ಬುಧವಾರ, ಫೆಬ್ರವರಿ 8, 2023
16 °C

ಪ್ರವಾಸ | ನೋಡಿದ್ರಾ, ಕತ್ತೆ ಸಂಚಾರದ ಈದ್ರಾ?

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

Prajavani

ಗ್ರೀಸ್‍ ದೇಶದ ಈದ್ರಾ ದ್ವೀಪದಲ್ಲಿ ಹೇಳಿಕೊಳ‍್ಳುವಂಥ ಐಶಾರಾಮಿ ಸೌಲಭ್ಯಗಳಿಲ್ಲ. ಹೋಟೆಲಿನಿಂದ ಸಾಗರತೀರ ತಲುಪಲು ಕಾರು, ಬೈಕುಗಳೂ ಇಲ್ಲ. ಅದರೂ ಆ ತಾಣ ಪ್ರವಾಸಿಗರಿಗೆ ಅಚ್ಚುಮೆಚ್ಚು. ಕತ್ತೆಗಳಿಗೆ ಬೇಡಿಕೆಯೂ ಹೆಚ್ಚು...

***

ಬೆಳಕು ಮೂಡುತ್ತಲೇ ಈ ದ್ವೀಪದಲ್ಲಿ ಚಟುವಟಿಕೆಗಳು ಶುರುವಾಗುತ್ತವೆ. ಪ್ರವಾಸಿಗರು ಚಹಾ, ಕಾಫಿ ಗುಟುಕರಿಸಿ ಸಾಗರ ತಟದತ್ತ ಹೊರಡಲು ಸಿದ್ಧರಾದರೆ, ಮನೆಯ ಒಂದು ಭಾಗವನ್ನು ಹೋಟೆಲ್ ಆಗಿ ರೂಪಾಂತರಿಸಿ ಅವರನ್ನು ಉಪಚರಿಸುವ ಸ್ಥಳೀಯರಿಗೆ ಮುಂದಿನ ಆತಿಥ್ಯದ ಯೋಚನೆ. ಪ್ರವಾಸಿಗರ ಅಗತ್ಯಗಳನ್ನು ಈಡೇರಿಸುವ ಹೋಟೆಲ್, ಬಾರ್ ಇತರ ಮಳಿಗೆಗಳ ಮಾಲೀಕರು ಅವತ್ತಿನ ಸಿದ್ಧತೆಗಳ ತವಕ. ಆದರೆ ಮೂರೂ ವರ್ಗದವರಿಗೆ ಒಂದೇ ಚಿಂತೆ: ‘ಕತ್ತೆ ಅಥವಾ ಹೇಸರಗತ್ತೆಗಳು ನಮ್ಮ ಸಮಯಕ್ಕೆ ಲಭ್ಯ ಇವೆಯೇ’?!

ಇತ್ತ ಕತ್ತೆಗಳ ಮಾಲೀಕರು ನಸುಕಿನಲ್ಲಿ ಎದ್ದು ತಮ್ಮ ಪ್ರಾಣಿಗಳನ್ನು ಶುಭ್ರಗೊಳಿಸಿ, ಥಡಿ ಹಾಕಿ ರೆಡಿಯಾಗಿರುತ್ತಾರೆ. ಅವರಿಗೂ ಇವತ್ತು ಬಾಡಿಗೆ ಎಷ್ಟು ದಕ್ಕೀತು ಎಂಬ ಚಿಂತೆ! ಆದರೆ, ಅವರಲ್ಲಿ ಒಂದು ಸಮಾಧಾನವೆಂದರೆ- ತಮ್ಮನ್ನು ಬಿಟ್ಟು, ಈ ದ್ವೀಪದಲ್ಲಿ ಜನರ ಸಂಚಾರ ಅಸಾಧ್ಯವೇ ಸೈ ಎನ್ನುವುದು!

ಯೂರೋಪ್ ಅಂಚಿನಲ್ಲಿರುವ ಗ್ರೀಸ್ ದೇಶದ ತುದಿಯಲ್ಲಿದೆ- ಈದ್ರಾ ದ್ವೀಪ (Hydra). ಗ್ರೀಕ್ ಭಾಷೆಯಲ್ಲಿ ‘ಈದರ್’ ಅಂದರೆ ‘ನೀರಿನ ಬುಗ್ಗೆ’ ಎಂಬರ್ಥವಿದೆಯಂತೆ. ಇಪ್ಪತ್ತು ಚದರ ಮೈಲುಗಳ ವಿಸ್ತೀರ್ಣದ ಈ ದ್ವೀಪದಲ್ಲಿನ ವಾಸಿಗಳ ಸಂಖ್ಯೆ ಎರಡು ಸಾವಿರ ಮಾತ್ರ. ಆದರೆ ಪ್ರತಿವರ್ಷ ಬಂದು ಹೋಗುವವರ ಸಂಖ್ಯೆ ಇದರ ನೂರು ಪಟ್ಟು! ಹಾಗೆಂದು ಇಲ್ಲಿ ಹೇಳಿಕೊಳ್ಳುವಂಥ ಐಶಾರಾಮಿ ಸೌಲಭ್ಯವಾಗಲೀ, ಪ್ರೇಕ್ಷಣೀಯ ತಾಣಗಳಾಗಲೀ ಇಲ್ಲ. ಕನಿಷ್ಠ ಹೋಟೆಲುಗಳಿಂದ ಸಮುದ್ರದಂಡೆಗೆ ಹೋಗಬೇಕೆಂದರೆ ಕಾರು, ಬೈಕುಗಳೂ ಇಲ್ಲ. ಅಲ್ಲಿಗೆ ಹೋಗಲು ಕಾಯುತ್ತ ನಿಂತಾಗ, ಬೇಗನೇ ಕತ್ತೆ ಅಥವಾ ಹೇಸರಗತ್ತೆ ಸಿಕ್ಕರೆ ಅದೇ ಅದೃಷ್ಟ!

ಹೌದು! ಯೂರೋಪಿನ ಪ್ರವಾಸೋದ್ಯಮದ ನೆಚ್ಚಿನ ತಾಣ ಎಂಬ ಆಯ್ಕೆ ಪಟ್ಟಿಯಲ್ಲಿ ‘ಫೈವ್ ಸ್ಟಾರ್’ ಪಟ್ಟ ಗಿಟ್ಟಿಸಿಕೊಂಡ ಈದ್ರಾ, ಒಂದರ್ಥದಲ್ಲಿ ಕಷ್ಟಕರ ಅನುಭವ ಕೊಡುವ ಪ್ರವಾಸಿ ದ್ವೀಪ. ಚಾರಣ, ನಡಿಗೆಯನ್ನು ಪ್ರೀತಿಸುವ ಪ್ರವಾಸಿಗರಿಗೆ ಮಾತ್ರ ಈದ್ರಾ ಅಚ್ಚುಮೆಚ್ಚು.

ಮನಮೋಹಕ… ಮತ್ತು ನಿಷೇಧ
ಈದ್ರಾ ದ್ವೀಪದ ಆಕರ್ಷಣೆಯೆಂದರೆ, ಮನಮೋಹಕ ಕಡಲತೀರ ಹಾಗೂ ಸ್ಫಟಿಕಶುಭ್ರ ನೀರು. ಬೆಟ್ಟಗುಡ್ಡಗಳ ಮಧ್ಯೆ ನೆಲೆನಿಂತ ಈ ದ್ವೀಪದಲ್ಲಿ ಪ್ರವಾಸೋದ್ಯಮವೇ ಮುಖ್ಯ ವಹಿವಾಟಿನ ಮೂಲ. ಯೂರೋಪಿನ ‘ಪಾರಂಪರಿಕ ತಾಣ’ಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈದ್ರಾಕ್ಕೆ ಅಥೆನ್ಸ್ ಮೂಲಕ ಬರಬಹುದು. ಸ್ಥಳವೊಂದರ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈದ್ರಾ ದ್ವೀಪಕ್ಕೆ ಸಾಕಷ್ಟು ನಿಬಂಧನೆ ವಿಧಿಸಲಾಗಿದೆ. ಜಗತ್ತಿನ ವಿವಿಧೆಡೆಯಿಂದ ದಾಂಗುಡಿಯಿಡುವ ಲಕ್ಷಗಟ್ಟಲೇ ಪ್ರವಾಸಿಗರ ದಟ್ಟಣೆಯ ಮಧ್ಯೆಯೂ ಪಟ್ಟುಬಿಡದೇ ಆ ನಿಯಮಾವಳಿ ಪಾಲಿಸುತ್ತಿರುವುದು ಸುಲಭವೇನಲ್ಲ.


ಈದ್ರಾದಲ್ಲಿ ಸರಕು ಹೊತ್ತ ಕತ್ತೆ

ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸಿ ತಾಣಗಳ ಆಡಳಿತಗಳು ತರಹೇವಾರಿ ಸೌಲಭ್ಯ ಕಲ್ಪಿಸುತ್ತವೆ. ಸುಗಮ ಸಂಚಾರಕ್ಕಾಗಿ ಸಪಾಟಾದ ರಸ್ತೆಗಳು, ಡಿಲಕ್ಸ್ ಅನುಭವ ಕೊಡುವ ಕಾರುಗಳು, ಪ್ರವಾಸಿಗರು ಕೇಳಿದ ಸ್ಥಳಕ್ಕೆ ವಾಹನ ಕಳಿಸುವ ಟ್ಯಾಕ್ಸಿ ಏಜೆನ್ಸಿಗಳು, ಪಾರ್ಕಿಂಗ್‍ಗೆ ವಿಶಾಲ ಸ್ಥಳಾವಕಾಶ, ವಿಹಾರಕ್ಕಾಗಿ ಉದ್ಯಾನ… ಹೀಗೆಲ್ಲ. ಇವಾವೂ ಈದ್ರಾದಲ್ಲಿ ಇಲ್ಲ ಎಂಬುದೇ ವಿಶೇಷ.

ಈದ್ರಾದಲ್ಲಿ ಕಾರು, ಬೈಕ್‍ಗಳಿಗೆ ನಿಷೇಧ ವಿಧಿಸಲಾಗಿದೆ! ಹಾಗಾದರೆ, ಪ್ರವಾಸಿಗರ ಗತಿ? ಅದಕ್ಕಾಗಿಯೇ ಮಾಲಿನ್ಯರಹಿತ ಸಂಚಾರಕ್ಕೆ ಆದ್ಯತೆ ಕೊಡಲಾಗಿದೆ. ಅದೆಂದರೆ- ಕತ್ತೆ, ಹೇಸರಗತ್ತೆಗಳ ಓಡಾಟ. ಇದು ಅನಿವಾರ್ಯವೂ ಹೌದು.

ಶತಮಾನಗಳಿಂದಲೂ ಜನವಸತಿ ಪ್ರದೇಶವಾಗಿರುವ ಈದ್ರಾದಲ್ಲಿ ಬೆಟ್ಟಗುಡ್ಡಗಳೇ ಪ್ರಮುಖ. ಕಲ್ಲುಬಂಡೆಗಳ ನಡುವಿನ ಜಾಗವನ್ನು ಹುಡುಕಿ, ಮನೆ ಕಟ್ಟಿಕೊಂಡವರು ಇಲ್ಲಿನ ಜನ. ಈ ದ್ವೀಪಕ್ಕೆ ಶತಮಾನಗಳ ಇತಿಹಾಸ ಇರುವುದರಿಂದ, ‘ಪರಂಪರೆ’ ಪಟ್ಟವೂ ಅಂಟಿಕೊಂಡಿದೆ. ಇದನ್ನು ಹಾಗೇ ಉಳಿಸಲು ಸ್ಥಳೀಯ ಆಡಳಿತ ವಿಧಿಸಿದ ನಿಯಮಗಳಲ್ಲಿ ವಾಹನ ಸಂಚಾರ ನಿಷೇಧವೂ ಒಂದು.

ಪಟ್ಟಣದಲ್ಲಿನ ರಸ್ತೆಗಳು ತೀರಾ ಇಕ್ಕಟ್ಟು ಹಾಗೂ ಏರಿಳಿತದಿಂದ ಕೂಡಿವೆ. ಕಲ್ಲು ದಾರಿಯಲ್ಲಿ ಸಾಗುವುದು ವಾಹನಗಳಿದ್ದರೂ ಅಸಾಧ್ಯ. ಇದಕ್ಕಾಗಿ ಕತ್ತೆ, ಕುದುರೆ ಹಾಗೂ ಹೇಸರಗತ್ತೆಗಳೇ ಸಂಚಾರಕ್ಕೆ ಮುಖ್ಯ ಆಧಾರ. ಕೆಲವೊಂದಷ್ಟು ಭವ್ಯ ಮಹಲುಗಳು, ಆಕರ್ಷಕ ಕಟ್ಟಡಗಳ ಎದುರಿನ ರಸ್ತೆಗಳಲ್ಲಿ ಕತ್ತೆಗಳಷ್ಟೇ ರಾಜಗಾಂಭೀರ್ಯದಿಂದ ಸಾಗುವುದನ್ನು ನೋಡುವುದೇ ಚೆಂದ.

ಪ್ರವಾಸೋದ್ಯಮ, ಈದ್ರಾದ ಆದಾಯ ಮೂಲ. ಅಥೆನ್ಸ್‌ಗೆ ಬಂದವರು ಒಂದು ದಿನದ ಪ್ರವಾಸಕ್ಕೆಂದು ಈದ್ರಾಕ್ಕೆ ಭೇಟಿ ಕೊಡುವುದು ಸಾಮಾನ್ಯ. ಮೋಟರ್ ಬೋಟ್‌ಗಳು ಅಥೆನ್ಸ್‌ನಿಂದ ಒಂದೂವರೆ ತಾಸಿನಲ್ಲಿ ಈ ತಾಣ ತಲುಪುತ್ತವೆ. ಇನ್ನು, ದಿನಗಟ್ಟಲೇ ಇಲ್ಲಿ ಇರುವ ಪ್ರವಾಸಿಗರಿಗೆ ಹೋಟೆಲ್‍ ಸೌಲಭ್ಯವೂ ಇದೆ. ಆದರೆ, ಕಡಿಮೆ ಸಂಖ‍್ಯೆಯಲ್ಲಿರುವ ಹೋಟೆಲ್‌ಗಳ ದರ ದುಬಾರಿ ಎಂಬುದೂ ನಿಜ.

ನಿಗದಿತ ಬೆಲೆ ತೆತ್ತು, ಹೋಟೆಲ್ ರೂಮ್ ಕಾಯ್ದಿರಿಸಿ ಈದ್ರಾ ಬಂದರಿಗೆ ಬಂದರೆ ಅಲ್ಲಿಂದ ಹೋಟೆಲ್ ತಲುಪುವಷ್ಟರಲ್ಲಿ ಸುಸ್ತಾಗಿರುತ್ತದೆ. ಕಾರಣ- ಲಗೇಜ್ ಒಯ್ಯಲು ಕತ್ತೆ, ಕುದುರೆಗಳಿಗೆ ಕೊಡಬೇಕಾದ ಬಾಡಿಗೆ ಮತ್ತು ನಡೆಯುತ್ತ ಹೋಟೆಲ್ ತಲುಪುವ ಆಯಾಸ. ಉಳ್ಳವರು ಇನ್ನಷ್ಟು ಶುಲ್ಕ ತೆತ್ತು, ತಾವೂ ಕುದುರೆ, ಹೇಸರಗತ್ತೆ ಮೇಲೆ ಕೂತು ರೂಮು ತಲುಪುತ್ತಾರೆ. ಚಾರಣದ ರೂಢಿಯಿದ್ದವರಿಗೆ ಇದೇನೂ ಕಷ್ಟವಲ್ಲ.

ಬೆಳಿಗ್ಗೆ ಮತ್ತು ಸಂಜೆ ಹೊತ್ತು ಸಾಗರ ತಟದ ಮರಳಿನಲ್ಲಿ ಆಟೋಟ, ಸ್ನಾನ, ವಿರಾಮ, ಮದ್ಯದ ಸಮಾರಾಧನೆಯಂಥ ಚಟುವಟಿಕೆಗಳು ಕಾಣುತ್ತವೆ; ಆದರೆ ಮಧ್ಯಾಹ್ನದ ಅವಧಿಯಲ್ಲಿ ಈದ್ರಾ ಬಿಕೋ ಎನ್ನುತ್ತಿರುತ್ತದೆ. ಚಾರಣ ಮಾಡುವವರು ಕಲ್ಲುಗಳ ದಾರಿಯಲ್ಲಿ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಬೆಟ್ಟದ ತುದಿ ತಲುಪಿ, ಮತ್ತೆ ವಾಪಾಸಾಗಲು ಆರೆಂಟು ತಾಸುಗಳೇ ಬೇಕಂತೆ. ‘ನಿಧಾನವಾಗಿ ನಡೆಯುತ್ತ ಹಳೆಯ ಮಹಲುಗಳನ್ನು ನೋಡುತ್ತ ಮುಂದೆ ಸಾಗುವ ಅನುಭವ ಮುದ ನೀಡುತ್ತದೆ’ ಎನ್ನುತ್ತಾರೆ, ಯೂರೋಪ್ ಪ್ರವಾಸಿಗ ಇರ್ವಿನ್. ಇಲ್ಲಿಗೆ ಎರಡು ವರ್ಷಕ್ಕೊಮ್ಮೆ ಬಂದು ತಿಂಗಳ ಕಾಲ ಇರುವ ಇವರಿಗೆ, ಕಡಲದಂಡೆಯಷ್ಟೇ ಆಕರ್ಷಣೆ ಮಹಲುಗಳ ಮೇಲೂ ಇದೆಯಂತೆ!

ಪರಂಪರೆಯನ್ನು ಜತನದಿಂದ ಕಾಪಾಡುವ ಈದ್ರಾದ ಜನತೆಗೆ ತಮ್ಮ ತಾಣದ ಮೇಲೆ ಅನುಪಮ ಪ್ರೀತಿ. ಪ್ರವಾಸೋದ್ಯಮದಿಂದ ಸಾಕಷ್ಟು ಆದಾಯವೂ ಸಿಗುವುದರಿಂದ, ಇದರ ಸೌಂದರ್ಯಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳುತ್ತಿದ್ದಾರೆ. ಹಳೆಯ ಕಟ್ಟಡಗಳ ದುರಸ್ತಿ ಅಥವಾ ನವೀಕರಣದ ಸಮಯದಲ್ಲಿ ನಾಜೂಕಿನಿಂದ ಕೆಲಸ ಮಾಡಲಾಗುತ್ತದೆ. ಇದಕ್ಕೆ ಸ್ಥಳೀಯ ಆಡಳಿತದ ಸಹಕಾರವೂ ಸಾಕಷ್ಟಿದೆ.

ಸುಸ್ಥಿರ ಪ್ರವಾಸೋದ್ಯಮದ ಸವಾಲು: ಕಲ್ಲಿನ ಗೋಡೆಗಳು, ಕೆಂಪು ಹೆಂಚುಗಳ ಮನೆಗಳು ಈದ್ರಾದ ನೋಟಕ್ಕೆ ರಂಗುತಂದಿವೆ. ಐವತ್ತು ವರ್ಷಗಳ ಹಿಂದಿನವರೆಗೂ ತನ್ನ ಪಾಡಿಗೆ ತಾನಿದ್ದ ಈ ದ್ವೀಪಕ್ಕೆ ಪ್ರವಾಸಿಗರ ಭರಾಟೆ ಹೆಚ್ಚುತ್ತಿದೆ. ಹಾಗೆಂದು ಇಲ್ಲಿ ವಿಮಾನ ನಿಲ್ದಾಣವಾಗಲೀ, ರೈಲು ನಿಲ್ದಾಣವಾಗಲೀ ಇಲ್ಲ. ಇರುವುದೊಂದೇ ದಾರಿ- ಜಲಸಾರಿಗೆ. ಬಂದರು ತಲುಪುವ ದೋಣಿಯಿಂದ ಇಳಿದರೆ, ಕಚ್ಚಾ ರಸ್ತೆಯೂ ಅದರಲ್ಲಿ ವಾಹನಗಳ ನಿಷೇಧವೂ ಎದುರಾಗುತ್ತದೆ! ಹಾಗಿದ್ದರೂ ಮನಸ್ಸಿಗೆ ಮುದ ಕೊಡುವ ಈ ತಾಣದತ್ತ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.


ಹೀದ್ರಾ ದ್ವೀಪದ ನೋಟ

ಇಲ್ಲಿನ ಸಣ್ಣಪುಟ್ಟ ಹೋಟೆಲ್, ಬಾರ್ ಹಾಗೂ ತಿನಿಸುಗಳ ಮಳಿಗೆಯನ್ನು ನಿರ್ವಹಿಸುವುದು ಬಹುತೇಕ ಸ್ಥಳೀಯರು. ಅವರಿಗೆ ಇದೇ ಪ್ರಮುಖ ಆದಾಯ. ಈದ್ರಾಕ್ಕೆ ಪ್ರತಿಯೊಂದು ಪದಾರ್ಥವೂ ಹೊರಗಿನಿಂದಲೇ ಬರಬೇಕು. ಸ್ಥಳೀಯರಿಗೆ ನಿತ್ಯ ಬೇಕಾಗುವ ಊಟೋಪಚಾರದ ಪದಾರ್ಥಗಳನ್ನು ಹಡಗುಗಳ ಮೂಲಕ ಇಲ್ಲಿಗೆ ತರಲಾಗುತ್ತದೆ. ಅಷ್ಟೇ ಏಕೆ, ಮೆಗಾಲೊಪೊಲಿಸ್‍ ಎಂಬಲ್ಲಿ ಉತ್ಪಾದಿಸಿ, ಸಮುದ್ರದ ಕೆಳಗೆ ಹಾಕಿರುವ ತಂತಿಗಳ ಮೂಲಕ ವಿದ್ಯುತ್‍ ಅನ್ನು ದ್ವೀಪಕ್ಕೆ ಪೂರೈಸಲಾಗುತ್ತಿದೆ. 2018ರಲ್ಲಿ ತಂತಿ ತುಂಡಾಗಿ, ವಾರಗಟ್ಟಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ನಿದರ್ಶನವೂ ಇದೆ.

‘ಪಾರಂಪರಿಕ ತಾಣ’ ಹಣೆಪಟ್ಟಿ ಅಂಟಿಸಿಕೊಂಡ ಕಾರಣದಿಂದಾಗಿ, ಮನೆಗಳ ಚಾವಣಿ ಮೇಲೆ ಸೌರಫಲಕ ಅಳವಡಿಕೆಗೂ ನಿಷೇಧವಿದೆ (ಸೌಂದರ್ಯಕ್ಕೆ ಧಕ್ಕೆ ಎಂಬುದು ಕಾರಣ!). ಸಂಚಾರಕ್ಕೆ ಕಾರು, ಬೈಕ್ ನಿಷೇಧ ವಿಧಿಸಲಾಗಿದೆ (ಮನೆ, ಹೋಟೆಲ್‌ಗಳ ತ್ಯಾಜ್ಯ ವಿಲೇವಾರಿಗೆ ಎರಡು ಟ್ರಕ್‍ಗಳಿಗೆ ಮಾತ್ರ ಅವಕಾಶವಿದೆ). ಇದಕ್ಕಾಗಿ, ಜನರು ಅಗತ್ಯ ಪದಾರ್ಥಗಳನ್ನು ತಂತಮ್ಮ ಮನೆಗಳಿಗೆ ಒಯ್ಯಲು ದುಬಾರಿ ಶುಲ್ಕ ತೆತ್ತು ಕತ್ತೆಗಳನ್ನು ಆಶ್ರಯಿಸಬೇಕು. ಅನಾರೋಗ್ಯದ ಸಂದರ್ಭದಲ್ಲಿ ನಡೆದುಕೊಂಡು ಆಸ್ಪತ್ರೆಗೆ ಹೋಗುವುದೇ ಒಂದು ಸಾಹಸ. ಉಳಿದಂತೆ, ಕಾಯಿಲೆ ಪೀಡಿತರು, ಅಶಕ್ತರನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಕೆಳಗಿನ ಬಂದರಿಗೆ ಕರೆದೊಯ್ದು, ಅಲ್ಲಿಂದ ಸಮೀಪದ ಪಟ್ಟಣಗಳ ಆಸ್ಪತ್ರೆಗೆ ತಲುಪಿಸಬೇಕಾದರೆ ಸಾಕುಬೇಕಾಗುತ್ತದೆ. ‘ಮನೆಗಳ ದುರಸ್ತಿಗೆ ಕಲ್ಲು, ಇಟ್ಟಿಗೆ, ಸಿಮೆಂಟ್ ಬೇಕೆಂದರೆ ಅದಕ್ಕಾಗಿ ನಾವು ಪಡುವ ಪಾಡು ಯಾರಿಗೂ ಬೇಡ. ಪದಾರ್ಥಗಳ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಈ ಸಾಗಣೆಗೆಂದೇ ಖರ್ಚಾಗುತ್ತದೆ’ ಎಂಬುದು ನಿವಾಸಿಯೊಬ್ಬನ ಅಳಲು.

ಏಪ್ರಿಲ್‍ನಿಂದ ಅಕ್ಟೋಬರ್‌ವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚು. ಆ ಸಮಯದಲ್ಲಿ ಸಾಗಣೆ, ಪ್ರಯಾಣ ವೆಚ್ಚವೂ ಹೆಚ್ಚು. ಈ ಅವಧಿಯಲ್ಲಿ ಈದ್ರಾ ಒತ್ತಡದಿಂದ ಬಳಲುತ್ತದೆ. ದಿನವಿಡೀ ಉತ್ಪಾದನೆಯಾಗುವ ಟನ್‍ಗಟ್ಟಲೇ ಹಾನಿಕಾರಕ ತ್ಯಾಜ್ಯವನ್ನು ದೂರಕ್ಕೆ ಒಯ್ದು, ಸುಡಲಾಗುತ್ತದೆ. ಈ ಬೂದಿಯು ಸಮುದ್ರವನ್ನು ನೇರವಾಗಿ ಸೇರಿ, ಜಲಚರಗಳಿಗೆ ಅಪಾಯ ಉಂಟು ಮಾಡುತ್ತದೆ ಎಂದು ಈದ್ರಾ ಪ್ರವಾಸೋದ್ಯಮ ಕುರಿತು ನಡೆಸಿದ ಅಧ್ಯಯನವೊಂದು ಆತಂಕ ವ್ಯಕ್ತಪಡಿಸಿದೆ. ಜೊತೆಗೆ ಈದ್ರಾ ದ್ವೀಪದಲ್ಲಿ ಮಾಡಬಹುದಾದ ಸುಸ್ಥಿರ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಪಟ್ಟಿ ಮಾಡಿದೆ.

ಇತ್ತ ಈದ್ರಾ ಪರಿಸರಕ್ಕೂ ಧಕ್ಕೆ ಆಗಬಾರದು; ಅತ್ತ ಪ್ರವಾಸಿಗರಿಂದ ಬರುವ ಆದಾಯಕ್ಕೂ ಕೊಕ್ಕೆ ಬೀಳಬಾರದು. ಅಂಥ ಸುಸ್ಥಿರ ಪ್ರವಾಸೋದ್ಯಮದ ಹುಡುಕಾಟದಲ್ಲಿ ಸ್ಥಳೀಯ ಆಡಳಿತ ಚಿಂತನೆ ನಡೆಸಿದೆ.

ಪೂರಕ ಮಾಹಿತಿ: ಬಿಬಿಸಿ ಮತ್ತು ಯೂಟ್ಯೂಬ್‌ ವರದಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು