ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗೆ ಅಧಿಕಾರ, ರಾಜ್ಯಪಾಲರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ –ತಜ್ಞರ ಅಭಿಮತ

Last Updated 1 ಏಪ್ರಿಲ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ, ಅನುದಾನ ಬಿಡುಗಡೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ಸಂಪುಟದಲ್ಲಿ ಯಾರು ಇರಬೇಕು ಎಂಬುದನ್ನು ನಿರ್ಧರಿಸುವುದು ಅವರ ಪರಮಾಧಿಕಾರ ಎನ್ನುವುದು ಕಾನೂನು ತಜ್ಞರ ಅಭಿಮತ.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಸಚಿವ ಕೆ.ಎಸ್‌. ಈಶ್ವರಪ್ಪ ನೀಡಿರುವ ದೂರನ್ನು ಆಧರಿಸಿ ರಾಜ್ಯಪಾಲರು ಕ್ರಮ ಕೈಗೊಳ್ಳಬಹುದೇ, ಅವರಿಗೆ ಅಧಿಕಾರ ಇದೆಯೇ ಎಂಬ ಪ್ರಶ್ನೆಗೆ ಕಾನೂನು ತಜ್ಞರ ಪ್ರತಿಕ್ರಿಯೆ ಇಲ್ಲಿದೆ.

‘ಮಧ್ಯಪ್ರವೇಶಕ್ಕೆ ಅಧಿಕಾರ ಇಲ್ಲ’

ಇಂತಹ ಸನ್ನಿವೇಶಗಳಲ್ಲಿ ನೇರ ಮಧ್ಯಪ್ರವೇಶ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಸರ್ಕಾರದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತಿವೆ ಎಂಬುದು ಮನವರಿಕೆಯಾದರೆ ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರಿಗೆ ನೈತಿಕ ನೆಲೆಯಲ್ಲಿ ಸಲಹೆ ನೀಡುವ ಪ್ರಯತ್ನವನ್ನಷ್ಟೇ ರಾಜ್ಯಪಾಲರು ಮಾಡಬಹುದು. ಅದನ್ನು ಮೀರಿ ಯಾವುದೇ ರೀತಿಯ ಹಸ್ತಕ್ಷೇಪದ ಅಧಿಕಾರ ರಾಜ್ಯಪಾಲರಿಗೆ ಇಲ್ಲ.

ಇದು ಪೂರ್ಣವಾಗಿ ಸಂಪುಟದ ಒಳಗಿನ ವಿಷಯ. ಮುಖ್ಯಮಂತ್ರಿಗೆ ಎಲ್ಲ ಇಲಾಖೆಗಳ ಮೇಲೂ ಪರಮಾಧಿಕಾರ ಇದೆ ಎಂಬುದು ಸ್ಪಷ್ಟ. ಇತರ ಸಚಿವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಮುಖ್ಯಮಂತ್ರಿ ನೇರವಾಗಿ ಮಧ್ಯಪ್ರವೇಶ ಮಾಡಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಂವಿಧಾನ ನೀಡಿದೆ. ಆದರೆ, ಇಂತಹ ಅಧಿಕಾರ ರಾಜ್ಯಪಾಲರಿಗೆ ಮಾತ್ರವಲ್ಲ, ನ್ಯಾಯಾಲಯಕ್ಕೂ ಇಲ್ಲ.

ಪ್ರಕರಣವೊಂದರ ಆರೋಪಿಯ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನು ಸಚಿವರು ಕೈಗೊಂಡ ತೀರ್ಮಾನವನ್ನೇ ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪ ರದ್ದು ಮಾಡಿದ್ದರು. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರ ಜತೆ ಸಮಾಲೋಚಿಸದೇ ನಿರ್ಧಾರ ಕೈಗೊಂಡಿದ್ದ ಪ್ರಕರಣವೊಂದು ಹೈಕೋರ್ಟ್‌ ಮುಂದೆ ಬಂದಿತ್ತು. ಏಕ ಸದಸ್ಯ ಪೀಠ ಮುಖ್ಯಮಂತ್ರಿಯ ನಿರ್ಧಾರವನ್ನು ರದ್ದು ಮಾಡಿತ್ತು. ಆದರೆ, ವಿಭಾಗೀಯ ಪೀಠ ಮುಖ್ಯಮಂತ್ರಿಯ ತೀರ್ಮಾನವನ್ನು ಎತ್ತಿ ಹಿಡಿಯಿತು. ಇವು ಮುಖ್ಯಮಂತ್ರಿ ಹೊಂದಿರುವ ಪರಮಾಧಿಕಾರಕ್ಕೆ ಉದಾಹರಣೆಗಳು.

– ಬಿ.ವಿ. ಆಚಾರ್ಯ,

ಹಿರಿಯ ವಕೀಲ

––––––––––––––––––––––––

ಮುಖ್ಯಮಂತ್ರಿ ಇಚ್ಛಿಸಿದರಷ್ಟೇ ಸಚಿವ ಸ್ಥಾನ ಉಳಿದೀತು

ಸರ್ಕಾರದ ದೈನಂದಿನ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯಪಾಲರಿಗೆ ಅವಕಾಶವಿಲ್ಲ. ರಾಜ್ಯ ಸರ್ಕಾರದ ವ್ಯವಹಾರ ನಿರ್ವಹಣೆ ನಿಯಮಗಳಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಸಚಿವರೊಬ್ಬರು ಮುಖ್ಯಮಂತ್ರಿ ವಿರುದ್ಧ ಈ ರೀತಿ ದೂರು ಸಲ್ಲಿಸುವುದಕ್ಕೂ ಕಾನೂನಿನಲ್ಲಿ ಅವಕಾಶಗಳಿಲ್ಲ. ಈಶ್ವರಪ್ಪ ಅವರು ಯಾವ ಆಧಾರದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೋ ತಿಳಿಯದು.

ಸಂವಿಧಾನದ ಪ್ರಕಾರ ಮುಖ್ಯಮಂತ್ರಿಗೆ ಪರಮಾಧಿಕಾರ ಇದೆ. ಎಲ್ಲ ಸಚಿವರೂ ಮುಖ್ಯಮಂತ್ರಿಯ ಇಚ್ಛೆಗೆ ಅನುಗುಣವಾಗಿ ಸಂಪುಟದಲ್ಲಿ ಇರುತ್ತಾರೆ. ಎಲ್ಲಿಯವರೆಗೆ ಮುಖ್ಯಮಂತ್ರಿ ಬಯಸುತ್ತಾರೋ ಅಲ್ಲಿಯವರೆಗೆ ಮಾತ್ರ ಅವರನ್ನು ಸಂಪುಟದಲ್ಲಿ ಇರಿಸಿಕೊಳ್ಳುವ ಅಧಿಕಾರ ಅವರಿಗೆ ಇದೆ. ಮುಖ್ಯಮಂತ್ರಿ ಇಡೀ ತಂಡದ ‘ನಾಯಕ’.

ಯಾವುದೇ ಇಲಾಖೆಗೆ ಸಂಬಂಧಿಸಿದ ಕಡತವನ್ನು ತರಿಸಿಕೊಂಡು ಪರಿಶೀಲನೆ ನಡೆಸುವ, ನಿರ್ದೇಶನ, ಆದೇಶಗಳನ್ನು ನೀಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ಅನುದಾನ ಬಿಡುಗಡೆಯೂ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ವಿಚಾರದಲ್ಲಿ ನೇರವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಹೊಂದಿದ್ದಾರೆ.

– ಪ್ರೊ. ರವಿವರ್ಮಕುಮಾರ್‌, ಹಿರಿಯ ವಕೀಲ

***

‘ಜಗಳ ಆಡಬೇಡಿ ಎಂದಷ್ಟೇ ಹೇಳಬಹುದು’

ಇಂತಹ ವಿಚಾರಗಳಲ್ಲಿ ರಾಜ್ಯಪಾಲರಿಗೆ ಯಾವ ಅಧಿಕಾರವೂ ಇಲ್ಲ. ಅನುದಾನ ಬಿಡುಗಡೆ, ಆಡಳಿತಕ್ಕೆ ಸಂಬಂಧಿಸಿದಂತೆ ತೀರ್ಮಾನಗಳನ್ನು ಕೈಗೊಳ್ಳುವುದು ಮುಖ್ಯಮಂತ್ರಿಯವರ ವಿವೇಚನಾ ಅಧಿಕಾರದ ವ್ಯಾಪ್ತಿಗೆ ಸೇರಿದ ವಿಷಯಗಳು. ಮುಖ್ಯಮಂತ್ರಿಯು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ.

‘ರಾಜ್ಯದ ಹಿತವನ್ನು ನೋಡಿಕೊಂಡು ಆಡಳಿತ ನಡೆಸಿ. ಜಗಳ ಆಡಬೇಡಿ’ ಎಂದು ಮುಖ್ಯಮಂತ್ರಿ ಮತ್ತು ಸಚಿವರಿಗೆ ಸಲಹೆ ನೀಡುವ ಅವಕಾಶ ರಾಜ್ಯಪಾಲರಿಗೆ ಇದೆ. ಸಚಿವರು ನೀಡಿದ ದೂರಿನ ಆಧಾರದಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ.

– ಉದಯ್‌ ಹೊಳ್ಳ, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT