ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮಿಶ್ ಕೊಳ್ಳ

Last Updated 31 ಜುಲೈ 2019, 19:30 IST
ಅಕ್ಷರ ಗಾತ್ರ

ನಾವು ಕಳೆದ ಮೇ ತಿಂಗಳಲ್ಲಿ ಜರ್ಮನಿಗೆ ಪ್ರವಾಸ ಹೋಗಿದ್ದವು. ಮ್ಯೂನಿಕ್ ಜರ್ಮನಿಯ ದಕ್ಷಿಣ ಭಾಗದಲ್ಲಿದೆ. ಅದರ ಹತ್ತಿರದ ಊರುಗಳಲ್ಲಿ ವಾಸವಿರುವ ಮಕ್ಕಳಿಬ್ಬರ ಒತ್ತಾಯದ ಮೇರೆಗೆ ಜುಲೈವರೆಗೂ ಸುಮಾರು 3 ತಿಂಗಳು ಅಲ್ಲಿ ಕಳೆದೆವು. ಆ ಸಮಯದಲ್ಲಿ ನಾವು ಭೇಟಿ ನೀಡಿದ ಹತ್ತಾರು ತಾಣಗಳಲ್ಲಿ ಅತ್ಯಂತ ಮುದ ನೀಡಿದ ಸ್ಥಳವೆಂದರೆ ಗಾರ್ಮಿಶ್ ಕಣಿವೆ ಅಥವಾ ಕೊಳ್ಳ.

ದಕ್ಷಿಣ ಜರ್ಮನಿಯ ಪ್ರದೇಶಗಳನ್ನು ಒಟ್ಟಾಗಿ ಬವೇರಿಯ ಪ್ರಾಂತ್ಯ ಎಂದು ಕರೆಯುತ್ತಾರೆ. ಗಾರ್ಮಿಶ್ ಎಂಬ ಪಟ್ಟಣ ಮ್ಯೂನಿಕ್ ನಗರದಿಂದ ಸುಮಾರು ಒಂದೂವರೆ ಗಂಟೆಯಷ್ಟು ದೂರದಲ್ಲಿದೆ. 1935 ರಲ್ಲಿ ಗಾರ್ಮಿಶ್ ಮತ್ತು ಬದಿಯ ಪಾರ್ಟೆನ್ ಕಿರ್ಚೆನ್ ಎಂಬ ಎರಡೂ ಊರುಗಳನ್ನು ಒಂದಾಗಿಸಿ, ದೇಶದ ಅತ್ಯಂತ ಪ್ರಮುಖ ಸ್ಕೀತಾಣ ಹಾಗೂ ಐಸ್‌ಸ್ಕೇಟಿಂಗ್ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಯಿತು.

ಜರ್ಮನಿಯ ಅತ್ಯಂತ ಎತ್ತರದ ಗಿರಿ ಶಿಖರವಾದ ಜುಗ್ಸಿ ಬಿಟ್ಸ್‌ನ (ಎತ್ತರ 9718 ಅಡಿಗಳು)ಬುಡದಲ್ಲಿ ಈ ಊರುಗಳಿವೆ. ಇವು ಯೂರೋಪಿನ್‌ ಅತ್ಯಂತ ಪ್ರಮುಖ ಚಳಿಗಾಲದ ಕ್ರೀಡಾ ಕೇಂದ್ರವಾಗಿ ಬೆಳೆದಿವೆ.

ಈ ಬವೇರಿಯನ್ ಪಟ್ಟಣವು ಜರ್ಮನಿ ಮತ್ತು ಆಸ್ಟ್ರಿಯ ದೇಶಗಳ ಗಡಿಯಲ್ಲಿದೆ. ಈ ಕೊಳ್ಳ ಲೊಯ್ಸಾಕ್ ಮತ್ತು ಪಾರ್ಟ್ನಾರ್ಕ್ ಕಣಿವೆಗಳು ಸಂಧಿಸುವ ಸ್ಥಳದಲ್ಲಿದ್ದು, ಜುಗ್ಸಿಪಿಟ್ ಶಿಖರದ ಬುಡದಲ್ಲಿದೆ.

ಪಾರ್ಟ್ ನಾಕ್ ಕ್ಲಾಮ್ ಎಂದು ಕರೆಯಲ್ಪಡುವ ಈ ಕೊಳವು 700 ಮೀಟರ್ ಉದ್ದವಿದ್ದು, ಸುರಂಗದ ಎತ್ತರ 80 ಮೀಟರ್‌ಗಳು. ಕೊಳ್ಳದ ಒಳಗೆ ಹಾದು ಹೋಗುವಾಗ ಕತ್ತಲೆ ಮತ್ತು ತಣ್ಣನೆಯ ವಾತಾವರಣ. ಅಲ್ಲಲ್ಲಿ ಹಾಕಿರುವ ಕಂಬಿಗಳಿಗೆ ಆತು ಕೆಳಗಿನ ರುದ್ರ ರಮಣೀಯ ಪ್ರಪಾತ ನೋಡುವಾಗ ಅದ್ಭುತ ಅನ್ನಿಸುತ್ತದೆ.

ಹಾಗೆ ನೋಡುತ್ತಿರುವಾಗ, ನನ್ನ ಒಂಬತ್ತು ವರ್ಷದ ಮೊಮ್ಮಗ ಸಮರ್ಥ್ ‘ತಾತ, ಪ್ರಪಂಚದಲ್ಲೇ ಅತ್ಯಂತ ಆಳವಾದ ಕೊಳ್ಳ ಎಲ್ಲಿದೆ ಗೊತ್ತಾ?’ ಎಂದು ಕೇಳಿದ. ನಾನು ತಲೆ ಕೆರೆದುಕೊಂಡು ಯೋಚಿಸುತ್ತಾ ಇರುವಾಗ ಅವನೇ ಹೇಳಿದ ‘ಕಾಳಿ ಗಂಡಕಿ ನದಿಕೊಳ್ಳ ವಿಶ್ವದಲ್ಲೇ ಅತಿ ಆಳ; ಇದು ನೇಪಾಳ ಹಿಮಾಲಯ ಪರ್ವತ ಸಾಲುಗಳಲ್ಲಿ, ಅನ್ನಪೂರ್ಣಬೆಟ್ಟದ ಬುಡದಲ್ಲಿ ಇದೆ. 18728 ಅಡಿ ಆಳದಲ್ಲಿದೆ’.

1936ರ ಚಳಿಗಾಲದ ವಿಶ್ವ ಒಲಿಂಪಿಕ್ಸ್ ಪಂದ್ಯಾವಳಿಯನ್ನು ಇದೇ ಗಾರ್ಮಿಶ್-ಪಾರ್ಟೆನ್‌ನಲ್ಲಿ ಆಯೋಜಿಸಲಾಗಿತ್ತು. ಅದಕ್ಕಾಗಿ ಕಟ್ಟಲಾಗಿರುವ ಭವ್ಯವಾದ ಸ್ಟೇಡಿಯಂ ಅನ್ನು, ಸ್ಕೀಯಿಂಗ್ ಆಟಕ್ಕಾಗಿ ಈಗಲೂ ಉಪಯೋಗಿಸುತ್ತಾರೆ. ಇದೂ ಸಹ ನೋಡಬೇಕಾದ ಒಂದು ತಾಣ.

ಇಲ್ಲಿಗೆ ಹೋಗುವ ದಾರಿ

ಬೆಂಗಳೂರಿನಿಂದ ಮ್ಯೂನಿಕ್ ನಗರಕ್ಕೆ ನೇರವಾದ ವಿಮಾನ ಸೌಲಭ್ಯವಿದೆ. ಮ್ಯೂನಿಕ್‌ ನಗರದ ರೈಲ್ವೆನಿಲ್ದಾಣ – ಹಾಫ್ ಬಾನ್ ಆಫ್ರಿಕಾದಿಂದ ಪ್ರತಿದಿನ 23 ರೈಲುಗಳು, ಗಂಟೆಗೊಂದರಂತೆ ಈ ತಾಣಕ್ಕೆ ಓಡಾಡುತ್ತವೆ. ಪ್ರಯಾಣದ ಅವಧಿ 1 ಗಂಟೆ 22 ನಿಮಿಷಗಳು.

ಗಾರ್ಮಿಶ್ ರೈಲು ನಿಲ್ದಾಣದಿಂದ ಇಳಿದ ಕೂಡಲೇ ಸ್ಟೇಡಿಯಂಗೆ ಹೋಗುವ ಬಸ್ಸುಗಳು ಕಾಣುತ್ತವೆ. ಬಸ್ಸು ಹತ್ತಿದರೆ 10 ನಿಮಿಷದ ಹಾದಿ. ಸ್ಟೇಡಿಯಂನಿಂದ 20-25 ನಿಮಿಷದ ಕಾಲ್ನಡಿಗೆಯಲ್ಲೇ ದಾರಿಯಲ್ಲಿ ನಡೆದರೆ, ಕೊಳ್ಳದ ಪ್ರವೇಶದ್ವಾರದ ಹತ್ತಿರ ಬರುತ್ತೇವೆ. ನಡೆಯಲು ಸಾಧ್ಯವಾಗದವರು / ವಯಸ್ಸಾದವರಿಗೆ, ಕುದುರೆಗಾಡಿಯ ಸೇವೆ ಲಭ್ಯವಿದೆ. ಆದರೆ ಕೊಳ್ಳದ ಒಳಗೆ ನಡೆಯಲೇ ಬೇಕಾಗುತ್ತದೆ.

ಮ್ಯೂನಿಕ್‌ನಿಂದ ನೇರವಾಗಿ ಕಾರ್‌ನಲ್ಲಿ ಇಲ್ಲಿಗೆ ತಲುಪಬಹುದು. ಒಟ್ಟಿನಲ್ಲಿ ಇದು ಅರ್ಧ ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT