಂಕಲನ, ಮೂರು ಕವನ ಸಂಕಲನ, ಮೂರು ಕಥಾ ಸಂಪುಟ, ಒಂದು ಕಾದಂಬರಿ, ಮೂರು ಲೇಖನಗಳ ಸಂಗ್ರಹ ಹಾಗೂ ಒಂಬತ್ತು ಸಂಪಾದಿತ ಕೃತಿಗಳನ್ನು ಅವರು ರಚಿಸಿದ್ದಾರೆ.

ಮಾಸ್ತಿ ಕಥಾ ಪ್ರಶಸ್ತಿ, ಡಾ.ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಅಬ್ಬಾಸ್ ಅವರಿಗೆ ಸಂದಿವೆ.

‘ಪ್ರಜಾವಾಣಿ’, ‘ಸುಧಾ’, ಮತ್ತು ‘ಮಯೂರ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಬ್ಬಾಸ್ ಮೇಲಿನಮನಿ ಅವರ ಕಥೆಗಳು ಪ್ರಕಟವಾಗಿವೆ.

ಇಂದು ಅಂತ್ಯಕ್ರಿಯೆ: ಚಿತ್ರದುರ್ಗದಿಂದ ಪಾರ್ಥೀವ ಶರೀರವನ್ನು ಇಲ್ಲಿನ ನವನಗರದ 3ನೇ ಸೆಕ್ಟರ್‌ನಲ್ಲಿರುವ ಮನೆಗೆ ತರಲಾಗಿದ್ದು, ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.