ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ 2020 | ಹೊಸ ತೆರಿಗೆ ನೀತಿ, ರೈತರಿಗಾಗಿ ಕಿಸಾನ್ ಎಕ್ಸ್‌ಪ್ರೆಸ್‌: ಇಲ್ಲಿದೆ ಬಜೆಟ್ ಸಮಗ್ರ ಮಾಹಿತಿ
LIVE

ರಾಷ್ಟ್ರ ಲಾಂಛನವಿರುವ ಕೆಂಪು ವಸ್ತ್ರದಲ್ಲಿ ಸುತ್ತಿದ ಬಜೆಟ್ ದಾಖಲೆಯನ್ನು ಕೈಲಿ ಹಿಡಿದ ನಿರ್ಮಲಾ ಸೀತಾರಾಮನ್‌ರ ಮುಗುಳ್ನಗೆ ಆತ್ಮವಿಶ್ವಾಸ ತುಳುಕಿಸುತ್ತಿದೆ. ವಿಶ್ವದಲ್ಲಿ ಕಂಡು ಬರುತ್ತಿರುವ ಆರ್ಥಿಕ ಹಿಂಜರಿತ ಮತ್ತು ದೇಶದಲ್ಲಿ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಜೆಟ್‌ ಬಗ್ಗೆ ಜನರಲ್ಲಿ ಕುತೂಹಲ ಮನೆಮಾಡಿದೆ. ನಿನ್ನೆ (ಜ.31) ಸಂಸತ್ತಿನಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ‘ವಿಶ್ವದ ಆರ್ಥಿಕ ಸ್ಥಿತಿಯನ್ನು ನಮ್ಮ ದೇಶಕ್ಕೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಯೋಚಿಸಿ’ ಎಂದು ಸಲಹೆ ಮಾಡಿದ್ದರು. ಆರ್ಥಿಕ ಸಮೀಕ್ಷೆಯಲ್ಲಿದ್ದ ಅಂಕಿಅಂಶಗಳು ಸಹ ಬಜೆಟ್‌ ಬಗ್ಗೆ ಆಶಾವಾದವನ್ನೂ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವ ಮುನ್ಸೂಚನೆಯನ್ನೂ ನೀಡಿತ್ತು. 2025ರ ವೇಳೆಗೆ 5 ಶತಕೋಟಿ ಡಾಲರ್ ಆರ್ಥಿಕ ಶಕ್ತಿಯಾಗುವ ಕನಸು ಬಿತ್ತಿದ್ದ ಮೋದಿ ಸರ್ಕಾರದ 2ನೇ ಅವಧಿಯ 2ನೇ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ.
Last Updated 1 ಫೆಬ್ರುವರಿ 2020, 14:24 IST
ಅಕ್ಷರ ಗಾತ್ರ
09:4001 Feb 2020

ಬಜೆಟ್‌ ವಿಶ್ಲೇಷಣೆ

08:2601 Feb 2020

ಬಜೆಟ್‌ ಭಾಷಣ ಮುಕ್ತಾಯ

ಬಜೆಟ್ ಭಾಷಣ ಓದಲು ನಿರ್ಮಲಾ ಸೀತಾರಾಮನ್ ತಡವರಿಸಿದರು. ಕುಳಿತು ಓದಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದರು. ನಿರಂತರ ಎರಡು ಗಂಟೆ 30 ನಿಮಿಷ ಬಜೆಟ್‌ ಓದಿ, ಕೆಲ ಪುಟಗಳು ಬಾಕಿ ಇರುವಂತೆ ಭಾಷಣ ಮುಕ್ತಾಯ ಗೊಳಿಸಿದರು. 

ಇದನ್ನೂ ಓದಿ: ಬಜೆಟ್‌ ಇತಿಹಾಸ: ದೀರ್ಘಾವಧಿ ಬಜೆಟ್‌ ಭಾಷಣ ಮಾಡಿದವರು ಯಾರು?

ವೈದ್ಯಕೀಯ ಉಪಕರಣಗಳ ಆಮದಿಗೆ ಸೆಸ್‌

ವೈದ್ಯಕೀಯ ಉಪಕರಣಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದೇವೆ. ಕೆಲ ತಿಂಗಳ ಹಿಂದಿನ ವರೆಗೆ ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ವೈದ್ಯಕೀಯ ಉಪಕರಣಗಳ ಆಮದು ಮೇಲೆ ಸೆಸ್ ವಿಧಿಸುತ್ತೇನೆ. ಇದು ಭಾರತದಲ್ಲಿ ತಯಾರಾಗುವ ಉಪಕರಣಗಳ ಬಳಕೆ ಹೆಚ್ಚಾಗಲು ಅನುಕೂಲ ಮಾಡಿಕೊಡುತ್ತದೆ ಎಂದರು. 

08:1201 Feb 2020

ಆಧಾರ್ ಆಧರಿತ ತೆರಿಗೆ ಪರಿಷ್ಕರಣೆ 

‘ವಿವಾದದಿಂದ ವಿಶ್ವಾಸ‘ (ವಿವಾದ್‌ ಸೆ ವಿಶ್ವಾಸ್‌) ಯೋಜನೆ ಘೋಷಣೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡುವ ಮೂಲಕ ತೆರಿಗೆದಾರರಿಗೆ ಅನುಕೂಲ. ಪಾರದರ್ಶಕತೆ ತರಲು ಬದ್ಧ ಎಂದ ನಿರ್ಮಲಾ.

ಈ ವರ್ಷ 4.83 ಲಕ್ಷ ತೆರಿಗೆ ಪ್ರಕರಣಗಳು ವಿವಿಧೆಡೆ ಬಾಕಿ ಉಳಿದಿವೆ. ನೇರ ತೆರಿಗೆಯಲ್ಲಿಯೂ ತಕರಾರು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.

ಮಾರ್ಚ್ 2020ರ ಒಳಗೆ ತೆರಿಗೆ ಪಾವತಿಸುವವರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಜೂನ್ 2020ರ ಒಳ ತೆರಿಗೆ ಪಾವತಿಸುವವರಿಗೆ ಕೊಂಚ ದಂಡ ಇರುತ್ತದೆ. ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ.

ಆಧಾರ್ ಮೂಲಕ ಪಾನ್ ಕಾರ್ಡ್‌ ಹೊಂದಲು ಅವಕಾಶ. ವೈಯಕ್ತಿಕ ಆದಾಯ ತೆರಿಗೆಯನ್ನು ಇತಿಹಾಸದಲ್ಲಿಯೇ ಅತಿಕಡಿಮೆ ಮಾಡಿದ್ದೇವೆ. ಡಿಡಿಟಿಯನ್ನು ಕಂಪನಿಗಳ ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದೇವೆ.

ಜಿಎಸ್‌ಟಿ ಸುಧಾರಣೆ ಯತ್ನಗಳು ಮುಂದುವರಿದಿವೆ. ಎಸ್‌ಎಂಎಸ್‌ ಆಧಾರದ ಜಿಎಸ್‌ಟಿ ರಿಟರ್ನ್‌ಗೆ ಯೋಚಿಸಿದ್ದೇವೆ. ಆಧಾರ್ ಆಧರಿತ ತೆರಿಗೆ ಪರಿಷ್ಕರಣೆ ವ್ಯವಸ್ಥೆ ಜಾರಿ ಮಾಡುತ್ತೇವೆ. ಅಸ್ತಿತ್ವದಲ್ಲಿಲ್ಲದ ಘಟಕಗಳನ್ನು ತೋರಿಸಿ ತೆರಿಗೆ ವಿನಾಯ್ತಿ ಪಡೆಯುವುದಕ್ಕೆ ಇದು ತಡೆಯೊಡ್ಡಲಿದೆ.

ಸೂಕ್ಷ್ಮ, ಆಕ್ಷೇಪಾರ್ಹ ವಸ್ತುಗಳ ಆಮದಿಗೆ ಕಡಿವಾಣ ಹಾಕಲು ಕ್ರಮ ಜರುಗಿಸುತ್ತೇವೆ. ದೇಶೀಯ ಕೈಗಾರಿಕೆಗಳ ಹಿತ ಕಾಪಾಡಲು ಆಮದು ಶುಲ್ಕ ವಿಧಿಸುವುದು ಅನಿವಾರ್ಯವಾಗುತ್ತೆ. ಅದು ರೂಪುರೇಷೆಗಳನ್ನು ನಿರ್ಧರಿಸುತ್ತೇವೆ. ಇಂಥ ನಿಯಮಗಳು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಯೇ ಇರುತ್ತವೆ.

ಕಸ್ಟಮ್ಸ್‌ ಲಾ (ಸೀಮಾ ಸುಂಕ) ಸುಧಾರಣೆಗೆ ಸಂಬಂಧಿಸಿದಂತೆ ಜನರು ಮುಕ್ತವಾಗಿ ಸಲಹೆಗಳನ್ನು ಕೊಡಬಹುದು.
ಮೇಕ್‌ ಇನ್ ಇಂಡಿಯಾ ಯೋಜನೆಯ ಲಾಭ ಈಗ ಸಿಗುತ್ತಿದೆ. ಭಾರತ ಈಗ ವಿಶ್ವದರ್ಜೆಯ ವಸ್ತುಗಳನ್ನು ಉತ್ಪಾದಿಸಿ, ರಫ್ತು ಮಾಡುತ್ತಿದೆ.

08:0501 Feb 2020
07:5901 Feb 2020

ಬಜೆಟ್‌ ಮಂಡನೆ; ಕುಸಿದ ಷೇರುಪೇಟೆ

ಬಜೆಟ್‌ಗೆ ಷೇರುಪೇಟೆಯಲ್ಲಿ ನೀರಸ ಪ್ರತಿಕ್ರಿಯೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 473 ಅಂಶಗಳ ಕುಸಿತ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 187 ಅಂಶ ಕುಸಿದಿದೆ.

ನವೋದ್ಯಮದಲ್ಲಿ ಉದ್ಯೋಗಿಗಳಿಗೆ ಕೊಡುವ ಷೇರುಗಳಿಗೆ ತೆರಿಗೆ ಪಾವತಿಗೆ ಐದು ವರ್ಷಗಳ ಅಥವಾ ಷೇರು ಮಾರಾಟದವರೆಗಿನ ವಿನಾಯಿತಿ. ಸಹಕಾರ ಸಂಘಗಳಿಗೆ ಬಲ ತುಂಬಲು ಕ್ರಮ. ಈಗ ಸಹಕಾರ ಚಟುವಟಿಕೆಗಳಿಗೆ ಶೇ 30ರ ತೆರಿಗೆ ಇದೆ. ಕಂಪನಿಗಳಿಗೆ ನೀಡುವಂತೆ ಸಹಕಾರ ಸಂಘಗಳಿಗೂ ತೆರಿಗೆ ವಿನಾಯಿತಿ ಮತ್ತು ರಿಯಾಯಿತಿ ಪಡೆಯಲು ಅವಕಾಶ. 

ಕೈಗೆಟುಕುವ ದರದ ವಸತಿ ಯೋಜನೆಗಳಿಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ವಿನಾಯಿತಿ ಲಾಭವನ್ನು ಹೆಚ್ಚಿನ ಜನ ಪಡೆದುಕೊಂಡಿದ್ದರು. ಈ ಯೋಜನೆಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಿದ್ದೇನೆ. ವಸತಿ ಯೋಜನೆಗಳನ್ನು ನಿರ್ವಹಿಸುವ ಕಂಪನಿಗಳಿಗೆ ತಡವಾಗಿ ತೆರಿಗೆ ಪಾವತಿಸಲು ಅವಕಾಶ ಕೊಡುತ್ತೇವೆ.
 

07:3701 Feb 2020

ಆದಾಯ ತೆರಿಗೆ ಕಡಿತ ಘೋಷಣೆ

ತೆರಿಗೆ ಸುಧಾರಣೆ ಮಂತ್ರ ಪಠಿಸಿದ ನಿರ್ಮಲಾ ಸೀತಾರಾಮ್‌ ಆದಾಯ ತೆರಿಗೆ ಕಡಿತ ಘೋಷಿಸಿದರು. ತೆರಿಗೆ ಪಾವತಿ ವಿಧಾನ ಸರಳಗೊಳಿಸುತ್ತೇವೆ. ತೆರಿಗೆ ಕಾಯ್ದೆಯನ್ನೂ ಸರಳ ಮಾಡುತ್ತೇವೆ. ಹೊಸ ವ್ಯವಸ್ಥೆ ಜಾರಿ ಮಾಡುತ್ತೇವೆ. ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲ ವಿನಾಯಿತಿಗಳು ಕೊಡುತ್ತೇವೆ.

ತೆರಿಗೆ ಕಡಿತ: 

* ₹ 5–7.5 ಲಕ್ಷದವರೆಗೆ ಶೇ 10 ತೆರಿಗೆ. ಪ್ರಸ್ತುತ ₹ 5–7.5 ಲಕ್ಷಕ್ಕೆ ಈಗ * ಶೇ 20 ತೆರಿಗೆ ಇದೆ. ಅದನ್ನು ಶೇ 10ಕ್ಕೆ ಕಡಿಮೆ ಮಾಡಿದ್ದೇವೆ. 
* ₹ 7.5 – 10 ಲಕ್ಷ ಆದಾಯ ಇರುವವರಿಗೆ ಇನ್ನು ಮುಂದೆ ಶೇ 15 ತೆರಿಗೆ ವಿಧಿಸಲಾಗುತ್ತದೆ. ಈಗ ಶೇ 20ರಷ್ಟು ತೆರಿಗೆ ಇದೆ.
* ₹ 10– 12.5 ಲಕ್ಷ ಆದಾಯಕ್ಕೆ ಶೇ 20 ತೆರಿಗೆ
* 12.5– 15 ಲಕ್ಷ ಆದಾಯಕ್ಕೆ ಮುಂದೆ ಶೇ 25 ತೆರಿಗೆ
* ₹ 15 ಲಕ್ಷಕ್ಕೂ ಹೆಚ್ಚು ಆದಾಯ ಇರುವವರಿಗೆ ಯಾವುದೇ ವಿನಾಯ್ತಿ ಇಲ್ಲ (ಶೇ 30 ತೆರಿಗೆ)
* ₹ 2.5 ಲಕ್ಷದ ವರೆಗೂ ತೆರಿಗೆ ಇಲ್ಲ. ₹ 2.5– ₹ 5 ಲಕ್ಷದ ವರೆಗೂ ಶೇ 5 ತೆರಿಗೆ ವಿಧಿಸಲಾಗುತ್ತಿತ್ತು; ಇದರಲ್ಲಿ ಬದಲಾವಣೆ ಆಗಿಲ್ಲ.

07:4901 Feb 2020

ಷೇರು ಲಾಭಾಂಶ ವಿತರಣೆ ತೆರಿಗೆ ಇಲ್ಲ

ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ (ಡಿವಿಡೆಂಡ್‌) ಲಾಭಾಂಶದ ಮೇಲೆ ಶೇ 15ರಷ್ಟು ತೆರಿಗೆ ಮತ್ತು ಸರ್‌ಚಾರ್ಜ್‌ ಇತ್ತು. ಇದನ್ನು ತಗ್ಗಿಸಬೇಕು ಅಥವಾ ತೆರಿಗೆದಾರರಿಗೆ ಅವರ ಆದಾಯ ಜೊತೆಗೆ ಲೆಕ್ಕ ಹಾಕಿ ತೆರಿಗೆ ಪಾವತಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇತ್ತು.

ಡೆವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ (ಡಿಡಿಟಿ) ರದ್ದುಪಡಿಸುತ್ತಿದ್ದೇನೆ. ಇದರಿಂದ ದೇಶವನ್ನು ಹೂಡಿಕೆದಾರರ ನೆಚ್ಚಿನ ತಾಣ ಮಾಡಲು ಅನುಕೂಲವಾಗುತ್ತೆ.

ಮೂಲ ಸೌಕರ್ಯಗಳಲ್ಲಿ ಮಾರ್ಚ್ 2020ರ ಒಳಗೆ ಮೂರು ವರ್ಷದ ಲಾಕಿನ್ ಅವಧಿಯಲ್ಲಿ ಮಾಡಿದ ವಿದೇಶಿ ಹೂಡಿಕೆಗೆ ತೆರಿಗೆ ವಿನಾಯ್ತಿ ಘೋಷಣೆ.

07:3301 Feb 2020

2020–21ರ ಜಿಡಿಪಿ ಅಂದಾಜು ಶೇ 10

ವಿತ್ತೀಯ ಕೊರತೆಯ ಅಂದಾಜಿನ ಬಗ್ಗೆ ಹಲವು ಆಕ್ಷೇಪಗಳು ಈ ಹಿಂದೆ ವ್ಯಕ್ತವಾಗಿದ್ದವು. ನಮ್ಮ ಅಂದಾಜು ವಿಧಾನ ಸರಿಯಾಗಿದೆ ಮತ್ತು ವಿತ್ತೀಯ ಕೊರತೆ ಕಾಯ್ದೆಗೆ ಅನುಗುಣವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ವಿತ್ತೀಯ ಕೊರತೆ ನಿಯಮಗಳನ್ನು ಅನಿವಾರ್ಯವಾಗಿ ಶಾಸನಬದ್ಧವಾಗಿಯೇ ಮೀರುತ್ತಿದ್ದೇನೆ.

ಬಟೆಟ್‌ನ ಒಟ್ಟು ಗಾತ್ರ ₹ 26.99 ಲಕ್ಷ ಕೋಟಿ. 2020–21ನೇ ಸಾಲಿನ ಜಿಡಿಪಿ ಅಂದಾಜು ಶೇ 10 ರಷ್ಟಿದೆ.

ವಿತ್ತೀಯ ಕೊರತೆ
2020–21– ಶೇ 3.8
2021–22ರಲ್ಲಿ ಶೇ 3.5

ಆದಾಯ ಗುರಿ– ₹ 22.66 ಲಕ್ಷ ಕೋಟಿ
ವ್ಯಯ ಗುರಿ–₹ 30.42 ಲಕ್ಷ ಕೋಟಿ

 

07:4701 Feb 2020
07:2601 Feb 2020

'ಎಲ್‌ಐಸಿ' ಸರ್ಕಾರ ಪಾಲು ಮಾರಾಟ!

ಎಲ್ಐಸಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ. ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಸರ್ಕಾರದ ಸ್ವಲ್ಪ ಪಾಲು ಮಾರಾಟಕ್ಕೆ ನಿರ್ಧಾರ.

ವಿಶ್ವಮಟ್ಟದ ಚಿನ್ನದ ಮಾರುಕಟ್ಟೆ ಭಾರತದಲ್ಲಿ ಸ್ಥಾಪಿಸುತ್ತೇವೆ. ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುತ್ತೇವೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬ್ಯಾಂಕ್‌ಗಳ ಮೂಲಕ ಅಗತ್ಯ ಬಂಡವಾಳ ಒದಗಿಸಲು ಕ್ರಮ. ಸಾಲ ಮರುಹೊಂದಾಣಿಕೆಯಿಂದ 5 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಅನುಕೂಲವಾಗಿದೆ. ಈ ಯೋಜನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ಸರ್ಕಾರ ಆರ್‌ಬಿಐಗೆ ಮನವಿ ಮಾಡಿದೆ.

ಹಲವು ಮಧ್ಯಮ ಗಾತ್ರದ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿವೆ. ಇಂಥ ಫಾರ್ಮಾ, ಆಟೊ ಕ್ಷೇತ್ರದ ಉದ್ದಿಮೆಗಳು ವಿದೇಶಗಳಿಗೆ ವ್ಯವಹಾರ ವಿಸ್ತರಿಸಲು ಆಸಕ್ತಿ ತೋರಿದರೆ ಸರ್ಕಾರ ಅಗತ್ಯ ನೆರವು ನೀಡಲಿದೆ.

ಬಾಂಡ್‌ (ಸಾಲಪತ್ರ) ವ್ಯವಹಾರ ವಿಸ್ತರಣೆಗೆ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರದ ಹಲವು ರೀತಿಯ ಸಾಲಪತ್ರಗಳಲ್ಲಿ ವಿದೇಶಿ ಹೂಡಿಕೆದಾರರಿಗೂ ಹೂಡಿಕೆಗೆ ಅವಕಾಶ ಕೊಡುತ್ತೇವೆ. ಸರ್ಕಾರದ ಸಾಲಪತ್ರಗಳಿಗಾಗಿ, ಬಂಡವಾಳ ಸಂಚಯಕ್ಕಾಗಿ ರೂಪಿಸಿದ ‘ಭಾರತ್ ಬಾಂಡ್’ ಎಟಿಎಫ್ ಉಲ್ಲೇಖ.
1.3 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಗಳು ಬಾಕಿಯಿವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ಪೈಕಿ 23 ಸಾವಿರ ಕೋಟಿ ಅಂದಾಜಿನ ಯೋಜನೆಯ ಪೂರ್ಣಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.

ಮೂಲ ಸೌಕರ್ಯ ಯೋಜನೆಗೆ ಅಗತ್ಯವಿರುವ ಬಂಡವಾಳವನ್ನು ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಬಂಡವಾಳದ ಮೂಲಕ ಸಂಚಯಿಸಲು ಕ್ರಮ ತೆಗೆದುಕೊಳ್ಳುತ್ತೇವೆ.