ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ನ ಮುಕುಟ ಸ್ಯಾಕ್ರೆ ಕೋರ್‌ ಬೆಸಿಲಿಕಾ

Published 18 ನವೆಂಬರ್ 2023, 23:57 IST
Last Updated 18 ನವೆಂಬರ್ 2023, 23:57 IST
ಅಕ್ಷರ ಗಾತ್ರ

ಪ್ಯಾರಿಸ್‌ ನಗರದ ಅತಿ ಎತ್ತರದ ಪ್ರದೇಶ ಬ್ಯೂಟ್‌ ಮೊಮಾರ್ಟ್ರ (Butte Montmartre). ಪ್ಯಾರಿಸ್‌ಗೆ ಬರುವ ಪ್ರವಾಸಿಗರಿಗೆ ಐಫೆಲ್‌ ಗೋಪುರವನ್ನೊಳಗೊಂಡಂತೆ ಅನೇಕ ಧಾರ್ಮಿಕ, ಐತಿಹಾಸಿಕ ಸ್ಮಾರಕಗಳು ಇಲ್ಲಿ ನೋಡಲು ಇವೆ. ಬೋಟ್‌ ಮೂಲಕ ತೆರಳಿ ನಗರದ ವೀಕ್ಷಣೆಯ ಮೂಲಕ ಪ್ಯಾರಿಸ್‌ನ ಹಲವಾರು ಸ್ಮಾರಕಗಳನ್ನು ನೋಡಬಹುದು. ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ಲೂವರ್‌ ಮ್ಯೂಸಿಯಂ( Loure Museum)ನಲ್ಲಿರುವ ಅಪಾರ ವಸ್ತು ಸಂಗ್ರಹವನ್ನು ಹಾಗೂ ಅತ್ಯಾಕರ್ಷಕ ಮೊಮಾರ್ಟ್ರದ ‘ಸ್ಯಾಕ್ರೆ ಕೋರ್‌ ಬೆಸಿಲಿಕಾ’ಗೆ ಭೇಟಿ ನೀಡಿ, ಪ್ಯಾರಿಸ್‌ ನಗರದ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳುವುದು ಪ್ರವಾಸಿಗರಿಗೆ ಖುಷಿಯ ವಿಚಾರ.

‘ಸ್ಯಾಕ್ರೆ ಕೋರ್‌ ಬೆಸಿಲಿಕಾ’ ಇರುವ ಮೊಮಾರ್ಟ್ರಗೆ ಹೋಗಲು ಮುಖ್ಯ ರಸ್ತೆಯಿಂದ ಎರಡು ಮೂರು ಮಾರ್ಗಗಳಿವೆ. ಇಲ್ಲಿ ರಸ್ತೆಗಳ ಅಗಲ ಕಿರಿದಾಗಿದ್ದು, ಸದಾಕಾಲ ಪ್ರವಾಸಿಗರಿಂದ ಕಿಕ್ಕಿರಿದಿರುತ್ತವೆ. ಇಕ್ಕೆಲಗಳಲ್ಲಿರುವ ಅಂಗಡಿಗಳಲ್ಲಿ ಪ್ರಸಾಧನ ಸಾಮಗ್ರಿಗಳು, ಮಹಿಳೆಯರ ಕೈಚೀಲಗಳು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರುತ್ತಾರೆ.

ಕಿರಿದಾದ ರಸ್ತೆಗಳಲ್ಲಿ ಅಂಗಡಿಗಳ ನಡುವೆ ಸಾಗುವಾಗ ಪ್ರಪಂಚದ ಹಲವು ದೇಶಗಳ ಪ್ರವಾಸಿಗರು ನಮಗೆ ಎದುರಾಗುತ್ತಾರೆ. ಕೆಲವರು ಮುಗುಳ್ನಗೆ ಚೆಲ್ಲಿದರೆ, ಕೆಲವರು ತಮ್ಮ ಪರಿಚಯ ಮಾಡಿಕೊಂಡು, ಪ್ರವಾಸ ಸಂತಸ ತರಲೆಂದು ಹಾರೈಸುತ್ತಾರೆ.

[object Object]
ಸ್ಯಾಕ್ರೆ ಕೋರ್ ಬೆಸೆಲಿಕಾ

ಬ್ಯೂಟ್‌ ಮೊಮಾರ್ಟ್ರದ ಶಿಖರದಲ್ಲಿ ‘ಸ್ಯಾಕ್ರೆ ಕೋರ್‌ ಬೆಸಿಲಿಕಾ’ ರೋಮನ್‌ ಕ್ಯಾಥೋಲಿಕ್‌ ಚರ್ಚ್‌ ಇದೆ. ಬೆಟ್ಟದ ತಳದಿಂದ ಸುಮಾರು 130 ಮೀಟರ್‌ ಎತ್ತರದಲ್ಲಿರುವ ಬೆಸಿಲಿಕಾವನ್ನು ತಲುಪಲು ಮೆಟ್ಟಿಲುಗಳನ್ನೇರಿ ಹೋಗಬೇಕು. ಎರಡು ಹಂತಗಳಲ್ಲಿ ಲಾನ್‌ಗಳಿವೆ. ಪ್ಯಾರಿಸ್‌ನಲ್ಲೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಎರಡನೇ ಸ್ಮಾರಕ ಇದಾಗಿದೆ. ಬೆಸಿಲಿಕಾದ ನಿರ್ಮಾಣ ಕಾರ್ಯವು 1875ರಲ್ಲಿ ಪ್ರಾರಂಭವಾಗಿ 1914ರಲ್ಲಿ ಪೂರ್ಣಗೊಂಡಿತು. ಸ್ಯಾಕ್ರೆ ಕೋರ್‌ ಅನ್ನು ಟ್ರಾವರ್ಟೈನ್‌ (travertine-ಒಂದು ಬಗೆಯ ತಿಳಿ ಬಣ್ಣದ ಕಲ್ಲು)ನಿಂದ ನಿರ್ಮಿಸಲಾಗಿದ್ದು, ಬೆಸಿಲಿಕಾದ ನಿರ್ಮಾಣಕ್ಕೆ ಅಂದಿನ ಕಾಲದಲ್ಲಿ ತಗುಲಿದ ಒಟ್ಟು ವೆಚ್ಚ 70 ಲಕ್ಷ ಫ್ರೆಂಚ್‌ ಫ್ರಾಂಕ್‌ಗಳೆಂದು ಅಂದಾಜಿಸಲಾಗಿದ್ದು, ವೆಚ್ಚವನ್ನು ಸಂಪೂರ್ಣವಾಗಿ ಖಾಸಗಿ ದೇಣಿಗೆಗಳಿಂದ ಸಂಗ್ರಹಿಸಲಾಯಿತಂತೆ.

ಬೆಸಿಲಿಕಾ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಲುಕ್-‌ಒಲಿವಿಯರ್‌ ಮರ್ಸನ್‌, ಎಚ್. ಮ್ಯಾಗ್ನೆ ಮತ್ತು ಆರ್.‌ ಮಾರ್ಟಿನ್‌ ರಚಿಸಿರುವ ‘ಕ್ರೈಸ್ಟ್‌ ಇನ್‌ ಮೆಜೆಸ್ಟಿ’ ಎಂಬ ಶೀರ್ಷಿಕೆಯ ಮೊಸಾಯಿಕ್ ಕಲಾಕೃತಿಯು 475 ಚದರ ಮೀಟರ್‌ ವಿಸ್ತೀರ್ಣವಿದ್ದು, ವಿಶ್ವದ ಅತಿದೊಡ್ಡ ಮೊಸಾಯಿಕ್‌ಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಂತಿರುವ ಭಂಗಿಯಲ್ಲಿರುವ ಯೇಸುಕ್ರಿಸ್ತ ಬಿಳಿ ನಿಲುವಂಗಿಯನ್ನು ಧರಿಸಿದ್ದು, ತನ್ನ ಎರಡೂ ಕೈಗಳನ್ನು ಚಾಚಿದ್ದಾನೆ. ಮೊಸಾಯಿಕ್‌ನ ತಳಭಾಗದಲ್ಲಿ ಲ್ಯಾಟಿನ್‌ ಭಾಷೆಯ ಶಾಸನವಿದೆ.

10 ಕಿ.ಮೀ. ದೂರ ತಲುಪುವ ಘಂಟೆಯ ಸದ್ದು

ಬೆಸಿಲಿಕಾದ ಒಳ ಮತ್ತು ಹೊರ ಆವರಣಗಳು ಅತ್ಯಂತ ಆಕರ್ಷಕವಾಗಿವೆ. ಬೆಸಿಲಿಕಾದ ಬೆಲ್ಫ್ರಿ(ಘಂಟೆ ಗೋಪುರ)ಯಲ್ಲಿ ಒಟ್ಟು ಐದು ಘಂಟೆಗಳಿವೆ. ಘಂಟೆಗಳ ಗಾತ್ರವನ್ನು ಅನುಸರಿಸಿ ಅವರೋಹಣ ಕ್ರಮದಲ್ಲಿ ಫೆಸಿಲಿಟ್‌, ಲೂತಿಸ್‌, ನಿಕೋಲ್‌ ಮತ್ತು ಎಲಿಜಬೆತ್‌ ಎಂದು ಹೆಸರಿಸಲಾಗಿದೆ. ಈ ನಾಲಕ್ಕೂ ಘಂಟೆಗಳು ಮೂಲತಃ ಸಂತ ರೋಚ್‌ ಚರ್ಚ್‌ನ ಘಂಟೆಗಳಾಗಿದ್ದು, 1969ರಲ್ಲಿ ಬೆಸಿಲಿಕಾಗೆ ಸ್ಥಳಾಂತರಿಸಲಾಯಿತು. ಇವುಗಳ ಕೆಳಗೆ ‘ದಿ ಸವೊಯಾರ್ಡೆ’ ಎಂಬ ಮತ್ತೊಂದು ದೊಡ್ಡ ಘಂಟೆ ಇದೆ. ಫ್ರಾನ್ಸ್‌ನ ಅತಿದೊಡ್ಡ ಘಂಟೆ ಹಾಗೂ ಯುರೋಪ್‌ನ ಐದನೇ ಅತಿದೊಡ್ಡ ಘಂಟೆ ಇದು. ಈ ಘಂಟೆಯ ತೂಕ 18,835 ಕೆ.ಜಿ. ಮತ್ತು ಹೊರಮೈನ ಸುತ್ತಳತೆ 9.6 ಮೀ. ಸವೊಯಾರ್ಡೆಯನ್ನು ಪ್ರಮುಖ ಧಾರ್ಮಿಕ ರಜಾದಿನಗಳಂದು ಮಾತ್ರ ಬಾರಿಸಲಾಗುತ್ತದೆ. ಇದರ ಶಬ್ದ ಸುಮಾರು 10 ಕಿ.ಮೀ. ದೂರದವರೆಗೂ ಕೇಳಿಸುತ್ತದಂತೆ. ಬೆಸಿಲಿಕಾದ ಗುಮ್ಮಟದ ಸುತ್ತಲೂ ಪ್ರವಾಸಿಗರು ನಿಂತು 360 ಡಿಗ್ರಿಯಲ್ಲಿ ಪ್ಯಾರಿಸ್‌ ನಗರದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಬೆಸಿಲಿಕಾದ ಒಳಭಾಗದಿಂದ ಗುಮ್ಮಟವನ್ನು ತಲುಪಲು ಮೆಟ್ಟಿಲುಗಳ ವ್ಯವಸ್ಥೆಯಿದೆ. ಸ್ಯಾಕ್ರೆ ಕೋರ್‌ ಬೆಸಿಲಿಕಾಗೆ ಭೇಟಿಯಿತ್ತ ಸವಿನೆನಪಿಗಾಗಿ, ಬೆಸಿಲಿಕಾದ ಚಿತ್ರವಿರುವ ಸ್ಮರಣಾರ್ಥ ನಾಣ್ಯಗಳನ್ನು ಇಲ್ಲಿ ಮಾರುತ್ತಾರೆ.

[object Object]
ಪುಟಾಣಿ ರೈಲು

ಬೆಸಿಲಿಕಾ ಮುಂಭಾಗದಿಂದ ಪ್ಯಾರಿಸ್‌ ನಗರದ ನೋಟ ಅತ್ಯಂತ ಸುಂದರವಾಗಿ ಕಾಣುತ್ತದೆ. ‘ಮೊಮಾರ್ಟ್ರ’ ಪ್ರದೇಶವು ಸುಂದರವಾಗಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ತಿಳಿ ಬಣ್ಣದ ಕಟ್ಟಡಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನಾಲ್ಕೈದು ಅಂತಸ್ತುಗಳ ಪ್ರತಿಯೊಂದು ಮನೆಯೂ ಪ್ರತ್ಯೇಕ ಬಾಲ್ಕನಿಯನ್ನು ಹೊಂದಿದೆ. ಅಲ್ಲಿ ಹೂ ಬುಟ್ಟಿಗಳನ್ನು ತೂಗು ಹಾಕಲಾಗಿದ್ದು, ಮನೆಯ ಅಂದವನ್ನು ಅವು ಹೆಚ್ಚಿಸಿವೆ. ಮೊಮಾರ್ಟ್ರದಲ್ಲಿ ಪುಟಾಣಿ ರೈಲಿನ ವ್ಯವಸ್ಥೆ ಇದ್ದು, ಕಡಿಮೆ ವೇಗದಲ್ಲಿ ಚಲಿಸುವ ಈ ರೈಲಿನಲ್ಲಿ ಕುಳಿತು ಪ್ಯಾರಿಸ್‌ ನಗರದ ಹಾಗೂ ಮೊಮಾರ್ಟ್ರದ ಸೌಂದರ್ಯವನ್ನು ಸವಿಯಬಹುದು.

[object Object]
ಸೂರ್ಯಾಸ್ತದ ವೇಳೆಗೆ ಪ್ಯಾರಿಸ್‌ ನಗರ ಬಾನೆತ್ತರದಿಂದ ಹೀಗೆ ಕಾಣುತ್ತದೆ...

ಓಣಿಗಳಲ್ಲಿ ಕಲಾವಿದರ ಬೋಣಿ

ಇಲ್ಲಿನ ರಸ್ತೆಗಳಲ್ಲಿ ಓಡಾಡುವಾಗ ಎಲ್ಲಿ ನೋಡಿದರೂ ಚಿತ್ರಗಳನ್ನು ರಚಿಸುತ್ತಿರುವ ಕಲಾವಿದರು ಕಾಣಸಿಗುತ್ತಾರೆ ಹಾಗೂ ಪ್ರವಾಸಿಗರು 10-15 ಯೂರೋಗಳನ್ನು ನೀಡಿ ಪ್ಯಾರಿಸ್‌ ನಗರಕ್ಕೆ ಭೇಟಿ ನೀಡಿದ ನೆನಪಿಗಾಗಿ ತಮ್ಮ ಚಿತ್ರಗಳನ್ನು ಬರೆಸಿಕೊಳ್ಳುತ್ತಾರೆ. ‘ಉದರ ನಿಮಿತ್ತಂ ಬಹುಕೃತ ವೇಷಂ’ ಎನ್ನುವ ಹಾಗೆ, ಹೊಟ್ಟೆಪಾಡಿಗಾಗಿ ಪ್ಯಾರಿಸ್‌ನಲ್ಲೂ ವಿವಿಧ ವೇಷಗಳನ್ನು ಧರಿಸಿ ಪ್ರವಾಸಿಗರ ಗಮನ ಸೆಳೆಯುವ, ಮೈಗೆ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಬಳಿದುಕೊಂಡು ಅಲುಗಾಡದೆ ನಿಂತಿರುವ ಕಲಾವಿದರು ಕಾಣಸಿಗುತ್ತಾರೆ. ಪಕ್ಕದಲ್ಲೇ ಇರಿಸಲಾಗಿರುವ ಟೊಪ್ಪಿಯಲ್ಲಿ ಪ್ರವಾಸಿಗರು ಹಾಕುವ ಚಿಲ್ಲರೆ ನಾಣ್ಯಗಳೇ ಇವರಿಗೆ ಜೀವನಾಧಾರ. ರಸ್ತೆಯ ಇಕ್ಕೆಗಳಲ್ಲಿರುವ ಅಂಗಡಿಗಳಲ್ಲಿ 19ನೇ ಮತ್ತು 20ನೇ ಶತಮಾನದ ಪ್ಯಾರಿಸ್‌ನ ಬೊಹಿಮಿಯನ್ ಕಲೆಯ ವರ್ಣಚಿತ್ರಗಳನ್ನು ಮಾರಾಟಕ್ಕಿಟ್ಟಿರುತ್ತಾರೆ. ವರ್ಣರಂಜಿತ ಚಿತ್ರಗಳು ನಮ್ಮನ್ನು ಬೇರೆಂದು ಲೋಕಕ್ಕೆ ಕರೆದೊಯ್ಯುತ್ತವೆ.

ಪ್ಯಾರಿಸ್‌ ನಗರದ ಸೌಂದರ್ಯವನ್ನು ಸೆರೆಹಿಡಿದಿರುವ ವಿವಿಧ ಗಾತ್ರಗಳ ತೈಲವರ್ಣಚಿತ್ರಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಹೆನ್ರಿ ಟೌಲೌಸ್-ಲೌಟ್ರೆಕ್, ವಿನ್ಸೆಂಟ್ ವ್ಯಾನ್ ಗಾಗ್, ಪ್ಯಾಬ್ಲೊ ಪಿಕಾಸೊ, ಹೆನ್ರಿ ಮ್ಯಾಟಿಸ್ಸೆ ಸೇರಿ ಅನೇಕ ವರ್ಣಚಿತ್ರಕಲಾವಿದರು ಪ್ಯಾರಿಸ್‌ ನಗರದ ಮೇಲೆ ಪ್ರಭಾವ ಬೀರಿದ್ದರು. ಪ್ಯಾರಿಸ್‌ ನಗರ ಸೌಂದರ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು, ಬಹುತೇಕ ಎಲ್ಲಾ ಸ್ಮಾರಕಗಳನ್ನು ವೀಕ್ಷಿಸಲು ಕಡಿಮೆಯೆಂದರೆ, 3-4 ದಿನಗಳ ಸಮಯ ಬೇಕಾಗುತ್ತದೆ.

[object Object]
475 ಚದರ ಮೀಟರ್‌ ವಿಸ್ತೀರ್ಣದ ‘ಕ್ರೈಸ್ಟ್‌ ಇನ್ ಮೆಜೆಸ್ಟಿ’ ಕಲಾಕೃತಿ

ಸ್ಯಾಕ್ರೆ ಕೋರ್‌ ಬೆಸಿಲಿಕಾ ಚಿತ್ರ: ಲೇಖಕರವು

ಪ್ಯಾರಿಸ್‌ ನಗರದ ನೋಟ ಹಾಗೂ ಮೊಸಾಯಿಕ್‌ ಚಿತ್ರಗಳು: ಸ್ಟಾಕ್‌ ಫೋಟೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT