ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಹಾಸನದ ‘ಮುಗಿಲ್‌ಪೇಟೆ’!

Last Updated 21 ಜನವರಿ 2023, 21:45 IST
ಅಕ್ಷರ ಗಾತ್ರ

ಹಾಸನ ಜಿಲ್ಲೆ ಐತಿಹಾಸಿಕ ಸ್ಮಾರಕಗಳ ತವರೂರು. ಶಿಲ್ಪಕಲೆಯಿಂದ ವಿಶ್ವವಿಖ್ಯಾತಿ ಪಡೆದಿರುವ ಜಿಲ್ಲೆಯು ಪ್ರವಾಸಿಗರ ಪ್ರಮುಖ ಆಕರ್ಷಣೆ. ಜಿಲ್ಲೆಯ ಮಲೆನಾಡು ಭಾಗ ಪ್ರಕೃತಿ ಸೌಂದರ್ಯದ ಸೊಬಗಿನಿಂದ ಎಲ್ಲರನ್ನೂ ಸೆಳೆಯುತ್ತಿದೆ. ಅದರಲ್ಲೂ ಸಕಲೇಶಪುರ ತಾಲ್ಲೂಕು ಪ್ರಕೃತಿ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದೆ. ಪ್ರತಿವಾರ ಸಾವಿರಾರು ಪ್ರವಾಸಿಗರು ಈ ಭಾಗಕ್ಕೆ ಬರುತ್ತಿದ್ದು, ಇಂತಹ ಪ್ರವಾಸಿಗರನ್ನು ಸಳೆಯುತ್ತಿರುವ ತಾಣಗಳಲ್ಲಿ ಉಚ್ಚಂಗಿ ಗವಿ ಬೆಟ್ಟ ಕೂಡ ಒಂದಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಚ್ಚಂಗಿ ಗವಿಬೆಟ್ಟ, ಅದ್ಭುತ ಪ್ರಕೃತಿ ರಮಣೀಯ ತಾಣ. ಚಾರಣಿಗರಿಗೂ ಅತ್ಯಂತ ಪ್ರಿಯವಾಗಬಲ್ಲ ಪ್ರದೇಶ. ಒಂದರ ಮೇಲೊಂದರಂತೆ ಜೋಡಿಸಿಟ್ಟ ಬೃಹತ್ ಗಾತ್ರದ ಬಂಡೆಗಳು, ಗವಿಗಳು, ಹಸಿರು ಬೆಟ್ಟ ಸಿರಿ, ದಟ್ಟ ಅರಣ್ಯ ಮತ್ತು ವಿಶಾಲವಾದ ಮೈದಾನ ಇಲ್ಲಿನ ಪ್ರಮುಖ ಆಕರ್ಷಣೆಗಳು. ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಜಾಗವಿದು.

ಮುಖ್ಯ ರಸ್ತೆಯಿಂದ 3–4 ಕಿ.ಮೀ ದೂರದಲ್ಲಿದೆ, ಆದರೆ ರಸ್ತೆ ಅಷ್ಟೇನೂ ಚೆನ್ನಾಗಿಲ್ಲ. ಕೇವಲ ಬೈಕ್ ಅಥವಾ ಜೀಪುಗಳ ಮೂಲಕ ಇಲ್ಲಿ ತಲುಪಬಹುದಾಗಿದ್ದು, ಹೀಗಾಗಿಯೇ ಇರಬಹುದು ಈವರೆಗೆ ಇಲ್ಲಿಗೆ ಹೆಚ್ಚು ಜನರು ಭೇಟಿ ನೀಡಿಲ್ಲ. ಆದರೆ ಈಗ ಸ್ಥಳೀಯವಾಗಿ ಖಾಸಗಿ ಜೀಪುಗಳು ಪ್ರವಾಸಿಗರನ್ನು ಕರೆದೊಯ್ಯುಲು ಲಭ್ಯವಿದ್ದು, ಸಣ್ಣ ತಂಡಗಳು ಹೋಗಿ, ದಿನ ಕಳೆದು ಬರಬಹುದಾಗಿದೆ.

ಗವಿ ಬೆಟ್ಟಕ್ಕೆ ಸೇರಿದ ಜಮೀನು ಹುಲಗತ್ತೂರು ಗ್ರಾಮಕ್ಕೆ ಸೇರುತ್ತದೆ. ಹಿಂದೆ ಇಲ್ಲಿ ಉಚ್ಚ ಶೃಂಗ ಎಂಬ ಮುನಿ ತಪಸ್ಸು ಮಾಡುತ್ತಿದ್ದ ಕಾರಣ ಈ ಊರಿಗೆ ಉಚ್ಚಂಗಿ ಎಂಬ ಹೆಸರು ಬಂತೆಂಬುದು ಇಲ್ಲಿನ ಜನರ ನಂಬಿಕೆ. ಗವಿ ಬೆಟ್ಟ ಎಂದೇ ಖ್ಯಾತಿಯಾಗಿರುವ ಈ ಬೆಟ್ಟವನ್ನು ಸ್ಥಳೀಯರು, ಉಚ್ಚಂಗಿ ಬೆಟ್ಟ, ಹುಲಗತ್ತೂರು ಬೆಟ್ಟ, ಹೇರೂರು ಬೆಟ್ಟ ಮತ್ತಿತರ ಹೆಸರುಗಳಿಂದಲೂ ಕರೆಯುತ್ತಾರೆ. ಈ ಎಲ್ಲ ಊರುಗಳಲ್ಲೂ ಬೆಟ್ಟ ಹರಡಿಕೊಂಡಿರುವುದರಿಂದ ಸುಲಭವಾಗಿ ಗುರುತಿಸಲು ಹಾಗೂ ತಮ್ಮೂರಿನೊಂದಿಗಿನ ನಂಟು ಜೋಡಿಸಿಕೊಳ್ಳಲು ಹೀಗೆ ಕರೆಯುತ್ತಾರೆ.

ಬೆಟ್ಟದ ಸಮೀಪದ ನಾಗನಹಳ್ಳಿವರೆಗೂ ಅತ್ಯುತ್ತಮವಾದ ರಸ್ತೆಯಿದೆ. ಕಡೆಯ 3–4 ಕಿ.ಮೀ. ರಸ್ತೆ ಇನ್ನಷ್ಟು ಅಭಿವೃದ್ಧಿ ಕಾಣಬೇಕಾಗಿದೆ. ಬೈಕ್‍ಗಳಾದರೆ ಹಾದಿ ಸಲೀಸು, ನಡೆದೂ ತಲುಪಬಹುದಾದ ಮಾರ್ಗವಾಗಿದೆ. ಒಡಳ್ಳಿ ಗ್ರಾಮದ ಮೂಲಕವೂ ಇಲ್ಲಿಗೆ ಪ್ರವಾಸಿಗರು ಬರುತ್ತಿದ್ದು, ಅಲ್ಲಿಯೂ ದುರ್ಗಮ ಹಾದಿಯೇ ಇದೆ.

ಬೃಹತ್ ಬಂಡೆಗಳ ಸಾಲಿನಲ್ಲಿ ಹಲವು ಸಣ್ಣ– ದೊಡ್ಡ ಗುಹೆಗಳು, ಗವಿಗಳು ಇವೆ. ಇಂತಹದೊಂದು ದೊಡ್ಡ ಗವಿಯಲ್ಲಿ ನೆಲೆಸಿದ್ದಾನೆ ಆ ಗವಿರುದ್ರೇಶ್ವರ. ಇದೇ ಕಾರಣದಿಂದ ಬೆಟ್ಟಕ್ಕೆ ಗವಿಬೆಟ್ಟ ಎಂದೂ ಹೆಸರು ಬಂದಿದೆ. ಹಿಂದೆ ಅನೇಕ ಖುಷಿ ಮುನಿಗಳು ಇಲ್ಲಿ ನೆಲೆಸಿ ತಪಸ್ಸು ಮಾಡಿದ್ದಾರೆ ಎಂಬ ಪ್ರತೀತಿ ಇದೆ.

ಜೀಪು ಅಥವಾ ದ್ವಿಚಕ್ರ ವಾಹನ ಅಥವಾ ಚಾರಣದ ಮೂಲಕ ಬೆಟ್ಟದ ಮೇಲ್ಭಾಗಕ್ಕೆ ಬಂದರೆ ಅಲ್ಲೇ ಪಕ್ಕದಲ್ಲಿ ಗವಿರುದ್ರೇಶ್ವರ ಜಾಗಕ್ಕೆ ತೆರಳುವ ಹೆಬ್ಬಾಗಿಲು ಸಿಗಲಿದೆ. ಅಲ್ಲಿ ಕಡಿದಾದ ಕಾಲುಹಾದಿಯಲ್ಲಿ ಸಾಗಿದರೆ ಬೃಹತ್ ಬಂಡೆಗಳು ಎದುರಾಗುತ್ತವೆ. ಬಾಗಿ ಮುಂದೆ ಹೋದರೆ ತೆವಳಿಕೊಂಡು ಸಾಗಬಹುದಾದ ಸಣ್ಣ ಕಿಂಡಿಯಂತಹ ಜಾಗ ಸಿಗುತ್ತದೆ. ಅದನ್ನು ಅಂಬೆಗಾಲಿನಲ್ಲಿ ದಾಟಿದರೆ, ಮತ್ತೆ ಮುಂದೆ ಕಲ್ಲು ಬಂಡೆಗಳ ನಡುವೆ ಗುಹೆಯಂತಹ ಹಾದಿ ಸಿಗುತ್ತದೆ. ಬಹುತೇಕ ಕತ್ತಲು ಅವರಿಸಿರುವ ಈ ಮಾರ್ಗದಲ್ಲಿ ಮುಂದೆ ನಡೆದರೆ ಗುಹೆಯಂತಹ ಜಾಗದಲ್ಲಿ ಪೂಜೆಗೆ ನೇತು ಹಾಕಿರುವ ಒಂದೆರೆಡು ಗಂಟೆಗಳು ಕಾಣಿಸುತ್ತವೆ. ಅಲ್ಲೇ ಮುಂಭಾಗ ಅತ್ಯಂತ ಕಿರಿದಾದ ಗುಹೆಯಲ್ಲಿ ಗವಿರುದ್ರೇಶ್ವರ ಗುಡಿ ಇದೆ. ಇಲ್ಲಿ ಪ್ರತಿವರ್ಷ ಸುತ್ತಮುತ್ತಲ ಊರಿನ ಜನರಿಂದ ಪ್ರತ್ಯೇಕ ಪೂಜೆ ನಡೆಯುತ್ತದೆ.

ಪ್ರತಿವರ್ಷ ಕಾರ್ತಿಕ ಪೂಜೆಯ ದಿನ ಸಂಜೆ ನಂತರ ಈ ಬೆಟ್ಟದ ಮೇಲೆ ಊರಿನ ಜನರಿಂದ ದೀಪೋತ್ಸವ ನಡೆಯುತ್ತದೆ, ಅದು ಸುತ್ತೂರಿನ ದೂರದವರೆಗೂ ಕಾಣುತ್ತದೆ, ಜನರು ಅಲ್ಲಿಂದಲ್ಲೇ ಭಕ್ತಿಯಿಂದ ಕೈಮುಗಿಯುತ್ತಾರೆ.

ಸ್ಥಳೀಯ ಓಡಳ್ಳಿ ಗ್ರಾಮದ ಸತೀಶ್, ಮತ್ತಿತರರು ಆಸಕ್ತ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೀಪ್‍ಗಳ ನೆರವನ್ನು ಒದಗಿಸುತ್ತಿದ್ದಾರೆ. ಅದಷ್ಟು ಶೀಘ್ರ ಇಲ್ಲಿಗೊಂದು ಉತ್ತಮ ರಸ್ತೆ ಸಂಪರ್ಕ ಹಾಗೂ ಪ್ರವಾಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸ್ಥಳೀಯರ ಅಭಿಪ್ರಾಯ. ಬರುವ ಪ್ರವಾಸಿಗರು ಇಲ್ಲಿನ ಸೊಬಗನ್ನು ಸವಿದು ಪರಿಸರಕ್ಕೆ ಯಾವು ಹಾನಿ ಮಾಡದೇ ತೆರಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಮನವಿ ಮಾಡುತ್ತಾರೆ.

ಅಕ್ಕ ಪಕ್ಕದ ಗ್ರಾಮಗಳ ಪ್ರಮುಖರು ಸೇರಿ ಗವಿಶ್ರೀ ರುದ್ರಗಿರಿ ಅಭಿವೃದ್ದಿ ಟ್ರಸ್ಟ್ ರಚಿಸಿಕೊಂಡಿದ್ದು, ಬೆಟ್ಟವನ್ನು ಪ್ರವಾಸಿಗರ ತಾಣವಾಗಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಸ್ತೆ ಹಾಗೂ ಕನಿಷ್ಠ ಮುಲಸೌಕರ್ಯ ಒದಗಿಸುವಂತೆ ಸಮಿತಿಯ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಪುಟ್ಟೇಗೌಡ, ಕೆ.ಸಿ ಕಿಸನ್, ಮಲ್ಲೇಶ್ ಬಿ.ಸಿ, ತಿಮ್ಮೇಗೌಡ, ಜೋಯಪ್ಪ, ಜಗದೀಶ್, ವಕೀಲ ಆನಂದಕುಮಾರ್‌, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಕ್ಕನಹಳ್ಳಿ ನಾಗರಾಜು ಮತ್ತಿತರರು ಮನವಿ ಮಾಡುತ್ತಾರೆ. ಜೊತೆಗೆ ಸ್ಥಳೀಯ ಜನರನ್ನು ಒಗ್ಗೂಡಿಸಿ, ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಇತರರು ಕೈ ಜೋಡಿಸಿದರೆ ಗವಿ ಬೆಟ್ಟ ಮುಂದೊಂದು ದಿನ ರಾಜ್ಯದ ಪ್ರಮುಖ ಜನಾಕರ್ಷಣೆ ತಾಣ ಆಗುವುದರಲ್ಲಿ ಅನುಮಾನವಿಲ್ಲ.

ಗಮನ ಸೆಳೆಯುವ ಸಿಂಬಿ ಗಲ್ಲು

‘ಸಿಂಬಿ’ ಎಂದರೆ ಭಾರವಾದ ವಸ್ತುವನ್ನು ಸಮತೋಲನವಾಗಿ ಇರಿಸಿಕೊಳ್ಳಲು ಇರುವ ಒತ್ತು. ತಲೆ ಮೇಲೆ ನೀರು ಹೊರಲು ಬಿಂದಿಗೆ ಮತ್ತು ತಲೆಯ ನಡುವೆ ಇಡುವಂತಹ ಮೆತ್ತನೆ ಬಟ್ಟೆಯ ವೃತ್ತ ಅಥವಾ ಅಂತಹದೇ ವಸ್ತುವನ್ನು ಸಿಂಬಿ ಎಂದು ಕರೆಯುವುದನ್ನು ಗಮನಿಸಿದ್ದೇವೆ. ಹೀಗೆ ಒಂದರ ಮೇಲೊಂದರಂತೆ ಐದು ಕಲ್ಲುಗಳು ಸಮತೋಲನದಲ್ಲಿ ಇರುವ ಕಂಬದಂತಹ ಆಕೃತಿ ಈ ಬೆಟ್ಟದಲ್ಲಿದೆ. ಅದಕ್ಕೆ ‘ಸಿಂಬಿಗಲ್ಲು’ ಎಂದು ಸ್ಥಳೀಯರು ಕರೆಯುತ್ತಾರೆ. ಸಣ್ಣ ಕಲ್ಲಿನ ಮೇಲೆ ಬೃಹತ್ ಗಾತ್ರದ ಬಂಡೆಗಳೂ ನಿಂತಿವೆ. ಶತಶತಮಾನ ಕಳೆದರೂ, ಬಿರುಗಾಳಿ, ಮಳೆ ಭೋರ್ಗರೆದರೂ ಒಂದಿಷ್ಟೂ ಅಲುಗಾಡದೇ ಹಾಗೇ ತಟಸ್ಥವಾಗಿದೆ ಈ ಸಿಂಬಿಗಲ್ಲು. ಇದಕ್ಕೆ ಹೊಂದಿಕೊಂಡಿರುವ ಭಾರಿ ಗಾತ್ರದ ಬಂಡೆಗಳ ಸಾಲುಗಳ ರಾಶಿಯೂ ನಯನ ಮನೋಹರವಾಗಿವೆ.

ಭೂದೃಶ್ಯ ವೀಕ್ಷಣೆ: ಗವಿ ಬೆಟ್ಟದ ಪಕ್ಕದಲ್ಲಿ ಇರುವ ಮತ್ತೊಂದು ಹಾಸುಗಲ್ಲಿನ ಬೆಟ್ಟ, ಸುತ್ತಮುತ್ತಲ ಭೂದೃಶ್ಯಗಳ ವೀಕ್ಷಣೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಕೊಡಗು ಜಿಲ್ಲೆ ಹಾಗೂ ಸಕಲೇಶಪುರ ತಾಲ್ಲೂಕಿನ ಎರಡೂ ಭಾಗಗಳ ಪ್ರಕೃತಿ ಸೌಂದರ್ಯವನ್ನು ಇಲ್ಲಿ ಕುಳಿತು ಸವಿಯಬಹುದು. ಇದೂ ಕೂಡ ಪ್ರವಾಸಿ ಆಕರ್ಷಣೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT