ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಭಕ್ಷಣೆಯೇ ಇಲ್ಲಿ ವಿಶೇಷ

ಆಚಾರ ವಿಚಾರ–7
Last Updated 6 ಜೂನ್ 2016, 19:31 IST
ಅಕ್ಷರ ಗಾತ್ರ

ಪಾದ ಚಲಿಸದೇ ದೇಹವನ್ನು ಬಲಭಾಗಕ್ಕೂ ನಂತರ ನಿಧಾನವಾಗಿ ಎಡಭಾಗಕ್ಕೂ ತಿರುಗಿಸುವ ನೃತ್ಯ ಇಲ್ಲಿ ಮಾಡಲಾಗುತ್ತದೆ. ಬೆತ್ತದಿಂದ ತಮ್ಮ ಬೆನ್ನಿಗೆ ಚಟ ಚಟನೆ ಶಬ್ದ ಬರುವಂತೆ ವೇಗವಾಗಿ ಹೊಡೆದುಕೊಳ್ಳುತ್ತಾ ನೆಗೆಯುತ್ತಾ ಹಿಮ್ಮುಖವಾಗಿ ಕುಣಿಯಲಾಗುತ್ತದೆ.

ಮೊಳ ಉದ್ದದ ಕೊಳವೆಯಂತೆ ಬಟ್ಟೆಯನ್ನು ಬಿಗಿಯಾಗಿ ಸುತ್ತಿ ತುಪ್ಪದಲ್ಲಿ ಅದ್ದಿದ ಕಕ್ಕಡವನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ಇಬ್ಬರೂ ನೆಗೆಯುತ್ತಾ ಕಕ್ಕಡ ಸಮೇತ ಕೈ ಹಿಡಿದುಕೊಂಡು ನಿಂತಲ್ಲಿಯೇ ಗಿರಿಗಿಟ್ಟಿಯಂತೆ ವೃತ್ತಾಕಾರವಾಗಿ ಸುತ್ತುತ್ತಾ ನರ್ತಿಸಲಾಗುತ್ತದೆ. ಉರಿಯುತ್ತಿರುವ ಕಕ್ಕಡವನ್ನು ತಮ್ಮ ಬಾಯಿಯ ಸಮೀಪ ತಂದು ಬಾಯಿಯಿಂದಲೇ ಸ್ಪರ್ಶಿಸಿ ಬಾಯೊಳಗೆ ಕಕ್ಕಡ ಹಾಕಿ ತೆಗೆಯಲಾಗುತ್ತದೆ...!

ಅಬ್ಬಾ ಎನ್ನುವಂಥ ಇಂಥದ್ದೊಂದು ರುದ್ರ ಭಯಂಕರ ಆಚರಣೆ   ಹೆಸರು ‘ದಂಡಿನ ದೇವರ ಸೇವೆ’. ಇದು ಕಾಣಸಿಗುವುದು ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಹೊಸಳ್ಳಿ ಎಂಬ ಗ್ರಾಮದಲ್ಲಿ. ಜೋಗ ರಸ್ತೆಯಲ್ಲಿ ಐದು ಕಿಲೋ ಮೀಟರ್ ದೂರದ ಖಂಡಿಕಾ ಕ್ರಾಸ್‌ನಿಂದ ಸುಮಾರು 10-12 ಕಿಲೋ ಮೀಟರ್ ದೂರದಲ್ಲಿ ಹೋದಾಗ ಸಿಗುವುದು ಈ ಹೊಸಳ್ಳಿ ಗ್ರಾಮ. ಕಿರಿದಾದ ರಸ್ತೆಬಲಕ್ಕೆ ಆಂಜನೇಯ ದೇವಸ್ಥಾನ. 

ಈ ಊರಿನ ಪಂಡ್ರಿ ಕೊಪ್ಪದ ಮನೆತನದ ಕುಲದೇವರು ವೆಂಕಟರಮಣ. ತಲೆಮಾರಿನಿಂದ ರಕ್ಷಿಸಿಕೊಂಡು ಬಂದಿರುವ ಹೊಸಳ್ಳಿ ದಂಡಿನ ದೇವರು ಎಂದು ಕರೆಯಲಾಗುವ ಆಂಜನೇಯ ದೇವರ ಉತ್ಸವ ಮೂರ್ತಿ ಇಲ್ಲಿದೆ. ಮನೆತನದ ಹಿರಿಯರಾದ ಶ್ರೀನಿವಾಸ ರಾವ್ ಕಲ್ಸೆಮನೆ ತಿಮ್ಮಪ್ಪ ಪಾತ್ರಿ ಸಹೋದರರು ನಡೆಸಿಕೊಡುವ ವಿಶಿಷ್ಟ ಆರಾಧನಾ ಕ್ರಮವಿದು.

ಆಂಜನೇಯ ದೇವಸ್ಥಾನದಲ್ಲಿ ಚೈತ್ರಮಾಸದಲ್ಲಿ ಶ್ರೀರಾಮನವಮಿ ಕಳೆದು ದಶಮಿಯ ದಿನ ನಡೆಯುತ್ತದೆ ಈ ದಂಡಿನ ದೇವರ ಸೇವೆ. ಈ ಸೇವೆ ಸೋಮವಾರ, ಅಮವಾಸ್ಯೆ, ಸಂಕ್ರಮಣ, ಅಶೌಚ ದಿನಗಳ ಹೊರತುಪಡಿಸಿ ಉಳಿದ ದಿನಗಳಲ್ಲಿ ನಡೆಯುತ್ತದೆ. ಮಾರುತಿ ದೇವರನ್ನು ನೃತ್ಯದ ಮೂಲಕ ಓಲೈಸಿಕೊಳ್ಳಲು ವೆಂಕಟರಮಣ ಸನ್ನಿಧಿಯಲ್ಲಿ ನಡೆಸುವ ಸೇವೆ ಇದಾಗಿದೆ.

ಈ ಸೇವೆ ನಡೆಯುವ ಬಗೆ ವಿಶೇಷ. ನಸುಕಿನಲ್ಲಿ ಪೂಜೆ, ರುದ್ರಾಭಿಷೇಕ ನಡೆಯುತ್ತದೆ. ನಂತರ ಏಳು ಅಡಿ ಅಗಲ, ಮೂವತ್ತು ಅಡಿ ಉದ್ದದ ಜಾಗ ಸ್ವಚ್ಛಗೊಳಿಸಿ ರಂಗೋಲಿಯಿಂದ ಶೃಂಗರಿಸಿ ಪಾತ್ರಿಗಳು ಬಿಳಿಯ ವಸ್ತ್ರ ಪೇಟ ತೊಟ್ಟು ದೇವರ ಮೂರ್ತಿಯನ್ನು ಮುಖವಾಡ ಸಮೇತ ಹೊಸದಾಗಿ ನಿರ್ಮಿಸಿದ ಮಂಟಪದಲ್ಲಿ ತಂದಿಡುತ್ತಾರೆ.

ಪಾತ್ರಿಗಳಿಬ್ಬರೂ ಕಾಲು ಮತ್ತು ಸೊಂಟಕ್ಕೆ ಗೆಜ್ಜೆ ಕಟ್ಟಿ ಉಚ್ಚಸ್ವರದಲ್ಲಿ ಶ್ರೀಮದ್ರಮಾರಮಣ ಗೋವಿಂದಾ... ಗೋವಿಂದಾ ಎನ್ನುತ್ತಾ ನರ್ತನ ಸೇವೆ ಪ್ರಾರಂಭಿಸುತ್ತಾರೆ. ಎಡಗೈಯಲ್ಲಿ ಜಾಗಟೆ ಹಿಡಿದು ಬಾರಿಸುತ್ತಾ ಪಾದ ಚಲಿಸದೇ ದೇಹವನ್ನು ಬಲಭಾಗಕ್ಕೂ ನಂತರ ನಿಧಾನವಾಗಿ ಎಡಭಾಗಕ್ಕೂ ತಿರುಗಿಸುತ್ತಾರೆ.

ನಂತರ ಪಾತ್ರಿಗಳು ದೇವರ ಮುಂದೆ ಗಂಭೀರ ನಡಿಗೆಯೊಂದಿಗೆ ಹಿಮ್ಮುಖವಾಗಿ ಜೋರಾಗಿ ಹೆಜ್ಜೆ ಹಾಕಿ ನಂತರ ಮುಮ್ಮುಖವಾಗಿ, ಪಕ್ಕಕ್ಕೆ, ಅಂಕುಡೊಂಕಾಗಿ ಸಾಗಿ ‘ಸೋಹಂ’ ಎಂದು ಹೇಳುತ್ತಾ ಬೆತ್ತದಿಂದ ಬಡಿದುಕೊಳ್ಳುತ್ತಾರೆ. ಇದು ಛಡಿ ಸೇವೆ. 

ನಂತರ ಪಾತ್ರಿಗಳು ಕಕ್ಕಡವನ್ನು ಹಿಡಿದುಕೊಂಡು ನರ್ತಿಸುವ ಕಾಯಕದಲ್ಲಿ ತೊಡಗುವುದನ್ನು ಕಂಡಾಗ ಮೈ ನವಿರೇಳುತ್ತದೆ. ‘ಸೋಹಂ’ ಎಂದು ಉಚ್ಚರಿಸುತ್ತಾ, ಉರಿಯುತ್ತಿರುವ ಕಕ್ಕಡ ತಮ್ಮ ಬಾಯಿಯ ಸಮೀಪ ತಂದು ಬಾಯಿಯಿಂದಲೇ ಸ್ಪರ್ಶಿಸಿ ಬಾಯೊಳಗೆ ಕಕ್ಕಡ ಹಾಕಿ ತೆಗೆಯುತ್ತಾರೆ.

ಹೀಗೆ ವೇಗವಾಗಿ ಕಚ್ಚಿದಾಗ ಬೆಂಕಿ ಆರಿಹೋದಲ್ಲಿ ಎಡಗೈಯಲ್ಲಿ ಹಿಡಿದ ಕಕ್ಕಡದಿಂದ ಪುನಃ ಹೊತ್ತಿಸಿಕೊಂಡು 8–10 ಬಾರಿ ಅಗ್ನಿ ಭಕ್ಷಣೆ ಮಾಡುತ್ತಾರೆ. ಇಲ್ಲಿ ‘ಸೋಹಂ’ ಎಂದರೆ ಅಂತರಾತ್ಮಕವಾಗಿ ದೇವರನ್ನು ಐಕ್ಯಗೊಳಿಸುವ ಸಲುವಾಗಿ ಪ್ರಾರ್ಥಿಸುವ ಪರಿ.  ಇದು ಕಕ್ಕಡ ಸೇವೆ.

ಇದು ಮುಗಿಯುತ್ತಿದ್ದಂತೆ ದೀರ್ಘದಂಡ ಪ್ರಣಾಮ ಮಾಡುವ ಭಕ್ತರ ಬಳಿ ಪಾತ್ರಿಗಳು ಎಡಗಾಲಿನಿಂದ ನರ್ತನ ಮಾಡುತ್ತಾ ಬಲಗಾಲಿನಲ್ಲಿ ಅವರ ದೇಹವನ್ನು ಸ್ಪರ್ಶಿಸುತ್ತಾ ಬೆನ್ನಿನ ಮಧ್ಯಭಾಗದಲ್ಲಿ ಒಂದು ಪಾದವನ್ನು ಎರಡೂ ಬದಿಯಿಂದಲೂ ಸ್ಪರ್ಶಿಸುತ್ತಾರೆ. ಇದು ಪಾದ ಸೇವೆ. 

ಮಂಗಳಾರತಿ ನಂತರ ಅವರೋಹಣ ಕ್ರಮದಲ್ಲಿ ನೃತ್ಯಗತಿಯಲ್ಲಿ ಹೆಜ್ಜೆ ಹಾಕಿ ನರ್ತಿಸುತ್ತಾರೆ. ಅಷ್ಟಾವಧಾನ ನಡೆಯುತ್ತದೆ.  ಪಾತ್ರಿಗಳು ದೀರ್ಘದಂಡ ಪ್ರಣಾಮವನ್ನು ಮಾಡುವಾಗ ಅವರ ಬೆನ್ನಿನ ಮೇಲೆ ಒದ್ದೆ ಮಾಡಿದ ದೊಡ್ಡ ವಸ್ತ್ರ ಹೊದೆಸುತ್ತಾರೆ.

ನಿಧಾನವಾಗಿ ಮೇಲಕ್ಕೆದ್ದ ನಂತರ ಪಾತ್ರಿಗಳು ಸೇವೆಯ ಪ್ರಾರಂಭದಲ್ಲಿ ಹೇಳಿದಂತೆ ಮಾರುತಿ ವೆಂಕಟರಮಣ ದೇವರ ನಾಮಸ್ಮರಣೆಯೊಂದಿಗೆ ದೇವರ ಮೂರ್ತಿಗಳನ್ನು ಯಥಾಸ್ಥಾನದಲ್ಲಿ ತಂದಿಡುತ್ತಾರೆ. 

ಹಿರಿಯ ಪಾತ್ರಿ ಶ್ರೀನಿವಾಸರಾವ್ ಕಳೆದ ನಲವತ್ತು ವರ್ಷಗಳಿಂದಲೂ ಈ ಸೇವೆ ನಡೆಸಿಕೊಂಡು ಬಂದಿದ್ದು 150ಕ್ಕೂ ಹೆಚ್ಚಿನ ಕೈಂಕರ್ಯ ಸೇವೆ ಮಾಡಿದ್ದಾರೆ. ನಿರಂತರವಾಗಿ 1918ರಿಂದಲೂ ಈ ಸೇವೆ ನಡೆದುಕೊಂಡುಬಂದ ಬಗ್ಗೆ ದಾಖಲೆ ಇವೆ.

ತಮ್ಮೊಳಗೆ ಮನೆಮಾಡಿರುವ ನಕಾರಾತ್ಮಕ ಶಕ್ತಿಗಳನ್ನು ದೂರಮಾಡಿ ಸಕಾರಾತ್ಮಕ ಶಕ್ತಿಗಳನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಸೇವೆ ಮಾಡಲಾಗುವುದು. ಈ ವಿಶಿಷ್ಟ ಆಚರಣೆ ಕುರಿತಾಗಿ ವಿ.ಎಸ್. ಕಳಸೇಶ್ವರ್ ಎನ್ನುವವರು ದಾಖಲೆ ಸಂಗ್ರಹಿಸಿ ಅದನ್ನು ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT