ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಟೌನ್ ಆಫ್ ಬ್ಯೂಟಿ’ ಜಪಾನಿನ ಕಡಲತೀರದ ಈ ಹಳ್ಳಿ!

ಶ್ವೇತ ಆರಾಧ್ಯ
Published : 17 ಆಗಸ್ಟ್ 2024, 23:51 IST
Last Updated : 17 ಆಗಸ್ಟ್ 2024, 23:51 IST
ಫಾಲೋ ಮಾಡಿ
Comments

ಜಪಾನಿನಲ್ಲಿ ಎಂದಿನಂತೆ ಅದು ಬೇಸಿಗೆಯ ಜುಲೈ ತಿಂಗಳು. ಮೂರು ದಿನ ರಜೆ ಇತ್ತು. ನಗರದ ಗೌಜು-ಗದ್ದಲ ಬೇಸರ ತರಿಸಿತ್ತು. ಕೆಲ ಸಮಯವನ್ನು ಪ್ರಶಾಂತವಾದ ಜಾಗದಲ್ಲಿ ಕಳೆಯಬೇಕೆಂದು ಯೋಚಿಸುತ್ತಿದ್ದಾಗ, ಎಂದೋ ಕೇಳಿದ ಒಂದು ಕಡಲತೀರದ ಮನಾಝುರು ಹಳ್ಳಿಯ ನೆನಪಾಯಿತು. ಇದು ಟೋಕಿಯೊ ನಗರದಿಂದ ಸುಮಾರು 90 ಕಿಲೊಮೀಟರ್‌ ದೂರದಲ್ಲಿದ್ದು, ಎರಡು ಗಂಟೆಗಳ ರೈಲು ಪ್ರಯಾಣ. ಕುತೂಹಲ ತುಂಬಿದ ಪ್ರವಾಸಕ್ಕೆ ಮುಂಜಾನೆಯೇ ಹೊರಟೆವು.

ರೈಲು ಸುರಂಗಮಾರ್ಗದ ಮೂಲಕ ಹಾದುಹೋಗಿ, ಸಮುದ್ರತೀರದಲ್ಲಿ ಮುಂದೆ ಸಾಗಿತು. ಪ್ರಾಕೃತಿಕ ದೃಶ್ಯಗಳನ್ನು ನೋಡುತ್ತಾ, ಎರಡು ಗಂಟೆಗಳ ಪ್ರಯಾಣ ಕಳೆದುಹೋಗಿದ್ದೇ ಗೊತ್ತಾಗಲಿಲ್ಲ.
‘ಟೌನ್ ಆಫ್ ಬ್ಯೂಟಿ’ ಎಂದೇ ಹೆಸರಾಗಿರುವ ಮನಾಝುರು ಹಳ್ಳಿಯನ್ನು ತಲುಪಿದೆವು. ನಿಲ್ದಾಣದಿಂದ ಹೊರಗಡೆ ಬಂದಾಗ ನೀಲಿ ಆಕಾಶ ಮತ್ತು ಅದಕ್ಕಿಂತ ಆಕರ್ಷಕವಾದ ನೀಲಿ ಸಮುದ್ರ ನಮ್ಮನ್ನು ಸ್ವಾಗತಿಸಿತು. ಸುತ್ತಲೂ ಹಸಿರಾದ ಬೆಟ್ಟಗುಡ್ಡಗಳು, ದೇವದಾರು ಮರಗಳ ಕಾಡು, ಅಲ್ಲಲ್ಲಿ ಚಾಚಿಕೊಂಡಿರುವ ಮೇಪಲ್ ಮರದ ಎಲೆಗಳಿಂದ ತೂರಿ ಬಂದ ಬೆಳಕು ನೆಲದ ಮೇಲೆ ಹರಡಿತ್ತು. ಬೆಟ್ಟದ ಇಳಿಜಾರಿನಲ್ಲಿ ಒಂದರ ಮೇಲೊಂದು ಕಟ್ಟಿರುವ ಮನೆಗಳು ಮೆಟ್ಟಿಲಿನಂತೆ ಕಾಣಿಸುತ್ತಿದ್ದು, ಎಲ್ಲಾ ಮನೆಗಳು ಸಮುದ್ರದ ದಿಕ್ಕಿಗೆ ಮುಖ ಮಾಡಿದ್ದವು.

ಇಲ್ಲಿನ ಪಾರಂಪರಿಕ ಜಪಾನೀ ಮನೆಗಳು, ಕಿರಿದಾದ ಹಾಗೂ ಶಾಂತವಾಗಿರುವ ರಸ್ತೆಗಳನ್ನು ಕಂಡು  ‘ಈ ಊರಿನಲ್ಲಿ ಜನ ಇಲ್ಲವೇ’ ಎನ್ನುವ ಪ್ರಶ್ನೆ ಮೂಡಿತು. ಆ ಸಮಯದಲ್ಲಿ ಒಬ್ಬರು ಅಜ್ಜ ಸೈಕಲ್ ತುಳಿಯುತ್ತಾ ದಿಬ್ಬವನ್ನು ಹತ್ತಿ ಬಂದು ಮುಗುಳ್ನಕ್ಕು ಹಾದುಹೋದರು. ಅಜ್ಜನಿಗೆ ಸುಮಾರು 80 ವರ್ಷ ಇರಬೇಕು ಅನ್ನಿಸಿತು. ಆದರೂ ಸುಲಭವಾಗಿ ಸೈಕಲ್ ತುಳಿಯುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡೆ. ಜಪಾನಿನಲ್ಲಿ ಸಾಮಾನ್ಯವಾಗಿ ರಸ್ತೆಬದಿಗೆ ತೊಡಕಾಗುವ ಯಾವುದೇ ವಸ್ತುವನ್ನು ಇಡುವುದಿಲ್ಲ, ಆದರೆ ಇಲ್ಲಿ ಮನೆಗಳ ಮುಂದೆ ಬೆಂಚ್‌ಗಳು ಮತ್ತು ಹೂವಿನ ಕುಂಡಗಳನ್ನು ನೋಡಿ ‘ಈ ಬೆಂಚ್‌ಗಳನ್ನು ಏಕೆ ಇಟ್ಟಿದ್ದಾರೆ’ ಎಂದು ವಿಚಾರಿಸಿದಾಗ, ಈ ಹಳ್ಳಿಯಲ್ಲಿ ವಯಸ್ಸಾದವರು ಜಾಸ್ತಿ, ಅವರು ನಡೆದು ದಣಿದಾಗ ವಿಶ್ರಾಂತಿ ಪಡೆಯಲು ಈ ರೀತಿಯ ಬೆಂಚ್‌ಗಳನ್ನು ಇಟ್ಟಿದ್ದಾರೆ’ ಎಂದು ಒಬ್ಬರು ತಿಳಿಸಿದರು. ಅಲ್ಲಿ ಹಿರಿಯ ಜೀವಗಳಿಗೆ ಕೊಡುವ ಆದ್ಯತೆಯನ್ನು ಕಂಡು ಅತೀವ ಖುಷಿ ಆಯಿತು.

ಈ ಹಳ್ಳಿಯಲ್ಲಿ ಯಾವುದೇ ಅಪಾರ್ಟ್‌ಮೆಂಟ್‌ ಅಥವಾ ಬೃಹತ್‌ ಕಟ್ಟಡಗಳು ಕಾಣಿಸಲಿಲ್ಲ! ಇದಕ್ಕೆ ಪ್ರಮುಖ ಕಾರಣವೆಂದರೆ, ಎಂಬತ್ತರ ದಶಕದಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಬೇಕು ಎಂದು ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿದ್ದಾಗ, ಈ ಹಳ್ಳಿಯ ಜನರು ತಮ್ಮ ಊರಿನ ಪ್ರಕೃತಿ ಸೌಂದರ್ಯ ನಾಶವಾಗುತ್ತದೆಂದು ಭಯಗೊಂಡು ಆಡಳಿತಾಧಿಕಾರಿಗಳೊಂದಿಗೆ ಊರನ್ನು ರಕ್ಷಿಸಲು ಮನವಿ ಮಾಡಿಕೊಂಡರು. ಹಳ್ಳಿಗರೊಂದಿಗೆ ಚರ್ಚಿಸಿ, ಇಲ್ಲಿನ ಜೀವನಶೈಲಿ, ನೈಸರ್ಗಿಕ ಸೌಂದರ್ಯ ಕಾಪಾಡಲು ‘ಸ್ಟ್ಯಾಂಡರ್ಡ್‌ ಆಫ್ ಬ್ಯೂಟಿ’ ಎನ್ನುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಯಿತು. ಅನುಕೂಲಸ್ಥರು ದೊಡ್ಡ ದೊಡ್ಡ ಮನೆ ಕಟ್ಟುವುದು ಸಾಮಾನ್ಯ. ಆದರೆ ಈ ಹಳ್ಳಿಯಲ್ಲಿ ಎಲ್ಲರೂ ಪ್ರಕೃತಿ ಸೌಂದರ್ಯವನ್ನು ಸವಿಯಲಿ ಎಂದು ತಮ್ಮ ಮನೆಯ ಎತ್ತರವನ್ನು ಸೀಮಿತಗೊಳಿಸಿದ್ದಾರೆ. ಪ್ರತಿ ಮನೆ ಬಾಲ್ಕನಿಯಿಂದ ದೂರದ ಸಮುದ್ರದವರೆಗೂ ಕಣ್ಣಾಯಿಸಬಹುದು. ಸ್ಥಳೀಯವಾಗಿ ದೊರಕುವ ಮರ ಹಾಗೂ ಕಲ್ಲುಗಳನ್ನು ಬಳಸಿ ಮನೆ ಕಟ್ಟಿ, ಮನೆಗಳ ಬಣ್ಣವನ್ನೂ ಸಹ ಪರಿಸರಕ್ಕೆ ಹೊಂದುವಂತೆ ತಿಳಿಯಾಗಿ ಹಚ್ಚುತ್ತಾರೆ. 

ಇಳಿಜಾರಿನಲ್ಲಿ ನಡೆಯುತ್ತಾ ಕಡಲತೀರ ತಲುಪಿದೆವು. ಕಡಲಿನ ಅಂಚಿನಲ್ಲಿ ಲಂಗರು ಹಾಕಿದ್ದ ದೋಣಿಗಳು, ಕೆಲಸದಲ್ಲಿ ತಲ್ಲೀನರಾದ ಮೀನುಗಾರರು, ಸ್ಥಳೀಯರು ತಾಜಾ ಮೀನುಗಳನ್ನು ಖರೀದಿಸುತ್ತಿದ್ದರು. ಇಲ್ಲಿ 200 ಜಾತಿಯ ಮೀನುಗಳು ಸಿಗುತ್ತವೆ! ವಿಶೇಷವೆಂದರೆ, ಇಲ್ಲಿನ ಮೀನುಗಾರರು ದಿನಕ್ಕೆ ಎಷ್ಟು ಬೇಕೋ ಅಷ್ಟು ಮೀನನ್ನು ಮಾತ್ರ ಹಿಡಿಯುತ್ತಾರೆ. ಅದಕ್ಕಿಂತ ಹೆಚ್ಚಾಗಿ ಬಲೆಗೆ ಬಿದ್ದ ಮೀನುಗಳನ್ನು ಪುನಃ ಸಮುದ್ರಕ್ಕೆ ಬಿಡುವುದು ರೂಢಿ. ಕಡಲತೀರದಲ್ಲಿ ಹೆಜ್ಜೆ ಹಾಕುತ್ತಾ, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ನಿಂತೆ.

ಕಡಲತೀರದ ಜೀವನ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಬೀಸುವ ತಂಗಾಳಿ, ಲಯದ ಸದ್ದುಗಳೊಂದಿಗೆ ದಡಕ್ಕಪ್ಪಳಿಸುವ ಅಲೆಗಳು, ಇಲ್ಲಿಯ ಶಾಂತ ಪರಿಸರ ಮನಸ್ಸಿನ ಉದ್ವೇಗವನ್ನು ಕ್ಷಣಾರ್ಧದಲ್ಲಿ ತಣಿಸುತ್ತದೆ. ಇಲ್ಲಿನ ಜನರು ಪ್ರಕೃತಿ ಮತ್ತು ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ, ಮನಾಝುರು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದ್ದೆ. ಮನಾಝುರು ಕೇವಲ ಒಂದು ಪ್ರವಾಸಿ ತಾಣವಷ್ಟೇ ಅಲ್ಲ, ಇದು ಒಂದು ಮರೆಯಲಾಗದ ಅನುಭವ. ಮತ್ತೆ ಮತ್ತೆ ಇಲ್ಲಿಗೆ ಬರಲು ಮನಸ್ಸು ಬಯಸುತ್ತಿದೆ!.

1100 ವರ್ಷಗಳ ಕಿಬೂನೆ ಮತ್ಸುರಿ ಹಬ್ಬ!

ಕಾಲ್ನಡಿಗೆಯಲ್ಲಿ ಮನಾಝುರು ಹಳ್ಳಿಯೆಲ್ಲಾ ಸುತ್ತಾಡುತ್ತಿರುವಾಗ, ಒಂದು ಮನೆಯ ಕಲ್ಲಿನಗೋಡೆಯ ಮೇಲೆ ಚಾಚಿಕೊಂಡಿರುವ ಕಿತ್ತಳೆಯ ಹಣ್ಣುಗಳನ್ನು ಕಂಡು ಹತ್ತಿರ ಹೋದೆ. ಕೆಲಸದಲ್ಲಿ ತೊಡಗಿದ್ದ ಅಜ್ಜಿಯೊಬ್ಬರು ಆತ್ಮೀಯವಾಗಿ ಮಾತಾಡಿದರು. ಪ್ರತಿವರ್ಷ ಜುಲೈ ತಿಂಗಳ 27 ಮತ್ತು 28 ರಂದು ನಡೆಯುವ ‘ಕಿಬೂನೆ ಮತ್ಸುರಿ’ ಎನ್ನುವ ಹಬ್ಬದ ಕುರಿತು ವಿವರಿಸಿದರು. ಈ ಸಮಯದಲ್ಲಿ ಎಲ್ಲಾ ದೋಣಿಗಳನ್ನು ಹೂಗಳಿಂದ ಸಿಂಗರಿಸಿ, ಊರಿನ ಬೀದಿಗಳನ್ನು ಬಣ್ಣದದೀಪಗಳಿಂದ ಅಲಂಕರಿಸಿರುತ್ತಾರೆ. ಸುಮಾರು 1100 ವರ್ಷಗಳಿಂದ ನಡೆಯುತ್ತಿರುವ ಈ ಹಬ್ಬ, ಜಪಾನಿನ ಮೂರು ಅತಿ ದೊಡ್ಡ ಹಡಗು ಉತ್ಸವಗಳಲ್ಲಿ ಒಂದಾಗಿದೆ. ಉತ್ತಮ ಆರೋಗ್ಯ ಮತ್ತು ಮೀನುಗಾರಿಕೆಯಲ್ಲಿ ಸಮೃದ್ಧಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಇದರ ಇತಿಹಾಸ ಕೆದಕುತ್ತಾ ಹೊರಟಾಗ, ಕೆಲವು ವಿಷಯಗಳು ಹೊರಬಂದವು. ಸಾವಿರ ವರ್ಷಗಳ ಹಿಂದೆ ಒಂದು ದೋಣಿಯ ಒಳಗೆ ಮರದ ಹನ್ನೆರಡು ಪ್ರತಿಮೆಗಳನ್ನು ಕಂಡು, ಈ ಪ್ರತಿಮೆಗಳನ್ನು ಪ್ರದರ್ಶಿಸುವ ಮೂಲಕ ಊರು ಸಮೃದ್ಧಿಯಾಗುತ್ತದೆಂಬ ನಂಬಿಕೆಯಿಂದ ಸ್ಥಳೀಯರು ಇಂದಿನವರೆಗೂ ತಪ್ಪದೆ ‘ಕಿಬೂನೆ ಮತ್ಸುರಿ’ಯನ್ನು ಆಚರಿಸುತ್ತಾ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT