ವನ್ಯಜೀವಿಗಳ ಬಗೆಗೆ ಅಪಾರ ಪ್ರೀತಿ ಹೊಂದಿರುವವರು ಒಮ್ಮೆಯಾದರೂ ಕೀನ್ಯಾದ ಮಸಾಯ್ ಮಾರಕ್ಕೆ ಭೇಟಿ ಕೊಡಲು ಹಂಬಲಿಸುತ್ತಾರೆ. ಇದೇ ರೀತಿಯ ಹಂಬಲ ಹೊಂದಿದ್ದ ಒಂದಷ್ಟು ಗೆಳೆಯರು ಈ ಅಭಯಾರಣ್ಯದಲ್ಲಿ ಕಳೆದ ದಿನಗಳ ಅವಿಸ್ಮರಣೀಯ ಅನುಭವ ಇಲ್ಲಿದೆ...

ಶ ತಮಾನಗಳ ಕಾಲ ಕಗ್ಗತ್ತಲೆಯ ಖಂಡವಾಗಿಯೇ ಉಳಿದಿದ್ದ ಆಫ್ರಿಕಾ ಈಗ ಜಗತ್ತಿನ ವನ್ಯಜೀವಿ ಸಫಾರಿಯ ಮೇರು ತಾಣ. ಮಾನವ ಸಂಬಂಧಿ ವಾನರುಗಳಾದ ಗೋರಿಲ್ಲಾ ಚಿಂಪಾಂಜಿಗಳಂಥ ಪ್ರಾಚೀನ ಪಳೆಯುಳಿಕೆಗಳು ಕೂಡ ಆಫ್ರಿಕಾದ ದಾಖಲೆಯಲ್ಲಿವೆ. ಪ್ರಪಂಚದ ಶೇಕಡ 25 ರಷ್ಟು ಕಾಡು ಪ್ರಾಣಿಗಳು ಆಫ್ರಿಕಾದಲ್ಲಿರುವುದು ಛಾಯಾಗ್ರಾಹಕರ ಪಾಲಿಗೆ ದೊಡ್ಡ ಆಕರ್ಷಣೆ. ಪ್ರತಿವರ್ಷ ಜಗತ್ತಿನ ಮೂಲೆ ಮೂಲೆಗಳಿಂದ ಸರಂಗೇಟಿ, ಮಸಾಯ್ ಮಾರ, ಬೋಟ್ಸವಾನಾ ಹಾಗೂ ಮೊಂಬಾಸಾಗಳಿಗೆ ವನ್ಯಜೀವಿ ಛಾಯಾಗ್ರಾಹಕರು, ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ನನಗೂ ಒಮ್ಮೆಯಾದರೂ ಕೀನ್ಯಾದ ಮಸಾಯ್ ಮಾರಕ್ಕೆ ಹೋಗಬೇಕೆನ್ನುವ ಹಂಬಲವಿತ್ತು. ಒಮ್ಮೆ ನಿರ್ಧಾರ ಮಾಡಿ ಗೆಳೆಯರು ಸೇರಿ ಹೊರಟೇಬಿಟ್ಟೆವು.

ಕೀನ್ಯಾದ ರಾಜಧಾನಿ ನೈರೋಬಿ, ನಮ್ಮ ಮಲೆನಾಡಿನ ಯಾವ ಹಸಿರು ಪಟ್ಟಣಕ್ಕೂ ಕಮ್ಮಿ ಇರಲಿಲ್ಲ. ಬಿಸಿಲು ಏರುತ್ತಿದ್ದರೂ ತಂಪಾದ ಗಾಳಿ ಬೀಸುತ್ತಿತ್ತು. ಪಟ್ಟಣದ ಕ್ಯುರೋಶಾಪ್ಗಳನ್ನು ದಾಟಿದ ಕೂಡಲೇ ಬೆಟ್ಟಗಳ ಸರಣಿಯೇ ಮುಂದೆ ತೆರೆದುಕೊಂಡಿತ್ತು. ಜಗತ್ತಿನ ಪ್ರಸಿದ್ಧವಾದ 9,600 ಕಿಲೋಮೀಟರ್ ಉದ್ದದ ‘ದಿ ಗ್ರೇಟ್ ರಿಫ್ಟ್ ಕಣಿವೆ’ಯ ಹೆಸರನ್ನು ಕೇಳಿದ್ದೆ, ನೋಡಿರಲಿಲ್ಲ. ಅದರ ಅದ್ಭುತ ಭೂದೃಶ್ಯಗಳ ನಡುವೆಯೇ ಪಯಣ ಸಾಗಿತ್ತು. ರಸ್ತೆ ಬದಿಯಲ್ಲಿಯೇ ಏಳೆಂಟು ಅಡಿ ಎತ್ತರ ಬೆಳೆದ ಹುಲ್ಲುಗಾವಲು, ಗೋಧಿ ಬೆಳೆಯ ಹೊಲ, ಮಧ್ಯ ಮಧ್ಯ ಛತ್ರಿ ಆಕಾರದ ಮರ, ಹಿಂಡು ಹಿಂಡು ಜಾನುವಾರು ಹಾಗೂ ಮಸಾಯಿ ಜನಾಂಗ ಹಾದಿಯುದ್ಧಕ್ಕೂ ಎದುರಾಗುತ್ತಿದ್ದವು. ಬೆಟ್ಟಗಳ ಬದಿಯಲ್ಲಿರುವ ನ್ಯಾರೋಕ್ ಎಂಬ ಪುಟ್ಟ ಪಟ್ಟಣವನ್ನು ಬಿಟ್ಟರೆ ಯಾವ ಊರೂ ಕಾಣಿಸಲಿಲ್ಲ. ಎಲ್ಲಾ ಕಡೆ ವಿರಳವಾದ ಮನೆಗಳು, ಪ್ರತಿ ವರ್ಷ ಜುಲೈನಿಂದ ಅಕ್ಟೋಬರ್ ತಿಂಗಳಲ್ಲಿ ಲಕ್ಷಾಂತರ ವನ್ಯಜೀವಿಗಳು ಸೆರಂಗೇಟಿನಿಂದ ಮಸಾಯ್ ಮಾರದವರೆಗೆ ವಲಸೆ ಬರುತ್ತವೆ. ಮಹಾವಲಸೆಯ ವೀಕ್ಷಣೆ, ಛಾಯಾಗ್ರಹಣಕ್ಕಾಗಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ಕೀನ್ಯಾಕ್ಕೆ ಅದು ಬಹುದೊಡ್ಡ ಆದಾಯದ ಮೂಲ. 1,500 ಚದರ ಕಿಲೋಮೀಟರ್ ವಿಸ್ತಾರದ ಜಗತ್ತಿನ ಬಹುದೊಡ್ಡ ಹುಲ್ಲುಗಾವಲನ್ನು ಕೀನ್ಯಾ ದೇಶ ಸಹಜವಾಗಿಯೇ ಇಟ್ಟುಕೊಂಡಿದೆ. ನೈರೋಬಿಯಿಂದ ಮಸಾಯ್ ಮಾರದವರೆಗಿನ 225 ಕಿಲೋಮೀಟರ್ ಕ್ರಮಿಸಿದಾಗ ಬರೀಮಣ್ಣಿನ ರಸ್ತೆಗಳೇ ಇದ್ದವು. ಸುತ್ತ ಎತ್ತ ನೋಡಿದರೂ ಸಹಜ ಕುರುಚಲು ಕಾಡಿನ ವಾತಾವರಣ. ನಾವು ಸಂಜೆ ಹೊತ್ತಿಗೆ ಮಸಾಯ್ ಮಾರದ ರೆಸಾರ್ಟ್ವೊಂದಕ್ಕೆ ತಲುಪಿದೆವು. ಅದೊಂದು ಪ್ರಶಾಂತ ಜಾಗ.

ಮಾರನೆ ದಿನ ಬೆಳಗ್ಗೆಯೇ ನಮ್ಮ ಸಫಾರಿ ಆರಂಭವಾಯಿತು. ಒಂದು ಕಾಲಕ್ಕೆ ಬಿಗ್ ಫೈವ್ ಪ್ರಾಣಿಗಳಾದ ಆಫ್ರಿಕನ್ ಎಲಿಫೆಂಟ್, ಕೇಫ್ ಬಫೆಲೋ, ರೈನೋಸಾರಸ್, ಸಿಂಹ ಹಾಗೂ ಚಿರತೆಗಳು ಭಯಾನಕವೆಂದು ತಿಳಿದ ಬೇಟೆಗಾರರು ಅವುಗಳನ್ನು ಬೆನ್ನಟ್ಟಿ ಕೊಲ್ಲುತ್ತಿದ್ದರು. ಈಗ ಅವುಗಳೇ ಮೂಲ ಆಕರ್ಷಣೆ. ಒಂದೇ ದಿನದಲ್ಲಿ ಚಿರತೆಯೊಂದನ್ನು ಬಿಟ್ಟು ಉಳಿದೆಲ್ಲಾ ಬಿಗ್ಫೈವ್ ಪ್ರಾಣಿಗಳನ್ನು ನೋಡಿ ಸಂತಸಪಟ್ಟೆವು.

ಚಿರತೆ ಬೇಟೆಯ ಸುತ್ತ... !

ಎರಡನೇ ದಿನ ಮಧ್ಯಾಹ್ನದ ಊಟ ಮುಗಿಸಿ ಹೊರಟಾಗ ನಮ್ಮ ಡ್ರೈವರ್ ಡೇವಿಡ್ಗೆ ‘ಚಿರತೆ ಕಾಣಿಸಿಕೊಂಡಿದೆ’ ಎಂಬ ಸುದ್ದಿ ಬಂತು. ಚಿರತೆಯ ವಿಷಯ ಕೇಳಿದ ಕೂಡಲೇ ನಮ್ಮವರೆಲ್ಲರಿಗೂ ಕುತೂಹಲ ಮೂಡಿತು. ಸಫಾರಿ ಜೀಪುಗಳು ಧೂಳೆಬ್ಬಿಸಿಕೊಂಡು ವೇಗವಾಗಿ ಹೊರಟವು. ಅಷ್ಟರಲ್ಲಿಯೇ ಬಯಲಿನಲ್ಲಿ ಎರಡು ಜೀಪು ನಿಂತಿದ್ದವು. ಸುಮಾರು 50 ಅಡಿ ದೂರದಲ್ಲಿ ನೀರಿನ ಗುಂಡಿಯ ಬಳಿ ಚಿಗರೆ ನೀರು ಕುಡಿಯಲು ನಿಂತಿತ್ತು. ಬಾಲವನ್ನು ಅತ್ತ ಇತ್ತ ಅಲ್ಲಾಡಿಸುತ್ತ, ನೋಡುತ್ತ ಅದು ಚಡಪಡಿಸುತ್ತಿತ್ತು. ಎಷ್ಟು ಹೊತ್ತಾದರೂ ಅದು ನೀರು ಕುಡಿಯಲು ಹೋಗಲೇ ಇಲ್ಲ. ಯಾಕಿರಬಹುದೆಂದು ನಮಗೆ ಅಚ್ಚರಿಯಾಯಿತು. ಅನುಭವಿ ಡ್ರೈವರ್ ಬೆರಳು ತೋರಿಸಿ ಚಿರತೆ ಎಂದು ಮೆಲ್ಲನೆ ಉಸುರಿದ. ತುಸು ದೂರದಲ್ಲಿ ಹುಲ್ಲಿನ ಮೆದೆಯೊಳಗೆ ಚಿರತೆ ಓಡುಗಾಲಿನ, ಮುದುಡಿದ ಭಂಗಿಯಲ್ಲಿ ಹೊಂಚು ಹಾಕಿ ಕುಳಿತಿತ್ತು. ಕೆಲವೇ ಕ್ಷಣದಲ್ಲಿ ಚಿರತೆ ಮಿಂಚಿನ ವೇಗದಲ್ಲಿ ನೆಗೆದು ಬಂದು ಚಿಗರೆಯ ಹಿಂಭಾಗದ ಕತ್ತಿಗೆ ಬಾಯಿಹಾಕಿ, ಬಲವಾಗಿ ಕಚ್ಚಿ, ಬೆನ್ನೆಲುಬನ್ನು ನಿಷ್ಕ್ರಿಯೆಗೊಳಿಸಿತು. ವಿಲವಿಲ ಒದ್ದಾಡಿದ ಚಿಗರೆ ಪ್ರಾಣ ಬಿಟ್ಟಿತು. ಚಿರತೆ ಬೇಟೆಯನ್ನು ಎಳೆದುಕೊಂಡು ಹತ್ತಿರದ ಮರದ ನೆರಳಿಗೆ ತೆರಳಿ ವಿಶ್ರಾಂತಿ ಪಡೆಯಿತು. ಹಸಿವು, ಆಸೆಯನ್ನು ತಡೆದುಕೊಳ್ಳಲಾರದ ಚಿರತೆ, ಬೇಟೆ ಪ್ರಾಣಿಯ ಹಿಂಭಾಗದಿಂದ ತಿನ್ನಲು ಆರಂಭಿಸಿತು. ಮುಂಗಾಲ ಮತ್ತು ಬಾಯಿಗೆ ಬಿಡುವಿಲ್ಲದ ಕೆಲಸ.

ಅಷ್ಟರಲ್ಲಿ ಸಫಾರಿಯ ಹದಿನಾಲ್ಕು ಜೀಪು ಸುತ್ತುವರಿದವು. ಛಾಯಾಗ್ರಾಹಕರು ಉಸಿರು ಬಿಗಿ ಹಿಡಿದು ಫೋಟೊ ತೆಗೆಯುತ್ತಿದ್ದರು. ಚಿರತೆ ಒಮ್ಮೊಮ್ಮೆ ನಮ್ಮನ್ನು ಕೆಕ್ಕರಿಸಿಕೊಂಡು ನೋಡಿತು. ಯಾರಿಗೂ ತಾವು ಚಿರತೆಗೆ ಭಂಗ ತರುತ್ತಿದ್ದೇವೆಂಬ ಅಳುಕು ಇರಲಿಲ್ಲ!. ಕೆಲವರು ಸಪ್ಪಳ ಮಾಡುತ್ತ ಹತ್ತಿರ ಹತ್ತಿರ ಹೋಗುವ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿ ಅಭಯಾರಣ್ಯದ ಅಧಿಕಾರಿಗಳಿಗೆ ವಿಷಯ ತಿಳಿದು ಎಲ್ಲಾ ವಾಹನ ಚಾಲಕರಿಗೆ ಜಾಗ ಖಾಲಿ ಮಾಡಲು ಸೂಚನೆ ನೀಡಿದರು. ಕೆಲವು ವಾಹನ ಹೊರಟು ಹೋದವು. ನಮ್ಮ ವಾಹನ ಚಾಲಕ ಮಾತ್ರ ದೂರದಲ್ಲಿಯೇ ಇದ್ದು ಚಟುವಟಿಕೆಯನ್ನು ಗಮನಿಸಲು ಹೇಳುತ್ತಿದ್ದ. ಅಷ್ಟರಲ್ಲಿ ಚಿರತೆ ಬೇಟೆಯನ್ನು ಹೊತ್ತುಕೊಂಡು ಮರ ಹತ್ತಲು ಪ್ರಯತ್ನಿಸತೊಡಗಿತು. ಚಿರತೆಯ ಎರಡು ಪಟ್ಟು ಭಾರದ ಚಿಗರೆಯನ್ನು ಹೊತ್ತು ಮರ ಏರಲು ಅದಕ್ಕೆ ಆಗುತ್ತಿರಲಿಲ್ಲ. ಕಾಲು ಪದೇ ಪದೇ ಜಾರುತ್ತಿತ್ತು. ಎರಡು ಮೂರು ಬಾರಿ ಬೇಟೆಯ ಬಲಿ ಕೆಳಗೆ ಬಿತ್ತು. ಒಮ್ಮೆ ಯಶಸ್ವಿಯಾಗಿ ಮರ ಏರಿ ಟೊಂಗೆಯ ಮೇಲೆ ಜಿಂಕೆಯ ದೇಹವನ್ನು ಇಟ್ಟುಕೊಂಡು ಸರಿಪಡಿಸುವಾಗ ಅದು ಮತ್ತೆ ಕೆಳಕ್ಕೆ ಜಾರಿ ಬಿತ್ತು. ಬಹುಶಃ ಚಿರತೆ ನಿರಾಸೆಗೊಂಡಿರಬೇಕು.

ಸುಸ್ತಾದ ಚಿರತೆ ಬೇಟೆಯನ್ನು ಹಳ್ಳಕ್ಕೆ ಎಳೆದೊಯ್ದು ಅದರ ಮೇಲೆ ಎಲೆ, ಕಸ, ಹುಲ್ಲು ಮುಚ್ಚಿತು. ಬಳಿಕ ಅದು ನಾಪತ್ತೆ ಆಯಿತು. ಅಷ್ಟರಲ್ಲಿ ಆರು ಗಂಟೆ ಆಗಿತ್ತು. ಸಫಾರಿ ಬಂದ್ ಆಗುವ ಹೊತ್ತಾಗಿತ್ತು. ಚಿರತೆ ಬೇಟೆ ನೋಡಿದ ಆ ರಾತ್ರಿ ನಮಗೆ ನಿದ್ರೆಯೇ ಬರಲಿಲ್ಲ. ಮುಂದೇನಾಯ್ತು ಎಂಬ ಕುತೂಹಲ, ಅದೇ ಕನಸು.

ಮಾರನೇ ದಿನ ಬೆಳಗ್ಗೆಯೇ ಮತ್ತೆ ಅದೇ ಜಾಗಕ್ಕೆ ತಲುಪಿದಾಗ ಅಚ್ಚರಿ ಕಾದಿತ್ತು. ಚಿರತೆ ತನ್ನ ಜಾಗವನ್ನು ಬದಲಿಸಿ ಬೇರೊಂದು ಮರಕ್ಕೆ ಸ್ಥಳಾಂತರಗೊಂಡಿತ್ತು. ಅಲ್ಲಿ ಅದು ಆರಾಮವಾಗಿ ಕುಳಿತು ವಿಶ್ರಮಿಸುತ್ತಿತ್ತು. ಅದರ ಮುಂದೆಯೇ ಅರ್ಧ ತಿಂದು ಮುಗಿಸಿದ್ದ ಅಸ್ಥಿ ಪಂಜರವಿತ್ತು. ಮರದ ಕೆಳಗೆ ಹತ್ತಾರು ಕತ್ತೆಕಿರುಬಗಳು ಬಿದ್ದ ಮಾಂಸದ ಮೂಳೆ ತುಂಡುಗಳನ್ನು ಹುಡುಕುತ್ತಿದ್ದವು. ಹತ್ತಿರದ ಒಣಮರಗಳ ಮೇಲೆ ಹದ್ದು, ಕಾಗೆ, ಗಿಡುಗಗಳು ಕೂಡ ಅಳಿದುಳಿದ ಮಾಂಸದ ಚೂರುಗಳಿಗಾಗಿ ಚಡಪಡಿಸುತ್ತಿದ್ದವು.

ಮಾಂಸಾಹಾರಿ ಪ್ರಾಣಿಗಳಲ್ಲಿ ವಿಶಿಷ್ಟವಾದ ಚಿರತೆ ಹೆಚ್ಚು ಸಮಯ ಮರದ ಮೇಲೆ ಕಳೆಯುತ್ತದೆ. ಬಂಗಾರದ ಮೈಬಣ್ಣ, ಆಕರ್ಷಕ ಕಪ್ಪು ಮಚ್ಚೆಗಳು, ರೇಶಿಮೆಯಂಥ ತುಪ್ಪಳ ಇದರ ಚೆಲುವಿಗೆ ಕಾರಣ. ತುಪ್ಪಳದ ಮಾರಾಟಕ್ಕಾಗಿ ಚಿರತೆಯನ್ನು ವ್ಯಾಪಕವಾಗಿ ಬೇಟೆಯಾಡಿ ಕೊಲ್ಲಲಾಗುತ್ತಿದೆ. ಚಿರತೆ ಕೂಡ ವಿನಾಶದಂಚಿನ ಜೀವಿಯಾಗಿದೆ. ಅಪರೂಪದ ಚಿರತೆ ಬೇಟೆಯನ್ನು ಮಸಾಯ್ ಮಾರದಲ್ಲಿ ಕಣ್ಣಾರೆ ನೋಡಿದ್ದಲ್ಲದೇ, ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ್ದು ನನ್ನಲ್ಲಿ ಸದಾ ಹಚ್ಚ ಹಸುರಿನ ನೆನಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.