ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮರವಂತೆ ಬೀಚ್ ಮತ್ತಷ್ಟು ಮೋಹಕ

Last Updated 3 ನವೆಂಬರ್ 2020, 6:01 IST
ಅಕ್ಷರ ಗಾತ್ರ
ADVERTISEMENT
""
""

ಸುತ್ತಲೂ ಅಪ್ಪಳಿಸುವ ಅಲೆ, ಆಳೆತ್ತರದ ಕಲ್ಲುಗಳ ಮೇಲೆ ಸೃಷ್ಟಿಯಾಗುವ ಹಾಲ್ನೊರೆ, ಕಣ್ಣು ಹಾಯಿಸಿದಷ್ಟೂ ಕಾಣುವ ಕಡಲ ರಾಶಿ, ದೂರದಲ್ಲೆಲ್ಲೋ ತೇಲುವ ದೋಣಿ, ನಾವೇ ಸಮುದ್ರ ಮಧ್ಯೆ ನಿಂತ ಭಾವ...

–ಹೀಗೊಂದು ಹೊಸ ಅನುಭೂತಿ ಕೊಡುತ್ತಿದೆ ಮರವಂತೆಯ ಬೀಚ್‌. ಮೊದಲೆಲ್ಲ ಹೆದ್ದಾರಿಯಲ್ಲೇ ನಿಂತು ಬೀಚ್‌ ಅನ್ನು ಕಣ್ತುಂಬಿಸಿಕೊಳ್ಳಬೇಕಾಗಿತ್ತು. ಈಗ ಸಮುದ್ರದ ಮಧ್ಯದಲ್ಲಿ ನಿಂತು, ಅದರ ಸೌಂದರ್ಯವನ್ನು ಸಮೀಪದಿಂದಲೇ ಸವಿಯುವ ಅವಕಾಶ ಸೃಷ್ಟಿಯಾಗಿದೆ. ಇದಕ್ಕೆಲ್ಲ ಕಾರಣ ಹೆದ್ದಾರಿ ಸುರಕ್ಷತೆಗೆ ನಿರ್ಮಿಸಿದ ಕರೆಗೋಡೆ ಅಥವಾ ಗ್ರಾಯಿನ್.

ಮರವಂತೆ, ರಾಜ್ಯದ ಕರಾವಳಿಯ ಒಂದು ವಿಶಿಷ್ಟ ಕಡಲತೀರ. ಒಂದೆಡೆ ವಿಶಾಲ ಅರಬ್ಬಿ ಸಮುದ್ರ, ಮತ್ತೊಂದೆಡೆ ರಮಣೀಯ ಸೌಪರ್ಣಿಕಾ ನದಿ. ಇವುಗಳ ಮಧ್ಯೆ ರಾಷ್ಟೀಯ ಹೆದ್ದಾರಿ 66. ಒಂದೇ ದಂಡೆಯ ಅಕ್ಕ–ಪಕ್ಕ ನದಿ, ಸಮುದ್ರ ಇರುವ ಇಂತಹ ವಿಶೇಷ ಸ್ಥಳ ಭಾರತದಲ್ಲೇ ಅಪರೂಪ.

ಮರವಂತೆ-ತ್ರಾಸಿ ಗ್ರಾಮಗಳಿಗೆ ಸೇರಿದ ಸಮುದ್ರ-ನದಿ ನಡುವಿನ ಇಕ್ಕಟ್ಟಾದ ದಂಡೆಗೆ ಮೊದಲಿನಿಂದಲೂ ಕಡಲ್ಕೊರೆತದ ಭೀತಿ. ಈ ಹೆದ್ದಾರಿಯ ಸುರಕ್ಷತೆಗಾಗಿ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆಯನ್ನು ನಾಲ್ಕು ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಅದರಂತೆ ಸಮುದ್ರದ ದಂಡೆಯುದ್ದಕ್ಕೂ ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಸಮುದ್ರದತ್ತ ಹೊರಚಾಚಿರುವ ಗ್ರಾಯಿನ್ ಅಥವಾ ಕರೆಗೋಡೆ ಎಂದು ಕರೆಯಲಾಗುವ ಕಲ್ಲಿನ ನಿರ್ಮಾಣಗಳನ್ನು ರಚಿಸಲಾಗಿದೆ. ಈಗ ಈ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಮೂರು ಕಿಲೋಮೀಟರ್ ಉದ್ದಕ್ಕೂ ಸಮುದ್ರದ ಸ್ವರೂಪದಲ್ಲಿ ಬದಲಾವಣೆಯಾಗಿದೆ. ಇದು ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಣೀಯವಾಗಿದ್ದು, ಹೆದ್ದಾರಿಯಲ್ಲಿ ಹೋಗುವವರನ್ನೆಲ್ಲ ಸೆಳೆಯುತ್ತಿದೆ.

ಮೈಲುಗಳಷ್ಟು ಹೊದ್ದು ಮಲಗಿದ ಬಿಳಿ ಮರಳು, ಅಪರೂಪದ ಸೂರ್ಯಾಸ್ತಮಾನವನ್ನು ನೋಡಲು ಪ್ರವಾಸಿಗರು ಈ ಹಿಂದೆ ಮರವಂತೆಯನ್ನೇ ಹುಡುಕಿಕೊಂಡು ಬರುತ್ತಿದ್ದರು. ಆದರೆ, ಈ ತೀರದಲ್ಲಿ ಸಮುದ್ರ ಆಳವಾಗಿರುವುದರಿಂದ ಸೀಮಿತ ಭಾಗದಲ್ಲಿ ಮಾತ್ರ ಪ್ರವಾಸಿಗಳು ವಿಹರಿಸಬಹುದಿತ್ತು.
ಈಗ ಪ್ರವಾಸಿಗರು ಸಮುದ್ರದಲ್ಲಿ ಉದ್ದಕ್ಕೂ ರಚನೆಯಾಗಿರುವ ಗ್ರಾಯಿನ್‍ಗಳ ಮೇಲೆ ನಡೆದಾಡುತ್ತ, ಅದು ಚಿಮ್ಮಿಸುವ ನೊರೆಯನ್ನು ನೋಡುತ್ತ, ಸಮುದ್ರದ ನಡುವೆಯೇ ಇದ್ದಂತೆ ಅನುಭವ ಪಡೆದು ಸೆಲ್ಫಿ ತೆಗೆದುಕೊಳ್ಳುತ್ತ, ಮೊದಲಿಗಿಂತ ಹೆಚ್ಚು ಮುದಗೊಳ್ಳುತ್ತಿದ್ದಾರೆ.

ಏನಿದು ಕರೆಗೋಡೆ?

ದಂಡೆಗೆ ಲಂಬವಾಗಿ ಸಮುದ್ರದತ್ತ ಹೊರಚಾಚಿರುವ ಗ್ರಾಯಿನ್ ಅಥವಾ ಕರೆಗೋಡೆಗಳು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತವೆ. ಅದರ ಜತೆಗೆ ಎರಡು ಗ್ರಾಯಿನ್‍ಗಳ ನಡುವೆ ಅಲೆಗಳ ಸಹಜ ಪ್ರಕ್ರಿಯೆಯ ಪರಿಣಾಮವಾಗಿ ಮರಳು ಶೇಖರಣೆಯಾಗಿ ಸಮುದ್ರದಂಡೆ ವಿಸ್ತರಿಸುತ್ತದೆ. ಅದರಿಂದ ದಂಡೆಯ ರಕ್ಷಣೆಯ ಜತೆಗೆ ಬೀಚ್‍ನ ಸೌಂದರ್ಯವೂ ಹೆಚ್ಚುತ್ತದೆ ಎಂಬುದು ನಿರ್ಮಾಣದ ಗುತ್ತಿಗೆದಾರ ಸಂಸ್ಥೆ ಕೋಸ್ಟಲ್ ಮರೀನ್ ಕನ್‍ಸ್ಟ್ರ್ರಕ್ಷನ್ ಎಂಡ್ ಎಂಜಿನಿಯರಿಂಗ್ (ಕೊಮ್ಯಾಕೊ) ಕಂಪನಿಯ ಹಿರಿಯ ಅಧಿಕಾರಿಗಳ ಮಾತು.

ಮರವಂತೆಯಲ್ಲಿ ಪ್ರತಿ 120 ಮೀಟರ್ ಅಂತರದಲ್ಲಿ 24 ಕರೆಗೋಡೆಗಳನ್ನು ನಿರ್ಮಿಸಲಾಗಿದೆ. ಸಮುದ್ರವು ಹೆದ್ದಾರಿಗೆ ತೀರ ನಿಕಟವಾಗಿರುವಲ್ಲಿ 9 ‘ಟಿ’(T) ಮಾದರಿಯ ಮತ್ತು ಉಳಿದೆಡೆ 15 ‘ಐ’(I) ಮಾದರಿಯ ಕರೆಗೋಡೆಗಳನ್ನು ರಚಿಸಲಾಗಿದೆ. ‘ಐ’ ಕರೆಗೋಡೆಗಳು 100 ಮೀಟರ್ ಉದ್ದ, ತಳದಲ್ಲಿ 30 ಮೀಟರ್ ಮತ್ತು ಶಿರದಲ್ಲಿ 4 ಮೀಟರ್ ಅಗಲವಾಗಿರುತ್ತವೆ. ‘ಟಿ’ ಮಾದರಿಯವು 76 ಮೀಟರ್ ಉದ್ದ, ತಳದಲ್ಲಿ 36 ಮೀಟರ್ ಮತ್ತು ಶಿರದಲ್ಲಿ 5 ಮೀಟರ್ ಅಗಲವಾಗಿರುತ್ತವೆ. ಈ 9 ಕರೆಗೋಡೆಗಳ ಹೊರಮೈಯಲ್ಲಿ ಕಾಂಕ್ರೀಟಿನ ಟೆಟ್ರಾಪಾಡ್‍ಗಳ ರಕ್ಷಣೆ ಒದಗಿಸಲಾಗಿದೆ. ಕರೆಗೋಡೆಗಳ ತಳದ 1. 5 ಮೀಟರ್ ಆಳದ ಮರಳನ್ನು ತೆಗೆದು ಅಲ್ಲಿ ಜಿಯೋಫ್ಯಾಬ್ರಿಕ್ ಶೀಟ್ ಹರಡಿ ಅದರ ಮೇಲೆ ಕಲ್ಲುಗಳನ್ನು ಪೇರಿಸಲಾಗಿರುವುದರಿಂದ ಕರೆಗೋಡೆಗಳು ದೀರ್ಘಕಾಲ ಕುಸಿಯದೆ ಉಳಿಯುತ್ತವೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಕರೆಗೋಡೆ ನಿರ್ಮಾಣದಿಂದ ಸಮುದ್ರದ ಸಹಜ ಸೌಂದರ್ಯಕ್ಕೆ ಧಕ್ಕೆಯಾಗಿದೆ ಎಂಬ ವಾದವೂ ಇದೆ. ಈ ತೀರದಲ್ಲಿ ಸಮುದ್ರ ಆಳವಾಗಿದ್ದು, ಪ್ರವಾಸಿಗರು ಎಚ್ಚರಿಕೆ ವಹಿಸಬೇಕು ಎಂಬುದು ಸ್ಥಳೀಯರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT