ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆಗಳ ಖಜ್ಜಿಯಾರ್

Last Updated 23 ಜನವರಿ 2019, 19:30 IST
ಅಕ್ಷರ ಗಾತ್ರ

ಹಿಮಾಚಲ ಪ್ರದೇಶ ವ್ಯಾಪ್ತಿಯಲ್ಲಿ ಅನೇಕ ಸುಂದರ ಗಿರಿಧಾಮಗಳಿವೆ. ಅವುಗಳ ಪೈಕಿ ಡಾಲ್‌ಹೌಸಿ ಕೂಡ ಒಂದು. ಅದೊಂದು ಅಪರೂಪದ ದೇಶ ವಿದೇಶಗಳ ಮೆಚ್ಚುಗೆಯ ಪ್ರವಾಸಿ ತಾಣ.

ಬ್ರಿಟೀಷ್ ಸೈನ್ಯದ ಪಂಜಾಬ್ ರೆಜಿಮೆಂಟಿನ ತುಕಡಿಗಳಿಗೆ ವಸಾಹತು ಕಲ್ಪಿಸುವುದಕ್ಕಾಗಿ ಮತ್ತು ಹಿರಿಯ ಅಧಿಕಾರಿಗಳ ಮೋಜು ಮಸ್ತಿಗಾಗಿ ಸುಂದರ ಪರಿಸರವುಳ್ಳ ಸ್ಥಳ ಹುಡುಕುವಾಗ ಹಿಮಾಲಯದ ಮಡಿಲಿನ ಈ ಮನಮೋಹಕ ಜಾಗ ಕಣ್ಣಿಗೆ ಬಿತ್ತು.

1854ರ ಸುಮಾರಿಗೆ ಬ್ರಿಟಿಷ್ ಅಧಿಕಾರಿ ಲಾರ್ಡ್ ಡಾಲ್‌ಹೌಸಿಯ ಕಾಲದಲ್ಲಿ ಈ ಗಿರಿಧಾಮ ರೂಪುಗೊಂಡಿತು. ಅದಕ್ಕಾಗಿ ’ಡಾಲ್‌ಹೌಸಿ’ ಎಂದು ಹೆಸರು ಬಂದಿದೆ.

ಇದು ಸಮುದ್ರಮಟ್ಟದಿಂದ 6 ಸಾವಿರದಿಂದ 9 ಸಾವಿರ ಅಡಿಗಳ ಎತ್ತರದಲ್ಲಿರುವ ಹಿಮಾಲಯದ ದೌಲಾಧರ್ ಪರ್ವತ ಶ್ರೇಣಿಯ ಪಶ್ಚಿಮಕ್ಕೆ ಇದೆ. ಕಥಲಘ್, ಪೊಟ್ರೈನ್, ಟೇರಾಹ್ (ಸ್ಥಳೀಯರು ಮೋತಿ ತಿಬ್ಬಾ ಎಂದು ಕರೆಯುತ್ತಾರೆ), ಬಕ್ರೋಟ, ಹಾಗೂ ಭಂಗೋರಾ ಎಂಬ ಐದು ಬೆಟ್ಟಪ್ರದೇಶಗಳನ್ನು ಒಳಗೊಂಡಿದೆ.

ಮಿನಿ ಸ್ವಿಟ್ಜರ್‌ಲ್ಯಾಂಡ್ - ‘ಖಜ್ಜಿಯಾರ್’

ಡಾಲ್‌ಹೌಸಿಯು ಬೆಟ್ಟ–ಕಣಿ ಡಿದ ತಾಣ. ಎಲ್ಲೆಲ್ಲಿ ಸ್ವಲ್ಪ ಸಮತಟ್ಟಾದ ಸ್ಥಳವಿದೆಯೋ ಅಲ್ಲಲ್ಲಿ ಪ್ರವಾಸಿಗರ ಜನದಟ್ಟಣೆ ಹೆಚ್ಚು. ಡಾಲ್‌ಹೌಸಿಯ ಸಮೀಪವಿರುವ ಅಂಥ ಒಂದು ಸ್ಥಳವೇ ‘ಮಿನಿ ಸ್ವಿಟ್ಜರ್‌ಲ್ಯಾಂಡ್’ ಎಂದು ಹೆಸರಾಗಿರುವ ‘ಖಜ್ಜಿಯಾರ್’. ಡಾಲ್‌ಹೌಸಿಯಿಂದ 16 ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಚಂಬಾದಿಂದ 25 ಕಿಲೋಮೀಟರ್ ದೂರದಲ್ಲಿದೆ. ಸನಿಹದಲ್ಲಿಯೇ ಖಜ್ಜಿಯಾರ್ ಸರೋವರ ಮತ್ತು ಕಾಲಾಟಾಪ್ ವನ್ಯಮೃಗಧಾಮವಿದೆ.

ಈ ಸರೋವರ ಸಾಸರ್ ಆಕಾರದಲ್ಲಿದೆ. ಸುತ್ತಲೂ ಎತ್ತರದ ಮರಗಳಿಂದ ಆವೃತ್ತವಾಗಿದೆ. ಹಸಿರು ಹುಲ್ಲು ಹಾಸಿನ ಅಂಚನ್ನು ಹೊಂದಿರುವ ಸರೋವರ ಇದು. ಇದರ ದಂಡೆಯ ಮೇಲೆ ‘ವಾಚ’ ಎಂಬ ಜೊಂಡು ಇರುವ ಕಾರಣ, ಇಲ್ಲಿ ನಡೆದರೆ ಸ್ಪಂಜಿನ ಮೇಲೆ ನಡೆದ ಅನುಭವವಾಗುತ್ತದೆ. ಸರೋವರದಲ್ಲಿ ನಡುಗಡ್ಡೆಯೂ ಇದ್ದು, ಅಲ್ಲಿಗೊಂದು ಸಣ್ಣ ಸೇತುವೆ ಮಾಡಿದ್ದಾರೆ.

1992ರ ಜುಲೈ 7ರಂದು ವಿಲ್ಲಿ ಟಿ ಬ್ಲೇಜರ್ ಎಂಬ ಸ್ವಿಟ್ಜರ್‌ಲೆಂಡ್ ಅಧಿಕಾರಿ ಖಜ್ಜಿಯಾರ್ ಅನ್ನು ಮಿನಿ ಸ್ವಿಟ್ಜ಼ರ್ ಲೆಂಡ್ ಎಂದು ಘೋಷಿಸಿದ. ಸ್ವಿಟ್ಜರ್‌ಲೆಂಡ್ ಹೋಲಿಕೆ ಇರುವ ಪ್ರಪಂಚದ 160 ಸ್ಥಳಗಳಲ್ಲಿ ಇದೂ ಒಂದು ಎಂದು ಹೇಳಿದ್ದಲ್ಲದೇ, ಇಲ್ಲಿನ ಕಲ್ಲೊಂದನ್ನು ಸ್ವಿಸ್ ಪಾರ್ಲಿಮೆಂಟಿನ ಕಟ್ಟಡದ ಸಮೀಪದಲ್ಲಿ ಕೊಲಾಜ್ ಮಾಡಲು ತೆಗೆದುಕೊಂಡು ಹೋದನಂತೆ. ಅಂದಿನಿಂದ ಖಜ್ಜಿಯಾರ್ ಪ್ರವಾಸಿಗಳಲ್ಲಿ ಮಿನಿ ಸ್ವಿಟ್ಜರ್‌ಲ್ಯಾಂಡ್ ಎಂದು ಪ್ರಚಲಿತವಾಗಿದೆ.

ಈ ಸ್ಥಳದಲ್ಲಿ ಹೋಟೆಲ್‌ಗಳು, ಕಾಟೇಜುಗಳು, ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಬಂಗಲೆಗಳು ಇವೆ. ಡಾಲ್‌ಹೌಸಿಯಿಂದ ಖಿಜ್ಜಿಯಾರ್‌ಗೆ ತೆರಳಲು ಖಾಸಗಿ ವಾಹನಗಳಿವೆ. ಸರ್ಕಾರಿ ಬಸ್ಸುಗಳನ್ನು ನೆಚ್ಚುವಂತಿಲ್ಲ. ಅವುಗಳಿಗೆ ನಿಗದಿತ ಸಮಯವಿಲ್ಲ. ಕೆಲವೊಮ್ಮೆ ಬರುವ ಗ್ಯಾರಂಟಿಯೂ ಇಲ್ಲವಂತೆ.

ಸರೋವರದ ಸುತ್ತಾ ದಟ್ಟವಾಗಿ ಬೆಳೆದಿರುವ ದೇವದಾರು ಮತ್ತು ಪೈನ್ ಮರಗಳ ನಡುವೆ ಸುತ್ತಾಡುವುದು, ಕುದುರೆ ಸವಾರಿ, ಜೋರ್ಬಿಂಗ್, ಪ್ಯಾರಾಚೂಟ್ ಮತ್ತು ಬೆಟ್ಟದ ಮೇಲಿನಿಂದ ಪ್ಯಾರಾಗ್ಲೈಡಿಂಗ್ ಇಲ್ಲಿನ ಆಕರ್ಷಣೆಗಳು. ಮಕ್ಕಳಿಗೆ ಹುಲ್ಲುಹಾಸಿನ ಮೇಲೆ ಉರುಳಾಡುವುದು ಖುಷಿ ಕೊಡುತ್ತದೆ. 30.69 ಕಿ.ಮೀ ವಿಸ್ತಾರದ ಕಾಲಾಟಾಪ್ ವನ್ಯಜೀವಿಧಾಮದಲ್ಲಿ ಜಿಂಕೆಗಳು ಮತ್ತು ಕರಡಿಗಳನ್ನು ನೋಡಬಹುದು. ಇಲ್ಲಿ ಚಾರಣ ಮಾಡುವುದೇ ಒಂದು ಸಂತಸದಾಯಕ. ವಾರ್ಷಿಕ ಕನಿಷ್ಟ ಒಂದು ಡಿಗ್ರಿಯಿಂದ ಗರಿಷ್ಠ‌ 27 ಡಿಗ್ರಿಯವರೆಗೆ ತಾಪಮಾನವಿರುತ್ತದೆ. ಈ ತಾಣಕ್ಕೆ ಹೋಗಲು ಮಾರ್ಚ್‌ನಿಂದ ಮೇ ತಿಂಗಳವರೆಗೆ ಸೂಕ್ತ ಕಾಲ. ಉಳಿದ ದಿನಗಳಲ್ಲಿ ಹವಾಮಾನದ ಪರಿಸ್ಥಿತಿಯ ಮೇಲೆ ಅವಲಂಬಿತವಾಗುವುದರಿಂದ ರಿಸ್ಕ್ ತೆಗೆದುಕೊಂಡು ಹೋಗಬಹುದು.

ಖಜ್ಜಿನಾಗ್ ದೇವಾಲಯ

ಸರೋವರದ ಪಕ್ಕದಲ್ಲಿಯೇ ಹನ್ನೆರಡನೆಯ ಶತಮಾನದ ನಾಗದೇವತೆಗೆ ಅರ್ಪಿತವಾದ ಖಜ್ಜಿನಾಗ್ ದೇವಾಲಯವಿದೆ. 16ನೇ ಶತಮಾನದಲ್ಲಿ ರಾಜಾ ಬಲಭದ್ರ ಬರ್ಮನ್ ಮರದ ಪಾಂಡವರ ಮೂರ್ತಿಗಳನ್ನು ಕೆತ್ತಿಸಿದ್ದಾನೆ. 17ನೇ ಶತಮಾನದಲ್ಲಿ ರಾಜಾ ಪೃಥ್ವಿ ಸಿಂಗನ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಚಂಬಾ ರಾಜ್ಯದ ದೊರೆ ಪ್ರೀತಿಸಿಂಗ್ ಎಂಬಾತ ಈ ದೇವಾಲಯದ ಗೋಪುರಕ್ಕೆ ಚಿನ್ನದ ತಗಡಿನ ಹೊದಿಕೆಯನ್ನು ಹಾಕಿಸಿದ ಎಂಬ ಕಾರಣಕ್ಕೆ ಇದನ್ನು ‘ಬಂಗಾರದ ದೇವಿಯ ಮಂದಿರ’ ಎಂದು ಕರೆಯಲಾಗುತ್ತದೆ. ದೇವಾಲಯದ ಒಳಭಾಗದಲ್ಲಿ ಪಾಂಡವರ ಮರದ ಮೂರ್ತಿಗಳನ್ನು, ಮೇಲಿನಿಂದ ಇಳಿಬಿದ್ದ ಕೌರವರ ಮೂರ್ತಿಗಳನ್ನೂ ಕಾಣಬಹುದು. ಶಿವ ಮತ್ತು ಹಿಡಿಂಬೆ ಆರಾಧನೆ ಇಲ್ಲಿನ ವಿಶೇಷ.

‘ಮಿನಿ ಸ್ವಿಟ್ಜರ್‌ಲ್ಯಾಂಡ್’ ಎಂದು ಕರೆಸಿಕೊಂಡ ಖಜ್ಜಿಯಾರ್ ಪ್ರವಾಸಿಗರನ್ನು ನಿರಾಸೆಗೊಳಿಸುವುದಿಲ್ಲ. ಸ್ಮರಣೀಯ ಕ್ಷಣಗಳನ್ನು ಮನದಲ್ಲಿ ಮೂಡುವಂತೆ ಮಾಡುತ್ತದೆ. ಕ್ಯಾಮೆರಾ/ಫೋನ್‌ ಕೊಂಡೊಯ್ದರೆ, ಮೆಮೊರಿ ಕಾರ್ಡ್ ತುಂಬುವಷ್ಟು ಚಿತ್ರಗಳನ್ನು ತುಂಬಿಕೊಂಡು ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT