ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮ್‌ ರೋಮ್‌ ರೋಮಾಂಚನ...

ಇತಿಹಾಸದ ತೆರೆದ ವಿಶ್ವವಿದ್ಯಾಲಯ ರೋಮ್‌ ಐರೋಪ್ಯ ಸಂಸ್ಕೃಂತಿಯ ಕೇಂದ್ರ ರೋಮ್‌ ಇಟಲಿಯ ಮಕುಟಮಣಿ ರೋಮ್‌
Last Updated 24 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಇಟಲಿಯ ರಾಜಧಾನಿ ರೋಮ್‌, ಟೈಬರ್ ನದಿಯ ದಡದಲ್ಲಿ ಏಳು ಬೆಟ್ಟಗಳ ಮೇಲೆ ಸ್ಥಾಪಿತವಾದ ನಗರ. ಐರೋಪ್ಯ ನಾಗರಿಕತೆ ಸಂಸ್ಕೃತಿಯ ಕೇಂದ್ರ. ಜಗತ್ತಿನ ಕ್ರೈಸ್ತರೆಲ್ಲರ ಧಾರ್ಮಿಕ ಶ್ರದ್ಧಾ ಕೇಂದ್ರವಾದ ರೋಮ್‌ ಅನ್ನು ಕಲಾನಗರಿ, ಏಳು ಬೆಟ್ಟಗಳ ನಗರ, ಎಲ್ಲಾ ರಸ್ತೆಗಳೂ ಸಾಗುವುದು ರೋಮ್‌ನೆಡೆಗೆ, ರೋಮ್‌ ನಗರವನ್ನು ಒಂದು ದಿನದಲ್ಲಿ ಕಟ್ಟಲಾಗಿಲ್ಲ’- ಎಂಬಿತ್ಯಾದಿ ಸಾಲುಗಳಿಂದ ಬಣ್ಣಿಸಲಾಗುತ್ತದೆ.

ಅಂಥ ರೋಮ್‌ ನಗರಕ್ಕೆ ನಾವು ಭೇಟಿ ನೀಡಿದಾಗ, ಅಲ್ಲಿದ್ದ ಚೌಕಗಳು, ಅವುಗಳಲ್ಲಿನ ಅಮೃತಶಿಲೆಯ ಬೃಹತ್ ನಗ್ನ ಪ್ರತಿಮೆಗಳು, ಕಾರಂಜಿಗಳು, ಅಮೃತ ಶಿಲಾಸ್ತಂಭಗಳು ಗಮನ ಸೆಳೆದೆವು. ಅಲ್ಲಿನ ರಸ್ತೆಗಳು ಇಳಿಜಾರು ಹಾಗೂ ಏರಿನಿಂದ ಇಕ್ಕಟ್ಟಾಗಿವೆ. ಇವುಗಳ ಎರಡು ಬದಿಗಳಲ್ಲೂ ತಲೆಯೆತ್ತಿ ನೋಡಬೇಕಾದಷ್ಟು ಎತ್ತರದ ಹಳೆಯ ದೊಡ್ಡ ದೊಡ್ಡ ಕಟ್ಟಡಗಳಿವೆ. ಪ್ರತಿ ಕಟ್ಟಡದ ಮುಂದೆ ಎತ್ತರವಾದ ಸ್ತಂಭಗಳು, ಅವುಗಳ ಮೇಲೆ ಗುಮ್ಮಟಗಳು, ಕಮಾನುಗಳಿವೆ. ನಮ್ಮ ಕೋಚ್‌ನ (ವಾಹನ) ಡ್ರೈವರ್ ತಿಳಿಯದೇ ‘ನೋ ಎಂಟ್ರಿ’ ರಸ್ತೆಯಲ್ಲಿ ವಾಹನ ನುಗ್ಗಿಸಿದ. ಅಲ್ಲೇ ಇದ್ದ ಇಟಲಿ ಪೋಲೀಸರು ನಮ್ಮ ವಾಹನದ ಬಳಿ ಬಂದರು. ನಾವು ಹೋಗಬೇಕಾದ ಸರಿ ದಾರಿ ತೋರಿಸಿದರು. ಆ ಇಕ್ಕಟ್ಟಾದ ರಸ್ತೆಯಲ್ಲೇ ರಿವರ್ಸ್ ತೆಗೆದುಕೊಳ್ಳಲು ಸಹಕರಿಸಿದರು. ನಾವು ‘ಇಟಲಿಯ ಪೊಲೀಸರು ಪ್ರವಾಸಿ ಸ್ನೇಹಿಗರು’ ಎಂಬ ಮಾತು ಕೇಳಿದ್ದೆವು. ಅದು ನಿಜ ಎಂಬುದನ್ನು ಅವರು ಸಾಬೀತುಪಡಿಸಿದರು.

ಕೊಲೋಸಿಯಂ ಆಕರ್ಷಣೆ

ಟೈಬರ್ ನದಿಯ ದಡದಲ್ಲಿರುವ ಹಲವು ಕಮಾನುಗಳನ್ನೊಳ
ಗೊಂಡ ಐದು ಅಂತಸ್ತುಗಳ ಪ್ರಾಚೀನ ಕ್ರೀಡಾಂಗಣ ಕೊಲೋಸಿಯಂ. 2 ಸಾವಿರ ವರ್ಷಗಳಷ್ಟು ಹಳೆಯದು. ಇದು ಕ್ರಿ.ಶ. 69 ರಿಂದ 79ರ ಅವಧಿಯಲ್ಲಿ ನಿರ್ಮಾಣವಾಯಿತೆ ನ್ನುತ್ತಾರೆ. ರೋಮನ್ ರಾಜರು ಮತ್ತು ಸುಮಾರು 50 ಸಾವಿರ ಜನರು ವೃತ್ತಾಕಾರದ ಈ ಕಟ್ಟಡಗಳ ಸಂಕೀರ್ಣದಲ್ಲಿ ಕುಳಿತು ಕ್ರೀಡೆಗಳನ್ನು ವೀಕ್ಷಿಸುತ್ತಿದ್ದರಂತೆ. ನಡುವಿರುವ ರಂಗಮಂಟಪ
ದಲ್ಲಿ ಕತ್ತಿ ಹಿರಿದ ಗ್ಲೇಡಿಯೇಟರ್‌ಗಳು (ಕಠಾರಿ ವೀರರು) ಮತ್ತು ಹಸಿದ ಸಿಂಹಗಳ ನಡುವೆ ನಡೆಯುತ್ತಿದ್ದ ಹೋರಾಟಗಳಲ್ಲಿ ಕಠಾರಿ ವೀರರು ಸಿಂಹಗಳು ಛಿದ್ರವಿಚ್ಛಿದ್ರವಾಗಿಸಿ ತಿನ್ನುವುದನ್ನು ಜನರು ನೋಡಿ ಆನಂದಿಸುತ್ತಿದ್ದರಂತೆ! ಸಾವಿರಾರು ವರ್ಷ ಗಳಿಂದ ಪ್ರಾಕೃತಿಕ ವಿಕೋಪಗಳನ್ನೆದುರಿಸಿಯೂ ಅಂದಿನ ಅದೇ ಕೊಲೋಸಿಯಂನ ಒಂದಷ್ಟು ಭಾಗ ಇಂದಿಗೂ ಉಳಿದು ಕೊಂಡಿದೆ. ಅದೇ ವಿಸ್ಮಯ. ಭೂಕಂಪದಿಂದ ಕಟ್ಟಡದ ಕೆಲವು ಭಾಗ ಕುಸಿದು ಹೋಗಿದ್ದೂ ಇದೆ. ಇದರ ಮಹಾನ್ ದುರಸ್ತಿ ಕಾರ್ಯವೂ ನೆರವೇರಿದೆ.

ವ್ಯಾಟಿಕನ್ ಸಿಟಿ

ರೋಮ್‌ನಗರದ ಭಾಗ ವ್ಯಾಟಿಕನ್ ನಗರ. ಇದು 1929 ರಿಂದ ತನ್ನದೇ ಪರಮಾಧಿಕಾರ ಹೊಂದಿ ತನ್ನದೇ ಸ್ವಾತಂತ್ರ್ಯ ಹೊಂದಿದ ನಗರವೆನಿಸಿದೆ. ಕ್ರೈಸ್ತರ ಗುರು ಪೋಪ್‌ ನಿವಾಸ ಇರುವುದು ಇಲ್ಲೇ. ಇಲ್ಲಿನ ಜಗದ್ವಿಖ್ಯಾತ ಸೇಂಟ್ ಪೀಟರ್ಸ್ ಬೆಸಿಲಿಕಾ ಜಗತ್ತಿನ ಅತಿ ದೊಡ್ಡ ಚರ್ಚ್. ಜಗತ್ತಿನಾದ್ಯಂತದಿಂದ ಕ್ರಿಸ್ಮಸ್ ಸಮಯದಲ್ಲಿ ಕ್ರೈಸ್ತರು ಪೋಪ್‌ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಈ ಸೇಂಟ್ ಪೀಟರ್ಸ್ ಚರ್ಚ್‌ನ ಮುಂಭಾಗದಲ್ಲಿ ವಿಶಾಲವಾದ ವೃತ್ತಾಕಾರದ ಭವ್ಯ ಚೌಕವಿದೆ. ಈ ಚೌಕದಲ್ಲಿ ನೂರಾರು ಕಂಬಗಳಿವೆ. ಅವುಗಳ ಮೇಲ್ಭಾಗದಲ್ಲಿ ಶಿಲ್ಪ ಕಲಾಕೃತಿಗಳಿವೆ. ಲಕ್ಷಾಂತರ ಜನರು ಇಲ್ಲಿ ಸೇರಬಹುದು. ಪೋಪ್‌ ವಿಶೇಷ ಸಂದರ್ಭಗಳಲ್ಲಿ ಜನರನ್ನುದ್ದೇಶಿಸಿ ಮಾತನಾಡುವುದು, ಆಶೀರ್ವದಿಸುವುದು ಇದೇ ಚೌಕದಲ್ಲಿ. ಈ ಚೌಕದ ಮಧ್ಯ ಭಾಗದಲ್ಲಿ ಒಂದು ಎತ್ತರದ ಈಜಿಪ್ಟ ಕಂಬದ ಮೇಲೆ ದೊಡ್ಡ ಕ್ರಾಸ್ ಇದೆ. ಅದರ ಎರಡು ಬದಿಗಳಲ್ಲೂ ಬೃಹತ್ ಕಾರಂಜಿಗಳಿವೆ.

ಏಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಮೊದಲಿಗನೂ ಅವನ ಪರಮಾಪ್ತನೂ ಆಗಿದ್ದ ಪೀಟರ್‌ನನ್ನು ಕ್ರಿಶ್ಚಿಯನ್ನರು ಮೊದಲ ಪೋಪ್ ಎಂದು ಪರಿಗಣಿಸುತ್ತಾರೆ. ನೀರೊ ದೊರೆ ಇವನನ್ನು ತಲೆಕೆಳಗಾಗಿಸಿ ಶಿಲುಬೆಗೇರಿಸಿದ್ದನಂತೆ. ಕಾನ್‌ಸ್ಟಂಟೈನ್ ಚಕ್ರವರ್ತಿ ಪೀಟರ್‌ನ ಹೆಸರಿನಲ್ಲಿ ಈ ಬೆಸಿಲಿಕಾ ಚರ್ಚ್ ನಿರ್ಮಿಸಿದ. ಅವನ ಸಮಾಧಿಯೂ ಇಲ್ಲಿದೆ. ಮುಂದೆ ಇದು ಹಲವಾರು ಬಾರಿ ಪುನರ್ನಿರ್ಮಾಣಗೊಂಡಿತು. ಇದರೊಳಗೆ ಮೈಕೆಲೆಂಜೆಲೋ, ಯಾರ್ಫೆಲ್‌, ಬರ್ನಿನಿ ಮುಂತಾದ ಕಲಾವಿದರ ಕೈಚಳಕದಿಂದ ಅರಳಿದ ಶಿಲ್ಪಗಳು ಅದ್ವಿತೀಯವೆನಿಸಿತು.‌

ವ್ಯಾಟಿಕನ್ ಮ್ಯೂಸಿಯಂ

ಈ ಬೆಸಿಲಿಕಾದ ಒಂದು ಭಾಗದಲ್ಲಿ ವ್ಯಾಟಿಕನ್ ಮ್ಯೂಸಿಯಂ ಇದೆ. ಇಲ್ಲಿನ ಸಿಸ್ಟೈನ್ ಚಾಪೆಲ್‍ನಲ್ಲಿನ ಮೈಕೆಲೆಂಜೆಲೊ ವರ್ಣಚಿತ್ರಗಳು, ಕಲಾಕೃತಿಗಳು, ಚಿತ್ರಕಲೆ ಶ್ರೇಷ್ಠತೆಯ ಪಾರಮ್ಯವನ್ನು ಮೀರಿದ ಅಮರ ಕಲಾಕೃತಿಗಳು. ಈ ಚಾಪೆಲ್‍ನ ಚಾವಣಿ ಕಮಾನಿನಾಕೃತಿಯಲ್ಲಿದೆ. ಚಾವಣಿ, ಗೋಡೆಗಳಲ್ಲಿಯೂ ಕಲಾವಿದ ಮೈಕೆಲೆಂಜೊಲೊ ನೂರಾರು ಚಿತ್ರಗಳನ್ನು ರಚಿಸಿದ್ದಾನೆ. ಚಾವಣಿಯಲ್ಲಿಯೇ 343 ಚಿತ್ರಗಳಿವೆ. ಇಲ್ಲಿ ಚಿತ್ರ ಬಿಡಿಸಿಲು ಆತನಿಗೆ ಎತ್ತರದ ಅಟ್ಟಣಿಗೆ ನಿರ್ಮಿಸಿ ಕೊಡಲಾಗಿತ್ತು. ಅದರ ಮೇಲೆ ಮಲಗಿ ಹಣೆಗೆ ದೀಪವನ್ನು ಕಟ್ಟಿಕೊಂಡು 1508 ರಿಂದ 1512ರವರೆಗೆ ಚಿತ್ರಗಳನ್ನು ರಚಿಸಿದ್ದಾನೆಂಬುದು ಕಲೆಗೆ ಶರಣಾಗಿದ್ದ ಅವನ ಬದ್ಧತೆಗೆ ನಿದರ್ಶನ. ಪ್ರಪಂಚದ ಉಗಮ, ಸೃಷ್ಟಿ, ಆಡಂ ಈವ್‍ರ ಕಥೆ, ಬೈಬಲ್ಲಿನ ಪ್ರಸಂಗಗಳು ಎಂದು ಕಮಾನು ಚಾವಣಿಯಲ್ಲಿ ಚಿತ್ರಿತವಾಗಿವೆ. ಡಾಂಟೆ ಮಹಾಕವಿಯ ಮಹಾಕಾವ್ಯದ ಆಧಾರದಲ್ಲಿ ಮೈಕೆಲೆಂಜೆಲೋ ನಿರ್ಮಿಸಿದ ‘ಕೊನೆಯ ತೀರ್ಪು’ ಕಲಾಕೃತಿ ಈ ಸಿಸ್ಟೈನ್ ಚಾಪೆಲ್‍ನ ಅತಿ ವೈಶಿಷ್ಟ್ಯಪೂರ್ಣವಾದ ಮಹಾನ್ ಕಲಾಕೃತಿ.

ಇಲ್ಲಿನ ಜಗತ್ಪ್ರಸಿದ್ಧ ‘ಡೇವಿಡ್’ ಪ್ರತಿಮೆ ಕೂಡ ಮೈಕೆಲೆಂಜೆಲೊ ನಿರ್ಮಿಸಿದ್ದಿದು. ಬೈಬಲ್ ಪ್ರಸಂಗಕ್ಕೆ ಸಂಬಂಧಿಸಿದ್ದು. ಡೇವಿಡ್‍ನ ನಗ್ನ ವಿಗ್ರಹ ಆದರ್ಶ ಪುರುಷತ್ವದ ಪ್ರತಿ ಮೂರ್ತಿ ಎಂದು ಪರಿಗಣಿಸಲಾಗಿದೆ. ಯೂರೋಪಿನ ಇತಿಹಾಸದ ಪ್ರಮುಖ ಮೈಲಿಗಲ್ಲಾದ ಪುನರುಜ್ಜೀವನ ಕಾಲದ ಜನರ ಆತ್ಮವಿಶ್ವಾಸದ ಸಂಕೇತವೆಂದೂ ಪರಿಗಣಿಸಲಾಗಿದೆ.

ಪಿಯೆಟಾ ಶಿಲ್ಪ

ಇಲ್ಲಿಯೇ ಚಾಪೆಲ್ ಆಫ್ ದ ಪಿಯೆಟಾದಲ್ಲಿ ಮೈಕೆಲೆಂಜೆಲೊ 1499 ರಲ್ಲಿ ನಿರ್ಮಿಸಿದ ಪಿಯೆಟಾ (ಪಿಟಿ ಸೈಟ್) ಶಿಲ್ಪವಿದೆ. ಏಸುವಿನ ಮೃತ ಶರೀರವನ್ನು ತೊಡೆಯ ಮೇಲೆ ಮಲಗಿಸಿಕೊಂಡ ಮೇರಿ ದುಃಖಿತ ಕರುಣಾದ್ರ ನೋಟದಿಂದ ಏಸುವನ್ನು ನಿಟ್ಟಿಸುತ್ತಿರುವ ಶಿಲ್ಪ ನೋಡುಗರ ಮನ ಕಲಕುತ್ತದೆ. ಸ್ವತಃ ಮೈಕೆಲೆಂಜೆಲೊ ಈ ಶಿಲ್ಪದ ಕರುಣಾರಸದ ಅಭಿವ್ಯಕ್ತಿಯ ಅನನ್ಯತೆಗೆ ಮನಸೋತಿರಬೇಕು. ಏಕೆಂದರೆ ಕೇವಲ ಇದೊಂದು ಶಿಲ್ಪದ ಮೇಲೆ ಮಾತ್ರ ಆತ ತನ್ನ ಸಹಿಯನ್ನು ಕೆತ್ತಿದ್ದಾನೆ.

ರೋಮ್‌ ನಗರ, ವ್ಯಾಟಿಕನ್ ಸಿಟಿಯಲ್ಲಿನ ಸಾವಿರಾರು ವರ್ಷಗಳ ಮಹತ್ವಪೂರ್ಣ ಐತಿಹಾಸಿಕ ಘಟನೆಗಳು ಇಂದಿಗೂ ತಮ್ಮ ಮಹತ್ವವನ್ನು ನಮ್ಮ ಮುಂದೆ ಮಿಡಿಯುತ್ತಿವೆ ಎಂದೆನಿಸುವ ನಗರಗಳು. ಯೂರೋಪಿನ ಅತಿ ಮಹತ್ವಪೂರ್ಣವಾದ ಕೆಲವು ನಗರಗಳಲ್ಲೂ ಮುಂಚೂಣಿಯಲ್ಲಿರುವ ನಗರ ರೋಮ್‌ ಎನ್ನಲಾಗುತ್ತದೆ.

ರೋಮ್‌ ನಗರವನ್ನು ಕಣ್ತುಂಬಿಕೊಳ್ಳುವುದು ಸಾರ್ಥಕ ಭಾವ ನೀಡುತ್ತದೆ. ಮೈಕೆಲೆಂಜೆಲೊನ ಕಲೆಗೆ ಮೀಸಲಾಗಿದ್ದ ಬದುಕು, ಕಲೆಗೇ ಮೆರುಗು ನೀಡಿದ ಅವನ ಅಸದೃಶ ಪ್ರತಿಭೆಯ ಅಮರ ಕಲಾಕೃತಿಗಳನ್ನು ನೋಡುವ ಭಾಗ್ಯಕ್ಕೆ ಬೆಲೆ ಕಟ್ಟಲಾಗದು.

ಚಿತ್ರಗಳು: ಕೆ.ಎನ್. ದಿವಿಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT