ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡ ಬನ್ನಿ, ಮಂಜಿನ ಕಾವ್ಯಧಾರೆ...

Last Updated 12 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಮರಗಳ ಎಲೆ ತುದಿಯಿಂದ ತೊಟ್ಟಿಕ್ಕುತ್ತಿರುವ ಮಂಜಿನ ಹನಿಗಳು. ರಸ್ತೆಗಳು, ಬೆಟ್ಟಗುಡ್ಡಗಳಿಗೆ ಮಂಜಿನ ಹೊದಿಕೆ. ಹಿಮದ ಕವಳ ನಿಸರ್ಗದ ಸೊಬಗಿನಿಂದ ಪ್ರಕೃತಿಯ ನೆಲೆವೀಡು ಕಾಫಿಯ ನಾಡು ಚಿಕ್ಕಮಗಳೂರಿನಲ್ಲಿ ಈಗ ಚಳಿಯ ಸಂಭ್ರಮ ಆರಂಭ. ಮನೆಯಲ್ಲಿ ಕುಳಿತರೂ ಚಳಿ, ಹೊರ ಬಂದರೂ ಚಳಿ. ಆದರೂ ಮೈ-ಮನಗಳಿಗೆ ಏನೋ ಹಿತ...!

ಜಿಲ್ಲೆಯ ಪ್ರವಾಸಿತಾಣಗಳಾದ ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕೆಮ್ಮಣ್ಣಗುಂಡಿ, ಚಾರ್ಮಾಡಿ ಘಾಟ್, ತುಂಗ-ಭದ್ರಾ ನದಿ ಪಾತ್ರಗಳಲ್ಲಿ ಈಗ ನವ ಚೈತನ್ಯ. ಶ್ವೇತ ಬಣ್ಣದ ಹೊನಲು, ಸಂಜೆಯ ಸೊಬಗಿನ ಸೂರ್ಯ ರಶ್ಮಿ ನೋಡುವುದೇ ಅಂದ. ಭಾಷೆ, ಅಕ್ಷರಗಳಿಗೆ ನಿಲುಕದ ಸೌಂದರ್ಯ, ವರ್ಣನೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಲೇಬೇಕು, ಇನ್ನಷ್ಟು ಸಮಯ ಇಲ್ಲೇ ಇರಬೇಕು ಎನ್ನುವ ಚಿತ್ತಾರ.

ಹೊತ್ತು ಸರಿದರೂ ಕೆಲವೆಡೆ ಸೂರ್ಯ ಕಾಣುವುದೇ ಇಲ್ಲ. ಮಲೆನಾಡಿನ ದಾರಿಗಳಲ್ಲಿ ಬೆಳ್ಳಂಬೆಳಗಿನ ಪಯಣ ಒಂದು ಸಂಭ್ರಮ. ಹೊಸ ಅನುಭವ. ವಾಹನ ಚಾಲಕರಿಗೆ ಕಡಿದಾದ ಹಾದಿಗಳು ಸವಾಲು ಎಸೆಯುತ್ತವೆ.

ಕಾಫಿಯ ಕಣಿವೆ, ನದಿ ತೀರ, ಭತ್ತದ ಕಣಜ, ಕಾನನದ ಹಾದಿಯ ಮಧ್ಯೆ ಆವರಿಸಿರುವ ಮಂಜಿನ ಕವಳ ಕಾವ್ಯಧಾರೆಗೆ ಸ್ಪೂರ್ತಿ. ಛಾಯಾಗ್ರಾಹಕರಿಗೆ ಸುಗ್ಗಿ. ಮರಗಿಡಗಳೆಲ್ಲ ಮಂಜಿನಲ್ಲಿ ತೋಯ್ದು ತೊಪ್ಪೆಯಗಿರುತ್ತವೆ. ಚಳಿಯಿಂದ ತಪ್ಪಿಸಿಕೊಳ್ಳಲು ಜನ ಬೆಚ್ಚನೆಯ ಉಡುಪಿಗೆ ಮೊರೆ ಹೋಗುತ್ತಾರೆ. ಮಲೆನಾಡಿನ ಹಾದಿಗಳಲ್ಲಿ ಸಾಗುತ್ತಿದ್ದಾಗ ರಸ್ತೆಯ ಅಂಚುಗಳಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುವವರು ಕಾಣುತ್ತಾರೆ. ಆದರೆ, ಮಂಜಿನ ನಡುವೆ ಪಯಣಿಸುವವರಿಗೆ ಇದ್ಯಾವುದರ ಪರಿವೆಯೂ ಇರದು. ಆಗ ಎದುರಿಗಿರುವುದು ಬರೀ ಮಂಜು... ಮಂಜು.. ಮಂಜು...

ಈಗಲೇ ಬರಬೇಕು ಬಾಬಾಬುಡನ್‌ಗಿರಿಗೆ..

ಹಿಂದೂ ಮುಸ್ಲಿಮರ ಭಾವೈಕ್ಯ ಕೇಂದ್ರ, ಸೂಫಿ ಸಂತರ ತಪೋಭೂಮಿ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಗೆ ಈ ಕಾಲದಲ್ಲೇ ಬರಬೇಕು. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಬಿಸಿಲು. ಗಿರಿಶ್ರೇಣಿಯ ಹಾದಿಯತ್ತ ಸಾಗಿ ಕೈಮರ ದಾಟುತ್ತಿದ್ದಂತೆ ಹವಾಮಾನದಲ್ಲಿ ಏರುಪೇರು. ಇಂಥ ವಿಭಿನ್ನ ಹವಾಮಾನ ಅನುಭವಿಸುವುದೇ ಒಂದು ಸುಖ.

ಇಕ್ಕೆಲಗಳಲ್ಲಿನ ಕಾಫಿತೋಟಗಳ ನಡುವೆ ಅಂಕುಡೊಂಕಿನ ಕಣಿವೆ ದಾರಿ. ಅದರಲ್ಲಿ ಸಾಗುತ್ತಿದ್ದರೆ, ಒಂದೆಡೆ ಅಜಾನುಬಾಹು ಬೆಟ್ಟಗುಡ್ಡ- ಕಲ್ಲುಬಂಡೆಗಳ ಸಾಲು. ಇನ್ನೊಂದೆಡೆ ಜಿಲ್ಲಾ ಕೇಂದ್ರದ ರಮ್ಯ ನೋಟ. ಅನತಿ ದೂರದಲ್ಲಿ ಕವಿಕಲ್ಗಂಡಿಗೂ ಮೊದಲೇ ಸಿಗುವ ‘ಯು’ ಟರ್ನ್ ಬಳಿಯಿಂದ ಎಲ್ಲಾ ಉಲ್ಟಾಪಲ್ಟಾ. ರಸ್ತೆ ಕಾಣದಷ್ಟು ದಟ್ಟ ಮಂಜು. ಕ್ಷಣ ಮಾತ್ರದಲ್ಲಿ ಭಾರಿ ಬದಲಾವಣೆ. ಸುತ್ತಲಿನ ಪ್ರಕೃತಿ ಕಾಣದಷ್ಟು ಮೇಘರಾಶಿ.

ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕಣಿವೆ ಪೂರ್ತಿ ಮಂಜಿನ ಮಳೆ. ಅಬ್ಬರಿಸುತ್ತಾ ಬೊಬ್ಬಿಡುವ ಸುಯ್ ಎನ್ನುವ ಬೀಸುವ ತಣ್ಣನೆ ಗಾಳಿ. ಹಸಿರ ಚಾದರಕ್ಕೆ ಮಂಜಿನ ಹೊದಿಕೆ. ಅಲ್ಲಲ್ಲಿ ಬಿಂಕದಿಂದ ಬೀಗುವ ಹೂವುಗಳು. ಗಾಳಿಗೆ ತೊನೆದಾಡುವ ಗಿಡಗಳು, ಹುಲ್ಲಿನ ಹಾಸು. ಝಳು-ಝುಳು ಹರಿವ ನೀರಿನ ಸೆಲೆಗಳು. ದಾರಿ ಮಧ್ಯೆ ಸಿಗುವ ಮೈದುಂಬಿ ನಿಂತ ಹೊನ್ನಮ್ಮನಹಳ್ಳ. ಗಾಳಿಯ ವೇಗಕ್ಕೆ ಅನುಗುಣವಾಗಿ ಆಗೊಮ್ಮೆ-ಈಗೊಮ್ಮೆ ತೆಳು ಹಸಿರ ಬೆಟ್ಟಗಳ ದರ್ಶನ. ಇಷ್ಟೆಲ್ಲ ದಾಟಿ, ಬಾಬಾಬುಡನ್‌ಗಿರಿ ತಲುಪುತ್ತಿದ್ದಂತೆ ಮತ್ತಷ್ಟು ಕತ್ತಲು. ಕಣ್ಣು ಹಾಯಿಸಿದರೆ, ಬಿಳಿ ಪರದೆಯಂತೆ ಹರಡಿಕೊಳ್ಳುವ ಮಂಜಿನ ಚಾದರ. ಮಳೆ ಇಲ್ಲದಿದ್ದರೂ ಮೈ-ಮನ ನೆನೆಯುತ್ತದೆ. ಗಡಗಡ ನಡುಗುತ್ತದೆ. ಮಾಣಿಕ್ಯಧಾರದಲ್ಲೂ ಇದೇ ಸ್ಥಿತಿ. ಈ ತಣ್ಣನೆ ಪ್ರವಾಸಕ್ಕೆ ಬಾಬಾಬುಡನ್‌ಗಿರಿ, ಅತ್ತಿಗುಂಡಿಯಲ್ಲಿ ಸಿಗುವ ಬಿಸಿ ಬಿಸಿ ಕಾಫಿ- ಚಹಾ, ಖಾರದ ಮೆಣಸಿನ ಬೊಂಡಾ ಕೊಂಚ ಶಾಖ ಕೊಡುತ್ತವೆ. ಮನ ಮುದಗೊಳ್ಳುತ್ತದೆ.

ಮಂಜಲ್ಲಿ ಮುಳ್ಳಯ್ಯನಗಿರಿ....

ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು. ಒಟ್ಟಿನಲ್ಲಿ ಕಣ್ತುಂಬ ಚೆಲುವು. ಗುಂಡಿ ಗೊಟರುಗಳಿಲ್ಲದ ಸುಗಮ ಹಾದಿ. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಕಣ್ಣು ಕುಕ್ಕುವ ಸೌಂದರ್ಯ. ಈ ಬೆಟ್ಟವೇ ಹೀಗೆ. ಪ್ರತಿ ಋತುವಿನಲ್ಲೂ ಭಿನ್ನ-ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಗಿ ನಿಲ್ಲುತ್ತದೆ.

ಮುಳ್ಳಯ್ಯನಗಿರಿಗೆ ಯಾವಾಗ ಬಂದರೂ ನಿರಾಸೆಯಾಗುವುದಿಲ್ಲ. ಮುಂಗಾರಿನಲ್ಲಿ ಇನ್ನೂ ಅದ್ಭುತ ಅನುಭವ ನೀಡುತ್ತದೆ. ಬೆಟ್ಟದ ಸಾಲಿನಲ್ಲೂ ಬಿಸಿಲಿರುತ್ತದೆ ಎಂದು ಕೊಂಡು ಹೋದರೆ ಎಲ್ಲಾ ಉಲ್ಟಾ- ಪಲ್ಟಾ!.

ಶಿಖರದ ಬುಡಕ್ಕೆ ಬಂದೊಡನೆ ಟೋಪಿ, ಶಾಲು, ಸ್ವಟರ್ ಹೀಗೆ ಎಲ್ಲ ರೀತಿಯ ಬೆಚ್ಚನೆ ಉಡುಪುಗಳ ನೆನಪಾಗುತ್ತವೆ. ಇಲ್ಲದಲ್ಲಿ ಸುಖದ ಜೊತೆ ಕಷ್ಟವನ್ನೂ ಅನುಭವಿಸಬೇಕು. ಕಿವಿಗಳು ಗಾಳಿಯಿಂದ ತುಂಬಿಕೊಳ್ಳುತ್ತವೆ. ಚಳಿ ಮೈನಡುಗಿಸುತ್ತದೆ. ಮಂಜು ತೋಯ್ದು ತೊಪ್ಪೆ ಮಡುತ್ತದೆ. ಬೆಚ್ಚನೆ ಉಡುಪು ಇದ್ದವರು ಹೊದ್ದು ಕೊಂಡು ರಕ್ಷಣೆ ಪಡೆದರೆ ಇಲ್ಲದವರು ‘ಅಯ್ಯೋ, ನಾವೂ ತರಬೇಕಿತ್ತು’ ಎಂದು ಕೊಳ್ಳುತ್ತಾರೆ. ಅದೂ ಒಂಥರಾ ಖುಷಿಯ ಕ್ಷಣ.

ಕಷ್ಟಪಟ್ಟು ನೂರಾರು ಮೆಟ್ಟಿಲು ಏರಿದರೂ ಸೆಕೆ ಎನ್ನುವುದಿಲ್ಲ. ಬಿರುಗಾಳಿಗೆ ಮೈಕೊರೆಯುವ ಛಳಿ, ಕೂಲ್-ಕೂಲ್. ಎತ್ತ ನೋಡಿದರೂ ಒಂದೇ ದೃಶ್ಯ. ಎಲ್ಲವೂ ಶ್ವೇತ ಮಯ. ಆಕಾಶ -ಭೂಮಿಗಳ ಒಂದುಮಾಡಿದಂತೆ ನಿಂತಂತಿರುತ್ತದೆ ಮಂಜು-ಗಾಳಿಯ ಜುಗಲ್‌ಬಂದಿ.

ಹಾಗೆಂದು ಮುಳ್ಳಯನಗಿರಿ ಮುಂಗಾರಿನಲ್ಲಿ ಮಾತ್ರ ಚೆಲುವನ್ನು ಹೊದ್ದು ನಿಂತಿರುವುದಿಲ್ಲ. ಎಲ್ಲಾ ಋತುಗಳಲ್ಲೂ ಅದು ಸಂಭ್ರಮಿಸುತ್ತಿರುತ್ತದೆ...!

**

ಹೋಗುವುದು ಹೇಗೆ?

ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಿಂದ ಚಿಕ್ಕಮಗಳೂರಿಗೆ ಸರ್ಕಾರಿ ಬಸ್‌ಗಳಿವೆ. ಉತ್ತರ ಕರ್ನಾಟಕದಿಂದ ಧರ್ಮಸ್ಥಳಕ್ಕೆ ಹೋಗುವ ಎಲ್ಲ ಬಸ್‌ಗಳೂ ಈ ನಗರವನ್ನು ಹಾದು ಹೋಗುತ್ತವೆ. ಬೆಂಗಳೂರಿನಿಂದ ಐದೂವರೆ ಗಂಟೆ ಪಯಣ. ವಿಮಾನ ಸೌಲಭ್ಯ ಇಲ್ಲ. ಹುಬ್ಬಳ್ಳಿ ಕಡೆಯಿಂದ ರೈಲಿನಲ್ಲಿ ಬರುವವರು ಬೀರೂರು ಅಥವಾ ಕಡೂರಿನಲ್ಲಿ ಇಳಿದು, ಬಸ್‌ ಹಿಡಿದು ಬರಬೇಕು.

ಚಿಕ್ಕಮಗಳೂರಿನಿಂದ ಮುಳ್ಳಯನಗಿರಿಗೆ ತೆರಳಲು 45 ನಿಮಿಷ ಸಾಕು. ಕೆಲ ವಸತಿ ಗೃಹದವರೇ ವಾಹನ ವ್ಯವಸ್ಥೆ ಮಾಡಿಕೊಡುತ್ತಾರೆ. ಇಲ್ಲದಿದ್ದರೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಹೋಗಬಹುದು.

ಅಲ್ಲಿ ಊಟ-ತಿಂಡಿ ಅಲಭ್ಯ. ಶನಿವಾರ- ಭಾನುವಾರ ಪ್ರವಾಸಿಗರ ವಿಪರೀತ ಒತ್ತಡ ಇರುವುದರಿಂದ ಬೆಳಿಗ್ಗೆ 9 ಗಂಟೆ ಬಳಿಕ ಮುಳ್ಳಯನಗಿರಿಗೆ ಸ್ವಂತ ವಾಹನ ಪ್ರವೇಶ ನಿಷಿದ್ಧ. ಸೀತಾಳಯ್ಯನಗಿರಿವರೆಗೆ ಕೊಂಡೊಯ್ಯದು ಪಾರ್ಕ್ ಮಾಡಬೇಕು. ಅಲ್ಲಿಂದ ಜಿಲ್ಲಾಡಳಿತ ನಿಗದಿ ಪಡಿಸಿದ ವಾಹನದಲ್ಲಿ ಹೋಗಬೇಕು. ಕಡಿದಾದ ಮಾರ್ಗ. ಎಚ್ಚರಿಕೆ ಅಗತ್ಯ.

ಅತ್ತಿಗುಂಡಿ- ಬಾಬಾಬುಡನ್ ಗಿರಿಯಲ್ಲಿ ಕಾಫಿ- ತಿಂಡಿ ಲಭ್ಯ. ಊಟ ಸಾಮಾನ್ಯ. ಆಸುಪಾಸಿನಲ್ಲಿ ಕೆಲ ಹೋಮ್‌ಸ್ಟೇಗಳಿವೆ. ಇದೆಲ್ಲದಕ್ಕಿಂತ ಜಿಲ್ಲಾ ಕೇಂದ್ರಕ್ಕೆ ಬಂದು ವಾಸ್ತವ್ಯ ಹೂಡುವುದು ಉತ್ತಮ.

ಸಿರಿ ಕಾಫಿ ಸೇರಿದಂತೆ ಸಾಕಷ್ಟು ಹೋಟೆಲ್ ಗಳಿವೆ. ವಸತಿಗೂ ಕೊರತೆ ಇಲ್ಲ. ಆನ್‌ಲೈನ್‌ ಮೂಲಕ ಹೋಟೆಲ್, ವಸತಿ ಬುಕ್ ಮಾಡಬಹುದು.

ಬಾಬಾಬುಡನ್‌ಗಿರಿಗೆ ಭೇಟಿ ನೀಡಿದವರು ಗಾಳಿಕೆರೆ (2 ಕಿ.ಮೀ) ಮಾಣಿಕ್ಯಧಾರಾ (3 ಕಿ.ಮೀ)ಕ್ಕೆ ಹೋಗಿಬರಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT