ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯ ಖಜಾನೆ ಖಜುರಾಹೊ

Last Updated 4 ಏಪ್ರಿಲ್ 2019, 6:30 IST
ಅಕ್ಷರ ಗಾತ್ರ

‘ಹರಿಹರ ರಾಘವರಿಗೆ ಎರಗುವ ಮನ, ಹಾಳಾಗಿಹ ಹಂಪೆಗೆ ಕೊರಗುವ ಮನ...’ ರಸಋಷಿ ಕುವೆಂಪು ಹಂಪೆಯ ಬಗೆಗೆ ಹಾಡಿರುವಂತೆಯೇ, ನನಗೆ ಬೋಳಾಗಿಹ ಖಜುರಾಹೊ ನೆನೆದು ಮನ ಮರುಗಿ ಹೋಯಿತು.

ನಾನು ಮತ್ತು ಗೆಳೆಯ ನವೀನ್ ಖಜುರಾಹೊಗೆ ಹೊರಟು ನಿಂತಾಗ, ‘ಎಲ್ಲಿದೆ ಆ ಸ್ಥಳ’ ಎಂದು ಕೇಳಿದವರೇ ಹೆಚ್ಚು. ಹೀಗೆ ಕೆಲವರಿಗೆ ಅಪರಿತವಾಗಿರುವ ಈ ಸಿರಿವಂತ ಶಿಲ್ಪ ಕಲೆಯ ಬೀಡು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 370 ಕಿ.ಮೀ ದೂರದಲ್ಲಿದೆ.

ಖಜುರಾಹೊ ದೇವಾಲಯಗಳ ಸಂಕೀರ್ಣ. ಕಲೆಯ ಖಜಾನೆಯ ತಾಣ. ಯುನೆಸ್ಕೊ ಇದನ್ನು ವಿಶ್ವ ಸಂರಕ್ಷಣಾ ಸ್ಮಾರಕವೆಂದು ಗುರುತಿಸಿದೆ. ಇಲ್ಲಿನ ಬಹುಪಾಲು ದೇವಾಲಯಗಳನ್ನು ಚಾಂದೇಲಾ ರಾಜವಂಶಸ್ಥರು ಕ್ರಿ.ಶ 950 ರಿಂದ 1050 ರ ನಡುವೆ ನಿರ್ಮಿಸಿದ್ದು. 12 ನೇ ಶತಮಾನದಲ್ಲಿ, 20 ಚ.ಕಿ.ಮೀ ವ್ಯಾಪ್ತಿಯಲ್ಲಿ 85 ದೇವಸ್ಥಾನಗಳಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ, ಈಗ ಉಳಿದಿರುವುದು 6 ಚ.ಕಿ.ಮೀ ವ್ಯಾಪ್ತಿಯಲ್ಲಿ ಕೇವಲ 25 ದೇವಸ್ಥಾನಗಳು ಮಾತ್ರ.

ಊರಿನ ಹಿನ್ನೆಲೆ

ಈ ಊರಿನ ಸ್ಥಳನಾಮದ ಹಿಂದೆಯೂ ಜಾನಪದ ಕಥೆಗಳಿವೆ. ‘ಬಹಳ ವರ್ಷಗಳ ಹಿಂದೆ ಊರ ಹೆಬ್ಬಾಗಿಲಿಗೆ ಎರಡು ಬಂಗಾರದ ಖರ್ಜೂರದ ಮರಗಳನ್ನು ನೆಡಲಾಗಿತ್ತು. ಅದಕ್ಕೆ ಈ ಹೆಸರು ಬಂತು’ ಎಂದು ಒಂದು ಕಥೆ ಹೇಳುತ್ತದೆ. ಇನ್ನೊಂದು ಕಥೆ (‘ಖರ್ಜೂರಕ್ಕೆ ಖಜೂರ್ ಎನ್ನಲಾಗುತ್ತದೆ) ಶಿವನ ಹೆಸರಿಗೆ ಈ ಊರನ್ನು ಅರ್ಪಿಸಿದ ರಾಜವಂಶಸ್ಥರು ಇದನ್ನ ‘ಖರ್ಜುರವಾಹಕ’ ಅಂದರೆ ಚೇಳನ್ನು ಧರಿಸಿರುವ ಶಿವ ಎಂದು ಕರೆದರು. ಆ ಕಾರಣಕ್ಕೆ ಖಜುರಾಹೊ ಹೆಸರು ಬಂತು ಎನ್ನುತ್ತದೆ.

ಖಜುರಾಹೊ ಸಂಕೀರ್ಣವನ್ನು 1830 ರಲ್ಲಿ ಹೊರಜಗತ್ತಿಗೆ ಮೊದಲು ಪರಿಚಯಿಸಿದವರು ಬ್ರಿಟಿಷ್ ಸಮೀಕ್ಷಕ ಟಿ.ಸ್ ಬರ್ಟ್.

ಈ ದೇವಾಲಯ ಸಂಕೀರ್ಣದಲ್ಲಿರುವ ವಾಸ್ತು ಶಿಲ್ಪ, ಕಲೆಯ ಜತೆಗೆ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನ ಬಿಂಬಿಸುವ ಕಂಬಗಳಿವೆ.

ಇತಿಹಾಸದ ಕಥೆ

13 ನೇ ಶತಮಾನದಲ್ಲಿ ದೆಹಲಿ ಸುಲ್ತಾನ್ ಕುತುಬ್-ಉದ್-ದಿನ್ ಐಬಕ್ ನೇತೃತ್ವದ ಸೈನ್ಯ ಚಂಡೇಲಾ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತದೆ. ಮುಂದೆ 500 ವರ್ಷಗಳ ಕಾಲ ದಾಳಿಗೊಳಗಾಗಿ ಖಜುರಾಹೊವಿನ ಹಲವು ದೇವಾಲಯಗಳು ನಿರ್ನಾಮವಾಗುತ್ತವೆ. ಆದರೂ ಖಜುರಾಹೊ ಭೌಗೋಳಿಕವಾಗಿ ಪ್ರತ್ಯೇಕವಾಗಿದ್ದರಿಂದಲೋ ಏನೋ, ಆ ದಾಳಿಯಿಂದ ಸಂಪೂರ್ಣ ನಾಶವಾಗದೆ ಉಳಿದುಕೊಂಡಿತು. ಅನಂತರದಲ್ಲೂ ರಕ್ಷಣೆ, ನಿರ್ವಹಣೆಯಿಂದ ವಂಚಿತವಾಗಿ, ಇಡೀ ದೇವಾಲಯಗಳು ಗಿಡ–ಮರಗಳಿಂದ ತುಂಬಿ ಹೋಯಿತು.

ಪುರಾತತ್ವ ಇಲಾಖೆಯ ನಿರ್ವಹಣೆ

ಭಾರತೀಯ ಪುರಾತತ್ವ ಇಲಾಖೆ, ಈಗ ಖಜುರಾಹೊ ದೇಗುಲಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಪ್ರತಿ ವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ‘ಖಜುರಾಹೊ ಡಾನ್ಸ್ ಫೆಸ್ಟಿವಲ್’ ಆಯೋಜಿಸಲಾಗುತ್ತದೆ. ಭಾರತದ ಸುಪ್ರಸಿದ್ಧ ನೃತ್ಯಗಾರರು ಹಾಗೂ ನೃತ್ಯ ಸಂಯೋಜನಕಾರರು ತಮ್ಮ ಕಲೆಯ ಅನಾವರಣಗೊಳಿಸಲು ಇಲ್ಲಿಗೆ ಧಾವಿಸುತ್ತಾರೆ.

ಭವ್ಯ ದೇವಸ್ಥಾನಗಳ ಹಿನ್ನೆಲೆಯಲ್ಲಿ ಸುಂದರ ಧ್ವನಿ-ಬೆಳಕಿನ ಮೇಲಾಟದಲ್ಲಿ, ಚುಮು-ಚುಮು ಚಳಿಗೆ ಮನವೊಡ್ಡಿ, ಭಾರತೀಯ ನೃತ್ಯ ವೈಭವವನ್ನ ಕಂಗಳು ತುಂಬಿಕೊಳ್ಳುತ್ತಿದ್ದರೆ, ಕಲೋಪಾಸಕರಿಗೆ ಸ್ವರ್ಗೀಯ ಅನುಭವ.

ಸಾವಿರಕ್ಕೂ ಅಧಿಕ ವರ್ಷ ಮರೆಯಾಗಿ, ಈಗ ಎದೆಸೆಟೆದು ನಿಂತಂತೆ ಕಾಣುವ ಈ ದೇವಾಲಯಗಳನ್ನೊಮ್ಮೆ ನೋಡಿ ಬನ್ನಿ. ನಿಮಗೂ ನಮ್ಮಂತೆಯೇ, ಭಾರತೀಯ ಸಾಂಸ್ಕೃತಿಕ ವೈಭವದ ಆಳ-ಅಗಲಗಳು ಕಣ್ಣಳತೆ ಮೀರಿದುವು ಎಂಬುದು ಅನುಭವಕ್ಕೆ ಬರುತ್ತದೆ.ಡಾನ್ಸ್ ಫೆಸ್ಟಿವಲ್ ಬಗೆಗಿನ ಹೆಚ್ಚಿನ ಮಾಹಿತಿಗೆ: http://khajurahodancefestival.com/

ಎಲ್ಲಿದೆ? ಹೋಗುವುದು ಹೇಗೆ?

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 370 ಕಿ.ಮೀ ಉತ್ತರಕ್ಕೆ ಖಜುರಾಹೊ ಇದೆ. ತಲುಪಲು ರಸ್ತೆಯ ಮಾರ್ಗಕ್ಕಿಂತ, ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣ ಸುಖಕರ.

ಭೋಪಾಲ್‌ನಿಂದ ಪ್ರತಿದಿನ ಎಕ್ಸ್‌ಪ್ರೆಸ್‌ ರೈಲು ಸಂಚಾರವಿದೆ. ಭೋಪಾಲ್,ಇಂದೋರ್, ಝಾನ್ಸಿಯಿಂದ ಪ್ರತಿದಿನ ಬಸ್ ವ್ಯವಸ್ಥೆ ಇದೆ.

ವಿಮಾನದ ಪಯಣಿಗರಿಗೆ: ಇಲ್ಲಿ ವಿಮಾನ ನಿಲ್ದಾಣವಿದ್ದರೂ ಅಲ್ಲಿಗೆ ಬಂದಿಳಿವ ವಿಮಾನಗಳ ಸಂಖ್ಯೆ ಕಡಿಮೆ. ಭೋಪಾಲ್‌ವರೆಗೂ ವಿಮಾನದಲ್ಲಿ ಬಂದು, ಇಲ್ಲಿಂದ ರೈಲು ಅಥವಾ ಬಸ್‌ ಮಾರ್ಗದಲ್ಲಿ ಖಜರಾಹೊ ತಲುಪಬಹುದು.

ಪ್ರವಾಸಿಗರು ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಉತ್ತಮ ಸಮಯ. ಫೆಬ್ರುವರಿ ಕೊನೆಯ ವಾರದಲ್ಲಿ ಇಲ್ಲಿ ನೃತ್ಯೋತ್ಸವ ನಡೆಯುತ್ತದೆ.

ಖಜರಾಹೊನಲ್ಲಿ ದಕ್ಷಿಣ ಭಾರತದ ತಿಂಡಿ, ತಿನಿಸುಗಳು ದೊರೆಯುತ್ತವೆ. ಮದ್ರಾಸ್‌ ಕೆಫೆ ಎಂಬ ಖ್ಯಾತ ಹೋಟೆಲ್ ಇದೆ. ಕಾಫಿ, ಮಸಾಲೆ ದೋಸೆ ಸೇರಿದಂತೆ ದಕ್ಷಿಣದ ತಿನಿಸುಗಳೆಲ್ಲ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT