ಭಾರತದ ಗಡಿಯಲ್ಲಿರುವ ಅನೇಕ ಕೊನೆಯ ಊರುಗಳಿಗೆ ಲೇಖಕರು ಭೇಟಿ ನೀಡಿದ್ದಾರೆ. ಅವುಗಳಲ್ಲಿ ಚೀನಾ ಗಡಿಯಲ್ಲಿರುವ ಮಾನಾ ಹಾಗೂ ಬಾಂಗ್ಲಾ ಗಡಿಯ ಅಗರ್ತಲವೂ ಸೇರಿವೆ. ಡೆಡೆಂಡ್ ಇರುವ ರಸ್ತೆ, ರೈಲು ನಿಲ್ದಾಣ, ಹಳ್ಳಿಗಳು ಒಂದು ಬಗೆಯ ವಿಷಾದಭಾವ ಹುಟ್ಟಿಸುತ್ತವೆ ಎನ್ನುತ್ತಾರೆ ಅವರು.

ಲಡಾಖಿನ ನುಬ್ರಾ ಕಣಿವೆಯಲ್ಲಿ ಚಲುಂಕಾ ತ್ಯಾಕ್ಸಿ ತುರ್ತುಕ್ ಥಾಂಗ್ ಎಂಬ ನಾಲ್ಕು ಹಳ್ಳಿಗಳಿವೆ. ಇವು ಭಾರತದ ತುತ್ತತುದಿಯ ಹಳ್ಳಿಗಳು. ಶೋಯೆಕ್ ಹೊಳೆ ದಡದಲ್ಲಿರುವ ಇವುಗಳ ಆಸುಪಾಸಲ್ಲಿ ಟಿಬೆಟ್ಟಿನ ಮರುಭೂಮಿಯ ಸೆರಗಿದೆ. ದುರ್ಗಮವಾದ ಕಾರಕೋರಂ ಪರ್ವತಶ್ರೇಣಿಯಿದೆ. ಸಿಯಾಚಿನ್ ನೀರ್ಗಲ್ಲುಗಳಿವೆ. ಜಗತ್ತಿನ ಎರಡನೇ ಎತ್ತರದ ಹಿಮಶಿಖರ ಕೆ2 ಇರುವುದೂ ಇಲ್ಲೇ. ಒಂದು ಕಾಲಕ್ಕೆ ಚೀನಾದಿಂದ ಹೊರಟು ಯೂರೋಪಿನವರೆಗೆ ಹೋಗುತ್ತಿದ್ದ ರೇಷ್ಮೆ ಹಾದಿಗೂ ಈ ಹಳ್ಳಿಗಳಿಗೂ ಲಗತ್ತಿತ್ತು.

ಬಾಲ್ಟಿ ಭಾಷೆಯನ್ನಾಡುವ ಈ ಹಳ್ಳಿಗಳ ಜನ ಶಿಯಾ ಪಂಥೀಯರು. ನೂರ್ಬಕ್ಷ್ ಸೂಫಿಪಂಥದ ಪ್ರಭಾವಕ್ಕೊಳಗಾದವರು. ಇವರಲ್ಲಿ ಟಿಬೆಟಿಯನ್ ಬೌದ್ಧರ ಮಂಗೋಲಿಯನ್ ಮುಖಚರ್ಯೆಯೂ ಹಾಗೂ ಆಫ್ಗಾನಿಸ್ತಾನದ ಪಠಾಣರ ಎತ್ತರದ ನಿಲುವೂ ಮಿಶ್ರಣವಾಗಿವೆ. ದೇಶ ವಿಭಜನೆಯ ಬಳಿಕ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿದ್ದ ಈ ಹಳ್ಳಿಗಳು, ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಭಾರತಕ್ಕೆ ಸೇರಿದವು. ಬಹುತೇಕ ಗಡಿ ಗ್ರಾಮಗಳಂತೆ ದೇಶ ವಿಭಜನೆಯ ಕಷ್ಟ ಮತ್ತು ಯುದ್ಧಗಳಿಗೆ ಸಾಕ್ಷಿಯಾಗಿವೆ. ಹಲವಾರೂ ರಾಜಮನೆತನಗಳ ರಾಜನರನ್ನು ಕಂಡಿರುವ ಇದರ ಸಂಸ್ಕೃತಿಯ ಮೇಲೆ ಪ್ರತಿ ಆಳಿಕೆಯೂ ತನ್ನ ಗುರುತಿನ ಮುದ್ರೆಗಳನ್ನು ಬಿಟ್ಟಿದೆ.

ನಾವು ತ್ಯಾಕ್ಸಿಯಲ್ಲಿರುವ ಸೈನಿಕ ಠಾಣೆಯಲ್ಲಿ ಗುರುತುಚೀಟಿ ತೋರಿಸಿ, ಪುಸ್ತಕದಲ್ಲಿ ದಾಖಲಿಸಿ ಥಾಂಗನ್ನು ಮುಟ್ಟಿದೆವು. ಪರ್ವತದ ತುದಿಯಿಂದ ಹರಿದು ಬರುವ ಒಣಹಳ್ಳವೇ ಲೈನ್ ಆಫ್ ಕಂಟ್ರೋಲ್ ಆಗಿತ್ತು. ಶಿಖರಗಳಲ್ಲಿ, ಅಲ್ಲಿಗೆ ಹೇಗಾದರೂ ಹೋಗುತ್ತಾರೊ ಎಂದು ಅಚ್ಚರಿ ಪಡುವಷ್ಟು ಎತ್ತರದಲ್ಲಿ, ಕಾವಲು ಗೋಪುರಗಳಿದ್ದವು. ಥಾಂಗ್ ಗ್ರಾಮದ ದಿಬ್ಬದ ಮೇಲೆ ಭಾರತ ಧ್ವಜ ಪಟಪಟಿಸುತ್ತಿತ್ತು. ಅಲ್ಲಿಂದ ಎರಡು ಕಿಲೋಮೀಟರ್ ದೂರದ ಕಣಿವೆಯಲ್ಲಿ ಪಾಕಿಸ್ತಾನದ ಕೊನೆಯ ಹಳ್ಳಿ ಫ್ರಾನೊ ಕಾಣುತ್ತಿತ್ತು. ಗಡಿಯಾಚೆಗಿನ ಮೊದಲ ಹಳ್ಳಿ ಕಾಣಿಸುತ್ತದೆ ಎನ್ನುವ ರೋಚಕತೆ ಬಿಟ್ಟರೆ, ಥಾಂಗಿನಲ್ಲಿ ಏನೂ ವಿಶೇಷತೆ ಇರಲಿಲ್ಲ. ವಿಭಜಿತ ದೇಶದ ಜನ ಮತ್ತು ಊರು, ಪಂಜರದಲ್ಲಿಟ್ಟ ಸರ್ಕಸ್ಸಿನ ಪ್ರಾಣಿಗಳಂತೆ ಜನರು ನೋಡುವ ವಸ್ತುವಾಗುವುದು ಒಂದು ವೈರುಧ್ಯ. ಥಾಂಗಿಗೆ ಹೋಲಿಸಿದರೆ ತುರ್ತುಕ್ ಸುಂದರ ಊರು. ಅದನ್ನು ಹಿಮ ಶಿಖರಗಳಿಂದ ಬರುವ ಬೆಳ್ನೊರೆಯ ನೀಲವರ್ಣದ ಸಣ್ಣ ಹೊಳೆಯೊಂದು ವಿಭಜಿಸಿದೆ. ದಡದ ಎರಡೂ ಬದಿ, ಚಪ್ಪರದ ಮೇಲೆ ಬಳ್ಳಿ ಹಬ್ಬುವಂತೆ ಊರು ಪರ್ವತಗಳ ಬೆನ್ನ ಮೇಲೆ ಹರಡಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೊಳೆದಾಟಲು ಕಟ್ಟಲಾದ ಕಟ್ಟಿಗೆ ಸೇತುವೆ. ಜನ ಕೃಷಿಕರು. ಮನೆಯ ಹಿತ್ತಲುಗಳಲ್ಲಿ ಸೇಬು ಆಫ್ರಿಕಾಟ್ ಹಣ್ಣಿನ ಗಿಡಗಳು; ಅಂಗಳದಲ್ಲಿ ಒಣಹಾಕಿದ ಹಣ್ಣಿನ ಚೂರುಗಳು. ಮನೆಗಳಲ್ಲಿರುವ ಜೀನು ಲಗಾಮು ನೋಡಿದರೆ, ಇವರ ಮೆಚ್ಚಿನ ಪ್ರಾಣಿ ಕುದುರೆ ಮತ್ತು ಕತ್ತೆಗಳು ಅನಿಸಿತು. ಕಾಡುಕುರಿಯ ಕೊಂಬು, ಚರ್ಮ ಬಿಲ್ಲುಬಾಣ, ಯಾಕ್ ಪ್ರಾಣಿಯ ಕೂದಲಿನ ಕಂಬಳಿಗಳು, ಇವರ ಪಶುಪಾಲನೆ ಮತ್ತು ಬೇಟೆಗಾರಿಕೆಯನ್ನು ಸೂಚಿಸುತ್ತವೆ.

ಇಲ್ಲಿ ಮನೆಗಳು ಸುತ್ತಲೂ ದನ ಕತ್ತೆ ಕಟ್ಟುವ ಕೊಟ್ಟಿಗೆಗಳಿವೆ. ಹಲಗೆಹಾಸಿನ ನೆಲ. ತಲೆತಗ್ಗಿಸಿಯೇ ಪ್ರವೇಶಿಸಬೇಕಾದ ಚಿಕ್ಕ ಬಾಗಿಲು ಮತ್ತು ನೆತ್ತಿಗೆ ತಾಗುವ ಛಾವಣಿಗಳು ಮನೆಯನ್ನು ಪೆಟ್ಟಿಗೆಯನ್ನಾಗಿಸಿವೆ. ಶಾಖ ಹೊರಹೋಗದೆ ಎಚ್ಚರವಹಿಸಿ ಕಟ್ಟಲಾದ ರಚನೆಗಳಿವು. ಚಳಿಗಾಲದಲ್ಲಿ ತಾಪಮಾನ ಮೈನಸ್ 20 ಡಿಗ್ರಿಗಿಳಿದು, ಇಡೀ ಪ್ರದೇಶ ಹಿಮ ಸಮಾಧಿಯಾಗುತ್ತದೆ. ಇಲ್ಲಿ ಸೈನ್ಯಕ್ಕಾಗಿ ಮಾಡಲಾದ ಹಳೆಯ ಬಂಕರುಗಳಿವೆ. ಕಲ್ಲುಮಣ್ಣಿನ ಗುಹಾಮನೆಗಳು ಬೇಸಗೆಯಲ್ಲಿ ಕೋಲ್ಡ್ಸ್ಟೋರೇಜುಗಳಾಗಿ, ಚಳಿಗಾಲದಲ್ಲಿ ಬೆಚ್ಚನೆಯ ತಾಣಗಳಾಗಿ ಕೆಲಸ ಮಾಡುತ್ತವೆ.

ಲಡಾಖಿನ ಪ್ರವಾಸಿಗರು ಈ ಬಾಲ್ಟಿಸ್ತಾನಿ ಹಳ್ಳಿಗಳನ್ನು ನೋಡಲು ತಪ್ಪದೆ ಬರುತ್ತಾರೆ. ಹಂಪಿಯಂತೆ ಇವೂ ಪ್ರವಾಸಿ ಸಂಸ್ಕೃತಿ ರೂಢಿಸಿಕೊಂಡಿವೆ. ಜನ ಮನೆಗಳನ್ನೇ ಹೋಂಸ್ಟೇಗಳಾಗಿ ಬದಲಿಸಿದ್ದಾರೆ. ಬಾಲ್ಟಿ ಸಂಸ್ಕೃತಿ ಬಿಂಬಿಸುವ ಕಟ್ಟಿಗೆಯ ವಸತಿಗೃಹ ಕಟ್ಟಿದ್ದಾರೆ. ಪೂರ್ವಜರು ಬಳಸುತ್ತಿದ್ದ ಬೇಟೆಯ ಬೇಸಾಯದ ಅಡುಗೆಯ ಉಡುಗೆ ತೊಡುಗೆಯ ವಸ್ತುಗಳನ್ನೆಲ್ಲ ಜೋಡಿಸಿಟ್ಟು ಮ್ಯೂಸಿಯಂ ಮಾಡಿದ್ದಾರೆ. ನಿತ್ಯ ಬದುಕಿಗೆ ನೆರವಾಗುವ ಸಾಮಗ್ರಿಗಳು ಪ್ರೇಕ್ಷಣೀಯ ವಸ್ತುಗಳಾಗಿ ಬದಲಾಗುವುದು ಇನ್ನೊಂದು ವೈರುಧ್ಯ.

ಈ ಹಳ್ಳಿಗಳು ರುದ್ರಸುಂದರವಾದ ಪ್ರಕೃತಿಯ ಮಡಿಲಲ್ಲಿವೆ ನಿಜ. ಆದರೆ ಹೊರಜಗತ್ತಿನಿಂದ ಕತ್ತರಿಸಿದಂತೆ ಬದುಕುತ್ತಿವೆ. ಮಕ್ಕಳು ಕಾಲೇಜು ಕಲಿಯಲು ಇನ್ನೂರು ಕಿಲೋಮೀಟರ್ ದೂರದ ಲೆಹ್ಗೆ ಹೋಗಬೇಕು. 18 ಸಾವಿರ ಅಡಿಯೆತ್ತರದ ಮತ್ತು ಕಠಿಣ ತಿರುವುಗಳಿರುವ ಥಾಂಗ್- ಲೇಹ್ ಹೈವೇ ಹೊರಜಗತ್ತನ್ನು ಸಂಪರ್ಕಿಸುವ ಏಕೈಕ ರಸ್ತೆ. ಬದಿಗೆ ಭೋರ್ಗರೆವ ಶೈಯೋಕ್ ಹೊಳೆ. ಗೋಡೆಯಂತೆ ಎದ್ದಿರುವ ಪರ್ವತಗಳು. ನಿಸರ್ಗದ ಸೆರೆಮನೆಯಲ್ಲಿರುವ ಹಳ್ಳಿಗಳ ದುರ್ಗಮತೆಯೇ ಪ್ರವಾಸಿಗರ ಸೆಳೆವ ಸಂಗತಿಯಾಗಿದೆ. ಪ್ರವಾಸೋದ್ಯಮವು ಇವುಗಳ ಪ್ರಮುಖ ಆದಾಯದ ಮೂಲ. ಬಾಲ್ಟಿ ತರುಣರು ಭಾರತೀಯ ಸೇನೆಗೆ ಪೋರ್ಟರುಗಳಾಗಿ ದುಡಿವರು. ತುರ್ತುಕ್ ತುಂಬ ರೆಸ್ಟೊರೆಂಟುಗಳಿವೆ. ಒಂದೆಡೆ ಇಂಗ್ಲಿಷಿನ ಜತೆ ಹೀಬ್ರೂಭಾಷೆಯ ಫಲಕವಿದ್ದ ಹೋಟೆಲಿತ್ತು. ಪಾಶ್ಚಿಮಾತ್ಯ ತಿನಿಸುಗಳಿದ್ದವು. ಆಫ್ರಿಕಾಟ್ ಮಲಬರ್ರಿ ಜ್ಯೂಸುಗಳು ಅಗ್ಗದಲ್ಲಿ ಸಿಗುತ್ತಿದ್ದವು.

ನಾವು ಹೋದಾಗ ಹಳ್ಳಿಗಳಲ್ಲಿ ಗೋಧಿಪೈರಿನ ಒಕ್ಕಲು ನಡೆಯುತ್ತಿತ್ತು. ಹೆಂಗಸರು ಗದ್ದೆಗಳಿಂದ ಪೈರನ್ನು ಹೊತ್ತು ತಂದು ಅಂಗಳದಲ್ಲಿ ಒಟ್ಟುತ್ತಿದ್ದರು. ಕೌಂಪೌಂಡಿಗೆ ಸೊಂಟದೆತ್ತರ ಕಲ್ಲಿನಗೋಡೆಗಳು ಸಿವುಡನ್ನು ಹೇರಿಕೊಂಡಿದ್ದವು.

ಹೊಲಗಳಲ್ಲಿ ಬಾರ್ಲಿ ಮೊಳಕೆ ಒಡೆದಿತ್ತು. ಹಣ್ಣಿನ ಗಿಡಗಳಲ್ಲಿ ಹಕ್ಕಿಗಳು ಸೇರಿ ಗಲಭೆ ಎಬ್ಬಿಸಿದ್ದವು. ಕಲ್ಲುಗೋಡೆಯ ಮನೆಗಳ ಬದಿ ಚುಳುಚುಳು ಹರಿವ ನೀರುಗಾಲುವೆ. ಥಾಂಗಿನಲ್ಲಿರುವ ಹೊಳೆದಡದಲ್ಲಿರುವ ಒಂದು ತೋಟಕ್ಕಿಳಿದು ಆಫ್ರಿಕಾಟ್ ಬ್ಲೂಬರ್ರಿ ಹಣ್ಣು ಕಚ್ಚಿರುವ ಹಣ್ಣಿನ ಮರಗಳ ಪಟ ತೆಗೆಯಲು ಯತ್ನಿಸಿದೆ. ಜನ ಹೇಳಿದರು: ‘ಇವು ನಮ್ಮವೇ ತೋಟಗಳು. ಹೊರಗಿನವರು ಅಡ್ಡಾಡಿದರೆ ಸೈನಿಕರು ಗಮನಿಸುತ್ತಾರೆ. ವಿಚಾರಣೆ ಮಾಡುತ್ತಾರೆ. ಧ್ವಜಸ್ಥಂಭ ಮತ್ತು ಮಾರುಕಟ್ಟೆ ಹೋಟೆಲುಗಳ ಆವರಣಕ್ಕೆ ಸೀಮಿತವಾಗಿರಿ’. ಗಡಿ ಗ್ರಾಮಗಳು ಅತಿಯೆಚ್ಚರದಲ್ಲಿ ಬದುಕುತ್ತವೆ.

ಭಾರತದ ಗಡಿಯಲ್ಲಿರುವ ಅನೇಕ ಕೊನೆಯ ಊರುಗಳಿಗೆ ಹೋಗಿರುವೆ. ಅವುಗಳಲ್ಲಿ ಚೀನಾ ಗಡಿಯಲ್ಲಿರುವ ಮಾನಾ ಹಾಗೂ ಬಾಂಗ್ಲಾ ಗಡಿಯ ಅಗರ್ತಲ ಸೇರಿವೆ. ಡೆಡೆಂಡ್ ಇರುವ ರಸ್ತೆ, ರೈಲು ನಿಲ್ದಾಣ, ಹಳ್ಳಿಗಳು ಒಂದು ಬಗೆಯ ವಿಷಾದಭಾವ ಹುಟ್ಟಿಸುತ್ತವೆ. ಹುಟ್ಟಿದ ಜೀವಗಳಿಗೆ ಸಾವು ಕೊನೆ ದಿಟ. ಆದರೆ ರಸ್ತೆಗಳಿಗೆ ಊರುಗಳಿಗೆ ಕೊನೆಯುಂಟೇ? ಆಗಸದಿಂದ ನೋಡುವಾಗ ದುಂಡಗಿರುವ ಭೂಮಂಡಲದಲ್ಲಿ ಅಂತಹ ಡೆಡೆಂಡ್ ಎಂಬ ಜಾಗವೇ ಇಲ್ಲ. ನೀಲಗಗನದ ತಳಗೆ, ನೀಲಸಮುದ್ರದ ನಡುವೆ ತೇಲುವ ಈ ಭೂಚೂರುಗಳನ್ನು ನಾವು ದೇಶಗಳೆಂದು ಹಂಚಿಕೊಂಡಿದ್ದೇವೆ. ವಿಭಜಿತ ಗಡಿಗಳು ಭೂಭಾಗಗಳಲ್ಲಿ ಕೆಲವನ್ನು ಕೊನೆಯ ಅಥವಾ ಮೊದಲ ಹಳ್ಳಿಗಳನ್ನಾಗಿ ಮಾಡಿವೆ. ಈ ಹಳ್ಳಿಗಳಲ್ಲಿ ಇನ್ನೆಲ್ಲೊ ಹುಟ್ಟಿದ ಹೊಳೆಗಳು ಹರಿದು ಇನ್ನೊಂದು ದೇಶವನ್ನು ಸೇರುತ್ತವೆ. ಅಲ್ಲಿನ ಹೂವಿಗೆ ಹಣ್ಣಿಗೆ ಬೇರೆ ದೇಶದಿಂದ ದುಂಬಿ ಹಕ್ಕಿಗಳು ಬರುತ್ತವೆ. ಗಾಳಿಗಂತೂ ಗಡಿಯೇ ಇಲ್ಲವಲ್ಲ. ಗಡಿಗಳಿರುವುದು ಮನುಷ್ಯರಿಗೆ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.