ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಜಿ ಮೋಹಿತರ ಸಂಗ ಸಾಂಗತ್ಯ

Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಆಷಾಢ ಮಾಸದ ಗಾಳಿ, ಮೋಡ ತೇಲುವ ಆಗಸ, ಕಣ್ಣಾಮುಚ್ಚಾಲೆಯಾಡುವ ಚಂದ್ರ, ಆಗಾಗ ಇಣುಕುವ ನಕ್ಷತ್ರಗಳು, ಅಲೆಅಲೆಯಾಗಿ ಅಪ್ಪಳಿಸುವ ಹೇಮಾವತಿ, ಗಾಳಿಯ ವೇಗಕ್ಕೆ ತಕ್ಕಂತೆ ಹಾಡುವ ದೊಡ್ಡ ಅರಳಿಮರ, ಬಯಲಲ್ಲಿ ತೇಲುವ ಮಿಣುಕು ಹುಳು, ಸುಳಿವು ನೀಡದೆ ಸುರಿವ ಮಳೆ, ಮನ ತುಂಬುವ ಮಂಕುತಿಮ್ಮನ ಕಗ್ಗ...

ಈ ಪದಗಳನ್ನು ಓದಿದರೇ ಎಷ್ಟು ಖುಷಿಯಾಗುತ್ತೆ ಅಲ್ವಾ? ವಾಸ್ತವದಲ್ಲಿ ಅನುಭವಿಸಿದರೆ ಹೇಗಿರಬೇಡ?
ಅರೆಮಲೆನಾಡು ಪ್ರಾಂತ್ಯಕ್ಕೆ ಸೇರುವ ಹೊಳೆನರಸಿಪುರ ತಾಲ್ಲೂಕಿನ ಪುಟಾಣಿ ಗ್ರಾಮ ಮಾವಿನಕೆರೆಯಲ್ಲಿ ಎರಡು ದಿನ ಡಿ.ವಿ.ಗುಂಡಪ್ಪ ಅವರದ್ದೇ ಮಾತು, ಅವರ ಕೃತಿಗಳದ್ದೇ ಧ್ಯಾನ. ಡಿವಿಜಿ ಸಾಹಿತ್ಯದ ಅಧ್ಯಯನಕ್ಕೆಂದೇ ರೂಪುಗೊಂಡ ‘ಡಿವಿಜಿ ಬಳಗ’ ವಾಟ್ಸ್‌ಆ್ಯಪ್‌ ಗ್ರೂಪ್‌ನ ಸುಮಾರು 50 ಸದಸ್ಯರು ಅಲ್ಲಿ ನೆರೆದಿದ್ದರು.

ವಿವಿಧ ವಯೋಮಾನ, ಭಿನ್ನ ಆಸಕ್ತಿಗಳು, ವೈವಿಧ್ಯಮಯ ಉದ್ಯೋಗ ಅವಲಂಬಿಸಿದ್ದ ಅವರೆಲ್ಲರೂ ಎರಡು ದಿನ ನೆಲದ ಮೇಲೆ ಜಮಖಾನ ಹಾಸಿ ಮಲಗಿದ್ದರು. ತೊಟ್ಟಿ ಮನೆಯ ಚಳಿಯನ್ನು ಅನುಭವಿಸಿ ಸವಿದರು. ಡಿವಿಜಿ ಮೋಹಿತರು ಶಿಬಿರಕ್ಕೆ ಕೊಟ್ಟುಕೊಂಡಿದ್ದ ಹೆಸರು ‘ಮಾನಸೋಲ್ಲಾಸ’. ಅದು ನೆರೆದವರ ಮನಸ್ಥಿತಿಗೆ ಅನ್ವರ್ಥವೆಂಬಂತೆಯೇ ಇತ್ತು.

ದೊಡ್ಡಬಳ್ಳಾಪುರದಲ್ಲಿ ಶಿಕ್ಷಕಿಯಾಗಿರುವ ಸುಮಾ, ಇಸ್ರೊದಲ್ಲಿ ವಿಜ್ಞಾನಿಯಾಗಿರುವ ಜಯಸಿಂಹ ಅವರ ಜೋಡಿ ಕಗ್ಗದ ಗಮಕ ಪ್ರಸ್ತುತಪಡಿಸಿತು. ನಂತರ ಅವರೇ ನಡೆಸಿಕೊಟ್ಟ ‘ಸಾಕೆನಿಪುದೆಂದಿಗೆಲೋ...’ ಗೋಷ್ಠಿಯಲ್ಲಿ ಹಲವು ಮೌಲಿಕ ವಿಚಾರಗಳು ಚರ್ಚೆಯಾದವು. ‘ಬೇಕುಗಳಿಂದ ಬದುಕಿಗೆ ಅಸ್ತಿತ್ವ ಸಿಗಬೇಕು, ಅಸ್ಥಿರತೆಯಲ್ಲ...’ ಎಂಬ ಅವರ ಮಾತು ಬಹುಕಾಲ ಎಲ್ಲರ ಮನಸುಗಳಲ್ಲಿ ಪ್ರತಿಧ್ವನಿಸುತ್ತಿತ್ತು.

ಡಿವಿಜಿ ಅವರ ಮೌಲಿಕ ಕೃತಿ ‘ಬಾಳಿಗೊಂದು ನಂಬಿಕೆ’ ಕುರಿತು ಚಿಂತಕ ಸತ್ಯೇಶ ಬೆಳ್ಳೂರ್‌ ವಿಚಾರ ಮಂಡಿಸಿದರು. ಧರ್ಮ– ಅರ್ಥ– ಕಾಮ ಮತ್ತು ಮೋಕ್ಷಗಳ ಬಗ್ಗೆ ಡಿವಿಜಿ ಚಿಂತನೆ ಬಿಡಿಸಿಟ್ಟ ಅವರು, ‘ನಾವು ಹೇಗೆ ಬದುಕಿದರೆ ಎಲ್ಲರ ಬಾಳು ಸೊಗಸುಗೊಳ್ಳುತ್ತೋ– ಎಲ್ಲರ ಬಾಳೂ ಸೊಗಸಾಗುತ್ತೋ ಅದೇ ಧರ್ಮ.

ಅರ್ಥ– ಕಾಮಗಳಿಂದ ಜೀವಕ್ಕೆ ವಿಕಾಸ, ಧರ್ಮದಿಂದ ಜೀವಕ್ಕೆ ಹಿತ ಚಿಕಿತ್ಸೆ. ಜೀವಲೀಲೆ ನಡೆಸುವ ಪರಮಾತ್ಮನನ್ನು ತಿಳಿದುಕೊಳ್ಳುವುದೇ ಮೋಕ್ಷ’ ಎಂಬ ಡಿವಿಜಿ ಪ್ರತಿಪಾದನೆಯನ್ನು ಹಲವು ಉದಾಹರಣೆಗಳ ಮೂಲಕ ಮನಗಾಣಿಸಿದರು.

ಪ್ರಚಲಿತ ರಾಜಕಾರಣ, ಲೋಕಾಯುಕ್ತ, ಸಂಸಾರ ತಾಪತ್ರಯಗಳಿಗೆ ಕಗ್ಗ ಹೇಗೆ ಒದಗಬಲ್ಲದು ಎಂಬುದನ್ನು ಇನ್ಫೋಸಿಸ್‌ ಉದ್ಯೋಗಿ ಅಶೋಕ್‌ಕುಮಾರ್‌ ಲಘುಧಾಟಿಯಲ್ಲಿ, ಹಲವು ನಗೆಚಾಟಿಕೆಗಳೊಂದಿಗೆ ವಿವರಿಸಿದರು. ಕೇಳುಗರು ನಕ್ಕುನಕ್ಕು ಕಣ್ಣೀರಿಟ್ಟರೂ, ನಗು ಮುಗಿದ ನಂತರ ಕಗ್ಗದ ಚಿಂತನೆ ಮನವನ್ನು ಆವರಿಸಿಕೊಳ್ಳುತ್ತಿತ್ತು.

ಬಾಜಿರಾವ್‌ ಮಸ್ತಾನಿ ಸೇರಿದಂತೆ ಹಲವು ಜನಪ್ರಿಯ ಬಾಲಿವುಡ್‌ ಚಿತ್ರಗಳ ಸಂಗೀತ ನಿರ್ದೇಶಕರೊಂದಿಗೆ ದುಡಿದಿರುವ ಮೈಸೂರಿನ ಕಲಾವಿದ ಸುಬ್ಬು (ಸುಬ್ರಹ್ಮಣ್ಯ) ಕರ್ನಾಟಕ ಜಾನಪದ ಸಂಗೀತದ ಝಲಕ್‌ ತೋರಿದರು. ಆಫ್ರಿಕಾದಿಂದ ತಂದಿದ್ದ ಜಂಬೆ ವಾದ್ಯದೊಂದಿಗೆ ಅವರು ತೋರಿದ ಕರಾಮತ್ತು, ದಿವ್ಯಾ ನುಡಿಸಿದ ಚಂಡೆ ವಾದನ ಎಲ್ಲರ ಮನದಲ್ಲಿ ದಾಖಲಾಯಿತು.

ಕಗ್ಗದ ಸಾರವನ್ನು ಸಾರಿ ಹೇಳುವ ವಿದ್ವಾಂಸ ನಟೇಶ್‌ ಅವರ ಕಂಚಿನ ಕಂಠದಿಂದ ಹೊಮ್ಮಿದ ಕಗ್ಗದ ಸಾಲುಗಳನ್ನು ಶಿಬಿರಾರ್ಥಿಗಳು ದಿನಗಟ್ಟಲೆ ಗುನುಗಿ ಆನಂದಿಸಿದರು. ಎರಡು ದಿನ ಮಾನಸೋಲ್ಲಾಸ ಶಿಬಿರ ಸುಂದರ ಸ್ವಪ್ನದಂತೆ ಅಗೋ–ಇಗೋ ಎನ್ನುವುದರೊಳಗೆ ಮುಗಿದೇ ಹೋಗಿತ್ತು. ಮುಂದಿನ ವರ್ಷವೂ ಶಿಬಿರ ನಡೆಸಿ ಎಂಬ ಪ್ರೀತಿಯ ಹಕ್ಕೊತ್ತಾಯ ಕೇಳಿ ಬಂತು.

ಡಿವಿಜಿ ಬಳಗ
ಮಂಕುತಿಮ್ಮನ ಕಗ್ಗದಂಥ ಮೇರು ಕೃತಿಯನ್ನು ಕನ್ನಡಕ್ಕೆ ಕೊಟ್ಟ ದಾರ್ಶನಿಕ ಡಿ.ವಿ.ಗುಂಡಪ್ಪ ಅವರ ಸಾಹಿತ್ಯ ಮೆಚ್ಚಿದ ಸಮಾನ ಮನಸ್ಕರು ರೂಪಿಸಿಕೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ‘ಡಿವಿಜಿ ಬಳಗ’. ಮಂಗಳೂರಿನ ಕಾರ್ಪೊರೇಷನ್‌ ಬ್ಯಾಂಕ್‌ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಕನಕರಾಜು ಮತ್ತು ಅವರ ಪತ್ನಿ ನಂದಿನಿ ಈ ಗ್ರೂಪ್‌ನ ಚಾಲನ ಶಕ್ತಿ.

ಸದಸ್ಯರು ಓದಿ ರೆಕಾರ್ಡ್‌ ಮಾಡಿದ ಕಗ್ಗದ ಪದ್ಯಗಳು, ಕಗ್ಗದ ಅರ್ಥ ವಿವರಣೆ, ಡಿವಿಜಿ ಅವರ ಇತರ ಕೃತಿಗಳ ಚರ್ಚೆ, ಸಮಕಾಲೀನ ಕನ್ನಡ ಸಾಹಿತ್ಯದ ಬೆಳವಣಿಗೆಗಳು, ಮಹತ್ವದ ಸಾಹಿತ್ಯ ಕೃತಿಗಳ ಬಗ್ಗೆ ಚರ್ಚೆಯೂ ಬಳಗದಲ್ಲಿ ನಡೆಯುತ್ತದೆ.

ಕಗ್ಗಗಳನ್ನು ಇಂಗ್ಲಿಷ್‌ನಲ್ಲಿ ವಿವರಿಸುವ ಪ್ರಯತ್ನವೂ ಸಾಗಿದೆ. ಆಸಕ್ತರು ತಮ್ಮ ಹೆಸರನ್ನು 9448973582 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡುವ ಮೂಲಕ ಬಳಗಕ್ಕೆ ಸೇರಲು ವಿನಂತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT