ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಂಗಳವಲ್ಲ ರಸ್ತೆ: ಮಕ್ಕಳಿಗಿರಲಿ ಸುರಕ್ಷೆ

Last Updated 23 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಇವರಿಬ್ಬರ ಮಾತನ್ನು ಮಕ್ಕಳು ಬಹುಬೇಗ ಒಪ್ಪಿ, ಅಳವಡಿಸಿಕೊಳ್ಳುತ್ತಾರೆ. ಮಕ್ಕಳು ರಸ್ತೆಯಲ್ಲಿದ್ದರೆ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ. ಅವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗುತ್ತದೆ.

ರಸ್ತೆಯು ಮನೆಯ ಅಂಗಳ ಅಥವಾ ಆಟದ ಮೈದಾನವಲ್ಲ. ಅದರಲ್ಲೂ ಮಕ್ಕಳು ರಸ್ತೆಯಲ್ಲಿದ್ದರೆ ಪೋಷಕರು ಮತ್ತು ವಾಹನ ಚಾಲಕರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಮಕ್ಕಳಿಗೆ 9 ವರ್ಷ ತುಂಬುವವರೆಗೂ ನೋಡುವ ಮತ್ತು ಕೇಳುವ ಶಕ್ತಿ ಪರಿಪೂರ್ಣವಾಗಿ ಸಿದ್ಧಿಸಿರುವುದಿಲ್ಲ ಮತ್ತು ಅಪಾಯದ ಬಗ್ಗೆ ಬೇಗ ಅರ್ಥೈಸಿಕೊಂಡು ಕಾರ್ಯ ಪ್ರವೃತ್ತರಾಗಬೇಕೆಂಬುದು ಹೊಳೆಯುವುದಿಲ್ಲ.

ಮಕ್ಕಳ ಮನೋ ವಿಜ್ಞಾನದ ಪ್ರಕಾರ, ಮಕ್ಕಳು 8-13 ವರ್ಷದವರೆಗೆ ತಮಗೆ ತಾವೇ ಸುರಕ್ಷಿತವಾಗಿ ರಸ್ತೆ ದಾಟುವ ಕೌಶಲ ಹೊಂದಿರುವುದಿಲ್ಲ. ಈ ಹಂತದಲ್ಲಿ ಅವರು ವಾಹನದ ವೇಗ ಮತ್ತು ದಿಕ್ಕುಗಳನ್ನು ನಿಖರವಾಗಿ ಗುರುತಿಸಲು ಕಷ್ಟವಾಗುತ್ತದೆ. ಹೀಗಾಗಿ ಮಕ್ಕಳು ಕಕ್ಕಾಬಿಕ್ಕಿಯಾಗಿ ನಡುರಸ್ತೆಯಲ್ಲಿ ಏನು ತೋಚದೆ ನಿಂತುಬಿಡುತ್ತಾರೆ!

ಮಕ್ಕಳನ್ನು ವಾಹನಗಳಲ್ಲಿ ಶಾಲೆಗೆ ಕರೆದುಕೊಂಡು ಹೋಗುವಾಗ ಒನ್ ವೇ ಉಲ್ಲಂಘನೆ, ಸಿಗ್ನಲ್ ಜಂಪ್, ಮೊಬೈಲ್‍ ಬಳಕೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಮಕ್ಕಳನ್ನು ಸ್ಕೂಲ್ ಒಳಗೆ ಬಿಡಲು ಪೋಷಕರು ಹೋಗಬಾರದು.

ಪ್ರಾಯೋಗಿಕ ಪಾಠ

ರಸ್ತೆ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ಡ್ರಿಲ್‍ ರೀತಿಪ್ರಾಯೋಗಿಕವಾಗಿ ಪಾಠ ಮಾಡಿ. ರಸ್ತೆ ದಾಟುವ ಮಕ್ಕಳಿಗೆ ವಾಹನಗಳವೇಗ ಮತ್ತು ಅಂತರ ನಿರ್ಧರಿಸುವ ಬಗ್ಗೆ ಹೇಳಿಕೊಡಿ.

ನಿಲ್ಲಿ, ಎರಡೂ ಕಡೆ ನೋಡಿ, ಕೇಳಿಸಿಕೊಳ್ಳಿ, ಆಲೋಚಿಸಿ ಮತ್ತು ಮುಂದುವರೆಯಿರಿ ಸಂಚಾರ ನಿಯಮದ ಮೂಲ ಪಾಠಗಳು.
ಬಲಕ್ಕೆ ನೋಡು, ಎಡಕ್ಕೆ ನೋಡು, ಮತ್ತೆ ಬಲಕ್ಕೆ ನೋಡು, ಯಾವುದೇ ವಾಹನ ಇಲ್ಲದಿದ್ದರೆ ರಸ್ತೆ ದಾಟು ಎಂಬ ಪಾಠ ರೂಢಿಮಾಡಿ. ಪಾದಚಾರಿ ಮಾರ್ಗದಲ್ಲೇ ಏಕೆ ಮತ್ತು ಹೇಗೆ ನಡೆಯಬೇಕು, ಜೀಬ್ರಾ ಕ್ರಾಸಿಂಗ್‍ನಲ್ಲಿ ಹೇಗೆ ರಸ್ತೆ ದಾಟಬೇಕು ಮತ್ತು ಜೀಬ್ರಾ ಕ್ರಾಸಿಂಗ್ ಇಲ್ಲದಿದ್ದಲ್ಲಿ ಹೇಗೆ ದಾಟಬೇಕು ಎಂಬ ಬಗ್ಗೆ ತಿಳಿಹೇಳಿ.

ಒಬ್ಬಂಟಿಯಾಗಿ ಬಿಡಬೇಡಿ

ಮಕ್ಕಳನ್ನು ಆದಷ್ಟು ಒಬ್ಬಂಟಿಯಾಗಿ ರಸ್ತೆಯಲ್ಲಿ ಹೋಗಲು ಅಥವಾ ದಾಟಲು ಬಿಡಬೇಡಿ. ಮಕ್ಕಳು ಯಾವಾಗ ನಿಮ್ಮ ಕೈ ಬಿಡಿಸಿಕೊಂಡು ಓಡುತ್ತಾರೋ ಗೊತ್ತಾಗುವುದಿಲ್ಲ. ರಸ್ತೆಯಲ್ಲಿ ಮಕ್ಕಳು ನಿಮ್ಮ ಬೆರಳನ್ನು ಹಿಡಿದುಕೊಂಡು ನಡೆಯುವುದು ಬೇಡ. ನೀವು ಅವರ ಕೈ ಹಿಡಿಯಿರಿ. ಪೇಡಸ್ಟ್ರಿಯನ್ ಅಂಡರ್‌ಪಾಸ್‌ ಅಥವಾ ಪುಟ್ ಓವರ್ ಬ್ರಿಡ್ಜ್ ಬಳಸುವುದು ಸೂಕ್ತ.

ಮಕ್ಕಳು ಪಾರ್ಕಿಂಗ್ ಲಾಟ್ ಬಳಿ ಆಟ ಆಡುವುದು ಬೇಡ. ಚಾಲಕ ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಮಕ್ಕಳು ಕಾಣುವುದಿಲ್ಲ. ಮಕ್ಕಳು ವಾಹನದ ಕೆಳಗೆ ಬಿದ್ದಿರುವ ಬಾಲ್ ತೆಗೆದುಕೊಳ್ಳಲು ನಿಂತಿರುವ ವಾಹನದ ಕೆಳಗೆ ನುಗ್ಗುತ್ತಾರೆ.

ಮನೆಯಂಗಳವಲ್ಲ ರಸ್ತೆ!

* ಮಕ್ಕಳನ್ನು ಫುಟ್‍ಪಾತ್ ಮತ್ತು ರಸ್ತೆ ಮಧ್ಯದ ಕರ್ಬ್‍ಸ್ಟೋನ್ ಮೇಲೆ ನಡೆಯಲು ಬಿಡಬೇಡಿ
* ರಸ್ತೆಯ ಮಧ್ಯದ ಸೆಂಟರ್ ಮೀಡಿಯನ್ ಕಲ್ಲಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆಯಲು ಅವಕಾಶ ನೀಡಬೇಡಿ
* ರಸ್ತೆಯ ಮೇಲೆ ಓಡಾಡುವ ಬೀಡಾಡಿ ಪ್ರಾಣಿಗಳೊಂದಿಗೆ ಮಕ್ಕಳು ವ್ಯವಹರಿಸದಂತೆ ಎಚ್ಚರವಹಿಸಿ
* ಫುಟ್‍ಪಾತ್ ಮೇಲೆ ಯಾವುದೋ ಗೇಟ್ ಕಾಣಿಸಿದರೆ ಅದರೊಳಗಿಂದ ವಾಹನ ಹೊರಬರಬಹುದು ಎಂಬ ಎಚ್ಚರ ಇರಲಿ
*ಮಕ್ಕಳು ಕಿವಿಗೆ ಮೊಬೈಲ್ ಹ್ಯಾಂಡ್ಸ್ ಫ್ರೀ ಸಿಕ್ಕಿಸಿಕೊಂಡು ಹಾಡು ಕೇಳುತ್ತ ರಸ್ತೆ ಕ್ರಾಸ್ ಮಾಡುವುದನ್ನು ನಿಯಂತ್ರಿಸಿ

ಶಾಲಾ ಬಸ್‌: ಇರಲಿ ಎಚ್ಚರ

* ಸ್ಕೂಲ್ ಬಸ್ ಬಂದಾಗ ಅದು ಸಂಪೂರ್ಣ ನಿಲ್ಲುವವರೆಗೂ ಗಡಿಬಿಡಿಯಲ್ಲಿ ಮಕ್ಕಳು ಬಸ್ ಹತ್ತುವುದು ಅಥವಾ ಇಳಿಯುವುದು ಬೇಡ
* ಶಾಲಾ ಬಸ್‍ ಡ್ರೈವರ್ ಕಡೆಯ ಬಾಗಿಲಿನಿಂದ ರಸ್ತೆಗೆ ಧುಮುಕಲು ಅವಕಾಶ ನೀಡಬೇಡಿ
* ಶಾಲಾ ಬಸ್‌ ಚಾಲಕರು ವಾಹನ ಚಾಲನೆ ಮಾಡುವಾಗ ಪದೇ ಪದೇ ಆತನನ್ನು ಮಾತನಾಡಿಸುವುದರಿಂದ ರಸ್ತೆಯ ಮೇಲಿನ ಗಮನವನ್ನು ಕಡಿಮೆ ಮಾಡಿ ಅಪಘಾತ ಮಾಡಲು ದಾರಿಯಾಗುತ್ತದೆ. ಈ ಬಗ್ಗೆ ಮಕ್ಕಳಿಗೆ ತಿಳಿಹೇಳಿ
* ಅಕಸ್ಮಾತಾಗಿ ಪೆನ್, ಪೆನ್ಸಿಲ್, ರಬ್ಬರ್ ಸ್ಕೂಲ್ ಬಸ್ ಕೆಳಗೆ ಬಿದ್ದಾಗ ಮಗು ತಾನೇ ಅವನ್ನು ತೆಗೆಯುವುದು ಬೇಡ. ಬದಲಾಗಿ ದೊಡ್ಡವರಿಗೆ ಹೇಳಲಿ
* ಸ್ಕೂಲ್ ಬಸ್ಸಿನಲ್ಲಿ ಕುಳಿತಾಗ ಮಗುವಿನ ಬ್ಯಾಗ್ ಅಥವಾ ವಾಟರ್ ಬ್ಯಾಗ್ ಕಿಟಕಿಯಿಂದ ಹೊರ ಚಾಚುವುದು ಬೇಡ
* ಸ್ಕೂಲ್ ಬಸ್‍ನಿಂದ ಇನ್ನೊಂದು ಬಸ್‍ನಲ್ಲಿರುವ ಸ್ನೇಹಿತನಿಗೆ ಟಾಟಾ ಮಾಡಲು ಕಿಟಕಿಯಿಂದ ದೇಹವನ್ನು ಹೊರಗೆ ಹಾಕುವುದು ಬೇಡ
* ಸ್ಕೂಲ್ ಬಸ್‍ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದರೆ, ಶಿಕ್ಷಣ ಸಂಸ್ಥೆ, ಪ್ರಾದೇಶೀಕ ಸಾರಿಗೆ ಅಧಿಕಾರಿಗೆ ದೂರು ನೀಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT