ಭಾನುವಾರ, ಮೇ 29, 2022
20 °C
ಚಿತ್ರ ಸಂತೆ

ಜೀವಂತ ಕ್ಯಾನ್ವಾಸ್‌ ಆದ ಕುಮಾರಕೃಪಾ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಣ್ಣು ಹಾಯಿಸಿದಷ್ಟೂ ತೆರೆದುಕೊಳ್ಳುವ ರಂಗು, ರಂಗಿನಲೋಕ. ಕಣ್ತುಂಬಿಕೊಂಡಷ್ಟು ಮುಗಿಯದ ಭಾವ, ಬಣ್ಣಗಳು. ಹೆಜ್ಜೆ ಹಾಕಿದಷ್ಟೂ ಮುಗಿಯದ ಕಲಾ ಸೊಬಗು. ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿದ್ದ ವರ್ಣರಂಜಿತ ಕಲಾಕೃತಿಗಳು. ಬಣ್ಣದ ಲೋಕವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಸಾವಿರಾರು ಮಂದಿ. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ಶಿವಾನಂದ ಸರ್ಕಲ್‌ ಮತ್ತು ಕುಮಾರಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ ಭಾನುವಾರ ಆಯೋಜಿಸಿದ್ದ 17ನೇ ಚಿತ್ರಸಂತೆಯಲ್ಲಿ ಕಂಡುಬಂದ ವರ್ಣರಂಜಿತ ದೃಶ್ಯಗಳು ಇಲ್ಲಿವೆ...

ನಗರದ ಜನನಿಬಿಡ ರಸ್ತೆ ‘ಕುಮಾರಕೃಪಾ’ ಭಾನುವಾರದ ರಜೆ ದಿನದಂದು ಅಕ್ಷರಶಃ ಜೀವಂತ ಕ್ಯಾನ್ವಾಸ್‌ ಆಗಿ ಬದಲಾಗಿತ್ತು. ಕುಮಾರಕೃಪಾ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕಲಾಭಿಮಾನಿಗಳು ಆವರಿಸಿದ್ದರೆ, ಪಾದಚಾರಿ ಮಾರ್ಗಗಳನ್ನು ಚಿತ್ರಕಲೆಗಳು ಆವರಿಸಿದ್ದವು. ಅದೊಂದು ಆಹ್ಲಾದಕರ ನೋಟ.

ಕರ್ನಾಟಕ ಚಿತ್ರಕಲಾ ಪರಿಷತ್‌ ಆಯೋಜಿಸುವ ವಾರ್ಷಿಕ ಚಿತ್ರಸಂತೆ ಕಲಾರಸಿಕರ ಸಂಭ್ರಮವನ್ನು ಇಮ್ಮಡಿಸಿತು. ಬೆಳಗ್ಗೆಯಿಂದ ಜನರು ಚಿತ್ರಸಂತೆಯತ್ತ ಹೆಜ್ಜೆ ಹಾಕತೊಡಗಿದ್ದು, ಮಧ್ಯಾಹ್ನದ ವೇಳೆಗೆ ಗಿಜಿಗಿಡುವ ವಾತಾವರಣವಿತ್ತು. 

ಚಿತ್ರಕಲಾ ಪರಿಷತ್‌ ಸುತ್ತಮುತ್ತಲಿನ ರಸ್ತೆ, ಸಂದಿ, ಗೊಂದಿ ಮತ್ತು ಫುಟ್‌ಪಾತ್‌ಗಳು ಕಲರ್‌ಫುಲ್‌ ಕಲಾಕೃತಿಗಳಿಂದ ಬಣ್ಣ ಮೆತ್ತಿಕೊಂಡು ಹೊಸ ರಂಗಿನಿಂದ ಕಂಗೊಳಿಸುತ್ತಿದ್ದವು. ವಾರಾಂತ್ಯದ ಬೆಚ್ಚನೆಯ ನಿದ್ದೆ ಬಿಟ್ಟು, ಮಾಗಿಯ ಚಳಿ ಲೆಕ್ಕಿಸದೆ ಬಂದಿದ್ದ ಬೆಂಗಳೂರು ನಾಗರಿಕರಿಗೆ ನಿರಾಸೆಯಾಗಲಿಲ್ಲ. ಬಂದವರಿಗೆಲ್ಲ ಚಿತ್ರಸಂತೆ ಬೆಚ್ಚಗಿನ ಅನುಭೂತಿ ನೀಡಿತು. 

ಕಲಾವಿದರು ತಾವು ರಚಿಸಿದ ಚಿತ್ರಕಲೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು. ಮರಳಿನ ಚಿತ್ರಕಲೆ, ವಾಟರ್‌ ಕಲರ್‌, ಆ್ಯಕ್ರಿಲಿಕ್‌, ಮಧುಬನಿ, ಆಯಿಲ್‌ ಪೇಂಟಿಂಗ್‌, ಡಿಜಿಟಲ್‌ ಪೇಂಟಿಂಗ್‌, ಟ್ಯಾಂಪ್ರಾ ಹೀಗೆ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು. ಕಿಕ್ಕಿರಿದು ಜನಸೇರಿದ್ದರೂ, ‘ಗೊಂದಲದ ಚಿತ್ರ’ ಕಾಣಲಿಲ್ಲ!

 ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರಸಂತೆ ಕಲರ್ ಫುಲ್ ಆಗಿತ್ತು. ಪ್ರಕೃತಿ, ನಗರದ ಬದುಕು, ಶಾಂತಚಿತ್ತ, ಮಂದಸ್ಮಿತ ಭಾವದ ಬುದ್ಧನ ಚಿತ್ರಗಳು, ವನ್ಯಜೀವಿಗಳು, ದೇವರ ಚಿತ್ರಗಳು, ನೀರು ಹೊಯ್ಯುತ್ತಿರುವ ಹಳ್ಳಿಗಾಡಿನ ಮಹಿಳೆ, ಜಲಪಾತ, ನೋಡುಗನ ಭಾವಕ್ಕೆ ಅನುಗುಣವಾಗಿ ಚಿತ್ರಣ ಕಟ್ಟಿಕೊಡುವ ಆಮೂರ್ತ ಕಲೆಗಳು ಎಲ್ಲ ಬಗೆಯ ಚಿತ್ರಗಳು ಅಲ್ಲಿ ರಾರಾಜಿಸಿದ್ದವು.

₹ 500 ರಿಂದ ಸಾವಿರಾರು ರೂಪಾಯಿವರೆಗಿನ ಚಿತ್ರಕಲೆಗಳು ಇದ್ದವು. ಕೆಲವರು ಬೆಲೆ ಕೇಳುತ್ತಿದ್ದರು. ಕೆಲವರು ಹೌಹಾರುತ್ತಿದ್ದರು. ಇನ್ನೂ ಕೆಲವರೂ ನೋಡಿ ಸಂಭ್ರಮಿಸುತ್ತಿದ್ದರು. ಕೊಂಡು ಚಿತ್ರಕಲೆಯನ್ನು ತಮ್ಮದಾಗಿಸಿಕೊಂಡ ಸಂಭ್ರಮದಲ್ಲಿ ಹಲವರಿದ್ದರು. ಎಲ್ಲರೂ ಕಲೆ ಕಂಡು ಭಲೆ ಎಂದು ತಲೆತೂಗುತ್ತಿದ್ದರು.

ವಿವಿಧೆಡೆಯಿಂದ ಬಂದಿದ್ದ ಕಲಾವಿದರನ್ನು ತಮ್ಮ ವಿವಿಧ ಕಲಾಕೃತಿಗಳ ಮಾರಾಟದ ಜೊತೆಗೆ ಚಿತ್ರಕಲಾರಸಿಕರ ದೊಡ್ಡ ಸಮೂಹವನ್ನು ಕಂಡ ಸಂಭ್ರಮವೂ ಆವರಿಸಿಕೊಂಡಿತ್ತು. ಅಲ್ಲಲ್ಲಿ, ವ್ಯಕ್ತಿ ಭಾವಚಿತ್ರ ಮತ್ತು ವ್ಯಂಗ್ಯ ಭಾವಚಿತ್ರ ಬರೆಯುವ ಕಲಾವಿದರೂ ಇದ್ದರು.

ಪ್ರತಿ ಚಿತ್ರರಚನೆಗೂ ₹ 150 ರಿಂದ ₹ 200 ಶುಲ್ಕ ನಿಗದಿಪಡಿಸಿದ್ದರು. ಕಲಾವಿದರ ಕೈಚಳಕದಲ್ಲಿ ತಮ್ಮದೇ ಚಿತ್ರ ಮೂಡುವ ಬಗೆಯನ್ನು ಕಂಡು ಬೆರಗು ಪಡುತ್ತಿದ್ದರು. ಹೀಗೆ ಮೂಡುವ ಚಿತ್ರಗಳು ಅವರದೇ ಮೊಬೈಲ್‌ ಕ್ಯಾಮೆರಾಗಳ ಮೂಲಕ ಸೆಲ್ಫಿ ಚಿತ್ರಗಳಾಗಿಯೂ ಮೂಡುತ್ತಿದ್ದವು. ಪ್ರತಿ 10 ನಿಮಿಷಕ್ಕೆ ವ್ಯಕ್ತಿ, ಚಿತ್ರಗಳು ಬದಲಾಗುತ್ತಿದ್ದವು. ಬಹುತೇಕ ಸಂತೆಗೆ ಕರೆತಂದಿದ್ದ ಮಕ್ಕಳ ಚಿತ್ರವನ್ನು ಬರೆಸಿದ ದೊಡ್ಡವರು ಇನ್ನಷ್ಟು ಸಂಭ್ರಮಿಸಿದರು.

ಇನ್ನೊಂದೆಡೆ, ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇನ್ನೊಂದು ಸೊಬಗು ಅನಾವರಣಗೊಂಡಿತ್ತು. ಈ ಬಾರಿಯ ಚಿತ್ರಸಂತೆಯ ಅಡಿಸಾಲು ‘ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆ ನಿಂತಿದೆ ಧರ್ಮ’ ಎಂಬುದಾಗಿತ್ತು. ಚಿತ್ರಸಂತೆಯಲ್ಲಿ ರೈತನ ನೆನಪು. ಹಲವು ಗುಡಿ ಕೈಗಾರಿಕೆಗಳ ಮಳಿಗೆಗಳು ತಲೆ ಎತ್ತಿದ್ದವು. ನಗರ ಜೀವನ ಶೈಲಿಯ ನಾಜೂಕುತನದ ಪೋಷಾಕು ಹೊದ್ದು ಗ್ರಾಹಕರನ್ನು ಆಕರ್ಷಿಸುತ್ತಿದ್ದವು. ಖರೀದಿಸುವವರು, ಮಾರುವವರು, ನೋಡುವವರು, ಮಕ್ಕಳು ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವವರು ಅಲ್ಲಿಯೂ ಭಿನ್ನ ಭಾವಚಿತ್ರಗಳು ಮೂಡಿದ್ದವು.

ಸಂತೆಯ ಈ ಎಲ್ಲ ಗಿಜಿಗಿಜಿಯನ್ನು ಮರೆತು ಗ್ರಾಮೀಣ ಶೈಲಿಯ ಹಾಡುಗಳಿಗೆ ದನಿಯಾದ ಕಲಾವಿದರೂ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡಿದ್ದರು. ಕಲಾವಿದರ ಎತ್ತರಿಸಿದ ಧ್ವನಿ, ಧ್ವನಿವರ್ಧಕದಲ್ಲಿ ಇನ್ನಷ್ಟು ತಾರಕಕ್ಕೆ ತಲುಪಿತು. ಎಲ್ಲಿಯೋ ಇದ್ದ ಕೇಳುಗರನ್ನು ಸೆಳೆಯಿತು.

‘ಭಾಗ್ಯದ ಬಳೆಗಾರ ಹೋಗಿ ಬಾ..,’  ‘ಚೆಲ್ಲಿದರೂ ಮಲ್ಲಿಗೆಯಾ..’, ‘ಉಘೇ ಎನ್ನಿರೋ ಮಹದೇಶ್ವರನಿಗೆ..’ ಇನ್ನಿತರ ಗೀತೆಗಳು ಅಕ್ಷರಶಃ ಹಳ್ಳಿಯ ಚಿತ್ರಣವನ್ನು ಕಟ್ಟಿಕೊಟ್ಟವು. ಪ್ರತಿ ಹಾಡಿಗೂ ಕರತಾಡನದ ಮೆಚ್ಚುಗೆಯೂ ಲಭಿಸಿತ್ತು. ನಂತರ ಸ್ಥಳೀಯ ತಂಡವು ಕನ್ನಡ, ಹಿಂದಿ ಗೀತೆಗಳಿಗೆ ದನಿಯಾಯಿತು.

ಹಾಡು, ನೋಟಗಳ ನಂತರ ಸಮಯ ಸರಿದದ್ದು ತಿಳಿಯಲಿಲ್ಲ. ಆದರೆ, ಕಳೆದ ಕ್ಷಣಗಳು ಮಾತ್ರ ಸಂತೆಗೆ ಬಂದವರಲ್ಲಿ ಸಂಭ್ರಮದ ಚಿತ್ರವನ್ನಂತೂ ಮೂಡಿಸಿದ್ದು ಸುಳ್ಳಲ್ಲ. ಒಂದು ಭಿನ್ನ ಚಿತ್ರವಾಗಿ ನೋಡುಗರ ಕಣ್ಣೋಟದಲ್ಲಿ ಚಿತ್ರಸಂತೆ ದಾಖಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು