ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಿಯಾ ಚಾರಣ ಧ್ಯಾನ!

ಬಹುಮುಖ ಪ್ರತಿಭೆಯಲ್ಲಿ ಎವರೆಸ್ಟ್‌ ಎತ್ತರದ ಕನಸುಗಳು..
Last Updated 10 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಪ್ರತಿ ಬಾರಿ ಹಿಮಾಲಯದ ಚಾರಣ ಮುಗಿಸಿ ಬರುತ್ತಿದ್ದ ಅಪ್ಪನನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದ ರಿಯಾಗೆ ಕಾಡುತ್ತಿದ್ದುದು ಒಂದೇ ಪ್ರಶ್ನೆ. ‘ಹಿಮಾಲಯಕ್ಕೆ ನಾನು ಹೋಗುವುದು ಯಾವಾಗ?' ಎಂಬುದು.

ಈ ಪ್ರಶ್ನೆಯೇ ಅವರ ಚಾರಣದ ಆಸೆಗೆ ಅಡಿಪಾಯವಾಯಿತಂತೆ.

‘ಪುಟ್ಟ ಪುಟ್ಟ ಕುತೂಹಲಗಳೇ ನಮ್ಮನ್ನು ಹೊಸದಕ್ಕೆ ಪ್ರೇರೇಪಿಸುವುದು ಅಲ್ಲವಾ?' ಎಂದು ಪ್ರಶ್ನಿಸುವ ಅವರು, ಮೂರನೇ ತರಗತಿಯಲ್ಲಿದ್ದಾಗಲೇ ಚಾರಣಕ್ಕೆ ಮೊದಲ ಹೆಜ್ಜೆ ಹಾಕಿದವರು.

ಮೈಸೂರಿನ ಡಿಎಸ್‍ಡಿ ಸೋಲಂಕಿ ಹಾಗೂ ಡಾ.ಸಂತೋಷ್ ಕನ್ವರ್ ಅವರ ಮಗಳಾದ ರಿಯಾ, ಇಲ್ಲಿನ ಮಾನಸರೋವರ್ ಪುಷ್ಕರಿಣಿ ವಿದ್ಯಾಶ್ರಮದಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ. ಟ್ರೆಕ್ಕಿಂಗ್ ಎಂದರೆ ಅತೀವ ಪ್ರೀತಿ. ತಿರುಗಾಟದ ಆಸಕ್ತಿ ಮೂಡಿದ್ದು ತಂದೆಯಿಂದ. ಟೈಗರ್ ಅಡ್ವೆಂಚರ್ ಫೌಂಡೇಷನ್‌ ಹೆಸರಿನಲ್ಲಿ ಮೂವತ್ತು ವರ್ಷಗಳಿಂದಲೂ ಸಾಕಷ್ಟು ಚಾರಣ ಚಟುವಟಿಕೆಗಳನ್ನು ನಡೆಸಿರುವ ಸೋಲಂಕಿಯವರು ಮಗಳಲ್ಲೂ ಸುತ್ತಾಟದ ಅಭಿರುಚಿ ಬಿತ್ತಿದವರು.

‘ನಾನು ಮೊದಲ ಟ್ರೆಕ್ ಹೋಗಿದ್ದು ಹಿಮಾಲಯದ ‘ಸೂರ್ಯ ಟಾಪ್‍’ಗೆ. ಅದು ಸುಮಾರು 13,000 ಅಡಿ ಎತ್ತರ. ಸಾಲು ಸಾಲು ಹಿಮಬೆಟ್ಟಗಳ ದರ್ಶನ ಮಾಡಿಸುವ ಈ ಪಯಣ ಜೀವನದ ಅತ್ಯದ್ಭುತ ಗಳಿಗೆ. ಆಗ ನನಗೆ ಎಂಟು ವರ್ಷವಿರಬಹುದು. ಥಂಡಿ ನಡುವೆ ಕಷ್ಟಪಟ್ಟು ಹೆಜ್ಜೆ ಹಾಕಿದ ನೆನಪಿದೆಯಷ್ಟೆ. ಆದರೆ ಹಿಮವನ್ನು ಮೊದಲ ಬಾರಿ ಕಂಡ ಅನುಭವವಿದೆಯಲ್ಲ, ಅದನ್ನು ಮಾತಿನಲ್ಲಿ ಹೇಳಲು ಅಸಾಧ್ಯ’ಎಂದು ನೆನೆಸಿಕೊಳ್ಳುತ್ತಾರೆ.

ಮಕ್ಕಳು ಏಕಾಏಕಿ ಹಿಮಾಲಯಕ್ಕೆ ಚಾರಣ ಹೋಗುವುದು ಸುಲಭವಲ್ಲ. ಇದನ್ನರಿತಿದ್ದ ಸೋಲಂಕಿ ಅವರು, ತಮ್ಮ ಮಗಳಿಗೆ ಚಾರಣಕ್ಕೆ ಬೇಕಾದ ತರಬೇತಿಯನ್ನೂ ನೀಡಿದ್ದರು.

ಹೀಗೆ ಹಿಮಾಲಯದ ಬೆನ್ನೇರುವ ಆಸೆ ಹುಟ್ಟಿದ್ದು, ತಂದೆಯಿಂದ ಮಾತ್ರವಲ್ಲ, ‘ಎವರೆಸ್ಟ್‌’ ಎಂಬ ಟಿ.ವಿ. ಸರಣಿ. ಅದನ್ನು ನೋಡುತ್ತಿದ್ದ ರಿಯಾಳಲ್ಲಿ ತಾನೂ ಹಾಗೆ ಸಾಹಸಮಯ ಚಾರಣಕ್ಕೆ ಹೆಜ್ಜೆ ಹಾಕುವ ಹುಮ್ಮಸ್ಸೂ ಹೆಚ್ಚಾಯಿತು.

ಸುತ್ತಾಟದ ಗೀಳು ಬಿಡುವಂಥದ್ದಲ್ಲ. 2013ರಲ್ಲಿ ಮೊದಲ ಚಾರಣ ಮುಗಿಸಿದ ಮೇಲೆ ಮತ್ತೆ 2014ರಲ್ಲಿ ಸರ್ಕುಂಡಿ ಪಾಸ್‌ಗೆ ಹೊರಟರು. ಅದು 14,000 ಅಡಿ ಎತ್ತರ. ಹಿಂದಿಗಿಂತ ಸ್ವಲ್ಪ ಹೆಚ್ಚೇ ಸವಾಲುಗಳನ್ನು ನೀಡಿದ ಪರ್ವತಗಳನ್ನು ದಾಟಿ ತುದಿ ಮುಟ್ಟಿದಾಗ ಸಂತೋಷವೂ ಮೇರೆ ಮೀರಿದ ಅನುಭವ.

ಚಾರಣ ಹವ್ಯಾಸವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಶಾಲೆಗೆ ರಜೆಯ ಬಿಡುವು ಸಿಕ್ಕಾಗಲೆಲ್ಲ ಮನಸ್ಸು ತುಡಿಯುತ್ತಿದ್ದುದು ಹಿಮದ ನಡುವಿನ ಸುತ್ತಾಟಕ್ಕೆ. ವಿರಾಮಗಳನ್ನೆಲ್ಲಾ ಪ್ರಕೃತಿಯ ನಡುವೆ ಕಳೆಯಲು ಮೀಸಲಿಡುವುದು ಇವರಿಗೆ ಇಷ್ಟದ ಕೆಲಸ. ಅದಕ್ಕೆಂದೇ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಚಾಮರಾಜನಗರ ಹೀಗೆ ಹಲವು ಕಡೆಗಳಲ್ಲಿ ಅಡಗಿ ಕೂತಿರುವ ಬೆಟ್ಟಗುಡ್ಡಗಳನ್ನು ಏರಲು ರಜೆಯನ್ನೇ ನೆಪವಾಗಿಸಿಕೊಳ್ಳುತ್ತಾರೆ. ಎಲ್ಲಾ ಅನುಭವಗಳನ್ನೂ ದಾಖಲಿಸಿಕೊಳ್ಳುತ್ತಾರೆ.

2015ರಲ್ಲಿ ಮತ್ತೊಮ್ಮೆ ಹಿಮಾಲಯ ದರ್ಶನ ಮಾಡುವ ಅವಕಾಶ ಒದಗಿತು. ಆಗ ಹೋಗಿದ್ದು ಮೌಂಟ್ ರುಮ್ಟು ಟಾಪ್‌ಗೆ.2016ರಲ್ಲಿ ಕೇದಾರನಾಥಕ್ಕೆ, 2017ರಲ್ಲಿ ಮೌಟ್ ಚಂದ್ರಖನಿ ಪಾಸ್, ಮೌಂಟ್ ತುಂಡ ಭುಜ... ಹೀಗೆ ಹಿಮಾಲಯದ ಒಂದೊಂದೇ ಮುಖ, ಮಗ್ಗಲುಗಳನ್ನು ಪರಿಚಯ ಮಾಡಿಕೊಳ್ಳುತ್ತಲೇ ಸಾಗಿದರು. ಇದಕ್ಕೆ ತಂದೆಯ ಸಹಕಾರ ಜೊತೆಯಾಯಿತು.

ಮೌಂಟ್‌ಎವರೆಸ್ಟ್ ಏರುವ ಕನಸು..

ಇಷ್ಟೆಲ್ಲ ಟ್ರೆಕ್ಕಿಂಗ್ ಮಾಡುತ್ತಿದ್ದ ರಿಯಾಕನಸಲ್ಲಿ ಸದಾ ಕಾಡುತ್ತಿದ್ದುದು ಮೌಂಟ್ ಎವರೆಸ್ಟ್ ಕ್ಯಾಂಪ್ (ನೇಪಾಳ). ಚಾರಣಕ್ಕೆ ಸವಾಲೊಡ್ಡುವ, ಹತ್ತಲು ಹೆಚ್ಚೇ ಧೈರ್ಯ ಕೇಳುವ ಈ ಪರ್ವತದ ಶಿಖಾರಿ ಮಾಡಲೇಬೇಕು ಎಂಬ ಹಟವೂ ಮನಸ್ಸಲ್ಲಿ ಬೆಟ್ಟದಂತಿತ್ತು. 2017ರಲ್ಲಿ ಆ ಕನಸೂ ನನಸಾಗುವ ಸಮಯ ಬಂತು. 17,600 ಅಡಿಯ ಹಿಮಶಿಖರವನ್ನು ತಂದೆಯೊಂದಿಗೆ ಏರಲು ಸಿದ್ಧರಾದರು.

‘60 ಕಿ.ಮೀ, ಒಂಬತ್ತು ದಿನಗಳ ಈ ಟ್ರೆಕ್ ನಿಮಿಷ ನಿಮಿಷಕ್ಕೂ ತಾಳ್ಮೆ ಪರೀಕ್ಷಿಸುವ, ಆದರೆ ಹಟ ಹುಟ್ಟಿಸುವ ಹಾದಿ. ಕಣ್ಣಳತೆ ಮೀರುವ ಶಿಖರಗಳು, ಬಿಳಿ ಪರ್ವತ ಶ್ರೇಣಿಗಳು, ಬಂಡೆಗಳು, ತೂಗು ಸೇತುವೆಗಳು, ಪರ್ವತ–ಮುಗಿಲಿನ ವ್ಯತ್ಯಾಸವನ್ನೇ ಮರೆಮಾಚುವ ಹಿಮಸಾಗರ, ತನ್ನ ಇರುವನ್ನೇ ತೋರದ ಹಿಮನದಿಗಳು... ಇವೆಲ್ಲದರ ನಡುವೆ ಮೈಯನ್ನು ಹಿಂಡಿ ಹಿಪ್ಪೆ ಮಾಡುವ ಚಳಿ, ಆದರೂ ಹತ್ತೇ ತೀರುತ್ತೇನೆಂಬ ಹಟ... ಇವನ್ನೆಲ್ಲ ಮಾತಿನಲ್ಲಿ ಹಿಡಿದಿಡಲು ಸಾಧ್ಯವೇ?’ ಎನ್ನುತ್ತಲೇ ‘ಅಪ್ಪನೊಂದಿಗಿನ ಈ ಚಾರಣ ನೆನಪಿನ ಪುಟದಲ್ಲಿ ಎಂದಿಗೂ ಉಳಿಯುವಂಥದ್ದು’ ಎಂದು ನಕ್ಕರು. ಕರ್ನಾಟಕದಿಂದ ಆರು ಮಂದಿ ಹೋಗಿದ್ದ ಈ ಎವರೆಸ್ಟ್ ಬೇಸ್‌ ಕ್ಯಾಂಪ್‌ ಟ್ರೆಕ್‌ನಲ್ಲಿ ‘ಯಂಗೆಸ್ಟ್ ಟ್ರೆಕರ್’ ಕೂಡ ಇವರೇ.

‘ನಾರಿ ಶಕ್ತಿ’ ಮುನ್ನಡೆಸಿದ ರಿಯಾ

ಸರಣಿ ಚಾರಣಗಳು ಆತ್ಮವಿಶ್ವಾಸವನ್ನು ಎತ್ತರಿಸಿದವು. ಒಂದೊಂದು ಟ್ರೆಕ್ಕಿಂಗ್‌ ದೇಹ, ಮನಸ್ಸನ್ನು ಗಟ್ಟಿಗೊಳಿಸಿತು. ಚಾರಣ ಮಾಡುವುದಷ್ಟೇ ಅಲ್ಲ, ತಂಡವನ್ನು ನಿರ್ವಹಿಸುವುದರಲ್ಲೂ ನೈಪುಣ್ಯ ಸಾಧಿಸಿದರು.

ಇದಕ್ಕೆ ಉದಾಹರಣೆ, ಇತ್ತೀಚೆಗೆ ಹಿಮಾಲಯದ ‘ಬರಾದಸರ್‌ ಪಾಸ್‌' ಏರಿದ್ದ ನಾರಿಶಕ್ತಿ ತಂಡವನ್ನು ನಿರ್ವಹಿಸಿದ್ದು. ಮೈಸೂರಿನಿಂದ ಹೊರಟ 26 ಮಹಿಳೆಯರ ತಂಡ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದು ತಂಡದ ಅತಿ ಕಿರಿಯ ಸದಸ್ಯೆ ರಿಯಾ. ಸ್ತ್ರೀ ಸಬಲೀಕರಣವನ್ನು ಭಿನ್ನ ರೀತಿ ಪ್ರಚುರಪಡಿಸಬೇಕು, ಮಹಿಳೆಯರೂ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂಬ ಪರಿಕಲ್ಪನೆಯಲ್ಲಿ ಮೂಡಿದ ನಾರಿಶಕ್ತಿ ತಂಡಕ್ಕೆ ಹುರುಪಾಗಿದ್ದೇ ಇವರು. ತಂಡದ ಉಸ್ತುವಾರಿ ಮಾತ್ರವಲ್ಲ, ಹಿಮಾಲಯದ ಅರಿವೇ ಇಲ್ಲದಿದ್ದ ಮಹಿಳೆಯರಿಗೆ ಒಂದೂವರೆ ತಿಂಗಳ ತರಬೇತಿಯನ್ನೂ ನೀಡಿದರು.

ಚಾರಣಕ್ಕೆ ತಾಲೀಮು

‘ಚಾರಣ ಎಂದರೆ ಸುಮ್ಮನೆ ಸುತ್ತಾಟ ಅಲ್ಲ. ಪೂರ್ವ ತಯಾರಿ ಇಲ್ಲದೇ ಏನನ್ನೂ ಮಾಡಲು ಹೋಗಬಾರದು. ದೇಹವನ್ನು ಚಾರಣಕ್ಕೆ ಒಗ್ಗಿಸಿಕೊಳ್ಳಲು ಒಂದೂವರೆ ತಿಂಗಳ ಹಿಂದೆಯೇ ರನ್ನಿಂಗ್, ಯೋಗ, ಶಕ್ತಿವರ್ಧಕ ವ್ಯಾಯಾಮಗಳನ್ನು ಮಾಡಿಸಲಾಗುತ್ತದೆ. ಹಿಮಾಲಯದಂಥ ದೈತ್ಯನ ಬಳಿ ಹೋಗುವ ಮುನ್ನ ಸಣ್ಣ ಸಣ್ಣ ಟ್ರೆಕ್‌ಗಳನ್ನು ನಡೆಸಲಾಗುತ್ತದೆ. ‘ನಾರಿ ಶಕ್ತಿ’ ತಂಡ ನಿರ್ವಹಿಸಿದಾಗ, ಕುಂತಿಬೆಟ್ಟ, ಚಾಮುಂಡಿ ಬೆಟ್ಟ ಇವೆಲ್ಲಕ್ಕೂ ಹೋಗಿ, ಕಾಲುಗಳು ಬೆಟ್ಟಗಳ ನಡಿಗೆಗೆ ಒಗ್ಗಿಕೊಳ್ಳುವಂತೆ ಮಾಡಲಾಗಿತ್ತು. ‘ಹಿಮಾಲಯದ ಎತ್ತರೆತ್ತರ ಏರುತ್ತಿದ್ದಂತೆ ವಾತಾವರಣದಲ್ಲಾಗುವ ಬದಲಾವಣೆಗೆ ದೇಹ ಒಗ್ಗಿಕೊಳ್ಳಲು ಎಲ್ಲಾ ರೀತಿ ಯೋಜಿತವಾಗಿರಲೇಬೇಕು’ ಎಂದು ರಿಯಾ ವಿವರಿಸುತ್ತಾರೆ. ಎಲ್ಲಾ ಕಷ್ಟಗಳನ್ನು ದಾಟಿ ನಾರಿಶಕ್ತಿ ತಂಡವನ್ನು ಗುರಿ ತಲುಪಿಸಿ ಎಲ್ಲರ ಮುಖದಲ್ಲಿ ಸಂತಸ ಕಂಡ ಕ್ಷಣವನ್ನು ನೆನೆದು ನಿಟ್ಟುಸಿರುಬಿಟ್ಟರು.

ಅನುಭವ ಕಣಜ

ಟ್ರೆಕ್ಕಿಂಗ್ ಅನುಭವಗಳ ಕಣಜ ಎನ್ನುವುದು ರಿಯಾ ಅಭಿಪ್ರಾಯ. ‘ಓಡಾಟ ಹಲವು ವಿಚಾರಗಳನ್ನು ಕಲಿಸುತ್ತದೆ. ಭಿನ್ನ ಜನರೊಂದಿಗೆ ಬೆರೆಸುತ್ತದೆ. ದೇಶ, ಸಂಸ್ಕೃತಿ ಎಲ್ಲವೂ ಬೇರೆಯಾದ ನೆಲದಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವಂತೆ ಮಾಡುತ್ತದೆ. ನಾವಲ್ಲದ ನಾವು ಅಲ್ಲಿ ಪರಿಚಿತಗೊಳ್ಳುತ್ತೇವೆ. ಪ್ರತಿಯೊಂದರ ಮೌಲ್ಯ ತಿಳಿಯುವುದೂ ಅಲ್ಲಿಯೇ. ಆ ಥಂಡಿ ನೀರಿನಲ್ಲಿ ಮುಖ ತೊಳೆಯುವುದರಿಂದ ಹಿಡಿದು, ಶೂಗಳಲ್ಲಿ ಹಿಮ ಸೇರಿಕೊಂಡು ಒದ್ದಾಡುವ, ನೀರು, ಆಹಾರ ಇವೆಲ್ಲವುಗಳನ್ನು ನಿಗ್ರಹಿಸಿಕೊಂಡು ಮುಂದೆ ಸಾಗುವ, ಕಳೆದುಹೋದ ಶಕ್ತಿಯನ್ನೆಲ್ಲಾ ಹುರುಪಿನಿಂದಷ್ಟೇ ಮರಳಿ ಪಡೆಯುವ... ಕೊನೆಗೆ ಗುರಿ ಮುಟ್ಟಿ ನಕ್ಕಾಗ, ಈ ಎಲ್ಲಾ ಸವಾಲುಗಳೂ ನಮ್ಮನ್ನು, ನಮ್ಮ ಜೀವನವನ್ನೂ ಗಟ್ಟಿಗೊಳಿಸುತ್ತದೆ’ ಎಂದು ವ್ಯಾಖ್ಯಾನಿಸುತ್ತಾರೆ.

ಬಹುಮುಖ ಪ್ರತಿಭೆ

ರಿಯಾ ಟ್ರೆಕ್ಕಿಂಗ ಮಾತ್ರವಲ್ಲ, ಚಿತ್ರಕಲೆ, ಕ್ರೀಡೆಯಲ್ಲೂ ಮುಂದಿದ್ದಾರೆ.‘ಹೆಚ್ಚು ಹೇಳುವುದೇ ಬೇಡ, ಪ್ರಕೃತಿ ನನಗೆ ಎಲ್ಲದಕ್ಕೂ ಪ್ರೇರಣೆ’ ಎಂದು ತಾವು ರಚಿಸಿದ ಪೇಂಟಿಂಗ್‌ಗಳನ್ನು ತೋರಿಸಿದಾಗ, ಅವರ ಅನುಭವಗಳು ಅವರ ಚಿತ್ರಕಲೆಯಲ್ಲಿ ಪ್ರತಿಫಲಿಸುತ್ತಿದ್ದಂತೆ ಕಂಡಿತು. ಹಿಮ ಪರ್ವತಗಳು ಕುಂಚದಲ್ಲಿ ಜೀವತಳೆದಿದ್ದವು. ಹಸಿರು ಹೊದ್ದ ಭೂಮಿ ಬಣ್ಣಗಳಲ್ಲಿ ಮೇಳೈಸಿತ್ತು.

ಪರಿಸರ, ಪ್ರಾಣಿಯೊಂದಿಗೆ ಬೆರೆಯುವುದು ಅವರ ಹವ್ಯಾಸಗಳ ಪೈಕಿ ಒಂದು. ಕಲೆಯೊಂದಿಗೆ ಕ್ರೀಡೆಯಲ್ಲೂ ಮುಂದಿದ್ದಾರೆ ಅವರು. ಬ್ಯಾಸ್ಕೆಟ್‌ ಬಾಲ್ ಪಂದ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ದಿನದಲ್ಲಿ ಸ್ವಲ್ಪ ಸಮಯ ಕ್ರೀಡಾಭ್ಯಾಸಕ್ಕೂ ಮೀಸಲು. ಹಾರ್ಸ್‌ ರೈಡಿಂಗ್ ಎಂದರೆ ಮತ್ತೂ ಇಷ್ಟ. ಮಾರಥಾನ್ ರನ್ನರ್ ಹಾಗೂ ಸ್ಕೇಟರ್ ಕೂಡ ಹೌದು. ಇವಿಷ್ಟೇ ಅಲ್ಲ, ಭರತನಾಟ್ಯ ಕಲೆಯೂ ಇವರಿಗೆ ಒಲಿದಿದೆ. ಚೇತನಾ ರಾಧಾಕೃಷ್ಣ ಅವರ ಬಳಿ ಭರತನಾಟ್ಯ ಕಲಿಯುತ್ತಿರುವ ಇವರು, ಪಾಶ್ಚಾತ್ಯ ನೃತ್ಯಕ್ಕೂ ಹೆಜ್ಜೆ ಹಾಕುತ್ತಾರೆ.

ಜೀವನದಲ್ಲಿ ಏನು ನೋಡಲು ಸಾಧ್ಯವೋ ಎಲ್ಲವನ್ನೂ ನೋಡಿಬಿಡಬೇಕು ಎನ್ನುತ್ತಲೇ, ‘ಹಿಮಾಲಯದಲ್ಲಿ ಮತ್ತೂ ಒಂದು ಸವಾಲು ಇದೆ. ಅದನ್ನೂ ಪೂರೈಸುವುದು ಬಾಕಿಯಿದೆ’ ಎಂದು ಲೆಕ್ಕ ಹಾಕಲು ಆರಂಭಿಸಿದರು.

***

ಪಯಣದ ಹೊಸ ಪರಿಕಲ್ಪನೆಗಳು

ಚಾರಣ ಭಿನ್ನ ಅನುಭವಗಳನ್ನು ನೀಡಬೇಕು ಎಂಬ ಕಾರಣಕ್ಕೆ ಹೊಸ ಹೊಸ ಪರಿಕಲ್ಪನೆಯೊಂದಿಗೆ ತಂಡವನ್ನು ಕಟ್ಟಲಾಗುತ್ತದೆ. ಕಳೆದ ಬಾರಿ ಕಿವಿ ಕೇಳಿಸದವರಿಗೆಂದೇ ವಿಶೇಷವಾಗಿ ತಂಡ ರೂಪಿಸಲಾಗಿತ್ತು. ಮತ್ತೊಮ್ಮೆ ಮಹಿಳೆಯರ ತಂಡ ರೂಪಿಸಲಾಗಿತ್ತು.

ಒಂದೊಂದು ತಂಡದೊಂದಿಗೂ ಒಂದೊಂದು ರೀತಿಯ ಅನುಭವಗಳು ದಕ್ಕುತ್ತವೆ ಎಂದು ಹೇಳಿಕೊಳ್ಳುತ್ತಾರೆ ಅವರು.

‘ಹೊರಗಿನ ಪ್ರಪಂಚವೇ ತಿಳಿಯದ, ವಿಮಾನ, ಹಿಮ ಇವುಗಳನ್ನು ಕಂಡೇ ಇರದ ಜನರನ್ನು ಕರೆದುಕೊಂಡು ಹೋಗುವ ಯೋಜನೆಯಿದೆ. ಬುಡಕಟ್ಟು ಜನರನ್ನೂ ಕರೆದುಕೊಂಡು ಹೋಗಬೇಕಿದೆ. ಸದ್ಯಕ್ಕೆ ಸಾಲಿನ ಮೊದಲಿನಲ್ಲಿರುವುದು ಬೀಚ್ ಟ್ರೆಕ್’ ಎಂದು ನಕ್ಕರು ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT