ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊಗ್ರಫಿ | ಛಾಯಾಗ್ರಹಣದ ಯುವರಾಜ ಬಹಿರ್ಜಿ ಘೋರ್ಪಡೆ

Last Updated 3 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ನಾಡುಕಂಡ ಅಪರೂಪದ ಛಾಯಾಗ್ರಾಹಕರಾಗಿದ್ದ ಎಂ.ವೈ. ಘೋರ್ಪಡೆ ತಮ್ಮ ಚಿತ್ರಗಳಿಂದ ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರಾದವರು. ಅವರ ಮೊಮ್ಮಗ ಬಹಿರ್ಜಿ ಸಹ ಅವರ ಹಾದಿಯಲ್ಲೇ ಸಾಗಿದ್ದಾರೆ

ದಿವಂಗತ ಎಂ.ವೈ. ಘೋರ್ಪಡೆ ಅವರ ಹೆಸರು ಹೇಳಿದರೆ ಸಾಕು, ತಟ್ಟನೆ ಕಣ್ಮುಂದೆ ಮೆರವಣಿಗೆ ಹೊರಡುವುದೆಂದರೆ ಅವರು ತೆಗೆದ ವನ್ಯಜೀವಿ ಚಿತ್ರಗಳು. ಅದು ಹುಲಿಯೊಂದು ತನ್ನ ಬೇಟೆಯನ್ನು ಹೊತ್ತು ತರುತ್ತಿರುವ ದೃಶ್ಯವೇ ಆಗಿರಬಹುದು, ಆನೆಗಳ ಪರಿವಾರ ಮರಿಯಾನೆಗಳಿಗೆ ಮಜ್ಜನ ಮಾಡಿಸುತ್ತಿರುವ ದೃಶ್ಯವೇ ಆಗಿರಬಹುದು, ಕರಡಿಯೊಂದು ತನ್ನ ಮರಿಯನ್ನು ಕೂಸುಮರಿ ಮಾಡಿಕೊಂಡು ಹೊತ್ತೊಯ್ಯುತ್ತಿರುವ ದೃಶ್ಯವೇ ಆಗಿರಬಹುದು, ಘೋರ್ಪಡೆ ಅವರ ಕ್ಯಾಮೆರಾ ಕೈಚಳಕಕ್ಕೆ ಮಾರುಹೋಗದವರೇ ಇರಲಿಲ್ಲ.

ಎಂ.ವೈ.ಜಿ. ಅವರ ಮೊಮ್ಮಗ ಬಹಿರ್ಜಿ ಘೋರ್ಪಡೆ ಕೂಡ ಅವರ ತಾತನಂತೆಯೇ ಛಾಯಾಗ್ರಹಣಕ್ಕೆ ಹೆಸರಾದವರು. ಬಾಲ್ಯದಿಂದಲೇ ತಾತನ ಕ್ಯಾಮೆರಾಗಳನ್ನು, ಅವುಗಳು ಹೆಕ್ಕಿ ತಂದ ತಾಜಾ ತಾಜಾ ಚಿತ್ರಗಳನ್ನು ನೋಡುತ್ತಾ ಬೆಳೆದ ಬಹಿರ್ಜಿ ಅವರು, ದೊಡ್ಡವರಾದಂತೆ ತಾವೂ ಅದೇ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡವರು. ಸಂಡೂರು ರಾಜವಂಶಸ್ಥರ ಕುಡಿಯಾಗಿ, ಘೋರ್ಪಡೆ ಮನೆತನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾದರೂ ಛಾಯಾಗ್ರಹಣವೆಂದರೆ ಹುರುಪಿನಿಂದ ಹೊರಟುಬಿಡುವರು.

ನಾರಿಹಳ್ಳದ ಪ್ರಾಕೃತಿಕ ಸೊಬಗನ್ನು ನಾವು ಬಹಿರ್ಜಿ ಅವರ ಕ್ಯಾಮೆರಾ ಕಣ್ಣಿನಿಂದಲೇ ನೋಡಬೇಕು. ಮಿಂಚುಳ್ಳಿಯೊಂದು ಚುಂಚಿನಲ್ಲಿ ‘ಊಟ’ ಹಿಡಿದು ಇನ್ನೇನು ತಿನ್ನಲು ರೆಂಬೆಯ ಮೇಲೆ ಕುಳಿತ ನೋಟ ಎಷ್ಟೊಂದು ಆಕರ್ಷಕ. ಎಲೆಗಳಿಲ್ಲದ ರೆಂಬೆಯ ಮೇಲೆ ನೊಣಬಾಕನೊಂದು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತ ನೋಟ ಕೂಡ ಅಷ್ಟೇ ಸಮ್ಮೋಹಕ.

ಸಂಡೂರಿನ ಶಿವ ವಿಲಾಸ ಅರಮನೆಯ ಬೆಳಕಿನ ವೈಭವ
ಸಂಡೂರಿನ ಶಿವ ವಿಲಾಸ ಅರಮನೆಯ ಬೆಳಕಿನ ವೈಭವ

ಬಹಿರ್ಜಿ ಅವರ ಕ್ಯಾಮೆರಾ ಪ್ರೇಮವನ್ನು ಅವರ ಕಿರಿಯ ಸಹೋದರ ಏಕಾಂಬರ ಹೀಗೆ ನೆನೆಯುತ್ತಾರೆ: ‘ಒಮ್ಮೆ ದಾದಾ (ಅಣ್ಣ) ಚಿಕ್ಕವರಿದ್ದಾಗ ತಾತಾ ಅವರ ಕ್ಯಾಮೆರಾಗಳನ್ನು ತೆಗೆದುಕೊಂಡು ಅವುಗಳನ್ನು ಸರಿಯಾಗಿ ಬಳಸುವುದು ಗೊತ್ತಿಲ್ಲದೇ ಕೆಡಿಸಿಬಿಟ್ಟಿದ್ದರು. ಇದನ್ನು ಕಂಡ ತಾತಾ, ದಾದಾಗೆ ಬಾಸುಂಡೆ ಬರುವಂತೆ ಹೊಡೆದುಬಿಟ್ಟಿದ್ದರು. ಆದರೂ ದಾದಾ ಕ್ಯಾಮೆರಾ ಬಳಸುವುದನ್ನು ಬಿಡಲೇ ಇಲ್ಲ. ಅದರ ಮೇಲೆ ಮೋಹ ಬೆಳೆಸಿಕೊಳ್ಳುತ್ತಾ ಬಂದು, ಇದೀಗ ತಾತಾ ಅವರಂತೆಯೇ ಸಮ್ಮೋಹಕ ಚಿತ್ರಗಳನ್ನು ಸೆರೆಹಿಡಿದು ಕೊಡುತ್ತಿದ್ದಾರೆ’.

ಬಹಿರ್ಜಿ ಅವರು ಕಳೆದ ಅಕ್ಟೋಬರ್–ನವೆಂಬರ್ ಆಸುಪಾಸಿನಲ್ಲಿ ಸಂಡೂರಿನ ಅನೇಕ ರಮಣೀಯ ಚಿತ್ರಗಳನ್ನು ಸೆರೆ ಹಿಡಿದರು. ಸಂಡೂರಿನ ಆರಾಧ್ಯ ದೈವ ಕಾರ್ತಿಕೇಯ ಸ್ವಾಮಿಯ ದೇವಸ್ಥಾನ, ತಾರಾನಗರದ ಅಣೆಕಟ್ಟು, ಸಂಡೂರಿನ ಯಾಣವೆಂದೇ ಪ್ರಸಿದ್ಧವಾದ ಉಬ್ಬಲಗಂಡಿಯ ಬೆಟ್ಟ, ತಾರಾನಗರ ಹತ್ತಿರದ ಬೆಟ್ಟದಲ್ಲಿರುವ ಬತೇರಿ, ದೇವಗಿರಿಯ ಸಂಡೂರು ಮ್ಯಾಂಗನೀಸ್‌ ಆ್ಯಂಡ್ ಐರನ್ ಓರ್ಸ್‌ನ ಗಣಿ, ನರಸಿಂಹಸ್ವಾಮಿ ದೇವಸ್ಥಾನ, ದೇವಸ್ಥಾನದ ಪಕ್ಕದಲ್ಲಿರುವ ಸುಂದರ ಬೆಟ್ಟದ ಸಾಲು, ಹರಿಶಂಕರ, ಭೀಮತೀರ್ಥ, ಶಿವ ವಿಲಾಸ ಆರಮನೆ ಹಾಗೂ ಶಿವಪುರ ಕೆರೆಯ ಸೊಬಗನ್ನು ಸೆರೆ ಹಿಡಿದಿದ್ದಾರೆ. ಬಹಿರ್ಜಿ ಅವರ ಕ್ಯಾಮೆರಾ ಕೈಚಳಕ, ಸಮಯ ಪ್ರಜ್ಞೆ ತಾಳ್ಮೆಯನ್ನೂ ಈ ಚಿತ್ರಗಳು ಢಾಳಾಗಿ ತೋರಿಸುತ್ತವೆ.

ನಾರಿಹಳ್ಳದ ರಮಣೀಯ ನೋಟ
ನಾರಿಹಳ್ಳದ ರಮಣೀಯ ನೋಟ

ಸಂಡೂರು ಹಾಗೂ ಸುತ್ತಮುತ್ತಲಿನ ಊರಿನ ಬಹುತೇಕ ಜನರು ಕೆಲವು ಸ್ಥಳಗಳನ್ನು ನೋಡಿಯೇ ಇಲ್ಲ. ಆ ಸ್ಥಳಗಳ ಬಗ್ಗೆ ಮಾಹಿತಿಯೂ ಇಲ್ಲ. ಅಲ್ಲದೇ ಆ ಸ್ಥಳಗಳಿಗೆ ಹೋಗಲಿಕ್ಕೆ ಸಾಧ್ಯವೂ ಆಗುವುದಿಲ್ಲ. ಉದಾಹರಣೆಗೆ ತಾರಾನಗರ ಡ್ಯಾಂ ಹತ್ತಿರವಿರುವ ಬೆಟ್ಟದ ಮೇಲಿರುವ ಬತೇರಿಯನ್ನು ಬಹುತೇಕ ಜನ ನೋಡಿಲ್ಲ. ಅಂಥ ಸ್ಥಳಗಳ ಪರಿಚಯವನ್ನು ಮಾಡಿಸಿದ್ದಾರೆ ಈ ‘ಮುಕ್ಕಣ್ಣ’.

ದರೋಜಿ ಕರಡಿ ಧಾಮದಲ್ಲಿ ಹೆಚ್ಚು–ಕಡಿಮೆ ಪ್ರತೀ ಕರಡಿಯೂ ಇವರ ಕ್ಯಾಮೆರಾ ಮುಂದೆ ಪೋಸು ನೀಡಿದೆ. ತಾತನಂತೆ ದಿನಗಟ್ಟಲೇ ಬಹಿರ್ಜಿ ಅವರೂ ಈ ಕರಡಿ ಧಾಮದಲ್ಲಿ ಅಪರೂಪದ ದೃಶ್ಯಗಳಿಗಾಗಿ ತಾಳ್ಮೆಯಿಂದ ಕಾದಿದ್ದಾರೆ. ‘ತಾತನ ಕ್ಯಾಮೆರಾ ಕೌಶಲದ ಮುಂದೆ ನನ್ನದೇನು ಮಹಾ’ ಎಂದೆನ್ನುವ ಬಹಿರ್ಜಿ, ಚಿತ್ರ ಸೆರೆ ಹಿಡಿಯುವ ಕಲೆಯಲ್ಲಿ ತಾತನ ಹಾದಿಯಲ್ಲೇ ನಡೆದಿರುವುದಂತೂ ನಿಜ.

ಊಟ ದಕ್ಕಿಸಿಕೊಂಡ ಖುಷಿಯಲ್ಲಿ ಮಿಂಚುಳ್ಳಿ
ಊಟ ದಕ್ಕಿಸಿಕೊಂಡ ಖುಷಿಯಲ್ಲಿ ಮಿಂಚುಳ್ಳಿ
ಅದೇನೋ ನಿರೀಕ್ಷೆಯಲ್ಲಿ ಹಳದಿ ಕತ್ತಿನ ಪಿಕಳಾರ
ಅದೇನೋ ನಿರೀಕ್ಷೆಯಲ್ಲಿ ಹಳದಿ ಕತ್ತಿನ ಪಿಕಳಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT