ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಾಖಂಡ ಪರ್ವತಾರೋಹಣ ದುರಂತ: ಹಿಮದಡಿ ಹೂತ ಕನಸು..

Last Updated 16 ಅಕ್ಟೋಬರ್ 2022, 0:30 IST
ಅಕ್ಷರ ಗಾತ್ರ

ಅಬ್ಬಾ! ಸುಮಾರು ಆರು ಸಾವಿರ ಮೀಟರ್‌ಗಳವರೆಗೆ ಏರಲು ಹೊರಟವರು... ಇಳಿಯಲಾರದಷ್ಟು ಎತ್ತರಕ್ಕೇ ಹೋಗಿಬಿಟ್ಟರಲ್ಲ... ಬೆಂಗಳೂರಿನ ಪರ್ವತಾರೋಹಿಗಳ ಮನಸ್ಸಿನಲ್ಲಿ ಈ ಮಾತು ವಿಷಾದದ ನಿಟ್ಟುಸಿರಿನೊಂದಿಗೆ ಹೊರಬರುತ್ತದೆ.

ಅಕ್ಟೋಬರ್‌ 4ರಂದು ಉತ್ತರಾಖಂಡದ ಉತ್ತರಕಾಶಿ–ಗಂಗೋತ್ರಿ ಬೆಟ್ಟದ ಸಾಲಿನ ದ್ರೌಪದಿ ಕಾ ಡಾಂಡಾ–2 ಶಿಖರ ಸಮೀಪ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟ 17ಪರ್ವತಾರೋಹಿಗಳ ಪೈಕಿ ಬೆಂಗಳೂರಿನ ಇಬ್ಬರು ಇದ್ದರು. ಇಲ್ಲಿನ ಶ್ರೀನಗರದ ಡಾ.ರಕ್ಷಿತ್‌ ಕೆ. ಮತ್ತು ವೈಟ್‌ಫೀಲ್ಡ್‌ನ ವಿಕ್ರಂ ಎಂ. ಅವರನ್ನು ಬೆಂಗಳೂರಿನ ಸಾಹಸಯಾತ್ರಿಗಳು, ಸಂಘಟಕರು ನೆನಪಿಸಿಕೊಳ್ಳುತ್ತಲೇ ಇದ್ದಾರೆ.

ಡಾ.ರಕ್ಷಿತ್‌ ಓದಿದ್ದು ಎಂ.ಬಿ.ಬಿ.ಎಸ್‌. ಹವ್ಯಾಸವಾಗಿ ಆಯ್ದುಕೊಂಡದ್ದು ಪರ್ವತಾರೋಹಣ. ಅದಕ್ಕಾಗಿಯೇ ಆರ್ಟ್‌ ಆಫ್‌ ಟ್ರಾವೆಲಿಂಗ್‌ ಎಂಬ ಪ್ರವಾಸಿ ಕಂಪನಿಯನ್ನು ಕಟ್ಟಿದರು. ನೂರಾರು ಜನರಿಗೆ ಕಾಶ್ಮೀರ, ಹಿಮಾಲಯದ ತಪ್ಪಲು, ಪಶ್ಚಿಮ ಘಟ್ಟದ ಸರಣಿಯನ್ನು ಪರಿಚಯಿಸಿದರು. ಅರಣ್ಯಗಳಲ್ಲಿ ಹುಲಿಗಳ ಹೆಜ್ಜೆ ಜಾಡು ಹಿಡಿಯುವುದು ಹೇಗೆ ಎಂಬುದರ ಗುರುವಾದರು. ಹೀಗೆ ರಕ್ಷಿತ್‌ ಯಾತ್ರೆ ಒಂದೆರಡಲ್ಲ. ಒಂದರ ಹಿಂದೆ ಒಂದು ದಾಖಲೆಯನ್ನು ಮುರಿಯುವುದರಲ್ಲೇ ಅವರಿಗೆ ಖುಷಿ.

ರಕ್ಷಿತ್‌ ಅವರ ಸಹೋದರ ಋತ್ವಿಕ್‌ ಅವರನ್ನು ಮಾತಿಗೆಳೆದಾಗ ಸ್ಮೃತಿಪಟಲ ಅಣ್ಣನ ಗಾಢ ನೆನಪಿನತ್ತ ಹೊರಳಿತು.

‘ಚಿಕ್ಕವರಿದ್ದಾಗ ಸಣ್ಣ ಪುಟ್ಟ ಕಿತ್ತಾಟಗಳು ಇದ್ದದ್ದೇ. ಬೆಳೆದಂತೆ ಒಳ್ಳೆಯ ಸ್ನೇಹಿತರಂತೆ ಇದ್ದೆವು. ನನಗೂ ಅಣ್ಣನಿಗೂ ಸುಮಾರು ಮೂರೂವರೆ ವರ್ಷಗಳ ಅಂತರ. ನಮ್ಮಿಬ್ಬರ ಸ್ನೇಹ ವಲಯಗಳು ಒಂದೇ ಆಗಿದ್ದವು. ಒಟ್ಟಿಗೇ ಸೇರುತ್ತಿದ್ದೆವು. ಶಾಲೆಯಲ್ಲಿ ಆತ ಶಿಕ್ಷಕರಿಗೆ ತುಂಬಾ ಹತ್ತಿರವಾಗಿದ್ದ. ಅರಬಿಂದೋ ಶಾಲೆಯ ಪ್ರಾಂಶುಪಾಲರೂ ನಿಸರ್ಗ ಪ್ರೇಮಿ. ಹೀಗೆ ಮೇಷ್ಟ್ರುಗಳ ಜೊತೆ ಅವನ ಪ್ರಕೃತಿ ಯಾನ ಇತ್ತು. ಶಿಕ್ಷಣ ಮುಗಿದ ಮೇಲಂತೂ ಮನೆಯಲ್ಲಿದ್ದದ್ದೇ ಕಡಿಮೆ. ನಾಲ್ಕು ತಿಂಗಳು ಊರಿಗೆ ಬಂದರೂ ಅವನ ತಿರುಗಾಟವೆಲ್ಲ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುತ್ತಿತ್ತು. ನನ್ನನ್ನೂ ಹಲವಾರು ಚಾರಣಗಳಿಗೆ ಆತ ಕರೆದೊಯ್ದಿದ್ದ. ಸೆಪ್ಟೆಂಬರ್‌ 25ರಂದು ನಾನೂ ಅವನೂ ವಿಡಿಯೊ ಕಾಲ್‌ ಮೂಲಕ ಮಾತನಾಡಿದ್ದೆವು. ಪರಸ್ಪರ ಯೋಗಕ್ಷೇಮ ವಿಚಾರಿಸಿದ್ದೆವು. ಮುಂದೆ ನಡೆದಿದ್ದನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲವೂ ಅನಿರೀಕ್ಷಿತ...’ ಋತ್ವಿಕ್‌ ಮೌನಕ್ಕೆ ಜಾರಿದರು.

ರಕ್ಷಿತ್‌ ಅವರ ಆಪ್ತ ಒಡನಾಡಿ ಪುರುಷೋತ್ತಮ್‌ ಕೂಡಾ ನೆನಪಿನ ಬುತ್ತಿ ತೆರೆದಿಟ್ಟರು. ‘ಹೈಸ್ಕೂಲ್‌ ದಿನಗಳಿಂದಲೇ ನಾವು ಪರಿಚಿತರು. ಬಳಿಕ ಸಮಾನ ಆಸಕ್ತಿಯ ಕಾರಣದಿಂದ ಆತ್ಮೀಯರಾದೆವು. ದ್ವಿತೀಯ ಪಿಯು ಆದ ಕೂಡಲೇ (2016) ಅವನ ಹೊರಾಂಗಣ ಚಟುವಟಿಕೆಗಳು ಜೋರಾಗಿದ್ದವು. ಸ್ಥಳೀಯ ಪ್ರವಾಸಗಳನ್ನು ಆಯೋಜಿಸುತ್ತಿದ್ದ. ಶಿವಮೊಗ್ಗ, ಚಿಕ್ಕಮಗಳೂರು... ಇಲ್ಲೆಲ್ಲ ಓಡಾಡುತ್ತಲೇ ಇದ್ದ’ ಎಂದು ನೆನಪಿಸಿಕೊಂಡರು.

‘ದೇಶದ ವಿವಿಧೆಡೆ ಜನರನ್ನು ಸೇರಿಸಿದ. ಅದ್ಭುತವಾದ ತಂಡ ಕಟ್ಟಿದ. ಸ್ಪಿಕಿ ಕಣಿವೆ, ಲಡಾಖ್‌ಗೆಲ್ಲ ಪ್ರವಾಸಿಗರನ್ನು ಕರೆದೊಯ್ದ. ನಾನೂ ಅವನ ಜೊತೆ ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗೆ ಸುಮಾರು 200 ಕಿಲೋಮೀಟರ್‌ ಯಾತ್ರೆ ಮಾಡಿದ್ದೆ. ಎವರೆಸ್ಟ್‌ ಬೇಸ್‌ ಅನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪಿ ಬಂದ ದಾಖಲೆಯನ್ನು ಮುರಿಯಬೇಕಿತ್ತು. ಅದಕ್ಕಾಗಿಯೇ ಪರ್ವತಾರೋಹಣಕ್ಕೆ ಸಂಬಂಧಿಸಿ ಅಡ್ವಾನ್ಸ್ಡ್‌ ಕೋರ್ಸ್‌ ಮುಗಿಸಿದ್ದ. ದಾಖಲೆಯನ್ನೂ ಮುರಿದ. 8K ಎಕ್ಸ್‌ಪೆಡಿಷನ್ಸ್‌ ಅನ್ನುವ ಸಂಸ್ಥೆ ರಕ್ಷಿತ್‌ನ ಚಾರಣ ಸಾಹಸದ ದಾಖಲೆ ಮಾಡಿದೆ. ಮತ್ತೂ ಕಲಿಯಬೇಕು ಎನ್ನುವ ಹಂಬಲವೇ ಅವನನ್ನು ನೆಹರೂ ಪರ್ವತಾರೋಹಣ ಸಂಸ್ಥೆಯನ್ನು ಸೇರುವಂತೆ ಮಾಡಿತು. ತರಬೇತಿಯ ಅಂತ್ಯ ಹೀಗಾಗಿಬಿಟ್ಟಿತು...’ ಎಂದು ಮರುಗಿದರು.

‘ಕಳೆದ ಜುಲೈನಲ್ಲಿ ಪರ್ವತಾರೋಹಣ ಸಂಬಂಧಿಸಿ ಅಲ್ಪಾವಧಿ ಕೋರ್ಸ್‌ಗೆ ಹೋದ. ಇದೇ ಅವಧಿಯಲ್ಲಿ ಕಾಶ್ಮೀರದ ಲಾಲ್‌ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬನಾಗಿದ್ದ. ಮಕ್ಕಳ ಶಿಬಿರಗಳನ್ನು ಸಾಕಷ್ಟು ಹಮ್ಮಿಕೊಂಡಿದ್ದ. ಹಾಗೆ ನೋಡಿದರೆ ಮಕ್ಕಳ ಜೊತೆಗೇ ಹೆಚ್ಚು ಬೆರೆಯುತ್ತಿದ್ದ. ಒಟ್ಟಿನಲ್ಲಿ ಅದ್ಯಾಕೋ ಬೆಟ್ಟ, ಗುಡ್ಡ, ಹಿಮಾಲಯ, ನಮ್ಮ ದೇಶದ ಶಿರಭಾಗ ಅವನಿಗೆ ಅತ್ಯಂತ ಪ್ರೀತಿಯ ಜಾಗ... ಅಲ್ಲೇ ಶಾಶ್ವತವಾಗಿ ನೆಲೆಯಾದನೇ... ನಮ್ಮಿಂದ ಇಲ್ಲವಾಗಿ...’ ಪುರುಷೋತ್ತಮ್‌ ಮಾತು ಮುಗಿಸಿದರು.

ವಿಕ್ರಂ ಎಂ. ಅವರ ಸಹೋದರ ವಿವೇಕ್‌, ಅಣ್ಣನ ನೆನಪನ್ನು ತೆರೆದಿಟ್ಟರು.

‘ಅಣ್ಣ ಹೆಚ್ಚು ನೋಡುತ್ತಿದ್ದದ್ದು ಡಿಸ್ಕವರಿ, ಆ್ಯನಿಮಲ್‌ ಪ್ಲಾನೆಟ್‌, ಟ್ರಾವೆಲ್‌ ಆ್ಯಂಡ್‌ ಲಿವಿಂಗ್‌ನಂತಹ ಚಾನೆಲ್‌ಗಳನ್ನು. ಆತ ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌. ಮುಂದಿನ ವರ್ಷ ಮದುವೆಗೂ ಸಿದ್ಧತೆ ನಡೆದಿತ್ತು. ಕಂಪನಿಯೊಂದರಲ್ಲಿ ಉದ್ಯೋಗಿಯೂ ಆಗಿದ್ದ. ಜೊತೆಗೆ ಪುಟ್ಟದೊಂದು ಸ್ವಂತ ಉದ್ಯಮವನ್ನೂ ನಡೆಸುತ್ತಿದ್ದ. ಹೂಡಿಕೆ, ಹಣಕಾಸು ಇತ್ಯಾದಿ ಕ್ಷೇತ್ರಗಳಲ್ಲೂ ಜ್ಞಾನ ಇತ್ತು. ಮಾತುಕತೆಗಳೂ ಈ ಕ್ಷೇತ್ರದತ್ತಲೇ ಇರುತ್ತಿದ್ದವು. ನಾವು ಆಗಾಗ ಪುಟ್ಟ ಚಾರಣ ಮಾಡುತ್ತಿದ್ದೆವು. ನಿಸರ್ಗ ಪ್ರದೇಶಗಳಿಗೆ ಭೇಟಿ ಕೊಡುತ್ತಿದ್ದೆವು. ಈಗ ಅವನನ್ನು ಎಷ್ಟು ಕಳೆದುಕೊಂಡಿದ್ದೇವೆ ಎಂದು ಶಬ್ದಗಳಲ್ಲಿ ಹೇಳಲಾಗದು’ ಎಂದು ಬೇಸರಿಸಿದರು.

‘ಲೇಹ್‌, ಲಡಾಖ್‌ನಂತಹ ಪ್ರದೇಶಗಳಲ್ಲಿ ಅಣ್ಣನ ಯಾನ ಹೆಚ್ಚು ಇರುತ್ತಿತ್ತು. ಬೈಕ್‌ನಲ್ಲೇ ಓಡಾಟ ಹೆಚ್ಚು. ಇಲ್ಲಿಯೂ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಬೈಕ್‌ ರೈಡಿಂಗ್‌ ಅಥವಾ ಕಾರಿನಲ್ಲಿ ಸಾಹಸ ಯಾತ್ರೆ ಮಾಡುತ್ತಿದ್ದೆವು. ರಿಸ್ಕ್‌ ತೆಗೆದುಕೊಳ್ಳಲು ಹಿಂಜರಿಯುತ್ತಿರಲಿಲ್ಲ’ ಎಂದು ಹೆಮ್ಮೆಯಿಂದ ಹೇಳಿದರೆ ಅದರ ಹಿಂದೆ ಅಣ್ಣನ ಅಗಲಿಕೆಯ ನೋವೂ ಇತ್ತು.

ಅಪ್ಪ ಖಾಸಗಿ ಕಂಪನಿಯ ನಿವೃತ್ತ ಉದ್ಯೋಗಿ. ಅಮ್ಮ ಸರ್ಕಾರಿ ಶಾಲಾ ಶಿಕ್ಷಕಿ. ಇಬ್ಬರ ಮನಸ್ಸಲ್ಲೂ ನೋವು ಮಡುಗಟ್ಟಿದೆ. ಮಾತು ಹೊರಡದಂತಾಗಿದೆ.

ಅಪಾಯದ ಯಾತ್ರೆ

‘ಚಾರಣ ಯಾವತ್ತೂ ಅಪಾಯವನ್ನು ಎದುರಿಸುತ್ತಲೇ ಹೋಗುವ ಯಾತ್ರೆ. ಇದನ್ನು ತರಬೇತಿ ಹಂತದಲ್ಲೇ ಹೇಳಿಕೊಡುತ್ತೇವೆ. ಆದರೆ ನಿಸರ್ಗದ ಎದುರು ನಾವೇನೂ ಮಾಡಲಾಗದು. ಎಲ್ಲಾ ಸುರಕ್ಷತಾ ಕ್ರಮಗಳಿದ್ದರೂ ಹಿಮದ ಅಗಾಧತೆಯ ಮುಂದೆ ಕೆಲವೊಮ್ಮೆ ಅವುಗಳೇನೂ ರಕ್ಷಿಸಲಾರವು’ ಎಂದು ಕರ್ನಾಟಕ ಪರ್ವತಾರೋಹಣ ಸಂಸ್ಥೆಯ ಉಪಾಧ್ಯಕ್ಷ ಲೋಕೇಶ್‌ ಹೇಳಿದರು.

‘ಪರ್ವತಾರೋಹಿಗಳನ್ನು ಕಳೆದುಕೊಂಡಾಗ ತುಂಬಾ ನೋವೆನಿಸುತ್ತದೆ. ಇದರಲ್ಲಿ ಯಾರನ್ನೂ ಹೊಣೆಯಾಗಿಸಲು ಅಸಾಧ್ಯ’ ಎಂದು ಅವರು ಬೇಸರಿಸಿದರು.

ಕೋವಿಡ್‌ ನಂತರದ ಬದಲಾವಣೆ

‘ರಕ್ಷಿತ್‌ ಅವರ ಪರ್ವತಾರೋಹಣ ಅತ್ಯಂತ ವೃತ್ತಿಪರ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗಿತ್ತು. ಒಟ್ಟಿನಲ್ಲಿ ಅದೃಷ್ಟ ಕೈಕೊಟ್ಟಿತ್ತು ಎನ್ನಬೇಕೇ... ತಿಳಿಯುತ್ತಿಲ್ಲ’ ಎಂದರು ಮೈಸೂರಿನ ಪರ್ವತಾರೋಹಿ, ಸಾಹಸ ಯಾತ್ರೆಯ ಆಯೋಜಕ ಟೈಗರ್‌ ಸೋಳಂಕಿ.

ಈ ನಡುವೆ ಕೋವಿಡ್‌ ನಂತರದ ಕುತೂಹಲಕಾರಿ ಬೆಳವಣಿಗೆಯನ್ನು ಅವರು ತೆರೆದಿಟ್ಟರು.

‘ಕೋವಿಡ್‌ ಕಾಲದಲ್ಲಿ ಮುಚ್ಚಿಹೋದ ಅನೇಕ ಜಿಮ್ನಾಸ್ಟಿಕ್‌ ಸಂಸ್ಥೆಗಳು ಸಾಹಸ ಯಾತ್ರೆ/ ಚಾರಣ/ ಪರ್ವತಾರೋಹಣ ಶುರು ಮಾಡಿದವು. ಈಗ ಬೆಂಗಳೂರೊಂದರಲ್ಲೇ ಸುಮಾರು 1,200ಕ್ಕೂ ಹೆಚ್ಚು ಪರ್ವತಾರೋಹಣ ಸಂಸ್ಥೆಗಳಿವೆ. ಒಂದೆರಡು ಬಾರಿ ಪ್ರವಾಸ ಹೋಗಿ ಬಂದವರೂ ಇಂಥ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ. ಇವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ನೋಂದಾಯಿತ, ವೃತ್ತಿಪರ ಸಂಸ್ಥೆಗಳಿವೆ. ಉಳಿದವು ಅವುಗಳ ಪಾಡಿಗೆ ಇಂಥ ಯಾತ್ರೆ ಹಮ್ಮಿಕೊಳ್ಳುತ್ತಿವೆ. ಏನಾದರೂ ಅನಾಹುತಗಳಾದಾಗಲಷ್ಟೇ ಸಂಸ್ಥೆಯ ವಾಸ್ತವ ಹೊರಬರುತ್ತದೆ’ ಎಂದು ಹೇಳಿದರು.

‘ನೊಂದವರಿಗೆ ಯಾವ ರಕ್ಷಣೆಯೂ ಇಲ್ಲಿರುವುದಿಲ್ಲ. ಹಿಮಪಾತದಿಂದ ಸೈನಿಕರ ಸಾವು ಸಂಭವಿಸುತ್ತಲೇ ಇರುತ್ತದೆ. ಅಷ್ಟಾಗಿ ಸುದ್ದಿಯಾಗುವುದಿಲ್ಲ. ಬೇರೆಯವರು ಹೋದಾಗಲಷ್ಟೇ ಇವು ಸುದ್ದಿಯಾಗಿ ಅಪಾಯದ ಅಗಾಧತೆ ಅರಿವಾಗುತ್ತದೆ. ಪರ್ವತಾರೋಹಣ ಯಾವತ್ತೂ ಆತಂಕಕಾರಿಯೇ. ರಿಸ್ಕ್‌ ಎಲ್ಲ ಹಂತಗಳಲ್ಲೂ ಇರುತ್ತದೆ. ಹೀಗಾಗಿ ತುಂಬಾ ಲೆಕ್ಕಾಚಾರದ ಹೆಜ್ಜೆ ಇಡಬೇಕಾಗುತ್ತದೆ’ ಎಂದರು ಅವರು.

ಎಲ್ಲಿದೆ ದ್ರೌಪದಿ ಕಾ ಡಾಂಡಾ?

ದ್ರೌಪದಿ ಕಾ ಡಾಂಡಾ ಎಂದು ಕರೆಯಲಾಗುವ ಈ ಪ್ರದೇಶ ಹಿಮಾಲಯ ಸರಣಿಯ ಗಂಗೋತ್ರಿ ಬೆಟ್ಟಗಳ ಸಾಲಿನಲ್ಲಿ ಬರುವ ಪರ್ವತ ಶಿಖರ. ಉತ್ತರಾಖಂಡ ರಾಜ್ಯಕ್ಕೆ ಇದು ಸೇರಿದೆ. ಮಹಾಭಾರತದ ದ್ರೌಪದಿಯಿಂದ ಈ ಸರಣಿಗೆ ದ್ರೌಪದಿಡಾಂಡಾ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಶಿಖರವು 5,670 ಮೀಟರ್‌ಗಳಷ್ಟು ಎತ್ತರವಿದೆ. ಹಿಮ ಪ್ರಮಾಣದ ಮೇಲೆ ಈ ಎತ್ತರದಲ್ಲಿ ವ್ಯತ್ಯಾಸಗಳಾಗುತ್ತವೆ ಎನ್ನುತ್ತಾರೆ ಪರ್ವತಾರೋಹಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT