ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ– ಡೆಹರಾಡೂನ್‌ ಕಾರಿಡಾರ್: ಅಭಿವೃದ್ಧಿ ಹೆದ್ದಾರಿಯಲ್ಲೊಂದು ಹಸಿರು ಹಾದಿ...

Published 3 ಫೆಬ್ರುವರಿ 2024, 23:47 IST
Last Updated 3 ಫೆಬ್ರುವರಿ 2024, 23:47 IST
ಅಕ್ಷರ ಗಾತ್ರ
ದೆಹಲಿ–ಡೆಹ್ರಾಡೂನ್‌ ಎಕಾನಾಮಿಕ್‌ ಕಾರಿಡಾರ್‌ ಉತ್ತರಾಖಂಡ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಬಲ್ಲದು ಎಂಬ ವಿಶ್ವಾಸ ಸರ್ಕಾರ ಮತ್ತು ಜನರದು. ಆದರೆ, ಈ ಕಾರಿಡಾರ್‌ನಿಂದ ಪರಿಸರ ಹಾನಿ ಆಗುತ್ತಿಲ್ಲವೆ? ಇಲ್ಲಿನ ವನ್ಯಜೀವಿಗಳು, ಜೀವಿ ವೈವಿಧ್ಯಗಳಿಗೆ ಕುತ್ತು ಬರುವುದಿಲ್ಲವೇ ಎಂಬ ಪ್ರಶ್ನೆಯೂ ಸಹಜ.

'ಹಿಮಾಲಯದ ಪರ್ವತಗಳಲ್ಲಿರುವ ಹಳ್ಳಿಗರ ಜೀವನದಲ್ಲಿ ಈಗ ಯಾವುದೇ ಸ್ವಾರಸ್ಯ ಉಳಿದಿಲ್ಲ. ಅವಘಡಗಳು ಕಟ್ಟಿಟ್ಟ ಬುತ್ತಿ. ಯಾವಾಗ ಪರ್ವತದ ಭಾಗ ಕುಸಿಯುತ್ತದೆಯೋ, ಹಳ್ಳಿಗಳು ಮಾಯ ಆಗುತ್ತವೆಯೋ ಎಂಬ ಭಯವಿದೆ. ಉದ್ಯೋಗಕ್ಕಾಗಿ ಬಯಲಿಗೇ ಬರಬೇಕು’–ಇದು ಉತ್ತರಾಖಂಡದ ಯುವ ಸಮೂಹದ ಮನದಾಳದ ಮಾತು.

ಪರ್ವತ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವುದು ಇಂದಿನ ದಿನಗಳಲ್ಲಿ ಕಷ್ಟವೇ. ಇಲ್ಲಿನ ಹಳ್ಳಿಗಳಲ್ಲಿ ಮೊಬೈಲ್‌ ಸಂಪರ್ಕ ಇದೆ. ರಸ್ತೆ ಇದೆ. ಸಿಸಿಟಿವಿ ಕ್ಯಾಮೆರಾ ನಿಗಾ ಸೇರಿ ಇತರ ಸೌಲಭ್ಯಗಳೂ ಇವೆ. ಆದರೆ, ಉದ್ಯೋಗ ಇಲ್ಲ. ಕಲಿತ ವಿದ್ಯೆಗೆ ತಕ್ಕ ಉದ್ಯೋಗಕ್ಕೆ ಮಹಾನಗರಗಳಿಗೇ ಹೋಗಬೇಕು ಎಂಬುದು ಇಲ್ಲಿನ ಯುವ ಜನಾಂಗದ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಬೇಸಿಗೆಯಲ್ಲಿ ನೀರು ಹರಿಯದ ಮೊಹಾಂಡ್‌ ನದಿಯ ಸೆರಗಿನಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ

ಬೇಸಿಗೆಯಲ್ಲಿ ನೀರು ಹರಿಯದ ಮೊಹಾಂಡ್‌ ನದಿಯ ಸೆರಗಿನಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ

ಡೆಹ್ರಾಡೂನ್‌, ದೆಹಲಿ, ಮುಂಬೈ, ಬೆಂಗಳೂರು–ಹೀಗೆ ಹಲವು ನಗರಗಳಿಗೆ ಈ ಯುವ ಸಮೂಹ ಗುಳೆ ಹೋಗುತ್ತಿದೆ. ಪರ್ವತಗಳ ಮಧ್ಯೆ ಇರುವ ಹಳ್ಳಿಗಳಲ್ಲಿ ಈಗೇನಿದ್ದರೂ ವೃದ್ಧರು, ಮಹಿಳೆಯರು ಮತ್ತು ಕಡಿಮೆ ಕಲಿತವರು ಉಳಿದಿದ್ದಾರೆ. ಕುರಿ ಪಾಲನೆ, ಅಲ್ಪ ಪ್ರಮಾಣದ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಕಲಿತವರು ದೊಡ್ಡ ನಗರಗಳಲ್ಲಿ ಒಳ್ಳೆಯ ಕೆಲಸಗಳನ್ನು ಹಿಡಿದಿದ್ದಾರೆ.

ಹಳ್ಳಿಗಳಿಂದ ವಲಸೆ ತಪ್ಪಿಸಿ, ಅಲ್ಲಲ್ಲೇ ಉದ್ಯೋಗ ಸೃಷ್ಟಿಸಬೇಕು, ಜನರು ಅಲ್ಲೇ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂಬುದು ಆಳುವವರ ಛಲ. ಅದಕ್ಕಾಗಿ ದೊಡ್ಡದೊಂದು ಹೆದ್ದಾರಿ ನಿರ್ಮಿಸುತ್ತಿದೆ ಕೇಂದ್ರ ಸರ್ಕಾರ. ಇದರಿಂದ ತಣ್ಣಗೆ ಮಲಗಿದ್ದ ಹಳ್ಳಿಗಳಲ್ಲಿ ಈಗ ಸಂಚಲನ ಉಂಟಾಗಿದೆ. ಈ ಸಂಚಲನಕ್ಕೆ ಚಾರ್‌ಧಾಮ್‌ ಕಾರಿಡಾರ್‌, ದೆಹಲಿ–ಡೆಹ್ರಾಡೂನ್‌ ಎಕಾನಾಮಿಕ್‌ ಕಾರಿಡಾರ್‌ಗಳೇ ಕಾರಣ. ಇವು ತಮ್ಮ ಬದುಕಿನಲ್ಲಿ ಬದಲಾವಣೆ ತರಬಲ್ಲವು ಎಂಬುದು ಇಲ್ಲಿನ ಜನರ ನಿರೀಕ್ಷೆ.

ದೆಹಲಿ–ಡೆಹ್ರಾಡೂನ್‌ ಎಕಾನಾಮಿಕ್‌ ಕಾರಿಡಾರ್‌ ಈ ಪುಟ್ಟ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಬಲ್ಲದು ಎಂಬ ವಿಶ್ವಾಸ ಸರ್ಕಾರ ಮತ್ತು ಅಲ್ಲಿನ ಜನರದು. ಆದರೆ, ಈ ಕಾರಿಡಾರ್‌ನಿಂದ ಪರಿಸರಕ್ಕೆ ಹಾನಿ ಆಗುತ್ತಿಲ್ಲವೆ? ಇಲ್ಲಿನ ವನ್ಯಜೀವಿಗಳು, ಜೀವಿ ವೈವಿಧ್ಯಗಳಿಗೆ ಕುತ್ತು ಬರುವುದಿಲ್ಲವೇ ಎಂಬ ಪ್ರಶ್ನೆಯೂ ಸಹಜ. ಇದಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ಹೋರಾಟಗಳೂ ನಡೆದಿವೆ. ಈ ಎಲ್ಲ ‘ಅಡ್ಡಿ’ಗಳೂ ನಿವಾರಣೆ ಆಗಿದ್ದು, ಹೆದ್ದಾರಿ ನಿರ್ಮಾಣ ಕಾರ್ಯ ಈಗ ಅಂತಿಮ ಹಂತಕ್ಕೆ ಬಂದಿದೆ.

ಉತ್ತರಾಖಂಡ ರಾಜ್ಯಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇನ್ನಿಲ್ಲದಂತೆ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ, ಚಾರ್‌ಧಾಮ್‌ಗೆ ಹೋಗುವ ಪ್ರವಾಸಿಗರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಈ ರಾಜ್ಯಕ್ಕೆ ಪ್ರಮುಖ ಆದಾಯದ ಮೂಲ ಪ್ರವಾಸೋದ್ಯಮ. ಪ್ರತಿ ವರ್ಷ ಸುಮಾರು 5 ಕೋಟಿಗೂ ಹೆಚ್ಚು ಪ್ರವಾಸಿಗರು ಈ ರಾಜ್ಯಕ್ಕೆ ಬರುತ್ತಾರೆ. ಅವರಲ್ಲಿ 3.8 ಕೋಟಿಗೂ ಹೆಚ್ಚು ಜನ ತೀರ್ಥಯಾತ್ರೆಗೆ ಬರುತ್ತಾರೆ. ‘ಈ ಕಾರಿಡಾರ್‌ ನಿರ್ಮಾಣದಿಂದ ಪ್ರವಾಸೋದ್ಯಮ ಮಾತ್ರವಲ್ಲದೇ, ಇತರ ಆರ್ಥಿಕ ಬೆಳವಣಿಗಳಿಗೂ ಇಂಬು ಸಿಗಲಿದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಕಾರ್ಯನಿರ್ವಾಹಕ ಎಂಜಿನಿಯರ್‌ ರೋಹಿತ್‌ ಪನ್ವಾರ್.

ಶಿವಾಲಿಕ್ ಮತ್ತು ರಾಜಾಜೀ ರಾಷ್ಟ್ರೀಯ ಉದ್ಯಾನಗಳ ಮಧ್ಯೆ ಹಾದು ಹೋದ ಹೆದ್ದಾರಿಯ ನೋಟ

ಶಿವಾಲಿಕ್ ಮತ್ತು ರಾಜಾಜೀ ರಾಷ್ಟ್ರೀಯ ಉದ್ಯಾನಗಳ ಮಧ್ಯೆ ಹಾದು ಹೋದ ಹೆದ್ದಾರಿಯ ನೋಟ

ದೆಹಲಿಯ ಅಕ್ಷರಧಾಮ ದೇವಸ್ಥಾನದ ಆವರಣದಿಂದ ಆರಂಭಗೊಂಡು ಉತ್ತರಾಖಂಡದ ಡೆಹ್ರಾಡೂನ್‌ಗೆ ತಲುಪುವ ಈ ಹೆದ್ದಾರಿಯ ವಿಶೇಷತೆಗಳಲ್ಲಿ ಮುಖ್ಯವಾದದ್ದು, ‘ಹಸಿರು ಕಾರಿಡಾರ್‌’ (ಗ್ರೀನ್‌ ಕಾರಿಡಾರ್‌). ಇದು ಏಷ್ಯಾದ ಅತಿ ಉದ್ದದ ‘ವನ್ಯಜೀವಿ ಕಾರಿಡಾರ್‌’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 20 ಕಿಲೊಮೀಟರ್‌ ಉದ್ದದ (ಗಣೇಶ್‌ಪುರ್– ಡೆಹ್ರಾಡೂನ್‌) ವನ್ಯಜೀವಿ ಕಾರಿಡಾರ್‌ ಈಗ ಎಲ್ಲರ ಗಮನ ಸೆಳೆದಿದೆ. ಇಲ್ಲಿ ಹೆದ್ದಾರಿಯು ಮೇಲ್ಸೇತುವೆ ಮತ್ತು ಸುರಂಗಗಳ ಮೂಲಕ ಹಾದು ಹೋಗುತ್ತದೆ. ಮತ್ತೂ ವಿಶೇಷವೆಂದರೆ ಈ ಇಡೀ ಕಾರಿಡಾರ್‌ ‘ಮೊಹಾಂಡ್‌’ ನದಿಯ ಪಕ್ಕದಲ್ಲೇ ನಿರ್ಮಾಣ ಆಗಿದೆ. ಮಳೆಗಾಲದಲ್ಲಿ ಮೂರು ತಿಂಗಳು ಮಾತ್ರ ಭೋರ್ಗರೆದು ಹರಿಯುವ ಮೊಹಾಂಡ್‌, ಬಳಿಕ ಬಹುತೇಕ ಬರಿದಾಗಿರುತ್ತದೆ.

ಕೇಂದ್ರ ಸರ್ಕಾರದ ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೊ (ಪಿಐಬಿ) ಕಾರಿಡಾರ್‌ ಪ್ರಗತಿಯನ್ನು ತೋರಿಸಲು ಕರೆದುಕೊಂಡು ಅಲ್ಲಿಗೆ ಹೋದಾಗ ಮೂಳೆ ಕೊರೆಯುವಷ್ಟು ಚಳಿ. ನಮ್ಮ ವಾಹನ ಡೆಹ್ರಾಡೂನ್‌ನಿಂದ ಉತ್ತರ ಪ್ರದೇಶದ ಸಹರನ್‌ಪುರದತ್ತ ಸಾಗಿತ್ತು. ಹೆದ್ದಾರಿಯ ಇಕ್ಕೆಲೆಗಳಲ್ಲೂ ಎಲ್ಲೆಂದರಲ್ಲಿ ಮಂಗಗಳ ಹಿಂಡು. ಚಳಿಯಿಂದ ಮುದುಡಿ ಕುಳಿತ್ತಿದ್ದ ಅವು ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ನಿರ್ಲಿಪ್ತ ಭಾವದಿಂದ ನೋಡುತ್ತಿದ್ದವು. ಶಿವಾಲಿಕ್‌ ಮತ್ತು ರಾಜಾಜೀ ರಾಷ್ಟ್ರೀಯ ಉದ್ಯಾನದಲ್ಲಿ(ನ್ಯಾಷನಲ್‌ ಪಾರ್ಕ್‌) ಎತ್ತರಕ್ಕೆ ಬೆಳೆದು ನಿಂತ ಸಾಲ್‌ ಮರಗಳ ಕಾಡುಗಳು ಮತ್ತು ಹುಲಿ ಸಂರಕ್ಷಿತ ಅರಣ್ಯದ ಮಧ್ಯೆಯೇ ಹೆದ್ದಾರಿ ಹಾದು ಹೋಗುತ್ತದೆ. ಸಹರನ್‌ಪುರ ಜಿಲ್ಲೆಯ ಗಣೇಶ್‌ಪುರದಿಂದಲೇ ವನ್ಯಜೀವಿ ಕಾರಿಡಾರ್‌ ಆರಂಭವಾಗುತ್ತದೆ. ಸುಮಾರು 20 ಕಿಲೊಮೀಟರ್‌ ವ್ಯಾಪ್ತಿಯಲ್ಲಿ ದಟ್ಟಕಾಡು ಮತ್ತು ವನ್ಯಜೀವಿಗಳ ಸಾಂದ್ರತೆಯೂ ಅತಿ ಹೆಚ್ಚು. ಇದರಲ್ಲಿ ಒಟ್ಟು 12 ಕಿಲೊಮೀಟರ್‌ ‘ವನ್ಯಜೀವಿ ಕಾರಿಡಾರ್‌’ ಇದೆ. ಈ ಕಾರಿಡಾರ್‌ 16 ಕಿಲೊಮೀಟರ್ ಉತ್ತರ ಪ್ರದೇಶದ ವ್ಯಾಪ್ತಿಯಲ್ಲಿದ್ದರೆ, 4 ಕಿಲೊಮೀಟರ್‌ ಉತ್ತರಾಖಂಡ ವ್ಯಾಪ್ತಿಯಲ್ಲಿದೆ. ಕಾಡಿನ ಮಧ್ಯೆ ಫ್ಲೈಓವರ್‌ ಸಾಗುತ್ತದೆ. ಕೆಳಗಡೆ ಪ್ರಾಣಿಗಳ ಓಡಾಟಕ್ಕೆ ಆರು ಅಂಡರ್‌ಪಾಸ್‌ಗಳು, ಆನೆಗಳ ಓಡಾಟಕ್ಕೆ 200 ಮೀಟರ್‌ಗಳ ವಿಸ್ತೀರ್ಣದ ಎರಡು ಅಂಡರ್‌ಪಾಸ್‌ಗಳು, ನದಿಗೆ ಮೂರು ದೊಡ್ಡ ಸೇತುವೆಗಳು, 13 ಚಿಕ್ಕ ಸೇತುವೆಗಳು ಹಾಗೂ 340 ಮೀಟರ್‌ ಉದ್ದದ ಸುರಂಗವೂ ಇದೆ.

ಪರಿಸರ ಮತ್ತು ವನ್ಯಜೀವಿಗಳಿಗೆ ‘ಹೆಚ್ಚು’ ಹಾನಿ ಮಾಡದ ಆರು ಲೇನ್‌ಗಳ ಹೆದ್ದಾರಿ ಇದಾಗಿದ್ದು, ನದಿಯ ಪಕ್ಕದಲ್ಲೇ ಹಾದು ಹೋಗುವುದು ವಿಶೇಷ. ಮೇಲ್ಸೇತುವೆ ಕೆಳಗೆ ಮಾನವ ಹಸ್ತಕ್ಷೇಪ ಇಲ್ಲದೇ ವನ್ಯಜೀವಿಗಳು ಆರಾಮವಾಗಿ ಓಡಾಡಿಕೊಂಡಿರಬಹುದು ಎನ್ನುವುದು ಅಧಿಕಾರಿಗಳ ವಿವರಣೆ.

ಈಗಿನ ದ್ವಿಪಥ ಹೆದ್ದಾರಿಯನ್ನು ಮುಂದೆ ಅರಣ್ಯ ಇಲಾಖೆಯು ಗಸ್ತು ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ದೆಹಲಿ ಮತ್ತು ಡೆಹ್ರಾಡೂನ್‌ ಮಧ್ಯೆ ವಾಹನಗಳ ಸಂಚಾರದ ದಟ್ಟಣೆ ಅಗಾಧ ಪ್ರಮಾಣದಲ್ಲಿ ಹೆಚ್ಚಿದ್ದರಿಂದ ಇಲ್ಲಿ ಹೆದ್ದಾರಿ ವಿಸ್ತರಣೆ ಮಾಡುವುದು ಅನಿವಾರ್ಯ. ಆರ್ಥಿಕ ಬೆಳವಣಿಗೆಗೆ ಇದು ಸಹಾಯಕಾರಿ. ಆದರೆ, ಇಲ್ಲಿ ಜೀವ ವೈವಿಧ್ಯ, ವನ್ಯಜೀವಿ ಪ್ರಬೇಧ ವೈವಿಧ್ಯ, ಪರಿಸರ ಸೂಕ್ಷ್ಮವಾಗಿರುವ ಕಾರಣ, ಪರಿಸರಕ್ಕೆ ಯೋಜನೆಯಿಂದ ಆಗುವ ಅಪಾರ ಪ್ರಮಾಣದ ಹಾನಿ ತಪ್ಪಿಸಲು ಅಧ್ಯಯನ ನಡೆಸಿ ವರದಿ ನೀಡುವಂತೆ ಭಾರತೀಯ ವನ್ಯಜೀವಿ ಸಂಸ್ಥೆಗೆ (ವೈಲ್ಡ್‌ ಲೈಫ್ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋರಿಕೆ ಸಲ್ಲಿಸಿತು.

ಆದರೆ, ಅದೇ ವೇಳೆಗೆ ಸರಿಯಾಗಿ ದೇಶದಲ್ಲಿ ಕೋವಿಡ್‌ ಲಾಕ್‌ಡೌನ್‌ ಹೇರಿಕೆಯಾಯಿತು. ಭಾರತೀಯ ವನ್ಯಜೀವಿ ಸಂಸ್ಥೆಯು ಈ ಅವಧಿಯನ್ನು ಸಂಪೂರ್ಣ ವನ್ಯಜೀವಿ ಅಧ್ಯಯನಕ್ಕಾಗಿ ಬಳಸಿಕೊಂಡಿತು. ಹೆದ್ದಾರಿಯಲ್ಲಿ ವಾಹನಗಳ ಓಡಾಟವೂ ಸಂಪೂರ್ಣ ನಿಂತು ಹೋಗಿದ್ದು ಅಧ್ಯಯನಕ್ಕೆ ವರದಾನವಾಯಿತು. ‘ವನ್ಯಜೀವಿಗಳ ಸಂಚಾರ ಪಥ, ವಿಶೇಷವಾಗಿ ಆನೆ, ಹುಲಿ, ಚಿರತೆ, ಜಿಂಕೆ ಮೊದಲಾದವುಗಳು ಯಾವ ಪ್ರದೇಶದಲ್ಲಿ ಹೆಚ್ಚಾಗಿ ಸಂಚರಿಸುತ್ತವೆ. ಅವುಗಳ ಸಹಜ ಮಾರ್ಗ ಯಾವುವು ಎಂಬುದನ್ನು ಕೂಲಂಕಷವಾಗಿ ಅಧ್ಯಯನ ನಡೆಸಲಾಯಿತು’ ಎನ್ನುತ್ತಾರೆ ರೋಹಿತ್

ಈ ಅಧ್ಯಯನಕ್ಕಾಗಿ ಕ್ಯಾಮೆರಾ ಟ್ರ್ಯಾಪ್‌ ವಿಧಾನ ಅನುಸರಿಸಲಾಯಿತು. ಭೌಗೋಳಿಕ ಮತ್ತು ಆಯಾ ಪರಿಸರಕ್ಕೆ ಅನುಗುಣವಾಗಿ ಮೂರು ವಲಯಗಳಲ್ಲಿ 81 ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿತ್ತು. ಹೆದ್ದಾರಿಯಲ್ಲಿ ಯಾವ ಭಾಗದಲ್ಲಿ ಯಾವ, ಯಾವ ಪ್ರಾಣಿಗಳು ಹೆಚ್ಚಾಗಿ ಓಡಾಡುತ್ತವೆ? ಅದರ ಪ್ರಮಾಣವೇನು ಎಂಬುದನ್ನು ಕ್ಯಾಮೆರಾ ಟ್ರ್ಯಾಪ್‌ ಅಲ್ಲದೇ, ‘ಕೆರ್ನೆಲ್‌ ಡೆನ್ಸಿಟಿ ಟೂಲ್’ ವಿಧಾನದ ಮೂಲಕವೂ ಅಂದಾಜು ಮಾಡಲಾಯಿತು.

ಈಗಿರುವ ಹೆದ್ದಾರಿಯಲ್ಲಿ ಸಾಕಷ್ಟು ಪ್ರಾಣಿಗಳು ರಾತ್ರಿ ವೇಳೆ ರಸ್ತೆ ದಾಟುತ್ತಿದ್ದ ಕಾರಣ, ವಾಹನಗಳು ಅಪ್ಪಳಿಸಿ ಅವುಗಳ ಜೀವ ಹಾನಿ ಆಗುತ್ತಿತ್ತು. ಅಲ್ಲದೇ, ರಸ್ತೆಗೆ ಬಂದು ನಿಲ್ಲುವ ಪ್ರಾಣಿಗಳಿಂದಾಗಿ ವಾಹನಗಳಲ್ಲಿ ಸಾಗುವ ವ್ಯಕ್ತಿಗಳ ಜೀವಕ್ಕೂ ಅಪಾಯವಿತ್ತು. ಅಸರೋಡಿ ಮತ್ತು ಡೆಹ್ರಾಡೂನ್‌ ಮಧ್ಯೆ ಈ ಪ್ರಮಾಣ ಹೆಚ್ಚಾಗಿತ್ತು. ನೇಪಾಳದ ಅರಣ್ಯಗಳಿಂದ, ಜಿಮ್‌ ಕಾರ್ಬೆಟ್‌ನಿಂದ, ಹರಿದ್ವಾರದ ಭಾಗದ ಅರಣ್ಯಗಳಿಂದಲೂ ವನ್ಯಜೀವಿಗಳು ಈ ಪ್ರದೇಶಕ್ಕೆ ಬಂದು ಹೋಗುತ್ತವೆ. ಹೊಸ ಹೆದ್ದಾರಿ ಮಾಡಿದಾಗ ಅಂತಹ ದುರಂತಗಳನ್ನು ತಪ್ಪಿಸಬೇಕಿತ್ತು. ಅಲ್ಲದೇ ಸಾಲ್‌ ಮರಗಳನ್ನು ಮತ್ತೆ ಬೆಳೆಸುವುದಕ್ಕಾಗಿ ಅಧ್ಯಯನ ನಡೆಸಿ ವರದಿ ನೀಡುವಂತೆ ಅರಣ್ಯ ಸಂಶೋಧನಾ ಸಂಸ್ಥೆಯನ್ನು ಕೋರಲಾಯಿತು.

‘ಇವೆಲ್ಲದರ ಪರಿಣಾಮ ಕಾಡಿನ ಮಧ್ಯೆ ಎತ್ತರದಲ್ಲಿ ಹಾದು ಹೋಗುವ ಫ್ಲೈಓವರ್‌ ನಿರ್ಮಿಸುವ ಮತ್ತು ಮೊಹಾಂಡ್‌ ನದಿ ಪಕ್ಕದಲ್ಲೇ ಹೆದ್ದಾರಿ ಮಾರ್ಗ ನಿರ್ಮಾಣಕ್ಕೆ ಭಾರತೀಯ ವನ್ಯಜೀವಿ ಸಂಸ್ಥೆ ತನ್ನ ವರದಿಯಲ್ಲಿ ಸಲಹೆ ನೀಡಿತು. ಅಲ್ಲದೇ ಉದ್ದಕ್ಕೂ ಎಲ್ಲೆಲ್ಲಿ ಅರಣ್ಯ ಪ್ರಮಾಣ ಕಡಿಮೆ ಇದೆಯೋ ಅಲ್ಲಿ ಅರಣ್ಯೀಕರಣಕ್ಕಾಗಿ ಅರಣ್ಯ ಇಲಾಖೆಯಲ್ಲಿ ₹40.28 ಕೋಟಿ ಠೇವಣಿಯನ್ನೂ ಇಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿತ್ತು. ಆ ಪ್ರಕಾರ ಠೇವಣಿ ಇಡಲಾಗಿದೆ’ ಎಂದು ರೋಹಿತ್ ಪನ್ವಾರ್ ವಿವರಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 2024ರ ಮಾರ್ಚ್‌ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನಾ ಇದು ಲೋಕಾರ್ಪಣೆಗೊಳ್ಳಲಿದೆ. ಈ ಹೆದ್ದಾರಿ ಘಡ್‌ವಾಲಾಗಳ ಭಾಗ್ಯದ ಬಾಗಿಲು ತೆರೆಯಲಿದೆಯೇ ಅಥವಾ ಪರಿಸರಕ್ಕೆ ಹೊರೆಯಾಗುವ ಮತ್ತು ಮಾರಕವಾಗುವ ಯೋಜನೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT