ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

Published : 11 ಆಗಸ್ಟ್ 2024, 0:22 IST
Last Updated : 11 ಆಗಸ್ಟ್ 2024, 0:22 IST
ಫಾಲೋ ಮಾಡಿ
Comments

ಬಿಸಿಲ ಬೇಗೆಯಲ್ಲಿ ಬಳಲಿದ ಜೀವರಾಶಿ ಮುಂಗಾರು ಮಳೆ ಜಿನುಗುವ ಹೊತ್ತಿಗೆ ಒಮ್ಮೆಲೆ ಜೀವ ತಳೆಯುವುದು ಅದ್ಭುತವೇ ಸರಿ. ಮೋಹಕ ಮುಂಗಾರು ಮಳೆಯಲ್ಲಿ ಕೇರಳದ ವಯನಾಡ್‌ ಸೇರಿದಂತೆ ಹಲವೆಡೆ ಸುತ್ತಾಡಿದ ಹವ್ಯಾಸಿ ಛಾಯಾಗ್ರಾಹಕಿ ಸಬೀನಾ ಎ. ಅವರು ಚಿತ್ರದ ಜೊತೆಗೆ ಕತೆಯನ್ನೂ ತಂದಿದ್ದಾರೆ.

ಮುಂಗಾರು ಎಂಬ ಮನಮೋಹಕ ಮಳೆಯಲ್ಲಿ ಮಿಂದೇಳುವ ಸುಂದರ ಕ್ಷಣಗಳನ್ನು ಸೆರೆ ಹಿಡಿಯುವಲ್ಲಿ ಛಾಯಾಗ್ರಹಣ ಪ್ರಿಯರ ಅತ್ಯುತ್ಸಾಹ, ಶ್ರದ್ಧೆ, ನಿರಂತರ ಪ್ರಯತ್ನ, ಹರಸಾಹಸವೇ ವಿಶಿಷ್ಟ ಅನುಭವ.

ಒಮ್ಮೆ ಜಿಟಿಜಿಟಿ, ಒಮ್ಮೊಮ್ಮೆ ಧಾರಾಕಾರ ಮಳೆ, ಹಚ್ಚ‌ಹಸಿರು, ಮಲೆನಾಡ ಹಳ್ಳಿಯ ಮನೆಗಳ ಹೊಗೆಯಂತೆ ಆವರಿಸುವ ದಟ್ಟ ಮಂಜು, ಶುಭ್ರ ಡಾಂಬರು ರಸ್ತೆಗಳು, ಕಪ್ಪೆಗಳ ಸ್ವಿಮ್ಮಿಂಗ್ ಪೂಲ್ ನಂತೆ ಕಾಣುವ ಕೆಸರು ಹಾದಿಗಳು–ಹೀಗೆ ಇಡೀ ಪ್ರಕೃತಿಯೇ ಉತ್ಸವ ಆಚರಿಸುವಂತೆ ಮಳೆ ಚೈತನ್ಯ ತುಂಬಿಸುತ್ತದೆ. ಈ ಸಂಭ್ರಮವನ್ನು ಸೆರೆ ಹಿಡಿಯಲು ಚಾತಕಪಕ್ಷಿಯಂತೆ ಕಾಯುವ ಮೊದಲ ಅತಿಥಿಗಳೇ ಛಾಯಾಗ್ರಾಹಕರೇನೋ...

ಭೂಮಿಗೆ ಮಳೆ ಹನಿ ಬಿದ್ದಾಗ ಬಿಸಿ ಬಿಸಿ ಕಟ್ಟಂ ಚಾಯ್‌ ಸಾಥ್‌ ಕೊಟ್ಟರೆ ಮಜಾ...
ಭೂಮಿಗೆ ಮಳೆ ಹನಿ ಬಿದ್ದಾಗ ಬಿಸಿ ಬಿಸಿ ಕಟ್ಟಂ ಚಾಯ್‌ ಸಾಥ್‌ ಕೊಟ್ಟರೆ ಮಜಾ...

ತನ್ನನ್ನು ಸೆರೆಹಿಡಿಯುವಂತೆ ನಮ್ಮ ಮೇಲೆ ಬೀಳಲು ಪ್ರಯತ್ನಿಸಿ, ಗಾಜಿನಿಂದ ಇಣುಕುವ ಮಳೆಹನಿಗಳು, ಈ ಹನಿಗಳನ್ನು ಅಲಂಕರಿಸುವ ಬಣ್ಣಬಣ್ಣದ ದೀಪಗಳ ಬೆಳಕು, ಅವುಗಳನ್ನು ಕಿಟಕಿ ಒಳಗಿನಿಂದ ಸವರುವ ಕೈಗಳು ಪ್ರೇಮಕಥೆಯಂತೆ ಅನುಭೂತಿ. ಮಳೆ ಎಂದರೆ ಪ್ರೀತಿ, ಮಳೆ ಎಂದರೆ ಬದುಕು, ಮಳೆಯೆಂದರೆ ಜೀವನೋತ್ಸಾಹ. ಈ ಜೀವನೋತ್ಸಾಹದೆಡೆ ಸಾಗಲು ಇರುವ ಸೇತುವೆಯೇ ಛಾಯಾಗ್ರಹಣ...

ಒಂದು ಫ್ರೇಮ್‌ ಒಳಗೆ ಚಿತ್ರಣ ಕಟ್ಟಿಕೊಡುವ ಸಲುವಾಗಿ ಕೆಲವೊಮ್ಮೆ ಮಳೆಯಲ್ಲಿ ಒದ್ದೆಮುದ್ದೆಯಾಗಿ, ಚಳಿಯಲ್ಲಿ ನಡುಗುತ್ತ, ಜಡಿಮಳೆಯಿಂದ ರಕ್ಷಣೆ ಮಾಡಿಕೊಳ್ಳುತ್ತ, ವಿಭಿನ್ನ ಭಂಗಿಯಲ್ಲಿ ಕ್ಯಾಮೆರಾ ಹಿಡಿದು ಕಾಯುವಿಕೆ, ಕೆಸರುಮಯ ಬಟ್ಟೆ, ಕುತೂಹಲದ ಇಂದ್ರಿಯಗಳು...ಅಬ್ಬಬ್ಬಾ ಇದೊಂದು ತಪಸ್ಸೇ ಸರಿ!.

ಮಳೆ ಹನಿಗಳ ಮೋಹದಲ್ಲಿ ಚಿಟ್ಟೆ
ಮಳೆ ಹನಿಗಳ ಮೋಹದಲ್ಲಿ ಚಿಟ್ಟೆ

ಜನಜಂಗುಳಿ ಪ್ರದೇಶಗಳಲ್ಲಿ, ವರ್ಣರಂಜಿತ ಬೆಳಕಿನಲ್ಲಿ ಮಳೆಯ ನಡುವೆ ಚಿತ್ರ ಕ್ಲಿಕ್ಕಿಸುವುದೆಂದರೆ ದೊಡ್ಡ ಸಂಭ್ರಮ. ಯಾವ ಗೊಡವೆಯೂ ಇಲ್ಲದೇ ಕ್ಯಾಮೆರಾ ಹಿಡಿದು ರಸ್ತೆಗಿಳಿದಾಗ ಅಪರಿಚಿತರೂ ಕುತೂಹಲದ ನಗೆಬೀರುವುದು ಕ್ಯಾಮೆರಾದ ಬಗ್ಗೆ ಮತ್ತಷ್ಟು ಆಪ್ತತೆ ಹೆಚ್ಚಿಸುತ್ತದೆ.

ಮಳೆಹನಿ ಬೀಳುವ ಪ್ರತಿ ಜಾಗವೂ ಕಲಾಕೃತಿಯೇ. ಮಳೆಹನಿಗಳು ತಾವು ಬಿದ್ದಲ್ಲೆಲ್ಲ ಪೋಸ್ ಕೊಡುವಂತೆ ಭಾಸವಾಗುತ್ತದೆ. ಆ ಹನಿಗಳಲ್ಲೂ ಕತೆ ಮೂಡಿಸುವ ಕ್ಷಣವನ್ನು ಸೆರೆ ಹಿಡಿಯುವ ಪ್ರಯತ್ನ ನಿರಂತರವಾದುದು. ಕೆಲವು ಚಿತ್ರಗಳು ರಾತ್ರಿಯಿಡೀ ನಿದ್ದೆಗೆಡಿಸುತ್ತವೆ, ಕೆಲವು ಕಾಡುತ್ತವೆ. ಈ ಚಿತ್ರಣದ ಹುಡುಕಾಟದ ಪಯಣದಲ್ಲಿ ಹಬೆಯಾಡುವ ಬಿಸಿ ಬಿಸಿ ಟೀ ಸಾಥ್ ನೀಡಿದರೆ ಇದೋ ಇನ್ನಷ್ಟು ಫ್ರೇಮುಗಳನ್ನು ಜತನದಿಂದ ಸೆರೆ ಹಿಡಿಯಲು ಅಣಿಯಾಗಬಹುದು..!

ಮಳೆ ಹನಿ ಪೋಣಿಸಿದ ಮುತ್ತಿನ ಮಾಲೆ
ಮಳೆ ಹನಿ ಪೋಣಿಸಿದ ಮುತ್ತಿನ ಮಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT