ಬುಧವಾರ, ಫೆಬ್ರವರಿ 24, 2021
23 °C

ಹೇಮಗಿರಿಯಲ್ಲಿ ಜಲವೈಭವ!

ಬಲ್ಲೇನಹಳ್ಳಿ ಮಂಜುನಾಥ್ Updated:

ಅಕ್ಷರ ಗಾತ್ರ : | |

‘ನೂರು ಕಣ್ಣು ಸಾಲದು ನಿನ್ನ ನೋಡಲು …!’

ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯಲ್ಲಿ ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿ ಕಂಡಾಗ, ಯಾರ ಬಾಯಲ್ಲಾದರೂ ಇಂಥ ಹಾಡು ತಾನಾಗಿಯೇ ಉಲಿಯುತ್ತದೆ. ಬಾಗುತ್ತಾ, ಬಳುಕುತ್ತಾ, ಧುಮ್ಮಿಕ್ಕುತ್ತಾ ಹರಿಯುವ ನದಿ ಕಂಡಾಗ ಮನಸ್ಸು ಪ್ರಫುಲ್ಲವಾಗುತ್ತದೆ.

ದಶಕದ ನಂತರ ಅವಧಿಗೆ ಮುನ್ನವೇ ಮೈದುಂಬಿ ಹರಿದ ಹೇಮಾವತಿ ನದಿ, ಹೇಮಗಿರಿಯ ಬಳಿ ಪುಟ್ಟ ದ್ವೀಪವನ್ನೇ ಸೃಷ್ಟಿಸಿದೆ. ಹೇಮ ಎಂದರೆ ‘ಚಿನ್ನ’, ಗಿರಿ ಎಂದರೆ ‘ಬೆಟ್ಟ’. ಈ ‘ಚಿನ್ನದ ಬೆಟ್ಟ’ದಲ್ಲಿ ಸೃಷ್ಟಿಯಾಗಿರುವ ದ್ವೀಪಗಳ ನಡುವೆ ಮರಗಳ ಗುಚ್ಛವೇ ಇದೆ. ಆ ಮರಗಳು ವಿವಿಧ ಜಾತಿಗಳ ಹಕ್ಕಿಗಳಿಗೆ ಆಶ್ರಯ ನೀಡುವ ಪಕ್ಷಿಧಾಮವಾಗಿದೆ.

ಹೇಮಾವತಿ ನದಿ ಜುಳು-ಜುಳು ನಾದದಿಂದ ಹರಿದುಬಂದು ಇಲ್ಲಿನ ಬೆಟ್ಟದ ಒಡೆಯ ಕಲ್ಯಾಣ ವೆಂಕಟರಮಣನ ಪಾದ ಸ್ಪರ್ಶಿಸಿಯೇ ಮುಂದೆ ಹೋಗುತ್ತದೆ. ಶತಮಾನದ ಹಿಂದೆಯೇ ಈ ನದಿಗೆ ಮೈಸೂರಿನ ಮಹಾರಾಜರು ಹೇಮಗಿರಿಯ ಬಳಿ ಒಂದು ಒಡ್ಡು ನಿರ್ಮಿಸಿ, ನೀರು ನಿಲ್ಲುವಂತೆ ಮಾಡಿದ್ದಾರೆ. ಈ ನೀರು ನಾಲೆ ಮೂಲಕ ಹರಿದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಬೇಕೆಂಬುದು ಅವರ ಉದ್ದೇಶವಾಗಿತ್ತು. ಈ ಒಡ್ಡು ನಿರ್ಮಿಸಿರುವ ಜಾಗದಲ್ಲಿ ಧುಮ್ಮಿಕ್ಕುವ ನೀರನ್ನು ಇಲ್ಲಿನವರು ‘ಬ್ಲಫ್’ ಎಂದೇ ಕರೆಯುತ್ತಾರೆ. ಈಗ ಹೇಮಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ನೀರು ಎತ್ತರವಾದ ಈ ಒಡ್ಡಿನ ಮೇಲಿಂದ ಕೆಳಗೆ ಧುಮ್ಮಿಕ್ಕಿ ಮುಂದೆ ಸಾಗುತ್ತದೆ. ಈ ದೃಶ್ಯ ನೋಡಲು ಪ್ರವಾಸಿಗರು ಬರುತ್ತಿದ್ದಾರೆ.

ಹೇಮಗಿರಿಯಲ್ಲಿ ನದಿ ಅಣೆಯಿಂದ ಧುಮ್ಮಿಕ್ಕಿ ಅಕ್ಕಿಹೆಬ್ಬಾಳು ಮೂಲಕ ಸಂಗಾಪುರದತ್ತ ಹರಿದು ಅಲ್ಲಿ ಕಾವೇರಿ ನದಿಯೊಂದಿಗೆ ಸಂಗಮವಾಗುತ್ತದೆ. ಸಂಗಾಪುರವು ತ್ರಿವೇಣಿ ಸಂಗಮವಾಗಿದ್ದು ಕುಂಬಮೇಳಕ್ಕ ಹೆಸರಾಗಿದೆ. ಇಲ್ಲಿಗೆ ಕೊಡಗಿನಿಂದ ಬರುವ ಕಾವೇರಿ, ಹುಣಸೂರಿನ ಕಡೆಯಿಂದ ಬರುವ ಲಕ್ಷ್ಮಣತೀರ್ಥ ಹಾಗೂ ಹೇಮಗಿರಿ ಕಡೆಯಿಂದ ಬರುವ ಹೇಮಾವತಿ ನದಿ ಸಂಗಮವಾಗುತ್ತದೆ. ಬಂಡಿಹೊಳೆ, ಅಕ್ಕಿಹೆಬ್ಬಾಳು, ಮಾದಾಪುರ- ಗೊಂದಿಹಳ್ಳಿ, ಕಟ್ಟಹಳ್ಳಿ ಸಂಗಾಪುರ, ಮಂದಗೆರೆಯಲ್ಲಿ ಹರಿಯುವ ನದಿಯ ಝರಿ ನೋಡಲು, ಚಿಕ್ಕಮಂದಗೆರೆ, ಹೇಮಗಿರಿ, ಮಾದಾಪುರ, ಗಾಣದಹಳ್ಳಿ, ಮಂದಗೆರೆಗಳಲ್ಲಿ ಹೇಮಾವತಿ ನದಿಯ ವೈಯಾರ ವೀಕ್ಷಿಸಲೆಂದೇ ಪ್ರವಾಸಿಗರು ಬರುತ್ತಾರೆ.

ಪುಟ್ಟ ರಂಗನತಿಟ್ಟು

ಹೇಮಗಿರಿ ಸಮೀಪದ ಬಂಡಿಹೊಳೆಯ ಸನಿಹ ಹೇಮಾವತಿ ನದಿ ದ್ವೀಪವನ್ನೇ ಸೃಷ್ಟಿಸಿದೆ. ಇದನ್ನು ಟಿಪ್ಪು ಸುಲ್ತಾನನ ಕಾಲದಲ್ಲಿ ಹೊಸಪಟ್ಟಣ ಎಂದು ನಾಮಕರಣ ಮಾಡಲಾಗಿತ್ತು. ಈ ಜಾಗವನ್ನು ರಾಜಧಾನಿಯನ್ನಾಗಿಸಬೇಕು ಎಂದು ಟಿಪ್ಪುಸುಲ್ತಾನ್ ಆಲೋಚಿಸಿದ್ದರಂತೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಈ ಜಾಗ ಸರಿ ಇಲ್ಲದ ಕಾರಣ ಯೋಜನೆಯನ್ನು ಕೈಬಿಡಲಾಯಿತಂತೆ. ಅಂದಿನಿಂದ ಈ ಸ್ಥಳ ಪಕ್ಷಿಗಳ ಆವಾಸಸ್ಥಾನವಾಗಿದೆ.

ಅಪಾರ ಪ್ರಮಾಣದ ಪಕ್ಷಿ ಸಂಕುಲ ಇಲ್ಲಿರುವ ಮರಗಳ ಮೇಲೆ ಬೀಡುಬಿಟ್ಟಿವೆ. ವಿವಿಧ ಜಾತಿಯ ಕೊಕ್ಕರೆಗಳು ಹಾರಾಡುತ್ತಾ, ನದಿಯಲ್ಲಿರುವ ಮೀನುಗಳನ್ನು ಹೆಕ್ಕುತ್ತಿರುವುದನ್ನು ಕಂಡರೆ, ಶ್ರೀರಂಗಪಟ್ಟಣದ ಬಳಿ ಇರುವ ರಂಗನತಿಟ್ಟು ಪಕ್ಷಿಧಾಮ ನೆನಪಾಗುತ್ತದೆ.

ನದಿಯ ಅಪಾರ ಜಲರಾಶಿ. ಕಣ್ಣು ಕೋರೈಸುವ ಹಸಿರು. ಆ ಹಸಿರ ಮೇಲೆ ಬೆಳ್ಳಕ್ಕಿಯ ಸಾಲು ನೋಡಿದಾಗ ಕವಿ ಕುವೆಂಪು ಅವರ ‘ದೇವರು ರುಜು ಮಾಡಿದನು’, ವರಕವಿ ಬೇಂದ್ರೆಯವರ ‘ಹಕ್ಕಿ ಹಾರುತ್ತಿದೆ ನೋಡಿದಿರಾ’ ಕವನಗಳ ಸಾಲು ನೆನಪಾಗದೆ ಇರದು.

ಸರ್ಕಾರ ಸ್ವಲ್ಪ ಮನಸ್ಸು ಮಾಡಿದರೆ, ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಅದ್ಭುತವಾದ ಪ್ರವಾಸಿ ತಾಣವನ್ನು ಸೃಷ್ಟಿ ಮಾಡಲು ಸಾಧ್ಯವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು