ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಕರ್ನಾಟಕದ ‘ಖಜುರಾಹೊ’

Last Updated 1 ಜನವರಿ 2022, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ‘ಖಜುರಾಹೊ’ದಲ್ಲಿ ಮಿಥುನ ಶಿಲ್ಪಗಳಿರುವಂತೆ ಹರಪನಹಳ್ಳಿ ಹತ್ತಿರದ ಬಾಗಳಿಯ ‘ಕಲ್ಲೇಶ್ವರ’ ದೇವಾಲಯದ ಹೊರ ಭಿತ್ತಿಗಳಲ್ಲೂ ಮಿಥುನ ಶಿಲ್ಪಗಳಿವೆ. ಹೀಗಾಗಿಯೇ ಇದನ್ನು ‘ಕರ್ನಾಟಕದ ಖಜುರಾಹೊ’ ಎನ್ನುತ್ತಾರೆ. ಬೇಲೂರು ಹಳೆಬೀಡು ದೇವಾಲಯಗಳ ಶಿಲ್ಪಕಲೆಗೆ ಸರಿಸಾಟಿಯೆಂಬಂತೆಯೇ ಇಲ್ಲಿನ ಕೆತ್ತನೆಗಳಿವೆ.

**

ಒಂದೆರಡು ವರ್ಷಗಳ ಹಿಂದೆ ದ್ವಿಚಕ್ರವಾಹನ ಚಾಲನೆ ಮಾಡುವಾಗ ಸ್ಕಿಡ್ ಆಗಿ ಬಿದ್ದಾಗ ಏನೂ ಆಗದ್ದು... ವಾರದ ಹಿಂದಷ್ಟೇ ಎಡಗೈ ಭುಜದ ನೋವಿಗೆ ಕಾರಣವಾಯಿತು. ಇಂತಹ ನೋವು ನಿವಾರಣೆಗೆ ಹರಪನಹಳ್ಳಿ ಹತ್ತಿರದ ಬಾಗಳಿಯ ನಾಟಿ ವೈದ್ಯರ ಔಷಧಿ ಸೂಕ್ತ ಎಂದು ಹಿರಿಯರು ಹೇಳಿದರು. ಬಾಗಳಿ ಗ್ರಾಮದ ಪರಿಣಿತರನ್ನು ಕಾಣಲು ಹೋಗುವಾಗ ದಾರಿಯಲ್ಲಿ ‘ಭಾರತದ ಪುರಾತತ್ವ ಇಲಾಖೆಯ ಕಲ್ಲೇಶ್ವರ ದೇವಸ್ಥಾನಕ್ಕೆ ದಾರಿ’ ಎಂಬ ನಾಮಫಲಕ ನೋಡಿ,ಈ ಪುಟ್ಟ ಗ್ರಾಮದಲ್ಲಿ...ಅಂತಹ ಪ್ರಸಿದ್ಧ ದೇವಸ್ಥಾನ ಇದ್ಯಾವುದೋ....ಎಂದು ಯೋಚಿಸುತ್ತಾ ನಾಟಿ ವೈದ್ಯರ ಬಳಿ ಹೋಗಿ ಮರಳುವಾಗ ಐತಿಹಾಸಿಕ ಮಹತ್ವ ಹೊಂದಿರುವ ‘ಕಲ್ಲೇಶ್ವರ ದೇವಸ್ಥಾನ’ ನೋಡುವಂತಾಯ್ತು.

ಕರ್ನಾಟಕವು ವೈವಿಧ್ಯಮಯ ಸಂಸ್ಕೃತಿ, ವಾಸ್ತುಶಿಲ್ಪ ಕಲೆಗಳ ಬೀಡು ಎಂಬ ಖ್ಯಾತಿ ಪಡೆದಿದೆ. ಹೀಗಿದ್ದರೂ ಕೆಲವೇ ಕೆಲವು ಪ್ರವಾಸಿ ತಾಣಗಳಷ್ಟೇ ಅಭಿವೃದ್ಧಿಯ ಬೆಳಕು ಕಂಡಿವೆ. ಈ ತಾಣಗಳಷ್ಟೇ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಭಾರತೀಯ ಶಿಲ್ಪಕಲೆಯನ್ನು ಪರಿಚಯಿಸುತ್ತಿವೆ. ಆದರೆ, ಬಹಳಷ್ಟು ದೇವಾಲಯಗಳಲ್ಲಿ ಹಲವು ವಿಶೇಷಗಳು ಅಡಗಿಕೊಂಡಿದ್ದರೂ, ಪ್ರಚಾರದ ಕೊರತೆಯಿಂದಾಗಿ ಇವು ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಅಂತಹ ವಿಶಿಷ್ಟ ದೇವಾಲಯಗಳಲ್ಲಿ ‘ಕಲ್ಲೇಶ್ವರ ದೇವಾಲಯ’ವೂ ಒಂದಾಗಿದೆ ಎನ್ನುವುದು ನಮಗಾದ ಅರಿವು.

–ದೇವಾಲಯದೊಳಗಿರುವ ಆಕರ್ಷಕ ಕೆತ್ತನೆಯ ಕಂಬಗಳು
–ದೇವಾಲಯದೊಳಗಿರುವ ಆಕರ್ಷಕ ಕೆತ್ತನೆಯ ಕಂಬಗಳು

ಬಾಗಳಿಯ ಕಲಿದೇವ ಎಂದು ಕರೆಯಲ್ಪಡುವ ‘ಕಲ್ಲೇಶ್ವರ ದೇವಾಲಯ’ವು ಕಲ್ಯಾಣ ಚಾಲುಕ್ಯ ದೊರೆ ಅಹವಮಲ್ಲನ ಕಾಲದಲ್ಲಿ ಕ್ರಿ.ಶ.987ರಲ್ಲಿ ದುಗ್ಗಿಮಯ್ಯನಿಂದ ನಿರ್ಮಾಣಗೊಂಡಿದೆ. ನಾಲ್ಕು ಶೈಲಿಗಳಲ್ಲಿ ನಿರ್ಮಿಸಲಾಗಿರುವ ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದ್ದರೆ, ನವರಂಗ ಚಾಲುಕ್ಯರ ಶೈಲಿಯಲ್ಲಿ, ಸುಖನಾಸಿ ಹೊಯ್ಸಳರ ಶೈಲಿಯಲ್ಲಿ ಹಾಗೂ ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ವಿಶೇಷವೆಂದೇ ಹೇಳಬಹುದು.

ದೂರದಿಂದಲೇ ಆಕರ್ಷಿಸುವ ದೇವಾಲಯವನ್ನು ಬಾಗಳಿ ಗ್ರಾಮದ ವಿಶಾಲವಾದ ಕೆರೆಯ ಉತ್ತರ ಭಾಗದಲ್ಲಿ ನಿರ್ಮಿಸಲಾಗಿರುವ ಮೆಟ್ಟಿಲುಗಳ ಮೂಲಕ ತಲುಪಬಹುದು.

ದೇಗುಲದ ತಲ ವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳಗಳಿದ್ದು ಇವಕ್ಕೆ ಹೊಂದಿಕೊಂಡಂತೆ ದಕ್ಷಿಣದಲ್ಲಿರುವ ಪ್ರವೇಶ ದ್ವಾರದ ಚೌಕಟ್ಟು ಅತ್ಯಂತ ಕಲಾತ್ಮಕವಾಗಿ ಹಾಗೂ ಆಕರ್ಷಕವಾಗಿ ನಿರ್ಮಿಸಿದ್ದಾರೆ. ಹಾಗೆಯೇ, ಪೂರ್ವ ಮತ್ತು ಪಶ್ಚಿಮದಿಂದ ಪ್ರವೇಶಿಸಿದಲ್ಲಿ ಮಹಾಮಂಟಪ ಕಾಣಿಸುತ್ತದೆ.

–ದೇವಾಲಯದ ಹೊರಾಂಗಣದಲ್ಲಿ ಮಿಥುನ ಶಿಲ್ಪಗಳು
–ದೇವಾಲಯದ ಹೊರಾಂಗಣದಲ್ಲಿ ಮಿಥುನ ಶಿಲ್ಪಗಳು

ಪೂರ್ವದಿಂದ ಪ್ರವೇಶಿಸುವಾಗ ಅಲ್ಲಿನ ಪುಟ್ಟ ಮಂದಿರದಲ್ಲಿರುವ ಕಪ್ಪು ಶಿಲೆಯ ಅಶ್ವಾರೂಡ ಸೂರ್ಯನಾರಾಯಣನ ವಿಗ್ರಹದೊಂದಿಗೆ ಸಂಜ್ಞಾದೇವಿ, ಛಾಯಾದೇವಿಯರ ಆಕರ್ಷಕ ಶಿಲ್ಪಗಳನ್ನು ನೋಡಬಹುದು. ದೇಶದ ಹಲವು ದೇವಾಲಯಗಳಲ್ಲಿ ವಿಶೇಷ ದಿನಗಳಂದು ಸೂರ್ಯರಶ್ಮಿಯು ಗರ್ಭಗೃಹದಲ್ಲಿರುವ ದೇವರ ಮೂರ್ತಿಯನ್ನು ಸ್ಪರ್ಶಿಸುವಂತೆ, ಯುಗಾದಿಯ ಸಂದರ್ಭದಲ್ಲಿ ಸೂರ್ಯನ ಪ್ರಥಮ ಕಿರಣಗಳು ಕಲ್ಲೇಶ್ವರ ಲಿಂಗದ ಮೇಲೆ ಬೀಳುವುದನ್ನು ಭಕ್ತರು ನೋಡಿ ಪಾವನರಾಗುತ್ತಾರೆ. ಈ ವಿಶೇಷವನ್ನು ನೋಡಲೆಂದೇ ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತರು ಬಹುಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಬರುತ್ತಾರೆ.

ವಿಶಾಲವಾದ ಸಭಾಮಂಟಪ ಪ್ರವೇಶಿಸಿಸುತ್ತಿರುವಂತೆ ಮೂರು ಅಡಿ ಎತ್ತರದ ಸುಂದರ ನಂದಿ ವಿಗ್ರಹ ದರ್ಶನ ನೀಡುತ್ತದೆ. ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬು ಶಿಲ್ಪಗಳಿದ್ದು, ನೃತ್ಯ ಮಂಟಪದಲ್ಲಿರುವ 8 ಅಡಿ ಎತ್ತರದ 64 ಕಂಬಗಳಲ್ಲಿನ ಕೆತ್ತನೆ ಆಕರ್ಷಕವಾಗಿವೆ. ಇವು ಶಿಲ್ಪಿಗಳ ಕಲಾಪ್ರೌಢಿಮೆಗೆ ಸಾಕ್ಷ್ಯವಾಗಿವೆ. ಕಂಬಗಳೆಲ್ಲವೂ ವಿವಿಧ ಕೋನಾಕೃತಿಯಲ್ಲಿ ಕೆತ್ತಲ್ಪಟ್ಟವುಗಳಾಗಿದ್ದು, ನೋಡಲು ಒಂದೇ ರೀತಿಯಲ್ಲಿ ಕೆತ್ತಿರುವಂತೆ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ ಅವುಗಳೆಲ್ಲವೂ ವಿಭಿನ್ನ ಆಕಾರಗಳಲ್ಲಿರುವುದು ಅಚ್ಚರಿ ಮೂಡಿಸುತ್ತದೆ. ಕಂಬಗಳನ್ನು ಬಳಪದ ಕಲ್ಲಿನಿಂದ ರಚಿಸಲಾಗಿದ್ದು, ವರ್ತುಲ, ಚೌಕ, ನಕ್ಷತ್ರ ಹಾಗೂ ಷಟ್ಕೋಣಾಕಾರಗಳಲ್ಲಿವೆ. ಕೇವಲ ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿ ಮೂಡಿಸಬಹುದಾದಂತಹ ರಚನೆಗಳನ್ನು, ಯಾವುದೇ ಯಂತ್ರೋಪಕರಣಗಳಿಲ್ಲದೆ, ಲಭ್ಯವಿದ್ದ ಕೆಲವೇ ಕೆಲವು ಉಪಕರಣಗಳನ್ನು ಉಪಯೋಗಿಸಿ ರಚಿಸಿರುವುದು ಅಚ್ಚರಿಪಡುವಂತಹ ವಿಷಯವಾಗಿದೆ. ಕೆಲವು ಕಂಬಗಳ ಕೆಳಭಾಗದಲ್ಲಿ ಲತಾಂಗಿಯರ, ನರ್ತಕಿಯರ, ಬೇಲೂರಿನ ಶಿಲಾಬಾಲಿಕೆಯರ, ರತಿಮನ್ಮಥ, ನೃತ್ಯಾಂಗನೆಯರ ಸೂಕ್ಷ್ಮ ಕೆತ್ತನೆಗಳು ಹಾಗೂ ಜಪದಲ್ಲಿ ತಲ್ಲೀನವಾಗಿರುವ ಶಾರದೆ ಮುಂತಾದ ವೈವಿಧ್ಯಮಯ ಕೆತ್ತನೆಗಳು ನಯನ ಮನೋಹರವಾಗಿವೆ.

–ದೇವಾಲಯದ ಹೊರಾಂಗಣದಲ್ಲಿ ಮಿಥುನ ಶಿಲ್ಪಗಳು
–ದೇವಾಲಯದ ಹೊರಾಂಗಣದಲ್ಲಿ ಮಿಥುನ ಶಿಲ್ಪಗಳು

ಉತ್ತರ ದಿಕ್ಕಿನಲ್ಲಿ ಉಗ್ರ ನರಸಿಂಹ ಸ್ವಾಮಿಯ ದೇವಾಲಯವಿದ್ದು, ವಿಗ್ರಹ ಚಿತ್ತಾಕರ್ಷಕವಾಗಿದೆ.

ದೇವಾಲಯಗಳು ಕೇವಲ ಪ್ರಾರ್ಥನಾ ಮಂದಿರಗಳಾಗಿರದೆ, ಕಲೆ, ಸಂಸ್ಕೃತಿಗಳನ್ನು ಮುಂದಿನ ಜನಾಂಗಕ್ಕೆ ತಿಳಿಪಡಿಸುವ ಕೇಂದ್ರಗಳಾಗಿವೆ. ಕೆತ್ತನೆಗಳ ಮೂಲಕ ಲೈಂಗಿಕತೆಯ ವಿವರ ನೀಡುವುದನ್ನುನಾವು ಹಲವು ದೇವಾಲಯಗಳ ಭಿತ್ತಿಗಳಲ್ಲಿ ಕಂಡಿದ್ದೇವೆ. ಮಧ್ಯಪ್ರದೇಶದ ‘ಖಜುರಾಹೊ’ದಲ್ಲಿ ಮಿಥುನ ಶಿಲ್ಪಗಳಿರುವಂತೆ ಈ ದೇವಾಲಯದ ಹೊರ ಭಿತ್ತಿಗಳಲ್ಲೂ ಮಿಥುನ ಶಿಲ್ಪಗಳಿರುವುದರಿಂದ ‘ಬಾಗಳಿ ಕ್ಲಲೇಶ್ವರ’ ದೇವಾಲಯವನ್ನು ‘ಕರ್ನಾಟಕದ ಖಜುರಾಹೊ’ ಎಂದು ಕರೆಯುತ್ತಾರೆ. ಈ ದೇವಾಲಯದ ಹೊರ ಭಿತ್ತಿಗಳಲ್ಲಿ (ಸುಮಾರು ನೆಲಮಟ್ಟದಿಂದ ಹದಿನೈದು ಅಡಿ ಎತ್ತರದಲ್ಲಿ) ಕಾಮಸೂತ್ರದ ಹಲವಾರು ಭಂಗಿಗಳಲ್ಲಿ ಸ್ತ್ರೀ ಪುರುಷರ ಹಾಗೂ ಮಾನವರು ಮತ್ತು ಪ್ರಾಣಿಗಳು ಅಸಹಜ ಮಿಥುನ ಕ್ರಿಯೆಯಲ್ಲಿ ನಿರತರಾಗಿರುವ ಅನೇಕ ಶಿಲ್ಪಗಳನ್ನು ಕಾಣಬಹುದಾಗಿದೆ. ಈ ದೇಗುಲದ ಆವರಣದಲ್ಲಿ ಎಂಟು ಉಪ ಮಂದಿರಗಳಿದ್ದು, ‘ಕಲ್ಲೇಶ್ವರ’ ದೇವಾಲಯ ಚಿಕ್ಕ ದೇವಾಲಯವಾದರೂ, ಬೇಲೂರು ಹಳೆಬೀಡು ದೇವಾಲಯಗಳ ಶಿಲ್ಪಕಲೆಗೆ ಸರಿಸಾಟಿಯಾಗಿದೆ ಎಂದರೂ ತಪ್ಪಾಗಲಾರದು.

ತಲುಪುವುದು ಹೇಗೆ?
ಪ್ರಸ್ತುತ ವಿಜಯನಗರ ಜಿಲ್ಲೆಯ ಭಾಗವಾಗಿರುವ ಹರಪನಹಳ್ಳಿ ತಾಲ್ಲೂಕಿನಲ್ಲಿ ಬಾಗಳಿ ಗ್ರಾಮವಿದೆ. ದಾವಣಗೆರೆಯಿಂದ ಹರಿಹರದ ಮೂಲಕ ಹರಪನಹಳ್ಳಿಗೆ (55 ಕಿ.ಮೀ) ಬಸ್ ಮೂಲಕ ಬರಬಹುದು. ಬಾಗಳಿ ಗ್ರಾಮೀಣ ರಸ್ತೆಯ ಪಕ್ಕದಲ್ಲಿ ತಂಗುದಾಣವನ್ನು ನಿರ್ಮಿಸಿ ಅಲ್ಲಿ ಸೂಕ್ತ ಮಾಹಿತಿಯೊಂದಿಗೆ, ಛಾಯಾಚಿತ್ರ, ಫಲಕಗಳನ್ನು ಸಂಬಂಧಪಟ್ಟ ಇಲಾಖೆ ಅಳವಡಿಸಿದರೆ ಹೆಚ್ಚಿನ ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡಲು ಅನುಕೂಲವಾಗುತ್ತದೆ. ಅಲ್ಲಿಂದ ಬಾಗಳಿ ಗ್ರಾಮ ಒಂದು ಕಿ.ಮೀ ದೂರವಿದ್ದು ಆಟೊ ಮೂಲಕ ತಲುಪಬಹುದು. ಬಾಗಳಿಯಲ್ಲಿ ಉತ್ತಮ ಉಪಹಾರ ಮಂದಿರಗಳಿಲ್ಲದ ಕಾರಣ ಹರಪನಹಳ್ಳಿಯಿಂದಲೇ ಊಟ–ತಿಂಡಿ ಕೊಂಡೊಯ್ದರೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT