ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯುವ ತಾಣದ ಜನಪದ ಲೋಕ...

Last Updated 9 ಜೂನ್ 2014, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ವಾಣಿಜ್ಯ ನಗರಿ ಎಂದೆನಿಸಿಕೊಂಡಿದ್ದ ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಪರಂಪರೆಯ ಸಾಂಸ್ಕೃತಿಕ ಶ್ರೀಮಂತಿಕೆಗೆ ತನ್ನದೇ ಕೊಡುಗೆ ನೀಡಿದೆ. ಇದು ಮ್ಯಾಸಬೇಡ ಮತ್ತು ಕಾಡಗೊಲ್ಲರ ಅನಾದಿಕಾಲದ ಆಚರಣೆಗಳ ತವರೂರು ಕೂಡ.

ಪ್ರಸಿದ್ಧ ಕಾದಂಬರಿಕಾರರಾಗಿರುವ ತ.ರಾ.ಸು, ವೆಂಕಣ್ಣಯ್ಯ, ತ.ಸು.ಶಾಮರಾಯ, ಆಶುಕವಿ ಬೆಳಗೆರೆ ಕೃಷ್ಣಶಾಸ್ತ್ರೀ, ರಂಗಕರ್ಮಿ ಸಿ.ಜಿ.ಕೆ, ಜಾನಪದ ಕಣಜದಂತಿದ್ದ ಸಿರಿಯಜ್ಜಿ ಇಂತಹ ದಿಗ್ಗಜರು ಜನಿಸಿದ ಅಪ್ಪಟ ಬಯಲುಸೀಮೆಯ ಊರು ಇದು.

ಈ ಜಿಲ್ಲೆಯ ಸಂಸ್ಕೃತಿ ಹಾಗೂ ಇತಿಹಾಸ ಸಾರುವ ವಸ್ತುಸಂಗ್ರಹಾಲಯವೊಂದು ಚಳ್ಳಕೆರೆಯಲ್ಲಿ ತಲೆ ಎತ್ತಿದೆ. ಎಚ್‌.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಶ್ರಮದ ಫಲವಾಗಿ ಇಂಥದ್ದೊಂದು ಆಕರ್ಷಕ ಸಂಗ್ರಹಾಲಯ ಇಲ್ಲಿ ಮೈದಳೆದಿದೆ. ನೂರಾರು ವರ್ಷಗಳ ಹಿಂದೆ ಜನಪದರು ತಮ್ಮ ಜೀವನ ನಿರ್ವಹಣೆಯಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿರುವುದು ವಿಶೇಷ.

‘ಜಾಗತೀಕರಣದ ಭರಾಟೆಯಲ್ಲಿ ಪುರಾತನರು ಬಳಸಿರುವ ಅನೇಕ ವಸ್ತುಗಳು ಕಣ್ಮರೆ ಆಗುತ್ತಿವೆ. ಈ ಕಾಲಘಟ್ಟದಲ್ಲಿ ಜನಪದರ ದಿನನಿತ್ಯದ ಬದುಕಿನಲ್ಲಿ, ಬೇಸಾಯದಲ್ಲಿ ಬಳಸಿದ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ತಲೆಮಾರಿಗೆ ಮಾದರಿಯಾಗಿಸುವ ಪ್ರಯತ್ನ ಇದಾಗಿದೆ’ ಎನ್ನುತ್ತಾರೆ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟೇಶ್.

ಇಂತಹ ಸಂಗ್ರಹಾಲಯದಲ್ಲಿ ಬೇಸಾಯಕ್ಕೆ ಬಳಸುವ ಕೂರಿಗೆ, ಬಿತ್ತನೆಗೆ ಬಳಸುತ್ತಿದ್ದ ಪುರಾತನ ಕೂರಿಗೆ ಬಟ್ಟಲು, ಮಣ್ಣಿನ ಹೂಜಿ, ಗುಡಿಸಲು ಮನೆಗಳಲ್ಲಿ ಬಳಸುತ್ತಿದ್ದ ನೆಲುವು, ಧಾನ್ಯಗಳಿಂದ ಹಿಟ್ಟು ಪಡೆಯುವ ಬೀಸುವ ಕಲ್ಲು, ಸಾಂಬಾರಿಗೆ ಹಾಕುವ ಮಸಾಲೆ ಪದಾರ್ಥಗಳನ್ನು ತಯಾರಿಸುವ ರುಬ್ಬುವ ಗುಂಡು, ಅಡಿಕೆ ಎಲೆ ಕುಟ್ಟುವ ಕುಟ್ಣಿ, ಮಸಾಲೆ ಬಟ್ಟಲು, ಒನಕೆ, ಧಾನ್ಯ ಸಂಗ್ರಹಣೆಯ ವಾಡೇವು, ಹಳೆ ಕಾಲದ ಸುಣ್ಣದ ಡಬ್ಬಿ ಸೇರಿದಂತೆ ಮಣ್ಣಿನಲ್ಲಿ ತಯಾರಿಸಲಾದ ಅನೇಕ ಪುರಾತನ ಕಾಲದ ವಸ್ತುಗಳು ಇಲ್ಲಿವೆ.

ಇವುಗಳೆಲ್ಲವನ್ನೂ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಂಗ್ರಹಿಸಿದ್ದಾರೆ. ಇಂತಹ ಸಂಗ್ರಹವನ್ನು ಮತ್ತಷ್ಟು ವಿಸ್ತರಿಸಲು ಕೊಠಡಿ ಸಮಸ್ಯೆ ಕಾಡುತ್ತಿದೆ. ಕಾಲೇಜು ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಸರ್ಕಾರ ಇಲ್ಲಿ ಜಾನಪದ ವಸ್ತು ಸಂಗ್ರಹಾಲಯ ಮಾಡಲು ಕಟ್ಟಡ ನಿರ್ಮಾಣ ಮಾಡಬೇಕಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನ ಹರಿಸಿದಲ್ಲಿ ಪರಂಪರೆಯಿಂದಲೂ ಮುಂದುವರೆಸಿಕೊಂಡು ಬಂದ ಬಯಲು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಅಧ್ಯಾಪಕ ವೃಂದ.
         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT